MC Managuli Death: ಶಾಸಕ ಎಂ.ಸಿ ಮನಗೂಳಿ ಇನ್ನಿಲ್ಲ; ಗ್ರಾಮ ಸೇವಕರಾಗಿದ್ದ ಮನಗೂಳಿ ಮುತ್ಯಾ ರಾಜಕೀಯ ಜೀವನ ಇಲ್ಲಿದೆ

MC Managuli Passes away: ಎಂ. ಸಿ. ಮನಗೂಳಿ ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಮುತ್ಯಾ ಎಂದೇ ಹೆಸರಾಗಿದ್ದರು. ಒಟ್ಟು 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಸಿ. ಮನಗೂಳಿ ಗೆದ್ದ ಎರಡೂ ಬಾರಿ ಸಚಿವರಾಗಿದ್ದರು. ಸಿಂದಗಿ ಕ್ಷೇತ್ರದ ಜೆಡಿಎಸ್ ಶಾಸಕರಾಗಿರುವ ಅವರು ನಿನ್ನೆ ರಾತ್ರಿ ನಿಧನರಾಗಿದ್ದಾರೆ.

ಎಂ.ಸಿ ಮನಗೂಳಿ

ಎಂ.ಸಿ ಮನಗೂಳಿ

  • Share this:
ವಿಜಯಪುರ, (ಜ. 28): ಬಸವನಾಡಿನ ಹಿರಿಯ ರಾಜಕೀಯ ಮುತ್ಸದ್ದಿ, ಎಲ್ಲರೂ ಪ್ರೀತಿಯಿಂದ ಮನಗೂಳಿ ಮುತ್ಯಾ ಎಂದೇ ಕರೆಯುತ್ತಿದ್ದ ಮಾಜಿ ಸಚಿವ ಮತ್ತು ಸಿಂದಗಿ ಹಾಲಿ ಜೆಡಿಎಸ್ ಶಾಸಕ 85 ವರ್ಷದ ಎಂ. ಸಿ. ಮನಗೂಳಿ ನಿನ್ನೆ ಮಧ್ಯರಾತ್ರಿ ನಿಧನರಾಗಿದ್ದಾರೆ. ಜ. 9 ರಂದು ಉಸಿರಾಟದ ಸಮಸ್ಯೆ ಹಿನ್ನೆಲೆಯಲ್ಲಿ ಸಿಂದಗಿಯಿಂದ ಕಲಬುರಗಿವರೆಗೆ ಆ್ಯಂಬುಲೆನ್ಸ್​​ನಲ್ಲಿ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಏರ್​ಲಿಫ್ಟ್ ಮೂಲಕ ಅವರನ್ನು ಚಿಕಿತ್ಸೆಗೆ ಕರೆದೊಯ್ದು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಅದಾದ ಬಳಿಕ ಚೇತರಿಸಿಕೊಂಡಿದ್ದ ಅವರು, ನಿನ್ನೆ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದಾರೆ.

ಎಂ. ಸಿ. ಮನಗೂಳಿ ವಿಜಯಪುರ ಜಿಲ್ಲೆಯಲ್ಲಿ ಮನಗೂಳಿ ಮುತ್ಯಾ ಎಂದೇ ಎಲ್ಲರಿಂದ ಪ್ರೀತಿಗೆ ಪಾತ್ರರಾಗಿದ್ದರು.  ತಮ್ಮ ರಾಜಕೀಯ ಜೀವನದಲ್ಲಿ ಸಾಕಷ್ಟು ಏಳುಬೀಳುಗಳನ್ನು ಕಂಡಿದ್ದ ಅವರು, ಒಟ್ಟು 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದರು.  ಅದರಲ್ಲಿ 5 ಬಾರಿ ಸೋತಿದ್ದರೆ, ಗೆದ್ದ ಎರಡೂ ಬಾರಿ ಸಚಿವರಾಗಿದ್ದಷ್ಟೇ ಅಲ್ಲ, ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು.

ಶಾಸಕರ ಜೀವನಗಾಥೆ:
ಎಂ. ಸಿ. ಮನಗೂಳಿ ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ 29.09.1937ರಲ್ಲಿ ಜನಿಸಿದರು.  ನಂತರ ಶಿಕ್ಷಣಕ್ಕಾಗಿ ಸಿಂದಗಿಗೆ ಬಂದ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಸಿಂದಗಿಯಲ್ಲಿಯೇ ಮುಗಿಸಿದ್ದರು.  ಅದಾದ ಬಳಿಕ ಗ್ರಾಮ ಸೇವಕರಾಗಿ ಸರಕಾರಿ ಸೇವೆಗೆ ಸೇರಿದ ಅವರು, ನಂತರ ರಾಜಕೀಯ ಪ್ರವೇಶಿಸಿ ಅಲ್ಲಿಯೇ ಮುಂದುವರೆದಿದ್ದರು.
ಎಂ. ಸಿ. ಮನಗೂಳಿ ಅವರ ಪೂರ್ಣ ಹೆಸರು ಮಲ್ಲಪ್ಪ ಚೆನ್ನವೀರಪ್ಪ ಮನಗೂಳಿ.  ಸಿದ್ದಮ್ಮ ಬಿರಾದಾರ ಅವರನ್ನು ಮದುವೆಯಾಗಿದ್ದ ಇವರಿಗೆ 4 ಜನ ಗಂಡು ಮಕ್ಕಳು, 1 ಹೆಣ್ಣು ಮಗಳಿದ್ದಾರೆ.  ಇವರ ಪುತ್ರರಾದ ಡಾ. ಅರವಿಂದ ಮನಗೂಳಿ, ಅಶೋಕ ಮನಗೂಳಿ, ಡಾ. ಶಾಂತವೀರ ಮನಗೂಳಿ (ಸಿಂದಗಿ ಪುರಸಭೆ ಹಾಲಿ ಅಧ್ಯಕ್ಷ), ಡಾ. ಚನ್ನವೀರ ಮನಗೂಳಿ, ಪುತ್ರಿ ಅನ್ನಪೂರ್ಣ ನಿಡೋಣಿ ಇದ್ದಾರೆ.

ಇದನ್ನೂ ಓದಿ: MC Managuli Death - ಮಾಜಿ ಸಚಿವ, ಜೆಡಿಎಸ್ ಶಾಸಕ ಎಂ.ಸಿ. ಮನಗೂಳಿ ನಿಧನ

ಎಸ್ ಎಸ್ ಎಲ್ ಸಿ ಮುಗಿದ ಮೇಲೆ ತಾಲೂಕು ಶಿಕ್ಷಣ ಪ್ರಸಾರ ಮಂಡಳಿ ಶಿಕ್ಷಣ ಸಂಸ್ಥೆಯಲ್ಲಿ ಮನಗೂಳಿ ಅವರು ಸಿಪಾಯಿ ನೌಕರಿ ಕೇಳಲು ಹೋಗಿದ್ದರಂತೆ.  ಆದರೆ, ಅವರಿಗೆ ನೌಕರಿ ಸಿಕ್ಕಿರಲಿಲ್ಲ.  ನಂತರ ತಮ್ಮದೇ ಛಾಪು ಮೂಡಿಸಿ ನಾಯಕರಾಗಿ ಬೆಳೆದ ಅವರು ಅದೇ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದು ಅವರ ಸಾಮರ್ಥ್ಯಕ್ಕೆ ಸಾಕ್ಷಿ.
ಎಸ್​​ಎಸ್​ಎಲ್​ಸಿ ಮುಗಿದ ಮೇಲೆ ಗ್ರಾಮ ಸೇವಕರಾಗಿ ಸರಕಾರಿ ನೌಕರಿ ಸೇರಿದ ಅವರು, ನಂತರ ಅದನ್ನು ಬಿಟ್ಟು ರಾಜಕೀಯಕ್ಕೆ ಧುಮುಕಿದರು. 1989ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಮೊದಲ ಬಾರಿಗೆ ವಿಧಾನಸಭೆಗೆ ಸಿಂದಗಿ ಮತಕ್ಷೇತ್ರದಿಂದ ಸ್ಪರ್ಧಿಸಿ ದಿ. ಎ. ಬಿ. ಚೌಧರಿ ಅವರ ವಿರುದ್ಧ ಸೋಲು ಅನುಭವಿಸಿದರು.  ಆದರೆ, ಛಲ ಬಿಡದ ಅವರು, 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ವಿಧಾನಸಭೆ ಪ್ರವೇಶಿಸಿದರು.  ಅಷ್ಟೇ ಅಲ್ಲ, ಜೆ. ಎಚ್. ಪಟೇಲ್ ಅವರು ಮುಖ್ಯಮಂತ್ರಿಯಾದಾಗ ಅವರ ಸಂಪುಟದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವರಾಗಿ ಹಾಗೂ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದರು.

ನಂತರ ಜನತಾದಳ ವಿಭಜನೆಯಾದಾಗ ಎಂ. ಸಿ. ಮನಗೂಳಿ ಎಚ್. ಡಿ. ದೇವೇಗೌಡ ಅವರ ಜೆಡಿಎಸ್ ಜೊತೆ ಗುರುತಿಸಿಕೊಂಡು ಕೊನೆಯ ಉಸಿರಿರುವವರೆಗೂ ಜಾತ್ಯತೀತ ಜನತಾದಳದಲ್ಲಿಯೇ ಉಳಿದರು.  1999 ರಿಂದ 2013 ರವರೆಗೆ ಸತತ ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ನಿಂದಲೇ ಸ್ಪರ್ಧಿಸಿ ಸೋಲನುಭವಿಸಿದರು.  ಆದರೂ, ತಮ್ಮ ಛಲ ಬಿಡದ ಅವರು 2018 ರ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಜೆಡಿಎಸ್ ನಿಂದ ಸ್ಪರ್ಧಿಸಿ ಇದು ತಮ್ಮ ಕೊನೆಯ ಚುನಾವಣೆ ಎಂದು ಹೇಳಿಕೊಂಡರು.  ಅಲ್ಲದೆ, ಜನರ ಪ್ರೀತಿ ಮತ್ತು ಅನುಕಂಪದ ಅಲೆಯಲ್ಲೆ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. ಅಷ್ಟೇ ಅಲ್ಲ, ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರಕಾರದಲ್ಲಿ ಎಚ್. ಡಿ. ಕುಮಾರಸ್ವಾಮಿ ಸಂಪುಟದಲ್ಲಿ ತೋಟಗಾರಿಕೆ ಸಚಿವರಾದರು.  ಅಲ್ಲದೆ, ಇವರಿಗೆ ವಿಜಯಪುರ ಜಿಲ್ಲಾ ಉಸ್ತುವಾರಿಯನ್ನೂ ವಹಿಸಲಾಗಿತ್ತು.

ಒಟ್ಟು 7 ಬಾರಿ ಚುನಾವಣೆಗೆ ಸ್ಪರ್ಧಿಸಿದ್ದ ಎಂ.ಸಿ. ಮನಗೂಳಿ ಗೆದ್ದ ಎರಡೂ ಬಾರಿ ಸಚಿವರಾಗಿದ್ದರು. ಅಲ್ಲದೆ, ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವರಾಗಿದ್ದು ಅವರ ರಾಜಕೀಯ ವ್ಯಕ್ತಿತ್ವಕ್ಕೆ ಸಾಕ್ಷಿಯಾಗಿತ್ತು. ಕೊರೊನಾ ಕಾಲದಲ್ಲಿಯೂ 85ನೇ ವಯಸ್ಸಿನಲ್ಲಿಯೂ ಯುವಕರೂ ನಾಚುವಂತೆ ಓಡಾಡಿದ್ದರು.  ಆದರೆ, ಜನವರಿ 9 ರಂದು ತೀವ್ರ ಉಸಿರಾಟದ ತೊಂದರೆಯಿಂದಾಗಿ ಅಸ್ವಸ್ಥರಾಗಿದ್ದ ಅವರನ್ನು ವಿಜಯಪುರದಿಂದ ಕಲಬುರಗಿವರೆಗೆ ಆ್ಯಂಬುಲೆನ್ಸ್​ನಲ್ಲಿ ಮತ್ತು ಕಲಬುರಗಿಯಿಂದ ಬೆಂಗಳೂರಿಗೆ ಏರ್​ಲಿಫ್ಟ್​ ಮಾಡುವ ಮೂಲಕ ಚಿಕಿತ್ಸೆಗೆ ಕರೆದೊಯ್ಯಲಾಗಿತ್ತು. ನಂತರ ಅವರನ್ನು ಬೆಂಗಳೂರಿನ ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿತ್ತು.  ಆದರೆ, ಚಿಕಿತ್ಸೆ ಫಲಕಾರಿಯಾಗದೇ ಎಂ. ಸಿ. ಮನಗೂಳಿ ನಿನ್ನೆ ರಾತ್ರಿ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾರೆ. ಬಸವನಾಡಿನ ಜನರ ಪ್ರೀತಿಯ ಮನಗೂಳಿ ಮುತ್ಯಾ ಇನ್ನು ನೆನಪು ಮಾತ್ರ.

(ವರದಿ: ಮಹೇಶ ವಿ. ಶಟಗಾರ)
Published by:Sushma Chakre
First published: