Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 30, 2019, 6:16 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 30, 2019, 6:16 PM IST
  • Share this:
1.ಇಂದು ನರೇಂದ್ರ ಮೋದಿ ಪ್ರಧಾನಿಯಾಗಿ ಪದಗ್ರಹಣ; 

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದ ಬೆನ್ನಲ್ಲೇ ಎನ್​ಡಿಎ ನಾಯಕ ನರೇಂದ್ರ ಮೋದಿ ಅವರು ಸತತ ಎರಡನೇ ಬಾರಿ ಪ್ರಧಾನಿಯಾಗಿ ಇವತ್ತು ಪದಗ್ರಹಣ ಮಾಡಲಿದ್ದಾರೆ. ಇಂದು ಸಂಜೆ 7ಗಂಟೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ನೂತನ ಪ್ರಧಾನಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ಇದೇ ವೇಳೆ, ಸಚಿವ ಸಂಪುಟದ ಕೆಲ ಸದಸ್ಯರೂ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆಯುವ ಈ ಪದಗ್ರಹಣ ಸಮಾರಂಭದಲ್ಲಿ ಸಾಕಷ್ಟು ಗಣ್ಯರು ಪಾಲ್ಗೊಳ್ಳುತ್ತಿದ್ದಾರೆ. BIMSTEC ದೇಶಗಳ ಮುಖಂಡರಿಗೆ ಆಹ್ವಾನ ನೀಡಲಾಗಿದೆ. ಈಗಾಗಲೇ ಹಲವು ನಾಯಕರು ಭಾರತಕ್ಕೆ ಆಗಮಿಸಿದ್ದಾಗಿದೆ. ಹಾಗೆಯೇ, ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ವಿಪಕ್ಷಗಳ ಮುಖಂಡರಿಗೆ ಆಹ್ವಾನ ಕೊಡಲಾಗಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಂ ನಬಿ ಆಜಾದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಸಮಾರಂಭಕ್ಕೆ ಬರಲಿದ್ದಾರೆ.

2.ಮೋದಿ ಸಚಿವ ಸಂಪುಟದಲ್ಲಿ ಕರ್ನಾಟಕಕ್ಕೆ ಬಂಪರ್​ 4 ಸ್ಥಾನ

 ನರೇಂದ್ರ ಮೋದಿ ನೇತೃತ್ವದ ಎನ್ ಡಿಎ 2 ಸರ್ಕಾರ ಗುರುವಾರ ಅಸ್ಥಿತ್ವಕ್ಕೆ ಬರಲಿದೆ. ಇಂದು ಸಾಯಂಕಾಲ ರಾಷ್ಟ್ರಪತಿ ಭವನದಲ್ಲಿ ನಡೆಯಲಿರುವ ವರ್ಣರಂಜಿತ ಸಮಾರಂಭದಲ್ಲಿ ನರೇಂದ್ರ ಮೋದಿಯಾಗಿ ಸರ್ಕಾರದ ನೂತನ ಸಚಿವರು ಪ್ರಮಾಣವಚನ ಸ್ವೀಕರಿಸಲಿದ್ದಾರೆ.ಕರ್ನಾಟಕದಿಂದ ನಾಲ್ವರಿಗೆ ಸಚಿವ ಸ್ಥಾನ ಪಕ್ಕಾ ಆಗಿದೆ ಎಂದು ಮಾಹಿತಿ ಸಿಕ್ಕಿದೆ. ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ ವಿ ಸದಾನಂದ ಗೌಡ, ಬೆಳಗಾವಿ ಸಂಸದ ಸುರೇಶ್ ಅಂಗಡಿ, ಧಾರವಾಡ ಸಂಸದ ಪ್ರಹ್ಲಾದ್ ಜೋಶಿ ಅವರಿಗೆ ದೆಹಲಿಯ ಪ್ರಧಾನಿ ನಿವಾಸಕ್ಕೆ ಆಗಮಿಸುವಂತೆ ಅಮಿತ್ ಶಾ ಅವರಿಂದ ಕರೆ ಬಂದಿದೆ. ಈಗಾಗಲೇ ಕರ್ನಾಟಕದ ಸದಾನಂದ ಗೌಡ, ಪ್ರಹ್ಲಾದ್ ಜೋಶಿ, ಸುರೇಶ್ ಅಂಗಡಿ ಅವರಿಗೆ ಸಚಿವ ಸ್ಥಾನ ಖಚಿತವಾಗಿದ್ದು ಕರೆ ಮಾಡಿ ತಿಳಿಸಲಾಗಿದೆ. ಜತೆಗೆ ನಿರ್ಮಲಾ ಸೀತಾರಾಮನ್​ ಅವರು ಮತ್ತೊಮ್ಮೆ ಸಚಿವರಾಗಲಿದ್ದಾರೆ. ಅವರು ಕರ್ನಾಟಕದಿಂದ ರಾಜ್ಯಸಭೆಗೆ ಹೋಗಿರುವ ಕಾರಣ, ಕರ್ನಾಟಕಕ್ಕೆ ಒಟ್ಟೂ 4 ಸ್ಥಾನ ಸಿಗಲಿದೆ ಎಂದು ಮೂಲಗಳು ಹೇಳುತ್ತಿವೆ.


3.ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ಜಗನ್​ ಮೋಹನ್​ ರೆಡ್ಡಿ ಪ್ರಮಾಣವಚನ ಸ್ವೀಕಾರ

ಆಂಧ್ರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ ಜಗನ್ ಮೋಹನ್ ರೆಡ್ಡಿ ಇಂದು ಆಂಧ್ರ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಆಂಧ್ರ ವಿಭಜನೆ ನಂತರ ಎರಡನೇ ಮುಖ್ಯಮಂತ್ರಿ ಇವರಾಗಿದ್ದಾರೆ. ವಿಜಯವಾಡದಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಜಗನ್​ ಮೋಹನ್​ ರೆಡ್ಡಿ ಅವರಿಗೆ ರಾಜ್ಯಪಾಲ ಇಎಸ್​ಎಲ್ ನರಸಿಂಹನ್​ 12.23ರಲ್ಲಿ ಪ್ರಮಾಣವಚನ ಬೋಧಿಸಿದರು. ಸಮಾರಂಭ ಸ್ಥಳಕ್ಕೆ ತೆರೆದ ಜೀಪಿನಲ್ಲಿ ಆಗಮಿಸಿದ ಜಗನ್​ ಅವರಿಗೆ ರಸ್ತೆಯುದ್ಧಕ್ಕೂ ಜನರು ಜೈಕಾರ ಕೂಗಿದರು. ಪ್ರಮಾಣವಚನ ಸಮಾರಂಭದಲ್ಲಿ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್, ಡಿಎಂಕೆ ಮುಖ್ಯಸ್ಥ ಎಂ.ಕೆ.ಸ್ಟಾಲಿನ್ ಹಾಜರಿದ್ದರು.44.ಅಧಿಕಾರ ತ್ಯಾಗ ಮಾಡಲು ಒಪ್ಪದ ಮಂತ್ರಿಗಳು; ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದ ಸಿದ್ದರಾಮಯ್ಯ

ಕೋಮುವಾದಿಗಳನ್ನು ಅಧಿಕಾರದಿಂದ ದೂರ ಇಡುವ ಉದ್ದೇಶದಿಂದ ಮೈತ್ರಿ ಸರ್ಕಾರ ರಚನೆ ಮಾಡಿದ್ದೇವೆ. ಮೈತ್ರಿ ಸರ್ಕಾರ ರಚನೆಯಾದಾಗಿನಿಂದ ಸರ್ಕಾರವನ್ನು ದುರ್ಬಲಗೊಳಿಸುವ ಕೆಲಸವನ್ನು ನಿರಂತರವಾಗಿ ಬಿಜೆಪಿ ಮಾಡ್ತಾನೇ ಬಂದಿದೆ. ಸತತ ಒಂದು ವರ್ಷದಿಂದ ಈ ಕೆಲಸವನ್ನು ಯಡಿಯೂರಪ್ಪ ಮಾಡ್ತಾನೇ ಬಂದಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದರು. ಸಚಿವರ ಸಭೆ ನಂತರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ,  ಬಿಜೆಪಿಯವರ ಈ ಕೃತ್ಯಕ್ಕೆ ಕೆಲ ಮಾದ್ಯಮಗಳೂ ಬೆಂಬಲ ನೀಡುತ್ತಿವೆ. ಮೋದಿಯವರ ಆಡಳಿತ ವೇಳೆ ಕೆಲ ಉಪಚುನಾವಣೆಗಳಲ್ಲಿ ಬಿಜೆಪಿ ಸೋತಿತ್ತು. ಆಗ ನೈತಿಕ ಹೊಣೆ ಹೊತ್ತು ಮೋದಿಯವರು ರಾಜೀನಾಮೆ ಕೊಟ್ರಾ? ಇದೀಗ ಜನಾದೇಶ ಮೋದಿ ಪರವಾಗಿದೆ.‌ ಜನಾದೇಶವನ್ನ ನಾವು ಒಪ್ಪುತ್ತೇವೆ ಎಂದು ಹೇಳಿದರು.

5. ಸರ್ಕಾರ ಉಳಿಸಿಕೊಳ್ಳಲು ಕಾಂಗ್ರೆಸ್ ನಾಯಕರ ಕೊನೆಯ ಕಸರತ್ತು!

ಒಂದೆಡೆ ನರೇಂದ್ರ ಮೋದಿ ಎರಡನೇ ಅವಧಿಗೆ ಪ್ರಧಾನ ಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದರೆ, ಮತ್ತೊಂದೆಡೆ ರಾಜ್ಯದಲ್ಲಿನ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಕಾಂಗ್ರೆಸ್ ಕೊನೆಯ ಕಸರತ್ತಿಗೆ ಮುಂದಾಗಿದೆ. ಈ ನಿಟ್ಟಿನಲ್ಲಿ ಇಂದು ಉಪ ಮುಖ್ಯಮಂತ್ರಿ ಡಾ. ಪರಮೇಶ್ವರ್ ಮನೆಯಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ನೇತೃತ್ವದಲ್ಲಿ ಸಚಿವರ ಸಭೆ ನಡೆಯಿತು. ಸದಾಶಿವ ನಗರದಲ್ಲಿರುವ ಪರಮೇಶ್ವರ್ ಮನೆಯಲ್ಲಿ ನಡೆದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವೆ ಜಯಮಾಲಾ, ಪ್ರಿಯಾಂಕ್ ಖರ್ಗೆ, ಎಂ.ಬಿ. ಪಾಟೀಲ್, ಎಂಟಿಬಿ ನಾಗರಾಜ್, ವೆಂಕಟರಮಣಪ್ಪ, ದಿನೇಶ್ ಗುಂಡೂರಾವ್ ಸೇರಿದಂತೆ ಬಹುತೇಕ ರಾಜ್ಯ ಸಚಿವ ಸಂಪುಟದ ಎಲ್ಲಾ ಸಚಿವರು ಪಾಲ್ಗೊಂಡಿದ್ದರು.

6.ರಾಜ್ಯದ ಜನರಿಗೆ ವಿದ್ಯುತ್​ ಶಾಕ್​; ಪ್ರತಿ ಯೂನಿಟ್​ಗೆ 33 ಪೈಸೆ ದರ ಏರಿಕೆ

ರಾಜ್ಯದ ಜನರಿಗೆ ಮತ್ತೆ ವಿದ್ಯುತ್​ ಶಾಕ್​ ತಟ್ಟಿದೆ. 2019-20ನೇ ಸಾಲಿನ ವಿದ್ಯುತ್ ದರ ಪರಿಷ್ಕರಣೆ ಪ್ರಕಟವಾಗಿದ್ದು, ಅದರಂತೆ ಬೆಸ್ಕಾಂ, ಮೆಸ್ಕಾಂ, ಸೆಸ್ಕಾಂ, ಹೆಸ್ಕಾಂ, ಜೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ವಿದ್ಯುತ್ ದರ 33 ಪೈಸೆ ಏರಿಕೆ ಮಾಡಲಾಗಿದೆ. ಏಪ್ರಿಲ್ 1 ರಿಂದ ಪೂರ್ವಾನ್ವಯವಾಗುವಂತೆ ಪರಿಷ್ಕೃತ ದರ ಜಾರಿಗೆ ಬರಲಿದೆ ಎಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದ ಅಧ್ಯಕ್ಷ ಶಂಭುದಯಾಳ್ ಮೀನಾ ತಿಳಿಸಿದ್ದಾರೆ. ಬೆಸ್ಕಾಂ ಪ್ರತಿ ಯೂನಿಟ್​ಗೆ 1.01 ರೂ. ಏರಿಕೆ ಮಾಡುವಂತೆ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಕೆಇಆರ್​ಸಿ ಯೂನಿಟ್​ಗೆ 33 ಪೈಸೆ ಏರಿಕೆ ಮಾಡಲು ಒಪ್ಪಿಗೆ ನೀಡಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ ಒಂದು ಯೂನಿಟ್ ವಿದ್ಯುತ್​ಗೆ 1.38, ಸೆಸ್ಕಾಂ ಯೂನಿಟ್ ಗೆ ಸರಾಸರಿ 1 ರೂ., ಹೆಸ್ಕಾಂ 1.63 ರೂ. ಗೆ,  ಹಾಗೂ ಜೆಸ್ಕಾಂ 1.27 ಪೈಸೆ ಏರಿಕೆ ಮಾಡುವಂತೆ ಕೆಇಆರ್​ಸಿಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಎಲ್ಲ ಐದು ವಿದ್ಯುತ್ ಸರಬರಾಜು ಕಂಪನಿಯಲ್ಲಿ ಪ್ರತಿ ಯೂನಿಟ್​ಗೆ ಸರಾಸರಿ ವಿದ್ಯುತ್​ ದರವನ್ನು 33 ಪೈಸೆಗೆ ಏರಿಕೆಗೆ ಒಪ್ಪಿಗೆ ಸೂಚಿಸಿದೆ ಎಂದು ತಿಳಿಸಿದರು.

7.ಯಡಿಯೂರಪ್ಪಗೆ ಭಾರೀ ಹಿನ್ನಡೆ;  ಹೈಕಮಾಂಡ್ ಮಟ್ಟದಲ್ಲಿ ಸಂತೋಷ್​ ಮೇಲುಗೈ

ಪ್ರಧಾನಿ ಮೋದಿ ಅವರ ಎರಡನೇ ಅವಧಿಯ ಸಚಿವ ಸಂಪುಟಕ್ಕೆ ಯಾರ್ಯಾರು ಸೇರ್ಪಡೆಯಾಗಲಿದ್ದಾರೆ ಈಗಾಗಲೇ ಪ್ರಕಟವಾಗಿದ್ದು, ರಾಜ್ಯದಲ್ಲಿ ನಾಲ್ವರಿಗೆ (ರಾಜ್ಯಸಭೆ ಸೇರಿ) ಮೊದಿ ಸಂಪುಟದಲ್ಲಿ ಅವಕಾಶ ದೊರಕಿದೆ. ಆದರೆ, ಯಡಿಯೂರಪ್ಪ ಹೇಳಿದ ಯಾವ ಹೆಸರಿಗೂ ಹೈಕಮಾಂಡ್​ ಮಣೆ ಹಾಕಿಲ್ಲದಿರುವುದು ಯಡಿಯೂರಪ್ಪಗೆ ಭಾರೀ ಹಿನ್ನಡೆಯಾಗಿದೆ. ಹೈಕಮಾಂಡ್ ಮಟ್ಟದಲ್ಲಿ ಬಿಎಸ್ ವೈ ವಿರೋಧಿ ಬಿ.ಎಲ್. ಸಂತೋಷ್  ಮೇಲುಗೈ ಸಾಧಿಸಿದ್ದಾರೆ. ಆಪ್ತೆ ಶೋಭಾ ಕರಂದ್ಲಾಜೆಗೆ ಮಂತ್ರಿ ಸ್ಥಾನ ಕೊಡಿಸುವಲ್ಲಿ ಬಿಎಸ್ ವೈ ವಿಫಲರಾಗಿದ್ದಾರೆ. ಅಷ್ಟೇ ಅಲ್ಲದೇ. ಬೆಂಬಲಿಗ ಪಿ.ಸಿ. ಗದ್ದೀಗೌಡರ್ ಗೆ ಮಂತ್ರಿ ಸ್ಥಾನ ಕೊಡಿಸುವಲ್ಲೂ ಸೋತಿದ್ದಾರೆ. ಉಮೇಶ್ ಜಾಧವ್​ಗೆ ಮಂತ್ರಿ ಮಾಡುವ ಭರವಸೆಯನ್ನೂ ಬಿಎಸ್​ವೈ ನೀಡಿದ್ದರು.  ಆದರೆ, ಕೊಟ್ಟ ಮಾತು ಉಳಿಸಿಕೊಳ್ಳಲು ವಿಫಲರಾಗಿದ್ದಾರೆ.

8.ಲೋಕಸಭಾ ಚುನಾವಣೆಯ ಫಲಿತಾಂಶದ ನಂತರ ಮೊದಲ ಬಾರಿಗೆ ಮೌನ ಮುರಿದ ನಿಖಿಲ್​ ಕುಮಾರಸ್ವಾಮಿ

ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು. ಸ್ಟಾರ್ ಸ್ಪರ್ಧಿಗಳ ನಡುವಿನ ಸ್ಪರ್ಧೆಯಿಂದಾಗಿ ಸಾಕಷ್ಟು ಡೈಲಾಗ್​ ವಾರ್​ ನಡೆದಿದ್ದಂತೂ ಸತ್ಯ. ಆದರೆ ಈಗ ಜೆಡಿಎಸ್​ ಮುಖಂಡ ಹಾಗೂ ನಟ ನಿಖಿಲ್​ ಕುಮಾರಸ್ವಾಮಿ ಇದೇ ಮೊದಲ ಬಾರಿಗೆ ಚುನಾವಣಾ ಫಲಿತಾಂಶದ ಕುರಿತು ಮೌನ ಮುರಿದಿದ್ದಾರೆ. ತಮ್ಮ ಇನ್​ಸ್ಟಾಗ್ರಾಂನಲ್ಲಿ ನಿಖಿಲ್​ ಇದೇ ಮೊದಲ ಬಾರಿಗೆ ಲೋಕಸಭಾ ಚುನಾವಣೆಯ ಫಲಿತಾಂಶ ಹಾಗೂ ಮಂಡ್ಯದ ಅಭಿವೃದ್ಧಿ ಬಗ್ಗೆ ದೀರ್ಘವಾದ ಪತ್ರವನ್ನು ಬರೆದು ಪೋಸ್ಟ್ ಮಾಡಿದ್ದಾರೆ. ನಿಖಿಲ್​ ಬರೆದಿರುವ ಪೋಸ್ಟ್​ನಲ್ಲಿ ಸುಮಲತಾರ ಗೆಲುವಿಗೆ ಖುಷಿಯಾಗಿದ್ದು, ಅವರಿಗೆ ಶುಭಕೋರಿದ್ದಾರೆ. 'ಅಲ್ಲದೆ ಹೀಗೆಲ್ಲ ಬರೆಯುತ್ತಿರುವುದು ಕೇವಲ ತೋರಿಕೆಗಾಗಿ ಅಲ್ಲ. ಎಲ್ಲಕ್ಕಿಂತ ಸಂಬಂಧಗಳು ನನಗೆ ಮುಖ್ಯ ಎಂದು ನಾನು ಚುನಾವಣಾ ಪ್ರಚಾರ ಮಾಡುವಾಗಿನಿಂದಲೂ ಹೇಳುತ್ತಲೇ ಬಂದಿದ್ದೇನೆ' ಎಂದು ಬರೆದುಕೊಂಡಿದ್ದಾರೆ.

9.ಅಮರ್​ ಸಿನಿಮಾ ಬಿಗುಡೆಗೂ ಮುನ್ನ ಲಕ್ಷ ರೂಪಾಯಿ ಕೊಟ್ಟು ಮೊದಲ ಶೋ ಟಿಕೆಟ್​ ಖರೀದಿಸಿದ ಅಭಿಮಾನಿ

ಸುಮಲತಾ ಅವರಿಗೆ ಮೇ ಒಂದು ರೀತಿ ಅದೃಷ್ಟದ ತಿಂಗಳು ಎನ್ನಬಹುದು. ಹೌದು, ಒಂದು ಕಡೆ ಲೋಕಸಭಾ ಚುನಾವಣೆಯಲ್ಲಿ ಜಯಭೇರಿ, ಮತ್ತೊಂದು ಕಡೆ ಅವರ ಮಗ ಅಭಿಷೇಕ್​ ಅಭಿನಯದ 'ಅಮರ್​' ಸಿನಿಮಾ ಬಿಡುಗಡೆಯ ಹೊಸ್ತಿನಲ್ಲಿದೆ. ನಿನ್ನೆಯಷ್ಟೆ ಅಂಬಿ ಹುಟ್ಟುಹಬ್ಬವನ್ನು ಸ್ವಾಭಿಮಾನಿಗಳ ಸಮಾವೇಶದ ಹೆಸರಲ್ಲಿ ಮಂಡ್ಯದಲ್ಲಿ ಆಚರಿಸಲಾಯಿತು. ಇದರ ನಡುವೆಯೇ ಅಭಿಷೇಕ್​ ಅಭಿನಯದ ಚೊಚ್ಚಲ ಸಿನಿಮಾ ಬಿಡುಗಡೆಯಾಗುವ ಮುನ್ನವೇ ದಾಖಲೆ ಬರೆದಿದೆ. ಈ ಸಿನಿಮಾದ ಮೊದಲ ಶೋನ ಟಿಕೆಟ್​ ಅನ್ನು ಬಿಡುಗಡೆಗೆ ಮುನ್ನವೇ ಒಂದು ಲಕ್ಷ  ಕೊಟ್ಟು ಅಭಿಮಾನಿಯೊಬ್ಬರು ಖರೀದಿಸಿದ್ದಾರೆ. ಈ ಬಗ್ಗೆ ಸಂದೇಶ್​ ನಾಗರಾಜು ಅವರೇ ತಮ್ಮ ಫೇಸ್​ಬುಕ್​ನಲ್ಲಿ ಬರೆದುಕೊಂಡಿದ್ದಾರೆ.

10.ವಿಶ್ವಕಪ್ 2019 : ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಮಿಂಚು

ಲಂಡನ್ನ ಓವಲ್ ಮೈದಾನದಲ್ಲಿ ನಡೆಯುತ್ತಿರುವ ವಿಶ್ವಕಪ್ ಉದ್ಘಾಟನಾ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಇಂಗ್ಲೆಂಡ್ ತಂಡ ಉತ್ತಮ ಮೊತ್ತದತ್ತ ದಾಪುಗಾಲಿಡುತ್ತಿದೆ. ಈಗಾಗಲೇ ತಂಡದ ಮೊತ್ತ 250ರ ಗಡಿ ದಾಟಿದ್ದು ಮುನ್ನೂರರ ಅಂದಾಜಿನಲ್ಲಿದೆ. ತಂಡದ ಪರ ಜೇಸನ್ ರಾಯ್. ಜೋ ರೂಟ್. ಇಯಾನ್ ಮಾರ್ಗನ್ ಅರ್ಧಶತಕ ಬಾರಿಸಿ ಔಟ್ ಆದರೆ, ಬೆನ್ ಸ್ಟೋಕ್ಸ್ ಶತಕದತ್ತ ದಾಪುಗಾಲಿಡುತ್ತಿದ್ದಾರೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:May 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ