• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಬಸವಧರ್ಮ, ವೀರಶೈವ ಪ್ರತ್ಯೇಕ ಅಲ್ಲ, ಒಟ್ಟಾಗಿ ಹೋರಾಟ: ಎಂಬಿ ಪಾಟೀಲ್ ಒಗ್ಗಟ್ಟು ಮಂತ್ರ

ಬಸವಧರ್ಮ, ವೀರಶೈವ ಪ್ರತ್ಯೇಕ ಅಲ್ಲ, ಒಟ್ಟಾಗಿ ಹೋರಾಟ: ಎಂಬಿ ಪಾಟೀಲ್ ಒಗ್ಗಟ್ಟು ಮಂತ್ರ

ಎಂಬಿ ಪಾಟೀಲ್

ಎಂಬಿ ಪಾಟೀಲ್

2023ರ ಚುನಾವಣೆ ನಂತರ ಲಿಂಗಾಯತ ಸಮಾಜದ ಎಲ್ಲಾ ನಾಯಕರು, ಗುರುಗಳು ಒಟ್ಟಿಗೆ ಕೂತು ಒಗ್ಗಟ್ಟಿನಿಂದ ಹೋರಾಟ ಪುನಾರಂಭ ಮಾಡುವ ಸಂಕಲ್ಪ ಇದೆ ಎಂದು ಮಾಜಿ ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.

  • Share this:

ಬೆಂಗಳೂರು, ಸೆ. 03: ಚುನಾವಣೆಗೆ ಮುನ್ನ ಪ್ರತ್ಯೇಕ ಲಿಂಗಾಯತ ಧರ್ಮಕ್ಕಾಗಿ ನಡೆದಿದ್ದ ಹೋರಾಟ ವಿವಿಧ ಕಾರಣಗಳಿಂದಾಗಿ ವಿಫಲಗೊಂಡಿತ್ತು. ಈಗ ಮುಂಬರುವ ಚುನಾವಣೆಯ ಬಳಿಕ ಈ ಹೋರಾಟ ಹೊಸ ಸ್ವರೂಪದಲ್ಲಿ ಪುನಾರಂಭಗೊಳ್ಳಲಿದೆ. ಮಾಜಿ ನೀರಾವರಿ ಸಚಿವ ಎಂ.ಬಿ. ಪಾಟೀಲ್ ಅವರು ಈ ಬಗ್ಗೆ ಸುಳಿವು ನೀಡಿದ್ಧಾರೆ. ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ, 2023ರ ಚುನಾವಣೆ ಬಳಿಕ ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟದ ಬಗ್ಗೆ ಒಟ್ಟಿಗೆ ಕೂತು ಚರ್ಚೆ ಮಾಡಿ ನಿರ್ಧರಿಸುತ್ತೇವೆ ಎಂದು ಹೇಳಿದ್ದಾರೆ. ಲಿಂಗಾಯತ ಮತಕ್ಕೆ ಧರ್ಮದ ಮಾನ್ಯತೆ ಸಿಕ್ಕಿದ್ದರೆ ಎಲ್ಲಾ ಒಳ ಪಂಗಡಗಳಿಗೂ ಮೀಸಲಾತಿ ಸಿಗುತ್ತದೆ. ಹಿಂದೆ ಹೋರಾಟ ಮಾಡಿದ್ದಾಗ ಸಮಯ ಬಹಳ ಕಡಿಮೆ ಇತ್ತು. ಗಡಿಬಿಡಿ ಆಯಿತು, ಲೋಪ ಆಯಿತು. ಈಗ ವೀರಶೈವ ಲಿಂಗಾಯತರೆಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯುತ್ತೇವೆ. ಬಹಳ ಮುಕ್ತ ಮನಸ್ಸಿನಿಂದ ಪ್ರತಿಷ್ಠ ಇಲ್ಲದೇ ಎಲ್ಲರೂ ಒಟ್ಟಿಗೆ ಕೂತು ಮುನ್ನಡೆಯುತ್ತೇವೆ. ವೀರಶೈವ ಲಿಂಗಾಯತ ಬೇರೆ, ಬಸವತತ್ವ ಲಿಂಗಾಯತ ಬೇರೆ ಹೋರಾಟ ಇರುವುದಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ಹೋರಾಡುತ್ತೇವೆ ಎಂದು ಎಂಬಿ ಪಾಟೀಲ್ ಹೇಳಿದ್ಧಾರೆ.


ಕಾಂಗ್ರೆಸ್ ಪಕ್ಷಕ್ಕೂ ಲಿಂಗಾಯತ ಹೋರಾಟಕ್ಕೂ ಸಂಬಂಧ ಇಲ್ಲ. ಹಿಂದೆಯೂ ಇಲ್ಲ, ಮುಂದೆಯೂ ಇರಲ್ಲ, ಸಾಮೂಹಿಕವಾಗಿ ಮುನ್ನಡೆಯುವ ಪ್ರಯತ್ನ ಮಾಡುತ್ತೇವೆ. ಈ ಹೋರಾಟದಿಂದ ಕಾಂಗ್ರೆಸ್ ಪಕ್ಷಕ್ಕೆ ನಷ್ಟವೂ ಇಲ್ಲ. ಸಮುದಾಯ ಒಟ್ಟಾಗೋಕೆ ಕಾಂಗ್ರೆಸ್ ಪಕ್ಷ ಯಾಕೆ ವಿರೋಧ ಮಾಡುತ್ತೆ? ಪ್ರತ್ಯೇಕ ಧರ್ಮ ಹೋರಾಟದ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ಯೂಟರ್ನ್ ಹೊಡೆದಿಲ್ಲ. ಹಿಂದೆಯೂ ನಮ್ಮ ಉದ್ದೇಶ ಸ್ಪಷ್ಟವಾಗಿತ್ತು. ಈಗಲೂ ಉದ್ದೇಶ ಸ್ಪಷ್ಟ ಇದೆ. ಸಮುದಾಯಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ತಿಳಿಸಿದ್ಧಾರೆ.


ನನ್ನಿಂದ ಹೋರಾಟ ಶುರುವಾದದ್ದಲ್ಲ: ಎಂಬಿಪಿ


ಪ್ರತ್ಯೇಕ ಲಿಂಗಾಯತ ಧರ್ಮ ಹೋರಾಟವನ್ನು ಶುರು ಮಾಡಿದ್ದು ನಾನಲ್ಲ. ವೀರಶೈವ ಲಿಂಗಾಯತ ಧರ್ಮಕ್ಕೆ ಬೇಡಿಕೆ ಸ್ವಾತಂತ್ರ್ಯಕ್ಕೆ ಮುಂಚಿನಿಂದಲೂ ಇತ್ತು. ನಾಗಮೋಹನ್ ದಾಸ್ ಕಮಿಟಿ ಕೂಡ ಪ್ರತ್ಯೇಕ ಧರ್ಮಕ್ಕೆ ಶಿಫಾರಸು ಕೊಟ್ಟಿತ್ತು. ನಾವು ಈಗ ಹಿಂದಿನದನ್ನೇ ಮುಂದುವರಿಸಿದ್ದೇವೆ ಅಷ್ಟೇ ಎಂದು ಎಂ ಬಿ ಪಾಟೀಲ್ ಸ್ಪಷ್ಟಪಡಿಸಿದ್ಧಾರೆ.


ಹಿಂದೆ ಬಿಜೆಪಿಯವರು ಈ ಹೋರಾಟವನ್ನು ರಾಜಕಾರಣಕ್ಕೆ ಬಳಸಿಕೊಂಡರು. ಆದರೆ, ಈ ಬಾರಿ ಆ ರೀತಿ ಆಗದಂತೆ ಎಚ್ಚರ ವಹಿಸುತ್ತೇವೆ. ಪಕ್ಷಾತೀತವಾಗಿ ಎಲ್ಲಾ ಪ್ರತಿಷ್ಠೆ ತೊರೆದು ಒಗ್ಗಟ್ಟಾಗಿ ಕೂರುತ್ತೇವೆ. ಪಂಚಪೀಠ, ವಿರಕ್ತ ಮಠಗಳ ಎಲ್ಲಾ ಜಗದ್ಗುರುಗಳ ಜೊತೆ ಚರ್ಚಿಸುವ ಪ್ರಯತ್ನ ಮಾಡುತ್ತೇನೆ. ನಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮೀಸಲಾತಿ ಸಿಕ್ಕು ಅನುಕೂಲವಾಗಲಿ ಎಂಬುದು ನನ್ನ ಉದ್ದೇಶ ಎಂದಿದ್ಧಾರೆ.


ಪಂಚಮಸಾಲಿಗಳಲ್ಲಿ ಬಡತನ ಇದೆ:


ಪಂಚಮಸಾಲಿ ಸಮುದಾಯದ 2ಎ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ ಎಂಬಿ ಪಾಟೀಲ್, ಪಂಚಮಸಾಲಿ ದೊಡ್ಡ ಸಮಾಜ. ಮಳೆಯಾಧಾರಿತ ಕೃಷಿಯನ್ನ ನೆಚ್ಚಿಕೊಂಡಿರುವ ಈ ಸಮಾಜದಲ್ಲಿ ಬಡತನ ಇದೆ. ಹಾಗಾಗಿ 2ಎ ಮಾನ್ಯತೆಗಾಗಿ ಹೋರಾಟ ಮಾಡುತ್ತಿದ್ದಾರೆ. ಅವರ ಬೇಡಿಕೆ ನ್ಯಾಯಯುತವಾಗಿದೆ. ನಾನೂ ಕೂಡ ಈ ಹಿಂದೆ ಚಿತ್ರದುರ್ಗಕ್ಕೆ ಹೋಗಿ ಈ ಹೋರಾಟಕ್ಕೆ ಬೆಂಬಲ ಕೊಟ್ಟಿದ್ದೇನೆ. ಆದರೆ, ಸಮಾಜಕ್ಕೆ ಅಲ್ಪಸಂಖ್ಯಾತ ಮಾನ್ಯತೆ ಇದ್ದರೆ 2ಎ ಮೀಸಲಾತಿಯ ಅಗತ್ಯತೆಯೇ ಇರುವುದಿಲ್ಲ. ಇನ್ನೂ ಹೆಚ್ಚಿನ ಸೌಲಭ್ಯ, ಸವಲತ್ತು, ಮೀಸಲಾತಿ ನಮ್ಮ ಸಮಾಜದ ಎಲ್ಲರಿಗೂ ಸಿಗುತ್ತದೆ ಎಂದು ವಿವರಿಸಿದ್ಧಾರೆ.


ಲಿಂಗಾಯತ ಹೋರಾಟದಲ್ಲಿ ಯಡಿಯೂರಪ್ಪ ಜೊತೆ ಭಿನ್ನಾಭಿಪ್ರಾಯ ಇದ್ದ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗ, ಹಿಂದಿನ ಹೋರಾಟದಲ್ಲಿ ನಮ್ಮ ನಡುವೆ ಯಾವ ಭಿನ್ನಾಭಿಪ್ರಾಯ ಇರಲಿಲ್ಲ. ಕೇವಲ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದವಷ್ಟೇ. ನಮ್ಮ ಅವರ ನಡುವೆ ತಾತ್ವಿಕ ಸ್ವರೂಪ ಬೇರೆ ಇತ್ತು. ಹಾಗಾಗಿ, ಹಿಂದೆ ಆ ರೀತಿ ತಪ್ಪು ಸಂದೇಶ ರವಾನೆಯಾಗಿದೆ. ಯಡಿಯೂರಪ್ಪ ಬಹಳ ದೊಡ್ಡ ನಾಯಕರು. ನಾನು ನಾಯಕ ಅಂತ ಹೇಳೋಕೆ ಆಗಲ್ಲ. ಯಡಿಯೂರಪ್ಪ ಅವರ ಜೊತೆಯೂ ನಾನು ಚರ್ಚೆ ಮಾಡುತ್ತೇನೆ ಎಂದು ಎಂ ಬಿ ಪಾಟಿಲ್ ಹೇಳಿದ್ದಾರೆ.


ವರದಿ: ಚಿದಾನಂದ ಪಟೇಲ್

First published: