ರಾಜ್ಯ ರಾಜಕಾರಣದ ಎರಡು ಪ್ರಮುಖ ಘಟನೆಗಳೆಂದರೆ ಮೊದಲನೆಯದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅಚ್ಚರಿಯ ರೀತಿಯಲ್ಲಿ '2023ರ ವಿಧಾನಸಭಾ ಚುನಾವಣೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ನೇತೃತ್ವದಲ್ಲಿ ನಡೆಯಲಿದೆ' ಎಂದಿದ್ದು. ಎರಡನೇಯದು ಕಾಂಗ್ರೆಸ್ ನಾಯಕ ಮತ್ತು ಮಾಜಿ ಸಚಿವರೂ ಆದ ಎಂ.ಬಿ. ಪಾಟೀಲ್ (M.B. Patil) ಅವರು ದಿಢೀರನೆ "ಸದ್ಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇಲ್ಲ. ಅದೇನಿದ್ದರೂ 2023ರ ಚುನಾವಣೆಗಳ ಬಳಿಕ, ಅದೂ ಎಲ್ಲರನ್ನೂ ಒಳಗೊಂಡು' ಎಂದು ಹೇಳಿದ್ದಾರೆ. ಈ ಎರಡೂ ವಿಷಯಗಳಲ್ಲಿ ಇರುವ ಕೆಲವು ಕುತೂಹಲಕಾರಿ ಸಂಗತಿಗಳನ್ನು ನ್ಯೂಸ್ 18 ನಿಮ್ಮ ಮುಂದಿಡುತ್ತಿದೆ.
ಎಂಬಿ ಪಾಟೀಲ್ ಜಾಣ ನಡೆ
ಹಾಗೆ ನೋಡಿದರೆ 'ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ' ಈಗ ಅಪ್ರಸ್ತುತವಾದ ಸಂಗತಿಯಾಗಿತ್ತು. ಆದರೆ ದಿಢೀರನೆ ಮತ್ತೆ ಚರ್ಚೆಯ ಮುನ್ನೆಲೆಗೆ ಬಂದಿದೆ. 'ಎಂ.ಬಿ. ಪಾಟೀಲ್ ಮತ್ತೆ ಹೋರಾಟಕ್ಕೆ ಇಳಿಯುತ್ತಾರೆ' ಎಂಬ ರೀತಿಯಲ್ಲಿ ಚರ್ಚೆ ಆಗತೊಡಗಿದೆ. ಸದ್ಯ ಎಂ.ಬಿ. ಪಾಟೀಲ್ ಅವರನ್ನು 'ಖೆಡ್ಡಾ'ಕ್ಕೆ ಕೆಡವಲು ಬಹಳ ಉತ್ಸಾಹ ತೋರುತ್ತಿರುವವರು ಬಿಜೆಪಿಯವರಲ್ಲ. ಕಾಂಗ್ರೆಸಿಗರೇ. ಅದಕ್ಕೂ ಮಿಗಿಲಾಗಿ ಖುದ್ದು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೇ. ಸಿದ್ದರಾಮಯ್ಯ ಜೊತೆಗೆ ಸುಮಧುರ ಸಂಬಂಧ ಹೊಂದಿದ್ದಾರೆ ಎಂಬ ಕಾರಣಕ್ಕಾಗಿ ಕೆಲವರು ಎಂ.ಬಿ. ಪಾಟೀಲ್ ಜೊತೆ ಅಂತರ ಕಾಯ್ದುಕೊಳ್ಳತೊಡಗಿದ್ದಾರೆ. ಎಂ.ಬಿ. ಪಾಟೀಲ್ ಪ್ರತಿಸ್ಪರ್ಧಿ ಎಂಬುದು ಗೊತ್ತಿರುವುದರಿಂದ ಡಿ.ಕೆ. ಶಿವಕುಮಾರ್ ಅವರಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಎಂಬಿಪಿಯನ್ನು ಅಣಿಯುವ ಅಸ್ತ್ರಗಳನ್ನು ಹುಡುಕುತ್ತಿದ್ದಾರೆ.
ಮನೆಯೊಳಗಿನ ಶತ್ರುಗಳನ್ನು ಎದುರಿಸುವುದು ಹೊರಗಿನವರನ್ನು ಎದುರಿಸುವುದಕ್ಕಿಂತಲೂ ಕಷ್ಟ. ಇದನ್ನರಿತ ಎಂ.ಬಿ. ಪಾಟೀಲ್ 'ಸದ್ಯಕ್ಕೆ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟ ಇಲ್ಲ. ಅದೇನಿದ್ದರೂ 2023ರ ಚುನಾವಣೆಗಳ ಬಳಿಕ' ಎಂದು ಹೇಳುವ ಮೂಲಕ ಒಳ-ಹೊರಗಿನವರಿಗೆ ಸಂದೇಶ ರವಾನಿಸಿದ್ದಾರೆ. ಮೇಲುನೋಟಕ್ಕೆ ಇದು 'ಸ್ಪಷ್ಟೀಕರಣ' ಎನಿಸುತ್ತದೆ. ಆದರಿದು ಎಂ.ಬಿ. ಪಾಟೀಲ್ ಅವರಿಗೆ ಗುರಾಣಿ. ಈ ಸ್ಪಷ್ಟೀಕರಣದ ಮೂಲಕ ಅವರು ನಿಜವಾಗಿಯೂ ಹೋರಾಟದ ಪರವಾಗಿರುವವರಿಗೆ 'ತಾನು ಸಂಪೂರ್ಣವಾಗಿ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟ ಕೈ ಬಿಟ್ಟಿಲ್ಲ' ಎಂಬ, ವಿರೋಧ ಪಕ್ಷಗಳಿಗೆ 'ಕೈ ಬಿಟ್ಟಿದ್ದೇನೆ' ಎಂಬ ಮತ್ತು ಪಕ್ಷದೊಳಗೆ ಮಾತನಾಡುವವರಿಗೆ 'ಈಗಾಗಲೇ ಸ್ಪಷ್ಟೀಕರಣ ನೀಡಿದ್ದೇನೆ' ಎಂಬ ಸಂದೇಶ ಕಳುಹಿಸಿದ್ದಾರೆ.
ಸದ್ಯಕ್ಕೆ ಅವರ ಮುಂದೆ ಇದಕ್ಕಿಂತ ಒಳ್ಳೆಯ ಆಯ್ಕೆ ಇರಲಿಲ್ಲ. ಅದೂ ಅಲ್ಲದೆ ರಾಜ್ಯ ಕಾಂಗ್ರೆಸಿನಲ್ಲಿ ಎಲ್ಲವೂ ಸರಿ ಇಲ್ಲ. ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮುಸುಕಿನ ಗುದ್ದಾಟ ಯಾವಾಗ ಬೇಕಾದರೂ ಭುಗಿಲೇಳಬಹುದು. ಸದ್ಯಕ್ಕೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರನ್ನಂತೂ ಏನು ಮಾಡಲ್ಲ. ಪರಿಸ್ಥಿತಿ ಕೈ ಮೀರಿದರೆ ಡಿಕೆಶಿಯ ಕೆಪಿಸಿಸಿ ಅಧ್ಯಕ್ಷ ಗಾದಿಗೆ ಕುತ್ತು ಬರಲಿದೆ. ಆಗ ಲಿಂಗಾಯತ ನಾಯಕನಿಗೆ ಮಣೆ ಹಾಕಬೇಕು ಎಂದು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದರೆ ಮುಂಚೂಣಿಯಲ್ಲಿ ಇರುವವರು ಎಂ.ಬಿ. ಪಾಟೀಲ್. ಹಿರಿತನ, ಸಂಪನ್ಮೂಲ, ಹೈಕಮಾಂಡ್ ಜೊತೆಗಿನ ಸಂಬಂಧಗಳೆಲ್ಲವೂ ಎಂ.ಬಿ. ಪಾಟೀಲ್ ಪರವಾಗಿಯೇ ಇವೆ. ಇದೇ ಕಾರಣಕ್ಕಾಗಿಯೇ 'ಕಾಂಗ್ರೆಸಿಗರು' ಎಂ.ಬಿ. ಪಾಟೀಲ್ ಕಾಲೇಳೆಯಲು ಪ್ರಯತ್ನಿಸುತ್ತಿರುವುದು. ಪರಿಸ್ಥಿತಿ ಹೀಗಿರುವಾಗ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ವಿಷಯದ ಮೂಲಕ ತಮಗೆ ಹಿನ್ನಡೆ ಆಗಬಾರದು. ಎದುರಾಳಿಗಿರುವ ಈ ಅಸ್ತ್ರವನ್ನು ಕಿತ್ತುಕೊಳ್ಳಬೇಕೆಂದೇ ಎಂ.ಬಿ. ಪಾಟೀಲ್ 'ಹೋರಾಟದಿಂದ ಅಂತರ ಕಾಯ್ದುಕೊಳ್ಳುವ ಪ್ರತ್ಯಸ್ತ್ರ' ಹೂಡಿದ್ದಾರೆ. ಅಂದಹಾಗೆ ಇದನ್ನು ಘೋಷಿಸುವ ಹಿಂದಿನ ದಿನ ದೆಹಲಿಗೆ ಬಂದು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅವರೊಂದಿಗೆ ಚರ್ಚಿಸಿದ್ದಾರೆ. ಈ ಮೂಲಕ 'ಹೈಕಮಾಂಡ್ ಗಮನಕ್ಕೆ ತಂದೇ ಮುಂದಡಿ ಇಡುವ ಮುತ್ಸದ್ಧಿತನವನ್ನೂ' ತೋರಿದ್ದಾರೆ.
ಬೊಮ್ಮಾಯಿ ಸಿಎಂ ಅಭ್ಯರ್ಥಿಯಾದರೆ ಯಡಿಯೂರಪ್ಪ ಕತೆ ಏನು?
ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸುವುದು ಮಾತ್ರವಲ್ಲ ಅಪ್ರಸ್ತುತಗೊಳಿಸುವುದು ಕೂಡ ಬಿಜೆಪಿ ಅಜೆಂಡಾವಾಗಿತ್ತು. ಆದರೆ ಇಷ್ಟು ದಿನ ಸಕ್ರಿಯರಾಗಿದ್ದ ಯಡಿಯೂರಪ್ಪ ಹೇಗಾದರೂ ಸುಮ್ಮನಿರುತ್ತಾರೆ ಹೇಳಿ. ಇದ್ದಕ್ಕಿದ್ದಂತೆ ರಾಜ್ಯ ಪ್ರವಾಸ ಮಾಡುವುದಾಗಿ ಘೋಷಿಸಿದರು. ಇದು ಯಡಿಯೂರಪ್ಪ ವಿರೋಧಿ ಪಾಳಯಕ್ಕೆ ಕೊಳ್ಳಿ ಇಟ್ಟಂತಾಯಿತು. ತಕ್ಷಣವೇ ಎಚ್ಚೆತ್ತ ಈ ಬಣ ಸಿಎಂ ಬೊಮ್ಮಾಯಿ ಅವರನ್ನು ಎತ್ತಿಕಟ್ಟಿದೆ. ದೆಹಲಿ ಭೇಟಿ ವೇಳೆ ಹೈಕಮಾಂಡ್ ನಾಯಕರ ಜೊತೆ ಚರ್ಚಿಸಬೇಕೆಂದು ಹುಕುಂ ಹೊರಡಿಸಿದೆ. ಈಗಾಗಲೇ ಬಣ ಬದಲಿಸಿರುವ ಬೊಮ್ಮಾಯಿ ನೇರವಾಗಿ ಅಮಿತ್ ಶಾ ಜೊತೆಯೇ ಯಡಿಯೂರಪ್ಪ ಪಾತ್ರದ ಬಗ್ಗೆ ಚರ್ಚಿಸಿದ್ದಾರೆ. ಅಮಿತ್ ಶಾ ರಾಜ್ಯಕ್ಕೆ ಬಂದಿದ್ದೇ ತಡ '2023ರ ವಿಧಾನಸಭಾ ಚುನಾವಣೆ ಸಿಎಂ ಬೊಮ್ಮಾಯಿ ನೇತೃತ್ವದಲ್ಲಿ ನಡೆಯಲಿದೆ' ಎಂದು ಘೋಷಿಸಿದ್ದಾರೆ. ಯಡಿಯೂರಪ್ಪ ರಾಜ್ಯ ಪ್ರವಾಸವನ್ನು ಘೋಷಿಸದೇ ಇದ್ದರೆ ಇಷ್ಟು ಬಿಜೆಪಿ ಮುಂದಿನ ಚುನಾವಣೆಗೆ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಿಸುತ್ತಿರಲಿಲ್ಲವೇನೋ...
ಇದನ್ನು ಓದಿ: Mysuru Dasara 2021: ಅ.7ರಂದು ಮೈಸೂರು ದಸರಾ ಉದ್ಘಾಟನೆ, ಸರಳ ಆಚರಣೆಗೆ 6 ಕೋಟಿ ಹಣ ನಿಗದಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ