Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 25, 2019, 5:57 PM IST
Evening Digest : ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 25, 2019, 5:57 PM IST
  • Share this:
1.ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಹುಲ್​ ರಾಜೀನಾಮೆ ವದಂತಿ ಸುಳ್ಳು​; ಕಾಂಗ್ರೆಸ್​ ವಕ್ತಾರ ಸುರ್ಜೇವಾಲ

ಲೋಕಸಭಾ ಚುನಾವಣೆಯ ಸೋಲಿನ ಹೊಣೆ ಹೊತ್ತು ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಲು ಮುಂದಾಗಿದ್ದ ರಾಹುಲ್ ಗಾಂಧಿ​ ಮನವಿಯನ್ನು ಪಕ್ಷದ ಪ್ರಮುಖ ನಾಯಕರು ತಿರಸ್ಕರಿಸಿದ್ದಾರೆ ಎಂಬುದೆಲ್ಲಾ ಸುಳ್ಳು ವದಂತಿ ಎಂದು ಕಾಂಗ್ರೆಸ್​ ವಕ್ತಾರ ರಂದೀಪ್​ ಸುರ್ಜೇವಾಲ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಬಳಿಕ ನಡೆಯುತ್ತಿರುವ ಮೊದಲ ಕಾರ್ಯಕಾರಿಣಿ ಸಭೆಯಲ್ಲಿ ರಾಹುಲ್​ ರಾಜೀನಾಮೆ ನೀಡು ಸಾಧ್ಯತೆ ಕುರಿತು ಮಾತುಗಳು ಕೇಳಿ ಬಂದಿದ್ದವು. ರಾಜೀನಾಮೆ ನೀಡುವ ಬಗ್ಗೆ ಸಿಡಬ್ಲೂಸಿ ಸಭೆಯಲ್ಲಿ ಚರ್ಚೆ ನಡೆಸುವುದಾಗಿ ಕೂಡ ರಾಹುಲ್​ ತಿಳಿಸಿದ್ದರು. ಅದರಂತೆ ಇಂದು ನಡೆದ ಸಿಡಬ್ಲೂಸಿ ಸಭೆಯಲ್ಲಿ ತಮ್ಮ ರಾಜೀನಾಮೆ ಪ್ರಸ್ತಾಪವನ್ನು ಮುಂದಿಟ್ಟರು, ಆದರೆ, ಈ ಮನವಿಯನ್ನು ಸಭೆಯಲ್ಲಿ ಭಾಗಿಯಾಗಿದ್ದ ದೇಶದ ವಿವಿಧ ರಾಜ್ಯದ ಕಾಂಗ್ರೆಸ್​ ಧುರೀಣರು, ಪದಾಧಿಕಾರಿಗಳು ತಿರಸ್ಕರಿಸಿದ್ದಾರೆ. ಅಲ್ಲದೇ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯುವಂತೆ ಮನವೊಲಿಕೆ ಮಾಡಿದ್ದಾರೆ.

2.ಅಮೇಥಿಯಲ್ಲಿ ರಾಹುಲ್ ಸೋತರೆ ರಾಜಕೀಯ ನಿವೃತ್ತಿ ಎಂದಿದ್ದ ಸಿದ್ದು; ನೆನಪಿಸಿ ಕಾಲೆಳೆಯುತ್ತಿರುವ ನೆಟ್ಟಿಗರು

ಮಂಡ್ಯದಲ್ಲಿ ನಿಖಿಲ್ ಸೋಲನುಭವಿಸಿದರೆ ತಾವು ರಾಜಕೀಯ ನಿವೃತ್ತಿ ಘೋಷಿಸುವುದಾಗಿ ಹೇಳಿದ್ದ ಸಚಿವ ಸಿ.ಎಸ್. ಪುಟ್ಟರಾಜು ಇಂದು ಪೇಚಿಗೆ ಸಿಲುಕಿದ್ದಾರೆ. ಎಲ್ಲಾ ನೆಟ್ಟಿಗರು ಇದೀಗ ಅವರ ರಾಜಕೀಯ ನಿವೃತ್ತಿ ಯಾವಾಗ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ. ಥೇಟ್ ಇದೇ ರೀತಿಯ ಹೇಳಿಕೆ ನೀಡಿದ್ದ ಪಂಜಾಬ್ ರಾಜ್ಯ ಸಚಿವ ನವಜೋತ್ ಸಿಂಗ್ ಸಿಧು ಸಹ ಇದೀಗ ಇಂತಹದ್ದೆ ಸಂದಿಗ್ಧ ಸ್ಥಿತಿಗೆ ಒಳಗಾಗಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಮೇಥಿಯಿಂದ ರಾಹುಲ್ ವಿರುದ್ಧ ಸ್ಪರ್ಧೆ ಮಾಡಿರುವ ಸ್ಮೃತಿ ಇರಾನಿ ಗೆಲ್ಲುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ರಾಹುಲ್ ಗಾಂಧಿ ವಯನಾಡಿನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ವಾದ ಚಾಲ್ತಿಗೆ ಬಂದಿತ್ತು. ಆದರೆ, ಇದಕ್ಕೆ ಸವಾಲು ಹಾಕಿದ್ದ ಸಚಿವ ಸಿಧು, ”ರಾಹುಲ್ ಗಾಂಧಿ ಸೋಲುವುದಕ್ಕೆ ಸಾಧ್ಯವೇ ಇಲ್ಲ. ರಾಹುಲ್ ಸೋತರೆ ತಾನು ರಾಜಕೀಯ ನಿವೃತ್ತಿ ಪಡೆಯುತ್ತೇನೆ” ಎಂದು ಹೇಳಿದ್ದರು

3.ಚಂದ್ರಬಾಬು ನಾಯ್ಡು ಮಾಡಿದ ತಪ್ಪಿಗೆ ದೇವರು ಶಿಕ್ಷೆ ನೀಡಿದ್ದಾನೆ'; ವೈ.ಎಸ್​. ಜಗನ್​ ಮೋಹನ್​ ರೆಡ್ಡಿ

ಚಂದ್ರಬಾಬು ನಾಯ್ಡು ಮಾಡಿದ ತಪ್ಪುಗಳಿಗೆ ದೇವರು ಅವರಿಗೆ ತಕ್ಕ ಶಿಕ್ಷೆ ನೀಡಿದ್ದಾನೆ ಎಂದು ವೈಎಸ್​ಆರ್ ಕಾಂಗ್ರೆಸ್ ಪಕ್ಷದ ಸಂಸ್ಥಾಪಕ ಆಂಧ್ರಪ್ರದೇಶದ ನಿಯೋಜಿತ ಮುಖ್ಯಮಂತ್ರಿ ವೈ.ಎಸ್​. ಜಗನ್​ ಮೋಹನ್​ ರೆಡ್ಡಿ ಜರಿದಿದ್ದಾರೆ. ಆಂಧ್ರಪ್ರದೇಶದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ವೈಎಸ್​ಆರ್ ಕಾಂಗ್ರೆಸ್ ಪಕ್ಷದ ನಾಯಕ ಜಗನ್​ ಮೋಹನ್​ ರೆಡ್ಡಿ ಮುಂದಿನ ವಾರ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ನೂತನವಾಗಿ ಆಯ್ಕೆಯಾಗಿರುವ ಪಕ್ಷದ ಶಾಸಕ ಹಾಗೂ ಸಂಸದರ ಸಭೆಯನ್ನುದ್ದೇಶಿಸಿ ಮಾತನಾಡಿದ ಜಗನ್ ಮೋಹನ್ ರೆಡ್ಡಿ “ದೇವರ ಶಾಪದಿಂದಲೇ ಚಂದ್ರಬಾಬು ನಾಯ್ಡುವಿಗೆ ಇಂತಹ ಪರಿಸ್ಥಿತಿ ಎದುರಾಗಿದೆ” ಎಂದು ಅಭಿಪ್ರಾಯಪಟ್ಟಿದ್ದಾರೆ.4. ದನದ ಮಾಂಸ ಸಾಗಿಸುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಂ ದಂಪತಿಯನ್ನು ಅಮಾನವೀಯವಾಗಿ ಥಳಿಸಿದ ಹಲ್ಲೆಕೋರರು

ಮಧ್ಯಪ್ರದೇಶದ ಹಳ್ಳಿಯೊಂದರಲ್ಲಿ ಆಟೋ ರಿಕ್ಷಾದಲ್ಲಿ ದನದ ಮಾಂಸ ಸಾಗಿಸುತ್ತಿದ್ದರು ಎಂದು ಆರೋಪಿಸಿ ಮುಸ್ಲಿಂ ಸಮುದಾಯದ ದಂಪತಿ ಹಾಗೂ ಇಬ್ಬರು ಪುರುಷರನ್ನು ಗುಂಪೊಂದು ಅಮಾನವೀಯವಾಗಿ ಥಳಿಸಿದೆ. ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಪ್ರತ್ಯಕ್ಷದರ್ಶಿಯೊಬ್ಬರು ತಮ್ಮ ಮೊಬೈಲ್​ನಲ್ಲಿ ಸೆರೆ ಹಿಡಿದಿದ್ದಾರೆ. ಗುಂಪಿನಲ್ಲಿ ಇದ್ದವರು, ಚಪ್ಪಲಿಯಿಂದ ಮಹಿಳೆಯ ತಲೆಗೆ ಪದೆಪದೇ ಹೊಡೆದಿದ್ದಾರೆ. ಮುಖಕ್ಕೆ  ಸಣ್ಣ ಬಟ್ಟೆ ಕಟ್ಟಿಕೊಂಡಿದ್ದ ಹಲ್ಲೆಕೋರರು, ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತ ಅವರನ್ನು ಥಳಿಸಿದ್ದಾರೆ. ಇತರೆ ಮೂವರು ಪುರುಷರನ್ನು ಮರಕ್ಕೆ ಕಟ್ಟಿ ಹಾಕಿ, ಒಬ್ಬೊಬ್ಬರಾಗಿ ಮನಬಂದಂತೆ ಹಲ್ಲೆ ಮಾಡಿದ್ದಾರೆ. ಘಟನೆ ಸಂಬಂಧ ರಾಜಧಾನಿ ಭೋಪಾಲ್​ನಿಂದ 350 ಕಿ.ಮೀ. ದೂರದಲ್ಲಿರುವ ಸಿಯೊನಿ ನಗರದಲ್ಲಿ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

5.ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಸಂಪುಟ ಸರ್ಜರಿಗೆ ಮುಂದಾದ ಸಿದ್ದು-ಎಚ್​ಡಿಕೆ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಭರ್ಜರಿ ಜಯಭೇರಿ ಬಾರಿಸಿರುವ ಬಿಜೆಪಿ ಈಗಾಗಲೇ ಮೈತ್ರಿ ಸರ್ಕಾರಕ್ಕೆ ಗಡುವು ನೀಡಿದೆ. ಒಂದು ಸಂಖ್ಯಾಬಲವನ್ನು ಹೆಚ್ಚಿಸಿಕೊಂಡಿರುವ ಬಿಜೆಪಿಗೆ ಸೇರಲು ಈಗಾಗಲೇ ಅತೃಪ್ತರು ಸಿದ್ಧವಾಗಿದ್ದರೆ. ಆದರೆ, ಸರ್ಕಾರವನ್ನು ಹೇಗಾದರೂ ಉಳಿಸಿಕೊಳ್ಳಿ ಎಂದು ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಸೂಚನೆ ಹಿನ್ನೆಲೆಯಲ್ಲಿ ಮೈತ್ರಿ ನಾಯಕರು ಹೊಸ ತಂತ್ರ ಹೂಡಲು ಸಿದ್ದವಾಗಿದ್ದಾರೆ.
ಮೈತ್ರಿ ಸರ್ಕಾರ ಸಂಪುಟ ರಚನೆಯಾದ ಬಳಿಕ  ಭಿನ್ನಮತ ಭುಗಿಲೆದ್ದಿತ್ತು. ಈ ನಡುವೆ ಆಪರೇಷನ್​ ಕಮಲ ನಡೆಸಲು ಹೋದ ಬಿಜೆಪಿ ಕೂಡ ತನ್ನ ಪ್ರಯತ್ನದಲ್ಲಿ ಆತುರ ಬಿದ್ದು ಎಡವಿತು. ಆದರೆ ಈಗ ದೇಶದಲ್ಲಿ ಮೋದಿ ಅಲೆ ಕಾಣುತ್ತಿದ್ದು, ಕಾಂಗ್ರೆಸ್​ ಅತೃಪ್ತರು ಬಿಜೆಪಿ ಸೇರಲು ಸಮಯಕ್ಕೆ ಕಾಯುತ್ತಿದ್ದಾರೆ. ಈಗ ಸರ್ಕಾರ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ದೋಸ್ತಿ ನಾಯಕರು, ಅಸಮಾಧಾನಿತ ಶಾಸಕರು ಪಕ್ಷ ತೊರೆಯದಂತೆ ಸಚಿವ ಸ್ಥಾನದ ಆಮಿಷ ನೀಡಲು ಸಜ್ಜಾಗಿದ್ದಾರೆ

6.ಸಿದ್ದು ಸಿಎಂ ಆಗದಿದ್ರೆ ನಾವು ಪಕ್ಷ ಬಿಡ್ತೇವೆ ಎನ್ನುತ್ತಿರುವ ಕೈ ಶಾಸಕರು

ಕರ್ನಾಟಕ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷ ಹೀನಾಯವಾಗಿ ಸೋಲನುಭವಿಸಿದೆ. ಪರಿಣಾಮ ರಾಜ್ಯ ಸರ್ಕಾರ ಉರುಳಲಿದೆ ಎಂದೇ ಹೇಳಲಾಗುತ್ತಿತ್ತು. ಆದರೆ, ನಿನ್ನೆ ಮಧ್ಯಾಹ್ನ ಔಪಚಾರಿಕ ಸಭೆ ಬಳಿಕ ಮಾತನಾಡಿದ ಉಭಯ ಪಕ್ಷದ ನಾಯಕರು ಸರ್ಕಾರ ಮುಂದುವರೆಯಲಿದೆ ಮುಂದಿನ ನಾಲ್ಕು ವರ್ಷಕ್ಕೂ ಕುಮಾರಸ್ವಾಮಿಯೇ ಸಿಎಂ ಎಂದು ಸ್ಪಷ್ಟಪಡಿಸಿದ್ದರು. ಈ ಸಭೆಯ ನಂತರ ಮೈತ್ರಿ ಸರ್ಕಾರ ಸ್ಥಿರವಾಗಿರಲಿದೆ ಎಂದೇ ಊಹಿಸಲಾಗಿತ್ತು. ಆದರೆ, ಈ ಊಹೆಗೆ ಹಿರೆಕೆರೂರು ಶಾಸಕ ಬಿಸಿ ಪಾಟೀಲ್ ಹಾಗೂ ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ನಡೆ ತಣ್ಣೀರೆರಚುವ ಎಲ್ಲಾ ಲಕ್ಷಣಗಳನ್ನೂ ಮುಂದಿಟ್ಟಿದೆ. ಅದರಲ್ಲೂ ಬಿಸಿ ಪಾಟೀಲ್ ಹೇಳಿಕೆ ಮೈತ್ರಿ ನಾಯಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

7.ರಮೇಶ್ ಜಾರಕಿಹೊಳಿದು ಹಳೆಯ ಸಿನಿಮಾ ಎಂದು ಲೇವಡಿ ಮಾಡಿದ ಸಚಿವ ಸತೀಶ್ ಜಾರಕಿಹೊಳಿ

ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿಯದ್ದು ಹಳೆಯ ಸಿನಿಮಾ, ಹೀಗಾಗಿ ಅದು ರಿಲೀಸ್ ಆಗೋದು ನನಗೆ ಸಂದೇಹವಿದೆ. ಆದರೆ, ಏನೇ ಪ್ರಯತ್ನಿಸಿದರೂ ಮೈತ್ರಿ ಸರ್ಕಾರವನ್ನು ಬೀಳಿಸೋಕೆ ಸಾಧ್ಯವಿಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ಸ್ಪಷ್ಟಪಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಪಕ್ಷಗಳು ಹೀನಾಯವಾಗಿ ಸೋಲು ಕಂಡಿರುವ ಹಿನ್ನೆಲೆ ರಾಜ್ಯದಲ್ಲಿ ಮತ್ತೆ ಅಪರೇಷನ್​ ಕಮಲಕ್ಕೆ ಚಾಲ್ತಿ ಸಿಗಲಿದೆ, ಕಾಂಗ್ರೆಸ್ ಬಂಡಾಯ ಶಾಸಕ ರಮೇಶ್ ಜಾರಕಿಹೊಳಿ ಇದರ ನೇತೃತ್ವ ವಹಿಸಲಿದ್ದಾರೆ ಎಂದೇ ಹೇಳಲಾಗುತ್ತಿತ್ತು. ಆದರೆ, ಈ ಕುರಿತು ಬೆಳಗಾವಿಯಲ್ಲಿ ಇಂದು ಮಾತನಾಡಿರುವ ಅವರು, “ಬಹಳಷ್ಟು ಜನ ಸಿನಿಮಾ ತೆಗೆದು ಡಬ್ಬದಲ್ಲಿ ಇಟ್ಟಿರುತ್ತಾರೆ. ಆದರೆ, ಆ ಸಿನಿಮಾ ರಿಲೀಸ್ ಆಗೋದೆ ಅನುಮಾನ. ಅದೇ ರೀತಿ ರಮೇಶ್ ಜಾರಕಿಹೊಳಿ ಅವರದ್ದು ಹಳೆಯ ಸಿನಿಮಾ ಹೀಗಾಗಿ ಆ ಸಿನಿಮಾ ರಿಲೀಸ್ ಆಗೋದು ಡೌಟು” ಎಂದು ಸಹೋದರ ರಮೇಶ್ ಕುರಿತು  ವ್ಯಂಗ್ಯವಾಡಿದ್ದಾರೆ.

8. ಸಿಇಟಿ ಫಲಿತಾಂಶ ಪ್ರಕಟ: ಇಂಜಿನಿಯರಿಂಗ್ ಸೇರಿದಂತೆ 7 ವಿಭಾಗದಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ

ವೃತ್ತಿಪರ ಕೋರ್ಸ್​ಗೆ ಸಂಬಂಧಿಸಿದ 2019ರ ಸಾಮಾನ್ಯ ಪ್ರವೇಶ ಪರೀಕ್ಷಾ (ಸಿಇಟಿ) ಫಲಿತಾಂಶ ಪ್ರಕಟವಾಗಿದ್ದು ಮೊದಲ 10 ಸ್ಥಾನಗಳ ಪೈಕಿ ಬೆಂಗಳೂರಿನ 7, ಮಂಗಳೂರಿಗೆ 2 ಹಾಗೂ ಬಳ್ಳಾರಿಗೆ 1 ಸ್ಥಾನ ಲಭ್ಯವಾಗಿದೆ. ಇಂಜಿನಿಯರಿಂಗ್ ವಿಭಾಗದಲ್ಲಿ ಮಾರತ ಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜ್ ವಿದ್ಯಾರ್ಥಿ ಜಫಿನ್ ಬಿಜು ರಾಜ್ಯಕ್ಕೆ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಬಿಎಸ್ಸಿ ಕೃಷಿ ವಿಭಾಗದಲ್ಲಿ ನ್ಯಾಷನಲ್ ಪಬ್ಲಿಕ್ ಸ್ಕೂಲ್​ನ ಎಂ. ಕೀರ್ತನ ಮೊದಲ ರ್ಯಾಂಕ್​ ಗಳಿಸಿದ್ದರೆ, ನ್ಯಾಚುರೋಪತಿ ಮತ್ತು ಯೋಗ ವಿಜ್ಞಾನದಲ್ಲಿ ಮಾರತಹಳ್ಳಿಯ ಶ್ರೀ ಚೈತನ್ಯ ಟೆಕ್ನೋ ಪಿಯು ಕಾಲೇಜಿನ ಪಿ. ಮಹೇಶ್ ಆನಂದ್ ಪ್ರಥಮ ರ್ಯಾಕ್ ಗಳಿಸಿದ್ದಾರೆ. ಇನ್ನೂ ಪಶು ವೈದ್ಯಕೀಯ ಹಾಗೂ ಬಿ ಫಾರ್ಮಾ ಡಿ ಫಾರ್ಮಾದಲ್ಲೂ ಬೆಂಗಳೂರು ಮೊದಲ ಸ್ಥಾನ ಗಳಿಸಿದೆ. ಏಪ್ರಿಲ್ 29 ಹಾಗೂ 30 ರಂದು ವೈದ್ಯಕೀಯ, ದಂತವೈದ್ಯಕೀಯ, ಇಂಜಿನಿಯರಿಂಗ್​​ ಸೇರಿದಂತೆ ವೃತ್ತಿಪರ ಕೋರ್ಸ್​ಗಳಿಗೆ ಕರ್ನಾಟಕ ಪರೀಕ್ಷಾ ಇಲಾಖೆ ಸಿಇಟಿ ಪರೀಕ್ಷೆ ನಡೆಸಿತ್ತು. 431 ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿತ್ತು.ಈ ಪರೀಕ್ಷೆಗಾಗಿ 1,94,308 ಅಭ್ಯರ್ಥಿಗಳು ಅರ್ಜಿ‌ ಸಲ್ಲಿಸಿದ್ದರು, 1,80,315 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು

9.ಬಿಡುಗಡೆಗೂ ಮೊದಲೇ ದಾಖಲೆ ಬರೆದ ‘ಕಿಚ್ಚ’ ಸುದೀಪ್​ ನಟನೆಯ ‘ಪೈಲ್ವಾನ್​’

ಕಿಚ್ಚ’ ಸುದೀಪ್​ ನಟನೆಯ ಪೈಲ್ವಾನ್​ ಸಿನಿಮಾ ಬಿಡುಗಡೆ ಹಂತಕ್ಕೆ ಬಂದು ನಿಂತಿದೆ. ಸುದೀಪ್​ ಸಿನಿಮಾದಲ್ಲಿ ಕುಸ್ತಿ ಪಟು ಆಗಿ ಕಾಣಿಸಿಕೊಂಡಿದ್ದು, ಭಿನ್ನ ಶೈಲಿಯಲ್ಲಿ ಪ್ರೇಕ್ಷಕರ ಎದುರು ಬರುತ್ತಿದ್ದಾರೆ. ಈ ಸಿನಿಮಾ ಬಿಡುಡೆಗೂ ಮೊದಲೇ ಹೊಸ ದಾಖಲೆ ಬರೆಯುತ್ತಿದೆ. ಅಷ್ಟಕ್ಕೂ ‘ಪೈಲ್ವಾನ್​’ ಮಾಡಿದ ದಾಖಲೆಯಾದರೂ ಏನು? ‘ಪೈಲ್ವಾನ್​’ ಐದು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಸುದೀಪ್​ ಬಾಲಿವುಡ್​ನಲ್ಲೂ ಗುರುತಿಸಿಕೊಂಡಿರುವುದರಿಂದ ಈ ಚಿತ್ರದ ಹಿಂದಿ ಡಬ್ಬಿಂಗ್​ ರೈಟ್ಸ್​​ ದೊಡ್ಡ ಮೊತ್ತದ ಬೇಡಿಕೆ ಸೃಷ್ಟಿಯಾಗಿದೆ. ಮೂಲಗಳ ಪ್ರಕಾರ 14 ಕೋಟಿ ರೂ.ಗೆ ‘ಪೈಲ್ವಾನ್​’ ಹಿಂದಿ ಡಬ್ಬಿಂಗ್​ ಹಕ್ಕುಗಳು ಬಿಕರಿಯಾಗಿವೆ.

10.ICC Cricket World Cup 2019, ಭಾರತ-ನ್ಯೂಜಿಲೆಂಡ್ ನಡುವೆ ಅಭ್ಯಾಸ ಪಂದ್ಯ

ಲಂಡನ್​ನ ಕೆನ್ನಿಂಗ್ಟನ್ ಓವಲ್‌ನಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಟೀಂ ಇಂಡಿಯಾ ಕಳಪೆ ಆರಂಭ ಪಡೆದುಕೊಂಡಿದೆ. ಟ್ರೆಂಟ್ ಬೌಲ್ಟ್​ ಬೌಲಿಂಗ್ ದಾಳಿಗೆ ತತ್ತರಿಸಿದ ಕೊಹ್ಲಿ ಪಡೆ 50 ರನ್​ಗೂ ಮುನ್ನವೇ ತನ್ನ ಪ್ರಮುಖ 4 ವಿಕೆಟ್ ಕಳೆದುಕೊಂಡಿದೆ. ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಇದರಂತೆ ಓಪನರ್​ಗಳಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಆರಂಭದಲ್ಲೇ ಎಡವಿದರು.

ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್​​ನಲ್ಲೂ ಹಿಂಬಾಲಿಸಿ
First published:May 25, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ