ಶಿವಮೊಗ್ಗದಲ್ಲಿ ಅಂತರ್ಜಲ ಚೇತನ ಯೋಜನೆಗೆ ಮೇ 6 ರಂದು ಚಾಲನೆ

ಮೇ 6 ರಂದು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್​ಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ

ಸಚಿವ ಕೆ ಎಸ್ ಈಶ್ವರಪ್ಪ

ಸಚಿವ ಕೆ ಎಸ್ ಈಶ್ವರಪ್ಪ

  • Share this:
ಶಿವಮೊಗ್ಗ : ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಶಿವಮೊಗ್ಗ ಜಿಲ್ಲೆಯಲ್ಲಿ ಅಂತರ್ಜಲವನ್ನು ಹೆಚ್ಚಿಸುವ ಮಹತ್ವಾಕಾಂಕ್ಷೆಯ ಅಂತರ್ಜಲ ಚೇತನ ಯೋಜನೆಗೆ ಮೇ 6 ರಂದು ಚಾಲನೆ ದೊರೆಯಲಿದೆ. ರಾಜ್ಯದಲ್ಲಿ ಪ್ರಥಮ ಹಂತದಲ್ಲಿ ಒಟ್ಟು 9 ಜಿಲ್ಲೆಗಳಲ್ಲಿ ಅಂತರ್ಜಲ ಚೇತನ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದ್ದು,  ಶಿವಮೊಗ್ಗ ಜಿಲ್ಲೆಯಿಂದ ಚಾಲನೆ ನೀಡಲಾಗುತ್ತಿದೆ.

ರಾಜ್ಯದಲ್ಲಿ ಸುಮಾರು 23 ಸಾವಿರ ಕೆರೆಗಳಿದ್ದು, ಅವುಗಳ ಪೈಕಿ 5300 ಕೆರೆಗಳು ಶಿವಮೊಗ್ಗ ಜಿಲ್ಲೆಯೊಂದರಲ್ಲೇ ಇವೆ.  ಆರ್ಟ್ ಆಫ್ ಲಿವಿಂಗ್ ಸಂಸ್ಥೆಯ ಸಹಯೋಗದಲ್ಲಿ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ತಾಂತ್ರಿಕ ನೆರವು ಹಾಗೂ ಮೇಲುಸ್ತುವಾರಿಯನ್ನು ನೋಡಿಕೊಳ್ಳಲಿದೆ. ಒಂದು ವರ್ಷದ ಅವಧಿಯಲ್ಲಿ ಯೋಜನೆಯನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸಲು ಎಲ್ಲ ಸಿದ್ಧತೆಗಳು ನಡೆದಿವೆ. ಸುಮಾರು 252 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆ ಶಿವಮೊಗ್ಗ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲಾಗಿದೆ.

ಶಿವಮೊಗ್ಗ ಜಿಲ್ಲೆಯ 1650 ಗ್ರಾಮಗಳ ವ್ಯಾಪ್ತಿಯಲ್ಲಿ 345 ಕಿರು ಜಲಾನಯನಗಳ ಸುಮಾರು 5 ಸಾವಿರ ಚದರ ಕಿ.ಮೀ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಯಾಗುವ ಗುರಿ ಹೊಂದಲಾಗಿದೆ. ಜಿಲ್ಲೆಯ ಎಲ್ಲಾ 271 ಗ್ರಾಮ ಪಂಚಾಯತ್​ಗಳ ವ್ಯಾಪ್ತಿಯಲ್ಲಿ ಈ ಅಂತರ್ಜಲ ಸಂರಕ್ಷಣೆ ಯೋಜನೆ ಅನುಷ್ಠಾ ನಗೊಳಿಸಲಾಗುತ್ತಿದ್ದು, ಸುಮಾರು 8.82 ಲಕ್ಷ ಜನರಿಗೆ ಸದುಪಯೋಗವಾಗಲಿದೆ.  ಶಿವಮೊಗ್ಗ ಜಿಲ್ಲೆಯಲ್ಲಿ ಯೋಜನೆಯಡಿ 16, 255 ಬೋಲ್ಡರ್ ಚೆಕ್ (ಕಲ್ಲುಗುಂಡು ತಡೆ) ನಿರ್ಮಾಣ, 15,948 ಇಂಗುಬಾವಿ, 307 ಇಂಗು ಕೊಳವೆ, 221 ಕೆರೆ ಹೊಂಡ ಸೇರಿದಂತೆ ಒಟ್ಟು 32,731 ಕಾಮಗಾರಿಗಳನ್ನು ನಡೆಸಲಾಗುತ್ತದೆ. ಮೇ ತಿಂಗಳಲ್ಲಿ 4 ಸಾವಿರ ಕಾಮಗಾರಿ ಪೂರ್ಣಗೊಳಿಸಲು ಯೋಜನೆ ರೂಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮಾಹಿತಿ ಸಹ ನೀಡಿದ್ದಾರೆ.

ಮೇ 6 ರಂದು ಜಿಲ್ಲೆಯ ಪ್ರತಿಯೊಂದು ಗ್ರಾಮ ಪಂಚಾಯತ್​ಗಳಲ್ಲಿ ಯೋಜನೆಗೆ ಚಾಲನೆ ದೊರೆಯಲಿದೆ. ಶಿವಮೊಗ್ಗ ತಾಲೂಕಿನ ಸೂಗೂರಿನಲ್ಲಿ ಜಿಲ್ಲಾಮಟ್ಟದ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ. ತೀರ್ಥಹಳ್ಳಿ ತಾಲೂಕಿನ ಅರಗ, ಭದ್ರಾವತಿ ತಾಲೂಕಿನ ದೊಡ್ಡೇರಿ, ಸೊರಬ ತಾಲೂಕಿನ ಬಾರಂಗಿ, ಶಿಕಾರಿಪುರ ತಾಲೂಕಿನ ತರಳಘಟ್ಟ, ಹೊಸನಗರ ತಾಲೂಕಿನ ಮೇಲಿನ ಬೇಸಿಗೆ, ಸಾಗರ ತಾಲೂಕಿನ ಕೆಳದಿಯಲ್ಲಿ ತಾಲೂಕು ಮಟ್ಟದ ಉದ್ಘಾಟನಾ ಸಮಾರಂಭಗಳು ನಡೆಯಲಿವೆ. ಶಿವಮೊಗ್ಗ ನಗರದಲ್ಲಿ 70 ಕೆರೆಗಳಿದ್ದು, ಅವುಗಳ ಪೈಕಿ 25 ಕೆರೆಗಳ ಅಭಿವೃದ್ಧಿಯನ್ನು ಜಲಾಮೃತ ಯೋಜನೆಯಡಿ ಕೈಗೊಳ್ಳಲಾಗುವುದು. ಇದಕ್ಕಾಗಿ ಸಣ್ಣ ನೀರಾವರಿ ಯೋಜನೆಯಡಿ 16 ಕೋಟಿ ರೂ. ಅನುದಾನ ಒದಗಿಸಲಾಗಿದೆ.

ಇದನ್ನೂ ಓದಿ : Nisar Ahmed obituary - ಪ್ರೊ. ನಿಸಾರ್ ಅಹ್ಮದ್: ಭೂವಿಜ್ಞಾನಿ ಕಾಯಕ ಬಿಟ್ಟು ಕನ್ನಡ ಕೃಷಿಗಿಳಿದ ಶ್ರೇಷ್ಠ ಸಾಹಿತಿ

ಇತ್ತೀಚಿನ ದಿನಗಳಲ್ಲಿ ಅಂತರ್ಜಲ ಮಟ್ಟ ಕಡಿಮೆಯಾಗುತ್ತಿದ್ದು, ಅದನ್ನು ಹೆಚ್ಚಿಸುವ ದೃಷ್ಠಿಯಿಂದ ಈ ಯೋಜನೆ ಉಪಯೋಕ್ತವಾಗಲಿದೆ. ಮಳೆಯ ನೀರು ಭೂಮಿಯಲ್ಲಿ ಇಂಗಿಸುವ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವ ಯೋಜನೆ ಇದಾಗಿದೆ.
First published: