ವಿಧಾನಸಭೆ ಕಲಾಪಕ್ಕೆ ಮಾಧ್ಯಮದವರಿಗೆ ನಿರ್ಬಂಧ ಇನ್ನು ಅಧಿಕೃತ; ಬಿಎಸ್​ವೈ ಮಾತಿಗೂ ಕಿವಿಗೊಡದ ಸಭಾಧ್ಯಕ್ಷ ಕಾಗೇರಿ

ಸರ್ಕಾರಿ ಸ್ವಾಮ್ಯದ ದೂರದರ್ಶನ ಕೇಂದ್ರಕ್ಕೆ ಮಾತ್ರ ವಿಧಾನಸಭಾ ಕಾರ್ಯಕಲಾಪಗಳ ಚಿತ್ರೀಕರಣಕ್ಕೆ ಅವಕಾಶವಿರುತ್ತದೆ. ಈ ದೃಶ್ಯಗಳನ್ನಷ್ಟೇ ಖಾಸಗಿ ಮಾಧ್ಯಮಗಳು ಪ್ರಸಾರ ಮಾಡಬಹುದಾಗಿದೆ.

news18-kannada
Updated:October 9, 2019, 7:37 PM IST
ವಿಧಾನಸಭೆ ಕಲಾಪಕ್ಕೆ ಮಾಧ್ಯಮದವರಿಗೆ ನಿರ್ಬಂಧ ಇನ್ನು ಅಧಿಕೃತ; ಬಿಎಸ್​ವೈ ಮಾತಿಗೂ ಕಿವಿಗೊಡದ ಸಭಾಧ್ಯಕ್ಷ ಕಾಗೇರಿ
ವಿಶ್ವೇಶ್ವರ ಹೆಗಡೆ ಕಾಗೇರಿ
  • Share this:
ಬೆಂಗಳೂರು(ಅ. 09): ವಿಧಾನಸಭಾ ಕಲಾಪವನ್ನು ಚಿತ್ರೀಕರಿಸುವ ಸಂಬಂಧ ಖಾಸಗಿ ಮಾಧ್ಯಮಗಳಿಗೆ ರಾಜ್ಯ ಸರ್ಕಾರ ನಿರ್ಬಂಧ ಹಾಕಿದೆ. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ಆದೇಶದನ್ವಯ ವಿಧಾನಸಭೆ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಇಂದು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಅದರಂತೆ, ವಿಧಾನಸಭೆ ಕಾರ್ಯಕಲಾಪ ನಡೆಯುವ ವೇಳೆ ಖಾಸಗಿ ಮಾಧ್ಯಮದವರು ಯಾವುದೇ ರೀತಿಯಲ್ಲಿ ಚಿತ್ರೀಕರಣ ನಡೆಸದಂತೆ ಹಾಗೂ ಫೋಟೋ ತೆಗೆಯದಂತೆ ನಿರ್ಬಂಧಿಸಿ ಆದೇಶ ನೀಡಿದ್ದಾರೆ.

ಅ. 10ರಂದು ಅಧಿವೇಶನ ಪ್ರಾರಂಭವಾಗುತ್ತದೆ. ಸರ್ಕಾರಿ ಸ್ವಾಮ್ಯದ ದೂರದರ್ಶನಕ್ಕೆ ಮಾತ್ರ ಕಾರ್ಯಕಲಾಪಗಳ ಚಿತ್ರೀಕರಣಕ್ಕೆ ಅವಕಾಶ ಇರುತ್ತದೆ. ಇತರ ಮಾಧ್ಯಮಗಳು ದೂರದರ್ಶನದ ಔಟ್​ಪುಟ್ ಬಳಕೆ ಮಾಡಿಕೊಂಡು ಕಲಾಪಗಳ ದೃಶ್ಯಗಳನ್ನು ಬಿತ್ತರಿಸಬಹುದಾಗಿದೆ. ಇನ್ನುಳಿದಂತೆ, ಕಲಾಪ ನಡೆಯುವ ವೇಳೆ ಸುದ್ದಿಗಾರರಿಗೆ ಮಾತ್ರ ಪ್ರವೇಶ ಇರುತ್ತದೆ. ಖಾಸಗಿ ಸುದ್ದಿ ಸಂಸ್ಥೆಯ ಕ್ಯಾಮೆರಾಮೆನ್ ಮತ್ತು ಫೋಟೋಗ್ರಾಫರ್​ಗಳಿಗೆ ಇಲ್ಲಿ ಪ್ರವೇಶ ಇರುವುದಿಲ್ಲ. ಸುದ್ದಿಗಾರರೂ ಕೂಡ ತಮ್ಮ ಮೊಬೈಲ್​ ಮತ್ತು ಕ್ಯಾಮೆರಾ ತೆಗೆದುಕೊಂಡು ಒಳಹೋಗುವಂತಿಲ್ಲ. ಛಾಯಾಚಿತ್ರಗಳು ಬೇಕಾದಲ್ಲಿ ವಾರ್ತಾ ಇಲಾಖೆಯಿಂದ ಪಡೆಯಬಹುದಾಗಿದೆ ಎಂದು ಆದೇಶಪತ್ರದಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ಗೃಹ ಮಂಡಳಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಶರತ್ ಬಚ್ಚೇಗೌಡ; ಹೊಸಕೋಟೆಯಿಂದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

Media Gag Order
ಮಾಧ್ಯಮ ನಿರ್ಬಂಧಕ್ಕೆ ಅಧಿಕೃತ ಆದೇಶ


ವಿಧಾನಸೌಧ ಕಾರ್ಯಕಲಾಪದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಹೇರುವ ಪ್ರಸ್ತಾವ ಹೀಗ್ಗೆ ಕೆಲವಾರು ದಿನಗಳಿಂದಲೂ ಇತ್ತು. ಇದಕ್ಕೆ ವಿಪಕ್ಷದವರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡ ಈ ನಿರ್ಬಂಧದ ಪ್ರಸ್ತಾವವನ್ನು ವಿರೋಧಿಸಿದ್ದರು. ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಈ ನಿರ್ಬಂಧ ಪ್ರಸ್ತಾಪ ಕೈಬಿಡುವಂತೆ ಸೂಚನೆಯನ್ನೂ ನೀಡಿದ್ದರು. ಆದರೆ, ಬಿಎಸ್​ವೈ ಸೂಚನೆಗೆ ಲಕ್ಷ್ಯ ಕೊಡದ ವಿಧಾನಸಭಾಧ್ಯಕ್ಷ ಕಾಗೇರಿ ಅವರು ಮಾಧ್ಯಮ ನಿರ್ಬಂಧದ ನಿರ್ಧಾರಕ್ಕೆ ಬದ್ಧವಾಗಿ ಆದೇಶ ಹೊರಡಿಸಿದ್ದಾರೆ.

(ವರದಿ: ಕೃಷ್ಣ ಜಿ.ವಿ.)

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.
First published:October 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ