ನವದೆಹಲಿ (ಜ.31): ಸಚಿವ ಸಂಪುಟ ವಿಸ್ತರಣೆ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಗುರುವಾರ ದೆಹಲಿಗೆ ತೆರಳಿದ್ದರು. ಸಂಜೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾರನ್ನುಭೇಟಿಯಾಗಿ ಮಾತುಕತೆ ಕೂಡ ನಡೆಸಿದ್ದರು. ಆದರೆ, ಸಂಪುಟ ವಿಸ್ತರಣೆ ವಿಚಾರವಾಗಿ ಚರ್ಚೆ ನಡೆಸಲು ಸಾಧ್ಯವಾಗಿರಲಿಲ್ಲ. ಅಂತೆಯೇ, ಇಂದು ಕೂಡ ಅಮಿತ್ ಶಾ ಭೇಟಿ ಅನುಮಾನ ಎನ್ನಲಾಗುತ್ತಿದೆ.
ಭೇಟಿ ಸಮಯವನ್ನು
ಅಮಿತ್ ಶಾ ಪದೇ ಪದೇ ಬದಲಾಯಿಸುತ್ತಿದ್ದಾರೆ ಎನ್ನಲಾಗಿದೆ. ಮೊದಲಿಗೆ ಬೆಳಿಗ್ಗೆ 9.30-10ಗಂಟೆ ಒಳಗೆ ಭೇಟಿ ಆಗುವುದಾಗಿ ಅವರು ತಿಳಿಸಿದ್ದರು. ನಂತರ ಭೇಟಿ ಸಮಯ ಮಧ್ಯಾಹ್ನ 2 ಗಂಟೆಗೆ ಮುಂದೂಡಲ್ಪಟ್ಟಿತ್ತು. ಆದರೆ, 2 ಗಂಟೆಗೂ ಅಮಿತ್ ಶಾ ಸಿಗುವುದು ಅನುಮಾನ ಎನ್ನಲಾಗುತ್ತಿದೆ.
ಅಮಿತ್ ಶಾ ಬೆಳಿಗ್ಗೆ 11ಕ್ಕೆ
ಸಂಸತ್ ಜಂಟಿ ಅಧಿವೇಶನದಲ್ಲಿ ಭಾಗಿಯಾಗುತ್ತಿದ್ದಾರೆ. ಮಧ್ಯಾಹ್ನ 2ಕ್ಕೆ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅವರು ಪಾಲ್ಗೊಳ್ಳಬೇಕಿದೆ. ಇನ್ನು, ಮಧ್ಯಾಹ್ನ 3:30ಕ್ಕೆ ಎನ್ ಡಿ ಎ ಮೈತ್ರಿ ಕೂಟದ ಸಭೆ ಇದೆ. ಬಳಿಕ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ಶಾ ಭಾಗಿಯಾಗುತ್ತಿದ್ದಾರೆ. ಈ ಟೈಟ್ ಷೆಡ್ಯೂಲ್ ನಡುವೆ ಬಿಎಎಸ್ವೈರನ್ನು ಅಮಿತ್ ಶಾ ಭೇಟಿ ಮಾಡುವುದು ಅನುಮಾನ. ಹೀಗಾಗಿ, ಇಂದು ಕೂಡ ಭೇಟಿ ಅನುಮಾನ ಎಂದೇ ಹೇಳಲಾಗುತ್ತಿದೆ.
ಇದನ್ನೂ ಓದಿ: ಸಂಪುಟ ವಿಸ್ತರಣೆ: ಬಿಎಸ್ವೈ-ಜೆಪಿ ನಡ್ಡಾ ಭೇಟಿ ಅಂತ್ಯ: ನಾಳೆ ಬನ್ನಿ ಎಂದ ಅಮಿತ್ ಶಾ
ಇತ್ತ,
ಪಕ್ಷಾಂತರ ಮಾಡಿರುವ ಶಾಸಕರು ಸಚಿವ ಸ್ಥಾನಕ್ಕಾಗಿ ಒಂದೇ ಸಮನೆ ಬಿಎಸ್ವೈ ಮೇಲೆ ಒತ್ತಡ ಹೇರುತ್ತಿದ್ದಾರೆ. ಎಲ್ಲರೂ ಸಚಿವ ಸ್ಥಾನ ನೀಡಲೇಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಅತ್ತ, ಬಿಜೆಪಿ ಹೈಕಮಾಂಡ್ ಭೇಟಿಗೆ ಸಿಗುತ್ತಿಲ್ಲ. ಇವರ ಮಧ್ಯೆ ಬಿಎಸ್ವೈ ಸದ್ಯ ಸಂಕಟಕ್ಕೆ ಸಿಲುಕಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ