ಪೊಲೀಸ್ ಸೇವೆಯಿಂದ ಸ್ವಯಂ ನಿವೃತ್ತಿ ಪಡೆದು ರಾಜಕಾರಣದತ್ತ ಮುಖ ಮಾಡಿರುವ ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ (Former Bengaluru police commissioner Bhaskar Rao) ಆಮ್ ಆದ್ಮಿ ಪಕ್ಷ (AAP) ಸೇರ್ಪಡೆಯಾಗಿದ್ದಾರೆ. ಮಾಧ್ಯಮದ ಜೊತೆ ಮಾತನಾಡಿದ ಇವರು ರಾಜ್ಯದ ಭ್ರಷ್ಟಾಚಾರ, ವ್ಯವಸ್ಥೆ, ಪೊಲೀಸ್ ಇಲಾಖೆಯ (Police Department) ಕರಾಳ ಮುಖದ ಬಗ್ಗೆ ಬಿಚ್ಚಿಟ್ಟಿದ್ದಾರೆ. “ನಾಳೆ, ನನ್ನ ವಿರುದ್ಧ ಕೆಲವು ಪ್ರಕರಣಗಳು ದಾಖಲಾಗಬಹುದು ಅಥವಾ ನನ್ನ ವಿರುದ್ಧ ರೇಡ್ ಮಾಡಬಹುದು. ಅವರನ್ನು ಎದುರಿಸಲು ನಾನು ಸಿದ್ಧನಿದ್ದೇನೆ” ಎಂದು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಗುಡುಗಿದ್ದಾರೆ.
ಸುದ್ದಿಗಾರರೊಂದಿಗೆ ,ಮಾತನಾಡಿದ ಭಾಸ್ಕರ್ ರಾವ್, ಎಎಪಿ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಇಂತಹ ಹಲವು ಸಂಕಷ್ಟಗಳನ್ನು ಎದುರಿಸಬೇಕಾಯಿತು. ನಾನು ಈ ಎಲ್ಲಾ ದಾಳಿ, ಬೆದರಿಕೆಗಳನ್ನು ಎದುರಿಸುತ್ತೇನೆ ಎಂದು ಅವರು ಹೇಳಿದರು.
ನಾನು ಸ್ವಚ್ಛ ಆಡಳಿತದ ಪರ ನಿಂತಿದ್ದೇನೆ
“ನಮ್ಮ ನಾಯಕ ಅರವಿಂದ್ ಕೇಜ್ರಿವಾಲ್ ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ಅವರು ಅನೇಕ ಸವಾಲುಗಳನ್ನು ಎದುರಿಸಿದರು. ಸಮಾಜದಲ್ಲಿ ಸುಧಾರಣೆಯ ಹಾದಿಯಲ್ಲಿ ಸಾಗುವವರಿಗೆ ಇಂತಹ ಹಲವು ಸವಾಲುಗಳು ಎದುರಾಗುತ್ತವೆ. ಕರ್ನಾಟಕದಿಂದ ಭ್ರಷ್ಟಾಚಾರವನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಪ್ರತಿಜ್ಞೆ ಮಾಡುತ್ತೇನೆ. ನಾನು ಸ್ವಚ್ಛ ಆಡಳಿತದ ಪರ ನಿಂತಿದ್ದೇನೆ” ಎಂದು ಮಾಧ್ಯಮಗಳೊಂದಿಗೆ ತಮ್ಮ ಧ್ಯೇಯ ಹಂಚಿಕೊಂಡರು.
ಪೊಲೀಸ್ ಅಧಿಕಾರಿಯಾಗಿದ್ದರಿಂದ ನಾನು ಆಗ ಸರ್ಕಾರದ ವಿರುದ್ಧ ಮಾತನಾಡಲು ಸಾಧ್ಯವಾಗಿರಲಿಲ್ಲ. ಇನ್ಮುಂದೆ ಎಲ್ಲರ ಬಂಡವಾಳ ಬಿಚ್ಚಿಡ್ತೀನಿ ಎಂದರು. ಪೊಲೀಸ್ ಇಲಾಖೆಯ ಭಾಗವಾಗಿದ್ದ ಭಾಸ್ಕರ್ ರಾವ್ ಒಂದು ಕಾಲದಲ್ಲಿ ತಾನು ಭಾಗವಾಗಿದ್ದ ಇಲಾಖೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಪ್ರಶ್ನಿಸಿದ ಅವರು, ತಮ್ಮ ಆಯ್ಕೆಯ ಅಧಿಕಾರಿಯನ್ನು ನೇಮಿಸುವ ಅಧಿಕಾರವನ್ನು ಸಹ ನಾವು ಹೊಂದಿರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ: R Ashok: ಹಲೋ ಕಂದಾಯ ಸಚಿವರೇ ಎಂದು ಹೇಳಿ 10 ದಿನದಲ್ಲಿ ಪಿಂಚಣಿ ಪಡೆಯಿರಿ
ಪೋಸ್ಟಿಂಗ್ ಪಡೆಯಲು ಕೋಟ್ಯಂತರ ಹಣ ಕೇಳ್ತಾರೆ
ಕರ್ನಾಟಕದಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ಪೋಸ್ಟಿಂಗ್ ಪಡೆಯಲು ಅಧಿಕಾರಿಗಳು ಕೋಟ್ಯಂತರ ರೂಪಾಯಿ ಪಾವತಿಸುವಂತೆ ಒತ್ತಾಯಿಸುತ್ತಾರೆ ಎಂದು ಹೇಳಿದರು.
“ಪೊಲೀಸ್ ಆಯುಕ್ತರು ಉಪ ಪೊಲೀಸ್ ಆಯುಕ್ತರನ್ನು ನೇಮಿಸಲು ಸಹ ಸಾಧ್ಯವಿಲ್ಲ. ಸಹಾಯಕ ಪೊಲೀಸ್ ಕಮಿಷನರ್ ಅಥವಾ ಅವರ ಆಯ್ಕೆಯ ಇನ್ಸ್‌ಪೆಕ್ಟರ್ ಅನ್ನು ಕೂಡ ಆರಿಸುವ ಹಕ್ಕಿಲ್ಲ. ಪ್ರತಿಯೊಂದು ಹುದ್ದೆ ಆಯ್ಕೆಯೂ ಕೋಟ್ಯಂತರ ರೂಪಾಯಿಗಳಲ್ಲಿ ಹರಾಜಾಗುತ್ತದೆ'' ಎಂದು ಭಾಸ್ಕರ್ ರಾವ್ ಆರೋಪಿಸಿದರು.
ಪ್ರಭಾವಿಗಳ ಹಸ್ತಕ್ಷೇಪದಿಂದ ಕೇಸ್ ಗಳು ಮುಚ್ಚಿ ಹೋಗುತ್ತವೆ
ದೊಡ್ಡ ಪ್ರಮಾಣದ ಭ್ರಷ್ಟಾಚಾರದ ಪ್ರಕರಣಗಳು ಪ್ರಸ್ತುತ ಬೆಳಕಿಗೆ ಬರುವುದೇ ಇಲ್ಲ ಎಂದು ನಿವೃತ್ತ ಐಪಿಎಸ್ ಅಧಿಕಾರಿ ವಿಷಾದ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿ ನಡೆಯುತ್ತಿರುವ ಹಗರಣಗಳನ್ನು ನಾನು ನೋಡಿದ್ದೇನೆ. ಪ್ರಕರಣಗಳನ್ನು ದಾಖಲಿಸಲಾಗುತ್ತದೆ, ಆದರೆ ಪ್ರಭಾವಿಗಳ ಹಸ್ತಕ್ಷೇಪದಿಂದ ಕೇಸ್‌ಗಳು ಮುಚ್ಚಿ ಹೋಗುತ್ತವೆ ಮತ್ತು ಜನರಿಗೆ ನ್ಯಾಯ ಸಿಗುವುದೇ ಇಲ್ಲ. ನಂತರ ಸಹಕಾರ ಮಾಡಿಕೊಂಡು ಪ್ರಕರಣ ಮುಚ್ಚಿ ಬಿಡುತ್ತಾರೆ ಎಂದರು.
ವಂಚನೆ ಪ್ರಕರಣದಲ್ಲಿ ಹಲವಾರು ಜನರು 2,000 ಕೋಟಿ ರೂ. ಕಳೆದುಕೊಂಡಿರುವ ಮತ್ತು ಬ್ಯಾಂಕ್ ಹಗರಣದ ಬಗ್ಗೆಯೂ ಉಲ್ಲೇಖಿಸಿದ್ದಾರೆ. ಸಾರ್ವಜನಿಕರ ಬಗ್ಗೆ ಕಾಳಜಿ ಇಲ್ಲದೆ ಎಲ್ಲಾ ಆರೋಪಿಗಳು ಮುಕ್ತರಾಗಿದ್ದಾರೆ ಎಂದು ಕಿಡಿಕಾರಿದರು.
ಸ್ವಚ್ಛ ಆಡಳಿತ ಕೊಡಲು ಆಗಿದೆಯಾ..?
ಬೆಂಗಳೂರು ಮಾಜಿ ಪೊಲೀಸ್ ಕಮಿಷನರ್ ಅವರು ತಮ್ಮ 32 ವರ್ಷಗಳ ಪೊಲೀಸ್ ಸೇವೆಯಲ್ಲಿ, ಜನ ಸಾಮಾನ್ಯರ ಬದುಕನ್ನು ಪರಿವರ್ತಿಸಲು ಸಾಧ್ಯವಾಗದ ಎಲ್ಲಾ ರಾಜಕೀಯ ಪಕ್ಷಗಳನ್ನು ಹತ್ತಿರದಿಂದ ನೋಡಿದ್ದೇನೆ. ಇದುವರೆಗೂ ಯಾರಿಂದಲಾದರೂ ಸ್ವಚ್ಛ ಆಡಳಿತ ಕೊಡಲು ಆಗಿದೆಯಾ..? ಎಂದು ಪ್ರಶ್ನಿಸಿದರು.
ಕರ್ನಾಟಕಕ್ಕೆ ಯಾವುದೇ ಸಂಪನ್ಮೂಲದ ಕೊರತೆ ಇಲ್ಲ. ಆದರೆ ರಾಜ್ಯದಲ್ಲಿ ಪಾರದರ್ಶಕ ಸರ್ಕಾರ ಮತ್ತು ಸರಿಯಾದ ಆಡಳಿತ ನೀಡುವ ಉತ್ತಮ ನಾಯಕತ್ವದ ಕೊರತೆ ಇದೆ ಎಂದರು. ಎಎಪಿ ಬಗ್ಗೆ ಮಾತನಾಡುತ್ತಾ ಶಿಕ್ಷಣ, ಕುಡಿಯುವ ನೀರು, ಆರೋಗ್ಯ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ದೆಹಲಿ ಸರ್ಕಾರದ ಪ್ರಭಾವ ನನ್ನನ್ನು ಈ ಪಕ್ಷಕ್ಕೆ ಸೇರುವಂತೆ ಮಾಡಿತು ಎಂದರು.
ಇದನ್ನೂ ಓದಿ: Temple: ಈ ದೇವಸ್ಥಾನದ ಆಸುಪಾಸು ಆನೆ ಬರುವಂತಿಲ್ಲ, ಗಜರಾಜನಿಗೆ ಯಾಕಿಲ್ಲ ಎಂಟ್ರಿ ಗೊತ್ತಾ ?
ಕಳೆದ ಡಿಸೆಂಬರ್ ನಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದ ಭಾಸ್ಕರ್ ರಾವ್, ಸೋಮವಾರ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮ್ಮುಖದಲ್ಲಿ ಎಎಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ