ಶಭಾಷ್​ ಮೇಷ್ಟ್ರೇ..! ಶಾಲೆಯ ಉಳಿವಿಗಾಗಿ ಶಿಕ್ಷಕನೇ ಚಾಲಕನಾದ ಕಥೆಯಿದು!

news18
Updated:July 11, 2018, 6:14 PM IST
ಶಭಾಷ್​ ಮೇಷ್ಟ್ರೇ..! ಶಾಲೆಯ ಉಳಿವಿಗಾಗಿ ಶಿಕ್ಷಕನೇ ಚಾಲಕನಾದ ಕಥೆಯಿದು!
news18
Updated: July 11, 2018, 6:14 PM IST
- ಲತಾ ಸಿ.ಜಿ. ನ್ಯೂಸ್​ 18 ಕನ್ನಡ

ಉಡುಪಿ, (ಜು.11): ಇತ್ತೀಚಿನ ದಿನಗಳಲ್ಲಿ ಸರ್ಕಾರಿ ಶಾಲೆಗಳು ಬಹುತೇಕ ಬಾಗಿಲು ಮುಚ್ಚುವ ದುಸ್ಥಿತಿಗೆ ಬಂದು ನಿಂತಿವೆ. ಪ್ರತಿ ಕ್ಷೇತ್ರದಲ್ಲೂ ಸ್ಪರ್ದೆ, ಇಂಗ್ಲೀಷ್​ನ ಮೋಹ ಮತ್ತು ಇಂಗ್ಲೀಷ್​ನ ಅನಿವಾರ್ಯತೆಗಳಿಂದ ಪೋಷಕರು ಖಾಸಗಿ ಶಾಲೆಗಳತ್ತ ತಿರುಗಿದ್ದಾರೆ. ಡೊನೇಷನ್​ ಹಾವಳಿ ಹೆಚ್ಚಾಗುತ್ತಿದ್ದರೂ ಸಹ ಪೋಷಕರು ತಮ್ಮ ಮಕ್ಕಳು ಇಂಗ್ಲೀಷ್​​ ಶಾಲೆಯಲ್ಲೇ ಕಲಿಯಬೇಕು ಎಂಬ ಮನಸ್ಥಿತಿಯಲ್ಲಿದ್ದಾರೆ. ಆದರೆ ಸರ್ಕಾರಿ ಶಾಲೆಗಳ ಗುಣಮಟ್ಟ ಹೆಚ್ಚಿಸಲು ಮತ್ತು ಹೆಚ್ಚು ವಿದ್ಯಾರ್ಥಿಗಳನ್ನು ಕರೆತರಲು ಕೆಲವು ಪ್ರಾಮಾಣಿಕ ಶಿಕ್ಷಕರು ಇಂದೂ ಪ್ರಯತ್ನ ಮಾಡುತ್ತಿದ್ದಾರೆ. ಅಂಥ ಒಬ್ಬ ಪ್ರಾಮಾಣಿಕ ವ್ಯಕ್ತಿಯ ಪರಿಚಯ, ಮಾಡಿದ ಸಾಧನೆಯ ಕಥೆ ಇಲ್ಲಿದೆ.

ತಮ್ಮ ಶಾಲೆ ಉಳಿಯಬೇಕು ಹಾಗೂ ಮಕ್ಕಳು ಶಾಲೆಗೆ ಬಂದು ಶಿಕ್ಷಿತರಾಗಬೇಕು ಎಂಬ ಕಾರಣಕ್ಕೆ ಶಿಕ್ಷಕರೊಬ್ಬರು ತಾವೇ ಬಸ್​ ಸ್ಟೈರಿಂಗ್​ ತಿರುಗಿಸುತ್ತಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದ ಬಾರಾಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಣ ಪಾಠ ಹೇಳಿಕೊಡುವ ರಾಜಾರಾಮ್​ ಎಂಬುವವರೇ ಮೇಲೆ ಹೇಳಿದ ಪ್ರಾಮಾಣಿಕ ಶಿಕ್ಷಕ ಮತ್ತು ಈ ಕಥೆಯ ಜೀವಾಳ. ಸದ್ಯ ಇವರು ಶಿಕ್ಷಕ ಮಾತ್ರವಲ್ಲದೆ ಬಸ್​ ಚಾಲಕರಾಗಿ ಶ್ರಮಿಸುತ್ತಿದ್ದಾರೆ. ಆ ಮೂಲಕ ಕೆಲ ಮಕ್ಕಳ ಭವಿಷ್ಯವನ್ನು ಕಟ್ಟಿಕೊಡುವತ್ತ ಹೆಜ್ಜೆ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.

ಈ ಶಾಲೆಯಲ್ಲಿ ಮಕ್ಕಳ ದಾಖಲಾತಿ ಸಂಖ್ಯೆ ಕೊರತೆಯಿತ್ತು. ಎಲ್ಲರೂ ಖಾಸಗಿ ಶಾಲೆಗಳತ್ತ ಮುಖಮಾಡಿ ನಿಂತಿದ್ದರು. ತಮ್ಮೂರಿನ ಸರ್ಕಾರಿ ಶಾಲೆ ಉಳಿಯಬೇಕು, ಎಲ್ಲಾ ಮಕ್ಕಳು ಶಾಲೆಗೆ ಬರಬೇಕು ಎಂಬ ಉದ್ದೇಶದಿಂದ ದಾನಿಗಳ ಮೂಲಕ ಬಸ್​ ವ್ಯವಸ್ಥೆ ಮಾಡಲಾಯಿತು. ವಾಹನ ಸೌಲಭ್ಯ ಮಾಡಿದ ನಂತರ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಿದ್ದು, ಪ್ರಸ್ತುತ 90 ಮಕ್ಕಳಿದ್ದಾರೆ ಎಂಬುದು ಸಂತಸದ ವಿಷಯವಾಗಿದೆ.

ಅಂದಹಾಗೆ, ಈ ಮಕ್ಕಳನ್ನು ಶಾಲೆಗೆ ಕರೆತರಲು ಪ್ರತಿದಿನ 4 ಟ್ರಿಪ್​​ ಮಾಡಬೇಕು. ವಾಹನಕ್ಕೆ ಬೇಕಿರುವ ಡೀಸೆಲ್​​, ಮತ್ತಿತರ ನಿರ್ಹಹಣೆ ವೆಚ್ಚವನ್ನು ಹಳೆಯ ವಿದ್ಯಾರ್ಥಿ ಸಂಘ ನೋಡಿಕೊಳ್ಳುತ್ತಿದ್ದು, ಅವರು ಸಹ ತಾವು ಓದಿದ ಶಾಲೆಯ ಉಳಿವಿಗಾಗಿ ಅಳಿಲು ಸೇವೆ ಮಾಡುತ್ತಿದ್ದಾರೆ. ರಾಜಾರಾಮ್​ ಅವರು ರಜೆಯಲ್ಲಿದ್ದಾಗ ಸ್ಥಳೀಯ ರಿಕ್ಷಾ ಚಾಲಕರು ವಾಹನ ಚಲಾಯಿಸುತ್ತಾರೆ. ಇವರಿಗೆ ಶಿಕ್ಷಕರೇ ಭತ್ಯೆ ನೀಡುತ್ತಾರೆ.

ವಾಹನ ಕೊಡುಗೆ: ಈ ಶಾಲೆಯಲ್ಲಿ ಓದಿದ ಹಳೆಯ ವಿದ್ಯಾರ್ಥಿಗಳು ತಮ್ಮ ಶಾಲೆಗೆ ಏನಾದರೊಂದು ಚಿಕ್ಕ ಕೊಡುಗೆ ನೀಡಬೇಕೆಂಬ ಹಂಬಲದಿಂದ ಈ ವಾಹನ ವ್ಯವಸ್ಥೆ ಕಲ್ಪಿಸಿಕೊಟ್ಟಿದ್ದಾರೆ. 2017-18 ರ ವರ್ಷಾರಂಭದಲ್ಲಿ ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪ್ರಿಯದರ್ಶನ್​​ ಶೆಟ್ಟಿ, ನಿರ್ಮಿತಿ ಇಂಜಿನಿಯರ್​ ಗಣೇಶ್​ ಪ್ರಸಾದ್​​ ಶೆಟ್ಟಿ ಶ್ರಮದಿಂದ ಬೆಂಗಳೂರಿನ ಉದ್ಯಮಿ ವಿಜಯ ಹೆಗ್ಡೆ ಬಾರಾಳಿ ಅವರು ಟೆಂಪೊ ಟ್ರಾವೆಲರ್​ ವಾಹನವನ್ನು ಶ್ರೀರಾಮ ಸೇವಾ ಸಮಿತಿ ಮೂಲಕ ಶಾಲೆಗೆ ಕೊಡುಗೆಯಾಗಿ ನೀಡಿದರು. ವಾಹನ ವ್ಯವಸ್ಥೆ ಬಳಿಕ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.

"ಶಾಲೆಗೆ ವಾಹನ ವ್ಯವಸ್ಥೆಯಾದ ನಂತರ ಶಾಲೆಗೆ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದ್ದು, ದಾಖಲಾತಿ ಅಧಿಕವಾಗಿದೆ. ಹಳೇ ವಿದ್ಯಾರ್ಥಿ ಸಂಘ, ಮುಖ್ಯ ಶಿಕ್ಷಕರು, ಶಿಕ್ಷಕ ವರ್ಗ, ಎಸ್​ಡಿಎಂಸಿ ತುಂಬು ಸಹಕಾರದಿಂದ ಮಾತ್ರ ಇದು ಸಾಧ್ಯವಾಗಿದೆ. ಚಾಲಕನನ್ನು ನೇಮಿಸಿದರೆ ಸಂಬಳ ಕೊಡಬೇಕು, ಹೀಗಾಗಿ ಆ ಆರ್ಥಿಕ ಹೊರೆ ತಪ್ಪಿಸುವ ಸಲುವಾಗಿ ನಾನೇ ಚಾಲಕನಾಗಿದ್ದೇನೆ" ಎಂದು ಹೇಳುತ್ತಾ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್​​ ಮುಗುಳ್ನಗೆ ಬೀರುತ್ತಾರೆ.
Loading...

ಅಂದಹಾಗೆ, ರಾಜಾರಾಮ್​ ಮೇಷ್ಟ್ರು ಇಂತಹ ಒಳ್ಳೆಯ ಉದ್ದೇಶಕ್ಕೆ ಮುಂದಾಗಿರುವುದು ಎಲ್ಲರಿಗೂ ಖುಷಿ ತರುವ ವಿಚಾರವೇ ಹೌದು. ವಿದ್ಯಾರ್ಥಿಗಳಿಗೆ ಕೇವಲ ದೈಹಿಕ ಶಿಕ್ಷಣದ ಮಾರ್ಗದರ್ಶಕರಾಗಿರುವುದಲ್ಲದೆ, ಜೀವನದ ಮಾರ್ಗದರ್ಶಕರಾಗಿದ್ದಾರೆ ಎಂದರೆ ತಪ್ಪಾಗಲಾರದು. ಮಕ್ಕಳ ಭವಿಷ್ಯದ ರೂವಾರಿಯಂತೆ ಬಸ್​ ಚಾಲಕನಾಗಿ ಕೋಟಿ ಕನಸುಗಳ ಹೊತ್ತ ಆ ವಿದ್ಯಾರ್ಥಿಗಳ ಜೀವನವನ್ನು ಜಾಗರೂಕತೆಯಿಂದ ಕೊಂಡೊಯ್ಯುತ್ತಿದ್ದಾರೆ ಎಂದರೆ ಅತಿಶಯೋಕ್ತಿ ಆಗಲಾರದು.

ಸರ್ಕಾರಿ ಶಾಲೆಗಳಲ್ಲಿ ಖಾಸಗಿ ಶಾಲೆಗಳಂತೆ ಯಾವುದೇ ಸೌಲಭ್ಯಗಳಿಲ್ಲ. ಗುಣಮಟ್ಟದ ಶಿಕ್ಷಣ ಕೊಡುವುದಿಲ್ಲ. ಶಿಸ್ತು-ನಿಯಮಗಳಿಲ್ಲ ಎಂದು ಮೂಗುಮುರಿಯುವವರಿಗೆ ಇದೊಂದು ಮಾದರಿ ಶಾಲೆಯಾಗಿದೆ ಎಂದರೆ ತಪ್ಪಾಗಲಾರದು. ಅಂತೆಯೇ ಸರ್ಕಾರಿ ಶಾಲೆಗಳೂ ಸಹ ಖಾಸಗಿ ಶಾಲೆಗಳಿಗೇನೂ ಕಡಿಮೆ ಇಲ್ಲ ಎಂಬುದಕ್ಕೆ ಈ ಶಾಲೆಯೇ ಒಂದು ನಿದರ್ಶನ. ಸರ್ಕಾರಿ ಶಾಲೆಯ ಶಿಕ್ಷಕರು ಸಹ ನಿಸ್ವಾರ್ಥ ಮನೋಭಾವನೆಯಿಂದ ತಮ್ಮ ಕರ್ತವ್ಯ ಮತ್ತು ಸೇವೆ ಮಾಡುತ್ತಿರುವುದು ಮತ್ತಷ್ಟು ಖುಷಿ ತರಿಸಿದೆ.

ರಾಜಾರಾಮ್​ ಮೇಷ್ಟ್ರ ಕಾರ್ಯ ರಾಜ್ಯದ ಇನ್ನುಳಿದ ಶಿಕ್ಷಕರಿಗೂ ಮಾರ್ಗದರ್ಶನವಾಗಲಿ, ಸರ್ಕಾರಿ ಶಾಲೆಗಳು ಉಳಿಯಲ್ಲಿ ಎಂಬುದು ನಮ್ಮ ಆಶಯ.
First published:July 11, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...