ಕೊಡಗು(ಮಾ.03) : ಉಕ್ರೇನ್ (Ukarine) ಹಾಗೂ ರಷ್ಯಾ (Russia) ದೇಶಗಳ ನಡುವೆ ನಡೆಯುತ್ತಿರುವ ಯುದ್ಧ ದಿನದಿಂದ ದಿನಕ್ಕೆ ಭೀಕರತೆ ಪಡೆಯುತ್ತಿದ್ದರೆ, ಉಕ್ರೇನ್ ನಲ್ಲಿ ಸಿಲುಕಿರುವ ಕೊಡಗಿನ ಮೂಲದ ವಿದ್ಯಾರ್ಥಿಗಳ ಪೋಷಕರು ತೀವ್ರ ಆತಂಕಕ್ಕೆ ಸಿಲುಕಿದ್ದಾರೆ. ಅದರ ನಡುವೆ 16 ವಿದ್ಯಾರ್ಥಿಗಳ ಪೈಕಿ ಗೋಣಿಕೊಪ್ಪದ ಮದಿಹ ಅವರು ಸುರಕ್ಷಿತವಾಗಿ ಕೊಡಗಿಗೆ (Kodagu) ವಾಪಸ್ ಆಗಿದ್ದಾರೆ. ಒಂದುವರೆ ತಿಂಗಳ ಹಿಂದೆಯಷ್ಟೇ ಉಕ್ರೇನ್ ನ ಒಝೊರೋಡ್ ನ್ಯಾಷನಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ (MBBS) ಅಧ್ಯಯನಕ್ಕಾಗಿ ಗೋಣಿಕೊಪ್ಪದ ಗಫೂರ್ ಅವರ ಮಗಳು ಮದಿಹ ತೆರಳಿದ್ದರು. ರಷ್ಯಾ ಉಕ್ರೇನ್ ನಡುವೆ ಯುದ್ಧ ಆರಂಭವಾದ ಬಳಿಕ ಯೂನಿವರ್ಸಿಟಿಯ ಕ್ಯಾಂಪಸ್ ನಲ್ಲಿಯೇ ಇದ್ದರು. ಆದರೆ ಖಾರ್ಕಿವ್ ಮತ್ತು ಕಿವ್ ನಗರಗಳಲ್ಲಿ ಯುದ್ಧ ತೀವ್ರಗೊಂಡಿದ್ದರಿಂದ ಭಾರತೀಯ ರಾಯಭಾರಿ ಅಧಿಕಾರಿಗಳ ನಿರ್ದೇಶನದಂತೆ ಮದೀಹ ಫೆಬ್ರವರಿ 27 ರಂದು ಉಕ್ರೇನ್ ಬಿಟ್ಟು ಮಾರ್ಚ್ 2 ರಂದು ಅಂದರೆ ಬುಧವಾರ ಬೆಳಗ್ಗೆ ಸುರಕ್ಷಿತವಾಗಿ ಗೋಣಿಕೊಪ್ಪ ತಲುಪಿದ್ದಾರೆ.
ಆದರೆ ಇನ್ನೂ ಬಹಳಷ್ಟು ಜನ ಉಕ್ರೇನ್ನಲ್ಲಿಯೇ ಇದ್ದು ಅವರದಲ್ಲಿ ಒಬ್ಬಾಕೆಯ ತಂದೆ ಅಳಲು ತೋಡಿಕೊಂಡಿದ್ದಾರೆ. ಡಾಕ್ಟರ್ ಆಗಬೇಕೆಂದು ಹೋಗಿ ಬಂಕರ್ನಲ್ಲಿ ಕಳೆಯುತ್ತಿರೋ ಮಗಳ ಬಗ್ಗೆ ತಂದೆಯೊಬ್ಬರು ಕಣ್ಣೀರಿಟ್ಟಿದ್ದಾರೆ.
ಮರಳಿದ ಮದೀಹಾ
ಒಂದು ವಾರದಿಂದ ಒಝೊರೋಡ್ ಕಾಲೇಜಿನ ಕ್ಯಾಂಪಸ್ ನಲ್ಲಿಯೇ ಮದಿಹ ಇದ್ದರಾದರೂ ಉಕ್ರೇನ್ ನಲ್ಲಿ ನಡೆಯುತ್ತಿರುವ ಭೀಕರ ಯುದ್ಧ ನೋಡಿ ಪೋಷಕರು ತೀವ್ರ ಆತಂಕಗೊಂಡಿದ್ದರು.
ಎರಡು ತಿಂಗಳ ಹಿಂದೆಯಷ್ಟೇ ಉಕ್ರೇನ್ಗೆ ಹೋಗಿದ್ದಾಕೆ
ಎಂಬಿಬಿಎಸ್ ವಿದ್ಯಾಭ್ಯಾಸಕ್ಕೆಂದು ಎರಡು ತಿಂಗಳ ಹಿಂದೆ ಹೋಗಿದ್ದೆ. ಅದರೆ ಈ ರೀತಿ ಆಗುತ್ತದೆ ಎಂದು ತಮ್ಮಗೆ ಗೊತ್ತಿರಲಿಲ್ಲ. ಆದ್ರೂ ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿರುವುದು ನನಗೆ ಮರು ಜನ್ಮ ಸಿಕ್ಕಿದಂತೆ ಆಗಿದೆ. ಭಾರತೀಯ ರಾಯಭಾರ ಕಚೇರಿಗೆ ಈ ಮೂಲಕ ಧನ್ಯವಾದ ಅರ್ಪಿಸುತ್ತೇನೆ ಎಂದು ಮದಿಹ ಹೇಳಿದ್ದಾರೆ.
ಕೇಂದ್ರ ಸರ್ಕಾರ ಬೇಗ ವಿದ್ಯಾರ್ಥಿಗಳ ರಕ್ಷಿಸಲಿ:
ಉಕ್ರೇನ್ ನಲ್ಲಿ ರಷ್ಯಾ ಸೈನಿಕರ ದಾಳಿಗೆ ಕರ್ನಾಟಕ ಮೂಲದ ನವೀನ್ ಮೃತ ಪಟ್ಟಿರುವುದು ತುಂಬಾ ಬೇಸರ ತಂದಿದೆ. ಆದಷ್ಟು ಬೇಗ ಕೇಂದ್ರ ಸರ್ಕಾರ ಉಳಿದ ವಿದ್ಯಾರ್ಥಿಗಳನ್ನು ರಕ್ಷಣೆ ಮಾಡಬೇಕು ಎಂದು ವಿದ್ಯಾರ್ಥಿನಿ ಮದಿಹ ಮನವಿ ಮಾಡಿದ್ದಾರೆ.
ಶಿಕ್ಷಣದ ಆಸೆಗೆ ಹೋಗಿ ಬಂಕರ್ನಲ್ಲಿ ಜೀವನ ಕಳೆದ ಮಗಳ ಬಗ್ಗೆ ತಂದೆ ಕಣ್ಣೀರು
ಒಂದು ವಾರದಿಂದ ಬಂಕರ್ ನಲ್ಲಿ ಜೀವನ ಕಳೆಯುತ್ತಿರುವ ತನ್ನ ಮಗಳನ್ನು ನೆನೆದು ತಂದೆ ಕಣ್ಣೀರಿಟ್ಟಿದ್ದಾರೆ. ವೈದ್ಯಕೀಯ ಶಿಕ್ಷಣ ಕಲಿಯಬೇಕೆಂಬ ಮಹದಾಸೆಯಿಂದ ನನ್ನ ಮಗಳು ಉಕ್ರೇನ್ ಗೆ ಹೋಗಿ ಸಿಲುಕಿದ್ದಾಳೆ ಎಂದು ಕೊಡಗಿನ ವಿರಾಜಪೇಟೆಯ ಶ್ರೇಯನ ತಂದೆ ಪ್ರದೀಪ್ ತನ್ನ ಮಗಳನ್ನು ನೆನೆದು ಗದ್ಗದಿತರಾದರು.
ಇದನ್ನೂ ಓದಿ: H.D Kumaraswamy: ಉಕ್ರೇನ್ನಲ್ಲಿ ನವೀನ್ ಸಾವು: ‘ನೀಟ್ ನಿರ್ಲಜ್ಜ ಮುಖ ದರ್ಶನ’, ಇನ್ನೆಷ್ಟು ಜನ ಬಲಿಯಾಗ್ಬೇಕು?-HDK ಕಿಡಿ
ಕಳೆದ ಏಳು ದಿನಗಳಿಂದ ನನ್ನ ಮಗಳು ಸಂಕಷ್ಟದಲ್ಲಿ ಸಿಲುಕಿದ್ದಾಳೆ. ದಯಮಾಡಿ ಭಾರತ ಸರ್ಕಾರ ನನ್ನ ಮಗಳನ್ನು ರಕ್ಷಿಸಲಿ ಎಂದು ಬೇಡಿದ್ದಾರೆ. ಒಟ್ಟು 400 ವಿದ್ಯಾರ್ಥಿಗಳು ಒಂದು ಕಟ್ಟಡದಲ್ಲಿ ಸಿಲುಕಿದ್ದಾರೆ. ಆ ಕಟ್ಟಡದ ತಳಮಹಡಿಯಲ್ಲಿ ಆಶ್ರಯ ಪಡೆದಿದ್ದಾರೆ. ಸದ್ಯಕ್ಕೆ ಊಟಕ್ಕೆ ಸಮಸ್ಯೆ ಇಲ್ಲದಿದ್ದರೂ ಇನ್ನೆರಡು ದಿನಗಳಲ್ಲಿ ಊಟ ತಿಂಡಿಗೆ ತೀವ್ರ ಸಮಸ್ಯೆ ಎದುರಾಗಲಿದೆ ಎಂದು ಮಗಳು ಅಳಲು ತೋಡಿಕೊಂಡಿದ್ದಾರೆ.
ಭಾರತದಲ್ಲಿ ಕಲಿಸೋಕೆ ಅಷ್ಟೊಂದು ದುಡ್ಡಿರಲಿಲ್ಲ
ಅವಳಿಗೆ ಎಂಬಿಬಿಎಸ್ ಮಾಡಲೇ ಬೇಕೆಂಬ ಆಸೆ ಇತ್ತು. ಆದರೆ ನಮ್ಮಲ್ಲಿ ಎಂಬಿಬಿಎಸ್ ಸೀಟು ಪಡೆಯೋದಕ್ಕೆ 1 ಕೋಟಿಯಿಂದ ಒಂದುಕಾಲು ಕೋಟಿ ಕೇಳಿದರು. ಅದು ಸಾಧ್ಯವಿಲ್ಲವೆಂದು ಅರಿತು ಉಕ್ರೇನ್ ನಲ್ಲಿ ಕಡಿಮೆ ಖರ್ಚಿನಲ್ಲಿ ಎಂಬಿಬಿಎಸ್ ಮುಗಿಸಬಹುದು ಎಂದು ಅಲ್ಲಿಗೆ ಹೋದಳು.
ಇದನ್ನೂ ಓದಿ: Naveen parents: ‘ಕೊನೇ ಬಾರಿ ನನ್ನ ಮಗನ ಮುಖ ತೋರಿಸಿ’ ಅಗಲಿದ ಮಗನ ನೆನೆದು ಹೆತ್ತ ಕರುಳಿನ ಆಕ್ರಂದನ
ಸ್ಥಿತಿ ಹೀಗೆ ಆಗುತ್ತದೆ ಎಂದಿದ್ದರೆ ಯಾವುದೇ ಕಾರಣಕ್ಕೂ ನಾವು ಅಲ್ಲಿಗೆ ನಮ್ಮ ಮಗಳನ್ನು ಕಳುಹಿಸುತ್ತಿರಲಿಲ್ಲ. ಈಗ ನಮ್ಮ ಮಗಳು ಊರಿಗೆ ಸುರಕ್ಷಿತವಾಗಿ ಬಂದರೆ ಸಾಕು ಎಂದೆನಿಸಿದೆ. ನಮ್ಮ ಭಾರತ ಸರ್ಕಾರದ ಶಕ್ತಿ ಜಾಸ್ತಿ ಇದ್ದು, ನಮ್ಮ ಮಗಳು ಸೇರಿದಂತೆ ಭಾರತದ ಎಲ್ಲರನ್ನೂ ಸುರಕ್ಷಿತವಾಗಿ ಕರೆತರುತ್ತದೆ ಎನ್ನೋ ವಿಶ್ವಾಸವಿದೆ ಎಂದಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ