HOME » NEWS » State » MAY HIGH DEMAND TO MLC TICKET IN UTTARA KANNADA DISTRICT AFTER GRAMA PANCHAYAT ELECTION DKK LG

ಉತ್ತರ ಕನ್ನಡ: ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಹಿನ್ನೆಲೆ; ಎಂಎಲ್​ಸಿ​ ಟಿಕೆಟ್​​​​​ಗೆ ಹೆಚ್ಚಿನ ಬೇಡಿಕೆ ಸಾಧ್ಯತೆ

ಈ ಬಾರಿ ಬಿಜೆಪಿಯಿಂದ ಪರಿಷತ್ ಚುನಾವಣೆಗೆ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿರುವವರಲ್ಲಿ ಹಲವರ ಹೆಸರುಗಳು ಕೇಳಿ ಬಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದವರ  ಹೆಸರು ಪ್ರಬಲವಾಗಿ ಕೇಳಿ ಬಂದಿದೆ.

news18-kannada
Updated:January 4, 2021, 8:33 AM IST
ಉತ್ತರ ಕನ್ನಡ: ಗ್ರಾ.ಪಂ.ಚುನಾವಣೆಯಲ್ಲಿ ಬಿಜೆಪಿಗೆ ಅಧಿಕ ಸ್ಥಾನ ಹಿನ್ನೆಲೆ; ಎಂಎಲ್​ಸಿ​ ಟಿಕೆಟ್​​​​​ಗೆ ಹೆಚ್ಚಿನ ಬೇಡಿಕೆ ಸಾಧ್ಯತೆ
ಸಾಂದರ್ಭಿಕ ಚಿತ್ರ
  • Share this:
ಕಾರವಾರ (ಜ.04): ಗ್ರಾಮ ಪಂಚಾಯತಿ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಬೆಂಬಲಿತರು ಹೆಚ್ಚಿನ ಸ್ಥಾನದಲ್ಲಿ ಗೆಲುವು ಪಡೆದಿದ್ದಾರೆ. ಹೀಗಾಗಿ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಯಿಂದ ಆಯ್ಕೆಯಾಗುವ ವಿಧಾನ ಪರಿಷತ್ ಟಿಕೆಟ್​​ಗೆ ಈ ಬಾರಿ ಬಿಜೆಪಿಯಲ್ಲಿ ಬೇಡಿಕೆ ಹೆಚ್ಚಾಗಲಿದೆ ಎನ್ನುವ ಮಾತು ಕೇಳಿ ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳಿಂದ ಓರ್ವ ವಿಧಾನ ಪರಿಷತ್ ಸದಸ್ಯನನ್ನು ಆಯ್ಕೆ ಮಾಡಿ ಕಳಿಸಲಾಗುತ್ತದೆ. ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯತಿ ಸದಸ್ಯರಿಗೆ ಮತದಾನದ ಹಕ್ಕನ್ನು ಚುನಾವಣೆಯಲ್ಲಿ ನೀಡಲಾಗುತ್ತದೆ. ಇನ್ನು ಪಂಚಾಯತಿ ಸದಸ್ಯರ ಮತಗಳೇ ಹೆಚ್ಚಿರುವ ಹಿನ್ನಲೆಯಲ್ಲಿ ಪರಿಷತ್ ಸದಸ್ಯರ ಆಯ್ಕೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ನಿರ್ಣಾಯಕರಾಗುತ್ತಾರೆ.

ಈ ಹಿಂದೆ ಜಿಲ್ಲೆಯಲ್ಲಿ ಕಾಂಗ್ರೆಸ್ ಬೆಂಬಲಿತರು ಪಂಚಾಯಿತಿ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನ ಗೆಲ್ಲುತ್ತಿದ್ದರಿಂದ ಕಳೆದ ಎರಡು ಅವಧಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗುತ್ತಿದ್ದ ಮಾಜಿ ಸಚಿವ ಆರ್.ವಿ.ದೇಶಪಾಂಡೆ ಆಪ್ತ ಎಸ್.ಎಲ್.ಘೋಟ್ನೇಕರ್ ಬಹುಮತದಿಂದಲೇ ಪರಿಷತ್ ಸದಸ್ಯರಾಗಿ ಆಯ್ಕೆಯಾಗುತ್ತಿದ್ದರು. ಆದರೆ ಈ ಬಾರಿ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರೇ ಅಧಿಕ ಸಂಖ್ಯೆಯಲ್ಲಿ ಗೆದ್ದಿರುವ ಹಿನ್ನಲೆಯಲ್ಲಿ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಟಿಕೇಟಿಗೆ ಬಾರಿ ಪೈಪೋಟಿ ಎದುರಾಗಲಿದೆ ಎನ್ನಲಾಗಿದೆ.

ಘಾಟಿ ಸುಬ್ರಹ್ಮಣ್ಯದಲ್ಲಿ ವಾಹನ ಭಕ್ತರಿಂದ ಪ್ರವೇಶ ಶುಲ್ಕ ವಸೂಲಿ; ಸ್ಥಳೀಯರ ಆಕ್ರೋಶ

ಕಳೆದ 2016ರಲ್ಲಿ ಪರಿಷತ್ ಚುನಾವಣೆ ನಡೆದಾಗ ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದು, ಕಾಂಗ್ರೆಸ್ ಟಿಕೆಟಿಗೆ ಭಾರೀ ಪೈಪೋಟಿ ಎದುರಾಗಿ ಅಂತಿಮವಾಗಿ ಹಾಲಿ ಸದಸ್ಯರಾಗಿದ್ದ ಘೋಟ್ನೇಕರ್ ಅವರಿಗೆ ನೀಡಿದ್ದರು. ಇನ್ನು ಬಿಜೆಪಿಯಿಂದ ಸ್ಪರ್ಧಿಸಿದರೆ ಗೆಲುವು ಕಠಿಣ ಎನ್ನುವುದನ್ನು ಅರಿತ ಹಿನ್ನಲೆಯಲ್ಲಿ ನಾಯಕರುಗಳು ಟಿಕೆಟ್ ಪಡೆಯಲು ಹಿಂದೇಟು ಹಾಕಿದ್ದರು. ಕಾರವಾರದ ಗಣಪತಿ ಉಳ್ವೇಕರ್ ಅವರಿಗೆ ಒತ್ತಾಯಪೂರ್ವಕವಾಗಿಯೇ ಟಿಕೇಟ್ ನೀಡಿದ್ದು, ಚುನಾವಣೆಯಲ್ಲಿ ಕೊನೆಗೆ ಸೋಲನ್ನ ಕಂಡಿದ್ದರು.

ಆದರೆ ಈ ಬಾರಿ ಪರಿಸ್ಥಿತಿ ಬದಲಾಗಿದ್ದು, ಬಿಜೆಪಿಯಿಂದ ಯಾರೇ ಅಭ್ಯರ್ಥಿಯಾಗಿ ಕಣಕ್ಕೆ ಇಳಿದರೂ ಗೆಲುವು ಪಡೆಯುವ ಸಾಧ್ಯತೆ ಹೆಚ್ಚಾಗಿಯೇ ಇದೆ. ಈ ಹಿನ್ನಲೆಯಲ್ಲಿ ಸುಲಭವಾಗಿ ಶಾಸಕರಾಗಲು ಜಿಲ್ಲೆಯ ನಾಯಕರುಗಳು ಈಗಿನಿಂದಲೇ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ಪಡೆಯಲು ಕಸರತ್ತು ಪ್ರಾರಂಭಿಸುತ್ತಿದ್ದಾರೆ ಎನ್ನಲಾಗಿದೆ. ಸದ್ಯ ಹಾಲಿ ಪರಿಷತ್ ಸದಸ್ಯ ಘೋಟ್ನೇಕರ್ ಅಧಿಕಾರಾವಧಿ  ಮುಗಿಯಲಿದೆ. ಈ ಹಿನ್ನಲೆಯಲ್ಲಿ ಈಗಿನಿಂದಲೇ ಹೇಗಾದರೂ ಮಾಡಿ ಟಿಕೆಟ್ ಪಡೆಯಲು ಕೆಲನಾಯಕರು ತಯಾರಿ ಮಾಡುತ್ತಿದ್ದಾರೆ ಎನ್ನಲಾಗಿದೆ.

ಆಕಾಂಕ್ಷಿಗಳ ಪಟ್ಟಿಯಲ್ಲಿ ಹಲವರ ಹೆಸರು

ಈ ಬಾರಿ ಬಿಜೆಪಿಯಿಂದ ಪರಿಷತ್ ಚುನಾವಣೆಗೆ ಟಿಕೆಟ್ ಪಡೆಯಲು ಪ್ರಯತ್ನ ನಡೆಸುತ್ತಿರುವವರಲ್ಲಿ ಹಲವರ ಹೆಸರುಗಳು ಕೇಳಿ ಬಂದಿವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾರವಾರ ಕ್ಷೇತ್ರದಿಂದ ಟಿಕೆಟ್ ವಂಚಿತರಾಗಿದ್ದವರ  ಹೆಸರು ಪ್ರಬಲವಾಗಿ ಕೇಳಿ ಬಂದಿದೆ. ಪಕ್ಷ ಬಲವರ್ಧನೆಗೆ ಜಿಲ್ಲೆಯಲ್ಲಿ ನಿರಂತರವಾಗಿ ದುಡಿಯುತ್ತಿರುವವರ ಹೆಸರು‌ ಕೂಡಾ ಕೇಳಿ ಬರುತ್ತಿದೆ.

ಇದಲ್ಲದೇ ಬಿಜೆಪಿ ಪ್ರಮುಖರಾದ ಪ್ರಸಾದ್ ಕಾರವಾರಕರ್, ಕುಮಟಾದ ಡಾ.ಜಿ.ಜಿ.ಹೆಗಡೆ, ಎಂ.ಜಿ.ಭಟ್, ಸಿದ್ದಾಪುರದ ಕೆ.ಜಿ.ನಾಯ್ಕ, ಆರ್.ಟಿ.ಹೆಗಡೆ, ಕಳೆದ ಬಾರಿ ಸ್ಪರ್ಧಿಯಾಗಿದ್ದ ಗಣಪತಿ ಉಳ್ವೇಕರ್ ಹೆಸರು ಕೂಡ ಕೇಳಿ ಬಂದಿದ್ದು, ಇನ್ನು ಯಾವೆಲ್ಲ ನಾಯಕರು ಟಿಕೇಟ್‌ಗಾಗಿ ಪ್ರಯತ್ನ ನಡೆಸುತ್ತಾರೆ ಎನ್ನುವುದನ್ನ ಕಾದು ನೋಡಬೇಕಾಗಿದೆ.
Published by: Latha CG
First published: January 4, 2021, 8:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories