• Home
  • »
  • News
  • »
  • state
  • »
  • Mekedatu Project: ಕಾವೇರಿ ಸಭೆಯಲ್ಲಿ ಚರ್ಚೆಯಾಗದ ಮೇಕೆದಾಟು DPR ವಿಚಾರ, ರಾಜ್ಯಕ್ಕೆ ಹಿನ್ನಡೆ

Mekedatu Project: ಕಾವೇರಿ ಸಭೆಯಲ್ಲಿ ಚರ್ಚೆಯಾಗದ ಮೇಕೆದಾಟು DPR ವಿಚಾರ, ರಾಜ್ಯಕ್ಕೆ ಹಿನ್ನಡೆ

ಮೇಕೆದಾಟು ಬಳಿಯ ಕಾವೇರಿ ನದಿ.

ಮೇಕೆದಾಟು ಬಳಿಯ ಕಾವೇರಿ ನದಿ.

Cauvery Water Management Committee: ತಮಿಳುನಾಡು ಮಾತ್ರವಲ್ಲದೆ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಕೇರಳ ಮತ್ತು ಪುದುಚೇರಿಗಳೂ ವಿರೋಧ ವ್ಯಕ್ತಪಡಿಸಿದ್ದರಿಂದ ಮೇಕೆದಾಟು ಯೋಜನೆ ಬಗ್ಗೆ ನಡೆಯಬೇಕಿದ್ದ ಚರ್ಚೆಯನ್ನು ಮುಂದೂಡಲಾಗಿದೆ.

  • Share this:

ನವದೆಹಲಿ, ಆ. 31: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (Cauvery Water Management Committee) ಸಭೆಯಲ್ಲಿ ಬೆಂಗಳೂರು ಮಹಾನಗರಕ್ಕೆ ಕುಡಿಯುವ ನೀರನ್ನು ಪೂರೈಸುವ ಮಹತ್ವಾಕಾಂಕ್ಷೆಯ ಯೋಜನೆ ಮೇಕೆದಾಟು (Mekedatu) ಬಳಿ‌ ಅಣೆಕಟ್ಟು ನಿರ್ಮಿಸುವ ವಿಷಯದ ಬಗ್ಗೆ ಚರ್ಚೆ ಆಗದೆ ಕರ್ನಾಟಕಕ್ಕೆ ಹಿನ್ನಡೆ ಉಂಟಾಗಿದೆ. ಇತ್ತೀಚೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) 'ಮೇಕೆದಾಟು ಡಿಪಿಆರ್ ವಿಷಯವೇ ಮುಂದಿನ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾ ಆಗಿರಲಿದೆ' ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಮಂಗಳವಾರದ ಸಭೆ ಕರ್ನಾಟಕದ ಪಾಲಿಗೆ ಮಹತ್ವದ್ದಾಗಿತ್ತು.


ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೇಕೆದಾಟು ಯೋಜನೆ ಕುರಿತು ಕರ್ನಾಟಕ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ (Detail Project Report) ಬಗ್ಗೆ ಚರ್ಚೆ ಆಗುತ್ತೆ. ಎಂದಿನಂತೆ ತಮಿಳುನಾಡು ವಿರೋಧಿಸಿದರೂ ಕರ್ನಾಟಕದ ಡಿಪಿಆರ್ ಬಗ್ಗೆ ಒಪ್ಪಿಗೆ ಸೂಚಿಸಬಹುದು. ‌ಬಳಿಕ ನಿಯಮಾನುಸಾರ ಕೇಂದ್ರ ಜಲ ಆಯೋಗದ (Central Water Commission) ಅನುಮೋದನೆಗೆ ಶಿಫಾರಸು ಮಾಡಬಹುದು ಎಂಬ ನಿರೀಕ್ಷೆಗಳು ಇದ್ದವು. ಆದರೆ ತಮಿಳುನಾಡು ಮಾತ್ರವಲ್ಲದೆ ಕಾವೇರಿ ಜಲಾನಯನ ಪ್ರದೇಶ ವ್ಯಾಪ್ತಿಯ ಕೇರಳ ಮತ್ತು ಪುದುಚೇರಿಗಳೂ ವಿರೋಧ ವ್ಯಕ್ತಪಡಿಸಿದ್ದರಿಂದ ಮೇಕೆದಾಟು ಯೋಜನೆ ಬಗ್ಗೆ ನಡೆಯಬೇಕಿದ್ದ ಚರ್ಚೆಯನ್ನು ಮುಂದೂಡಲಾಗಿದೆ. ಸದ್ಯಕ್ಕೆ ಕರ್ನಾಟಕ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ  ತಮಿಳುನಾಡಿಗೆ ಹರಿಸಬೇಕಾದ ನೀರಿನ‌ ಬಗ್ಗೆ ಮಾತ್ರ ಚರ್ಚೆ ನಡೆಸಲಾಗಿದೆ.


ಸಭೆಯ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಎಸ್.ಕೆ. ಹಲ್ದರ್, ಮಂಗಳವಾರ ಪ್ರಾಧಿಕಾರದ 13ನೇ ಸಭೆಯಲ್ಲಿ ನಡೆಸಲಾಯಿತು. ಕಾವೇರಿ ಜಲಾನಯನದ ರಾಜ್ಯಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ಸಭೆ ಸೌಹಾರ್ದಯುತವಾಗಿ ನಡೆದಿದೆ. ನೀರು ಹಂಚಿಕೆ ಬಗ್ಗೆ ಮಾತ್ರ ಚರ್ಚೆ ಮಾಡಲಾಗಿದೆ.‌ ಸುಪ್ರೀಂ ಕೋರ್ಟ್ ತೀರ್ಪಿನ‌ ಪ್ರಕಾರ ಕರ್ನಾಟಕವು‌ ಆಗಸ್ಟ್ ಅಂತ್ಯದವರೆಗೆ ತಮಿಳುನಾಡಿಗೆ 86 ಟಿಎಂಸಿ ನೀರು ಹರಿಸಬೇಕು. ಆದರೆ ಈವರೆಗೆ 56ರಿಂದ 57 ಟಿಎಂಸಿ ನೀರನ್ನು ಮಾತ್ರ ಹರಿಸಿದೆ. ಆದುದರಿಂದ ಬಾಕಿ ಉಳಿಸಿಕೊಂಡಿರುವ ನೀರನ್ನು ಬಿಡುಗಡೆಗೆ ಮಾಡುವಂತೆ ತಮಿಳುನಾಡು ಕೇಳಿದೆ. ಸೆಪ್ಟೆಂಬರ್ ತಿಂಗಳಲ್ಲಿ ನೀರು ಬಿಡಲು ಕರ್ನಾಟಕ ಒಪ್ಪಿಕೊಂಡಿದೆ ಎಂದು ವಿವರಿಸಿದರು.


ಮೇಕೆದಾಟು ಯೋಜನೆ ಬಗ್ಗೆ ಚರ್ಚೆ ಆಗಬೇಕಿತ್ತು. ಆದರೆ ತಮಿಳುನಾಡು, ಕೇರಳ ಮತ್ತು ಪುದುಚೇರಿ ರಾಜ್ಯಗಳು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಮೇಕೆದಾಟು ಚರ್ಚೆಯನ್ನು ಮುಂದೂಡಲಾಗಿದೆ. ಮೇಕೆದಾಟು ಯೋಜನೆಗೆ ಉಳಿದ ರಾಜ್ಯಗಳ ಅನುಮತಿ ಬೇಕು. ಕಾವೇರಿ ಜಲಾನಯನ ಪ್ರದೇಶದ ರಾಜ್ಯಗಳ ಒಪ್ಪಿಗೆ ಪಡೆದು ಆಣೆಕಟ್ಟು ನಿರ್ಮಿಸಬೇಕು ಎಂದು ಹೇಳಿದರಲ್ಲದೆ ತಮಿಳುನಾಡು ಸರ್ಕಾರ ರೂಪಿಸಿರುವ ವೆಲ್ಲಾರು - ಗುಂಡಾರು ಯೋಜನೆಗೆ ಸಭೆಯಲ್ಲಿ ಕರ್ನಾಟಕ ವಿರೋಧ ಮಾಡಿದೆ ಎಂದು ತಿಳಿಸಿದರು.


ಆಗಸ್ಟ್ 25ರಂದು ದೆಹಲಿಯಲ್ಲಿ ಕೇಂದ್ರ ಜಲಸಂಪನ್ಮೂಲ ಸಚಿವ ಗಜೇಂದ್ರ ಸಿಂಗ್ ಶೇಖಾವತ್ (Gagendra Sing Shekawath) ಅವರನ್ನು ಭೇಟಿ ಮಾಡಿ ರಾಜ್ಯದ ಜಲ ವಿವಾದಗಳ ಬಗ್ಗೆ ಚರ್ಚೆ ನಡೆಸಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಮೇಕೆದಾಟು ಯೋಜನೆ ಬಗ್ಗೆ ಒತ್ತು ನೀಡಿದ್ದರು. ಕೇಂದ್ರ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಅವರು, 'ಮೇಕೆದಾಟು ಡಿಪಿಆರ್ ವಿಷಯವೇ ಮುಂದಿನ ಕರ್ನಾಟಕ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯ ಅಜೆಂಡಾ ಆಗಿರಲಿದೆ' ಎಂದು ಹೇಳಿದ್ದರು. ಈ ಹಿನ್ನಲೆಯಲ್ಲಿ ಮಹತ್ವದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆ ಕರ್ನಾಟಕದ ಪಾಲಿಗೆ ಅಪಾರವಾದ ನಿರೀಕ್ಷೆಯನ್ನು‌ ಹುಟ್ಟುಹಾಕಿತ್ತು.


ಸುಪ್ರೀಂನಲ್ಲೂ ತಮಿಳುನಾಡು ವಿರೋಧ


ಮೇಕೆದಾಟು ಯೋಜನೆಗೆ ಅಂತಿಮ‌ ಅನುಮೋದನೆ ನೀಡಬೇಕಿರುವುದು ಕೇಂದ್ರ ಜಲ ಆಯೋಗ. ಈ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಹೇಳಿಕೆ ನೀಡಿದ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟಿನಲ್ಲಿ ಮತ್ತೊಂದು ದೂರು ಸಲ್ಲಿಸಿದೆ. '2019ರಂದು ಮೇಕೆದಾಟು ಅಣೆಕಟ್ಟು ಯೋಜನೆ ಬಗ್ಗೆ ಸಲ್ಲಿಸಿರುವ ವಿಸ್ತೃತ ಯೋಜನಾ ವರದಿ ಅನ್ನು ವಜಾಗೊಳಿಸಲು ಕೇಂದ್ರ ಜಲ ಆಯೋಗಕ್ಕೆ ಸೂಚನೆ ನೀಡುವಂತೆ' ಮನವಿ ಮಾಡಿಕೊಂಡಿದೆ.


ಇದನ್ನೂ ಓದಿ: Mysterious Fever in Firozabad| ನಿಗೂಢ ರೋಗಕ್ಕೆ ಉತ್ತರಪ್ರದೇಶದ ಫಿರೋಜಾಬಾದ್​ನಲ್ಲಿ 33 ಮಕ್ಕಳು ಸೇರಿ 40 ಜನ ಸಾವು!


ಬಾಕಿ  ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ಆದ್ಯತೆ: ಸಿಎಂ


ಸರ್ವೋಚ್ಛ ನ್ಯಾಯಾಲಯದಲ್ಲಿ ಸುದೀರ್ಘ ಕಾಲದಿಂದ ಬಾಕಿ ಉಳಿದಿರುವ ಜಲ ವಿವಾದಗಳಿಗೆ ಸಂಬಂಧಿಸಿದ  ಪ್ರಕರಣಗಳ ಶೀಘ್ರ ಇತ್ಯರ್ಥಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಪ್ರಯತ್ನ ಮಾಡುತ್ತಿದೆ ಎಂದು ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದರು. ರಾಜ್ಯದ ನೀರಾವರಿ ಯೋಜನೆಗಳ ಬಗ್ಗೆ ಕಾನೂನು ಮತ್ತು ತಾಂತ್ರಿಕ ತಜ್ಞರೊಂದಿಗೆ  ಸುದೀರ್ಘ ಚರ್ಚೆ ನಡೆದಿದ್ದು,  ಕೃಷ್ಣಾ ಮೇಲ್ದಂಡೆ ಯೋಜನೆ ಹಾಗೂ ತಮಿಳುನಾಡು ಸರ್ಕಾರ ಕೈಗೆತ್ತಿಕೊಂಡಿರುವ ಯೋಜನೆಗಳ ಕುರಿತು ಸರ್ವೋಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದಿದ್ದರು.


ವಿಶೇಷ ರಜೆ ಅರ್ಜಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥ ಮಾಡಲು ತೀರ್ಮಾನಿಸಲಾಗಿದೆ ಎಂದ ಅವರು ತಮಿಳುನಾಡು ನದಿ ಜೋಡಣೆ ಯೋಜನೆಗಳು ಕಾನೂನು ಬಾಹಿರವಾಗಿದ್ದು, ಆ ಬಗ್ಗೆ ಚರ್ಚಿಸಲಾಗಿದೆ. ಮೇಕೆದಾಟು ಯೋಜನೆಯ ಬಗ್ಗೆ  ನ್ಯಾಯಾಲಯದಲ್ಲಿ ವಿಚಾರಣೆಗೆ ಬಂದಾಗ ನಮ್ಮ ನಿಲುವನ್ನು ಸ್ಪಷ್ಟಪಡಿಸುವ ಕುರಿತು ಹಾಗೂ ತಮಿಳುನಾಡು ಮಧುರೈ ನ್ಯಾಯಾಲಯದಲ್ಲಿ ಪ್ರಕರಣವೊಂದು ದಾಖಲಾಗಿದೆ. ಪ್ರಕರಣ ಮಧುರೈ ವ್ಯಾಪ್ತಿಗೆ ಒಳಪಡದಿರುವುದರಿಂದ ಪ್ರಕರಣವನ್ನು ಕೈಬಿಡಲು  ಕ್ರಮ ವಹಿಸಲಾಗುವುದು ಎಂದು ಹೇಳಿದ್ದರು. ಈ ಸಂದರ್ಭದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಕೂಡ ಉಪಸ್ಥಿತರಿದ್ದರು.

Published by:Kavya V
First published: