ಬೆಳಗಾವಿ (ಡಿ.18): ನಾಳೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ (Winter Session) ಆರಂಭವಾಗುತ್ತಿದೆ. ಇದಕ್ಕೆ ವಿರುದ್ಧವಾಗಿ MES ಮಹಾಮೇಳವ್ ಕಾರ್ಯಕ್ರಮ (Mahamelav Program) ಆಯೋಜನೆ ಮಾಡಿದೆ. ಇದೀಗ ಮಹಾರಾಷ್ಟ್ರ ಗಡಿ ಸಲಹಾ ಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ (Belagavi) ಬರುವುದಾಗಿ ಪತ್ರ ರವಾನಿಸಿದ್ದಾರೆ. ಇದರಿಂದ ಶಾಂತಿ ಸುವ್ಯವಸ್ಥೆ ಹದಗೆಡುವ ಹಿನ್ನೆಲೆ ಕಲಂ 143 (3) ಅನ್ವಯ ಸಂಸದ ಧೈರ್ಯಶೀಲ್ ಬೆಳಗಾವಿ ಪ್ರವೇಶ ನಿರ್ಬಂಧಿಸಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ (DC Nitesh Patel) ಆದೇಶ ಹೊರಡಿಸಿದ್ದಾರೆ.
ಅಧಿವೇಶನ v/s ಮಹಾಮೇಳವ್
ಅಧಿವೇಶನಕ್ಕೆ ಪರ್ಯಾಯವಾಗಿ ನಾಳೆ ವ್ಯಾಕ್ಸಿನ್ ಡಿಪೋದಲ್ಲಿ ಮಹಾಮೇಳ ಆಯೋಜನೆ ಮಾಡಲಾಗಿದೆ. ಮಹಾರಾಷ್ಟ್ರ ಗಡಿ ಸಲಹಾಸಮಿತಿ ಅಧ್ಯಕ್ಷ, ಸಂಸದ ಧೈರ್ಯಶೀಲಮಾನೆ ಬೆಳಗಾವಿಗೆ ಬರುವುದಾಗಿ ಪತ್ರ ಬರೆದು ತಮಗೆ ಸೂಕ್ತ ಭದ್ರತೆ ಕಲ್ಪಿಸುವಂತೆ ಬೆಳಗಾವಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದರು. ಜೊತೆಗೆ ಅದರ ಜತೆ ಪ್ರವಾಸದ ಪಟ್ಟಿ ಕೂಡ ಇತ್ತು. ವಿಧಾನ ಮಂಡಲ ಅಧಿವೇಶನಕ್ಕೆ ಪರ್ಯಾಯವಾಗಿ ಎಂಇಎಸ್ ಈ ಮಹಾಮೇಳ ನಡೆಸುತ್ತಿದೆ.
ಅವಕಾಶ ನೀಡದಂತೆ ಕನ್ನಡಪರ ಸಂಘಟನೆ ಒತ್ತಾಯ
ನಾಳೆ ಬೆಳಗಾವಿಗೆ ಮಹಾರಾಷ್ಟ್ರ ಸಂಸದ ಧೈರ್ಯಶೀಲಮಾನೆ ಭೇಟಿ ಕುರಿತಂತೆ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ವರದಿ ನೀಡುವಂತೆ ಪೊಲೀಸರಿಗೆ ಸೂಚಿಸಿದ್ದಾರೆ. ಮಾನೆಯವರ ಭೇಟಿಗೆ ಅನುಮತಿ ನೀಡಬೇಕೇ ಬೇಡವೇ ಎಂಬ ಬಗ್ಗೆ ನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆಯೂ ಸಮಗ್ರ ವರದಿ ನೀಡುವಂತೆಯೂ ಸೂಚಿಸಿದ್ದಾರೆ. ಯಾವುದೇ ಕಾರಣಕ್ಕೂ ಮಾನೆಯವರಿಗೆ ಬೆಳಗಾವಿ ಭೇಟಿಗೆ ಅವಕಾಶ ನೀಡಬಾರದು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ.
ಪ್ರವೇಶ ನಿರ್ಬಂಧ ಆದೇಶ ಹೊರಡಿಸಿದ ಡಿಸಿ
ನಾಳೆ ಅಧಿವೇಶನ ಇರುವ ಹಿನ್ನೆಲೆ ಯಾವುದೇ ಗೊಂದಲ ಉಂಟಾಗದಂತೆ ಡಿಸಿ ಕ್ರಮ ಕೈಗೊಂಡಿದ್ದಾರೆ. ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅವರು ಮಹಾರಾಷ್ಟ್ರ ಸಂಸದ ಧೈರ್ಯಶೀಲ ಮಾನೆ ಪ್ರದೇಶಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿದ್ದಾರೆ. ಧೈರ್ಯಶೀಲ್ ಅವರು ಬೆಳಗ್ಗೆ 10 ಗಂಟೆ ಸುಮಾರಿಗೆ ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲಿರುವ ಕುಗುನೊಳ್ಳಿ ಚೆಕ್ ಪೋಸ್ಟ್ಗೆ ಬರುವ ಸಾಧ್ಯತೆ ಇದೆ ಎಂದು ಆಪ್ತ ಮೂಲಗಳು ತಿಳಿಸಿದೆ.
ಮಹಾಮೇಳಕ್ಕೆ ಎಂಇಎಸ್ ಸಜ್ಜು
ಪ್ರತಿ ಬಾರಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವಾಗಲು ಎಂಇಎಸ್ ಪುಂಡಾಟ ಮೆರೆಯುತ್ತಲೇ ಇದೆ. ಇದೀಗ ಮತ್ತೆ ಬೆಳಗಾವಿಯಲ್ಲಿ ಚಳಿಗಾಲದ ವಿಧಾನಮಂಡಲದ ಅಧಿವೇಶನ ನಡೆಯುತ್ತಿರುವ ಹೊತ್ತಲ್ಲೆ ಮಹಾರಾಷ್ಟ್ರ ಏಕೀಕರಣ ಸಮಿತಿ ಪುಂಡಾಟಿಕೆ ಮೆರೆದಿದ್ದು, ಮಹಾಮೇಳವ್ ನಡೆಸಲು ಸಜ್ಜಾಗಿದೆ. ಇತ್ತೀಚೆಗೆ ಉಭಯ ರಾಜ್ಯಗಳ ನಡುವಣ ಗಡಿ ವಿವಾದ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಎರಡೂ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನಡೆಸಿ ಗಡಿ ವಿವಾದ ಕುರಿತಂತೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಕೋರ್ಟ್ ಅಭಿಪ್ರಾಯ ತಿಳಿಯುವವರೆಗೆ ಕಾಯುವಂತೆ ಸಲಹೆ ನೀಡಿದ್ದಾರೆ.
ಇದನ್ನೂ ಓದಿ: H D Kumaraswamy: ಡಿಕೆಶಿ ಭದ್ರಕೋಟೆಯಲ್ಲಿ ನಿಂತು ಘರ್ಜಿಸಿದ ಹೆಚ್ಡಿಕೆ; ಕನಕಪುರ ಬ್ರದರ್ಸ್ ವಿರುದ್ಧ ವಾಗ್ದಾಳಿ
ಅಧಿವೇಶಕ್ಕೆ ತಟ್ಟಲಿದೆ ಪ್ರತಿಭಟನೆ ಕಾವು
ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೆ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ತಟ್ಟಲು ಕೆಲವೊಂದು ಸಂಘಟನೆಗಳು ತಯಾರಿ ನಡೆಸುತ್ತಿದ್ದು, ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿಗಳು ಸಲ್ಲಿಕೆಯಾಗಿವೆ. ಈ ಬಾರಿ ಅತಿ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿರುವುದು ಸರ್ಕಾರಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸುವ ಸಾಧ್ಯತೆ ಇದೆ. ನಗರ ಪೊಲೀಸ್ ಆಯುಕ್ತರ ಬಳಿ ಹಲವು ಸಂಘಟನೆಗಳು ಪ್ರತಿಭಟನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದು, ಪ್ರತಿಭಟನಾಕಾರರಿಗೆ ಈಗಾಗಲೇ ಹೋರಾಟಕ್ಕೆ ಪೊಲೀಸ್ ಇಲಾಖೆ ಜಾಗ ನಿಗದಿ ಮಾಡಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ