ಸೋನಿಯಾ ಅಣತಿ ಮೇರೆಗೆ ಪ್ರತ್ಯೇಕ ಲಿಂಗಾಯತ ಕಿಚ್ಚು? ಪತ್ರ ವೈರಲ್; ಎಲ್ಲಾ ಶುದ್ಧ ಸುಳ್ಳು ಎಂದ ಎಂ.ಬಿ. ಪಾಟೀಲ್

ಇದು ನಕಲಿ ಲೆಟರ್​ ಹೆಡ್​ ಬಳಸಿ ಬರೆದಿರುವ ಪತ್ರವಾಗಿದೆ. ​  ಹೌದು ನಾನು  ಧರ್ಮ ಕುರಿತು ಹೋರಾಟ ಮಾಡಿದ್ದೇನೆ. ಆದರೆ, ಕೀಳು ಮಟ್ಟದ ಕೆಲಸ ಮಾಡಿಲ್ಲ 

Seema.R | news18
Updated:April 16, 2019, 7:45 PM IST
ಸೋನಿಯಾ ಅಣತಿ ಮೇರೆಗೆ ಪ್ರತ್ಯೇಕ ಲಿಂಗಾಯತ ಕಿಚ್ಚು? ಪತ್ರ ವೈರಲ್; ಎಲ್ಲಾ ಶುದ್ಧ ಸುಳ್ಳು ಎಂದ ಎಂ.ಬಿ. ಪಾಟೀಲ್
ಎಂಬಿ ಪಾಟಿಲ್​
Seema.R | news18
Updated: April 16, 2019, 7:45 PM IST
- ಮಹೇಶ ವಿ ಶಟಗಾರ

ವಿಜಯಪುರ (ಏ. 16): ಲೋಕಸಭಾ ಚುನಾವಣಾ ಮತದಾನಕ್ಕೆ ದಿನಗಣನೆ ಶುರುವಾಗಿರುವ ಹೊತ್ತಿನಲ್ಲಿ ಈಗ ಲಿಂಗಾಯತ ವಿವಾದ ಮತ್ತೆ ಸದ್ದು ಮಾಡಿದೆ. ಲಿಂಗಾಯತ ಪ್ರತ್ಯೇಕ ಧರ್ಮದ ಬಗ್ಗೆ ಸಚಿವ ಎಂ.ಬಿ. ಪಾಟೀಲ್ ಬರೆದಿದ್ದರೆನ್ನಲಾದ ಪತ್ರವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಸೋನಿಯಾ ಗಾಂಧಿ ಅವರ ಸಲಹೆ ಮೇರೆಗೆ ಲಿಂಗಾಯತ ಧರ್ಮವನ್ನು ಒಡೆಯಲಾಗಿದೆ ಎಂದು ಎಂಬಿ ಪಾಟೀಲ್​ ಈ ಹಿಂದೆ ಯುಪಿಎ ಅಧ್ಯಕ್ಷೆಗೆ ಈ ಪತ್ರ ಬರೆದಿದ್ದರೆನ್ನಲಾಗಿದೆ. ಆದರೆ, ಈ ಕುರಿತು ಮಾತನಾಡಿರುವ ಗೃಹ ಸಚಿವ ಎಂಬಿ ಪಾಟೀಲ್​, ಈ ಪತ್ರ ನಕಲಿಯಾಗಿದ್ದು, ಈ ಸಂಬಂಧ ಪೊಲೀಸರಿಗೆ ದೂರು ನೀಡುತ್ತೇನೆ ಎಂದು ಸ್ಪಷ್ಟಪಡಿಸಿದ್ಧಾರೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿದ್ದ ಪ್ರತ್ಯೇಕ ಲಿಂಗಾಯತ ಧರ್ಮದ ನೇತೃತ್ವವನ್ನು ಎಂಬಿ ಪಾಟೀಲ್​ ವಹಿಸಿದ್ದರು. ಆ ಸಂದರ್ಭದಲ್ಲಿ ಅಲ್ಪ ಸಂಖ್ಯಾತರಿಗೆ ನೀಡಿದಂತೆ ಪ್ರತ್ಯೇಕ ಲಿಂಗಾಯತ ಧರ್ಮಕ್ಕೂ ಸವಲತ್ತು ನೀಡಬೇಕು. ನಿಮ್ಮ ಸಲಹೆಯಂತೆ ನಾವು ಲಿಂಗಾಯತ ಧರ್ಮ ಬೇಡಿಕೆಯನ್ನು ಅಂಗೀಕರಿಸಿದ್ದೇವೆ ಎಂದು ಪತ್ರ ಬರೆದಿದ್ದರು. ಈ ಪತ್ರ ಈಗ ಮತ್ತೊಮ್ಮೆ ವೈರಲ್​ ಆಗಿದ್ದು, ಬಿಜೆಪಿ ಇದನ್ನು ಟ್ವೀಟ್​ ಮಾಡಿದೆ.
ಈ ಪತ್ರದ ವಿಚಾರ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಎಂ.ಬಿ. ಪಾಟೀಲ್​, ಇದು ನಕಲಿ ಲೆಟರ್​ ಹೆಡ್​ ಬಳಸಿ ಬರೆದಿರುವ ಪತ್ರವಾಗಿದೆ. ನಾನು  ಧರ್ಮ ಕುರಿತು ಹೋರಾಟ ಮಾಡಿದ್ದೇನೆ. ಕೀಳು ಮಟ್ಟದ ಕೆಲಸ ಮಾಡಿಲ್ಲ  ಎಂದು ಸ್ಪಷ್ಟನೆ ನೀಡಿದ್ದಾರೆ.

ಬಿಎಲ್​ಡಿ ಸಂಸ್ಥೆಯ ಲೆಟರ್​ ಹೆಡ್​ ಬಳಸಿ ಬರೆದಿರುವ ಈ ಪತ್ರವನ್ನು 2017ರಲ್ಲಿಯೂ ಬಿಡುಗಡೆ ಮಾಡಲಾಗಿತ್ತು. ಈಗ ಲೋಕಸಭಾ ಚುನಾವಣಾ ಹೊತ್ತಿನಲ್ಲಿ ಈಗ ಮತ್ತೊಮ್ಮೆ ಲಿಂಗಾಯತ ಧರ್ಮ ಕಿಚ್ಚನ್ನು ಹಚ್ಚಲು ಮುಂದಾಗಿದ್ದಾರೆ. ಈ ಪತ್ರ ಸತ್ಯಾಸತ್ಯತೆಗೆ ದೂರವಾಗಿದ್ದು, ಈ ಕುರಿತು ದೂರು ದಾಖಲಿಸುವುದಾಗಿ ಅವರು ತಿಳಿಸಿದ್ದಾರೆ.

 ನಡಹಳ್ಳಿಯನ್ನು ಹಂಗೆ ಹಿಂಗೆ ಬಿಡಲ್ಲ: 

ಇದೇ ವೇಳೆ  ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಎಂ.ಬಿ. ಪಾಟೀಲ್, ನಡಹಳ್ಳಿ ಗಂಡಸಾಗಿದ್ದರೆ ನನ್ನ ಮೇಲಿನ ಭ್ರಷ್ಟಾಚಾರದ ಆರೋಪ ಸಾಬೀತು ಮಾಡಲಿ. ಇಲ್ಲದಿದ್ದರೆ ಅವರು ಜೈಲಿಗೆ ಹೋಗುತ್ತಾರೆ. ನಡಹಳ್ಳಿಯನ್ನು ಹಂಗೆ ಹಿಂಗೆ ಬಿಡಲ್ಲ. ಅವರ ವಿರುದ್ಧ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತೇನೆ ಎಂದರು.

ನಿನ್ನೆ ಗೃಹ ಸಚಿವರ ವಿರುದ್ಧ ವಾಗ್ದಾಳಿ ನಡೆಸಿದ್ದ ನಡಹಳ್ಳಿ, ಎಂ.ಬಿ. ಪಾಟೀಲರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಈ ರಾಜ್ಯದ ಗೃಹಮಂತ್ರಿಯಾಗಿ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ. ಇಂತಹ ಸ್ಥಿತಿಯಲ್ಲಿ ಅವರು ಸಚಿವರಾಗಿ ಕಾರ್ಯ ನಿರ್ವಹಿಸಬಾರದು ಎಂದು ಕುಟುಕಿದ್ದರು.

ಡಿಕೆ ಶಿವಕುಮಾರ್​ ಮೊದಲು ಅವರ ಮನೆ ಶುದ್ದಿ ಮಾಡಿಕೊಳ್ಳಲಿ

ಪ್ರತ್ಯೇಕ ಲಿಂಗಾಯತ ಧರ್ಮದ ಕುರಿತು ಕ್ಷಮೆಯಾಚಿಸಿದ್ದ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್​ ವಿರುದ್ಧವೂ ಗುಡುಗಿರುವ ಎಂ.ಬಿ. ಪಾಟೀಲ್, ಡಿಕೆ ಶಿವಕುಮಾರ್​ ಉದ್ದೇಶ ಏನಿತ್ತೋ ಗೊತ್ತಿಲ್ಲ. ಅವರು ಯಾವ ಉದ್ದೇಶದಿಂದ ಈ ವಿಚಾರ ಮಾತನಾಡಿದ್ದಾರೆ ತಿಳಿಯದು. ಅವರು, ಮೊದಲು ತಮ್ಮ ಮನೆ ಶುದ್ಧ ಮಾಡಿಕೊಳ್ಳಲಿ. ಲಿಂಗಾಯತ ಧರ್ಮದಲ್ಲಿ ಅವರು ಮಧ್ಯ ಪ್ರವೇಶಿಸುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಇದನ್ನು ಓದಿ: ಹಣ ಸಂದಾಯ ಪ್ರಕರಣ | ಯಡಿಯೂರಪ್ಪ ಡೈರಿ ಸೇರಿ ಹಲವು ದಾಖಲೆಗಳನ್ನು ಪೊಲೀಸ್​ ಆಯುಕ್ತರಿ​ಗೆ ಒಪ್ಪಿಸಿದ ಈಶ್ವರಪ್ಪ ಪಿಎ ವಿನಯ್

ಡಿಕೆ ಶಿವಕುಮಾರ್​ ಈಗಾಗಲೇ ಹಳೇಮೈಸೂರು ಭಾಗದಲ್ಲಿ ಪಕ್ಷವನ್ನು ನಿರ್ನಾಮ ಮಾಡಿದ್ದಾರೆ. ಒಕ್ಕಲಿಗರ ಭಾಗದಲ್ಲಿ ಕಾಂಗ್ರೆಸ್ ಸಂಪೂರ್ಣ ನಿರ್ನಾಮ ಆಗಿದೆ. ಅಲ್ಲಿ ಎಷ್ಟು ಜನ ಒಕ್ಕಲಿಗರನ್ನು ಅವರು ಗೆಲ್ಲಿಸಿಕೊಂಡು ಬಂದಿದ್ದಾರೆ ಮೊದಲು ಹೇಳಲಿ.  ಈಗ ಈ ಭಾಗದಲ್ಲೂ ಪಕ್ಷವನ್ನು ನಿರ್ನಾಮ ಮಾಡಲು ಹೊರಟಿದ್ದಾರೆ ಅನಿಸುತ್ತಿದೆ.  ಕೆಲವರ ದರ್ಪ, ವ್ಯಕ್ತಿತ್ವದಿಂದ ಹೀಗಾಗಿದೆ ಎಂದು ಗೃಹ ಸಚಿವ ಎಂ.ಬಿ. ಪಾಟೀಲ್ ಗುಡುಗಿದ್ದಾರೆ.

First published:April 16, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ