Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 22, 2019, 5:56 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 22, 2019, 5:56 PM IST
  • Share this:
1. ನಾಳೆ ಲೋಕ ಸಮರದ ಫಲಿತಾಂಶ ಪ್ರಕಟ

17ನೇ ಲೋಕಸಭೆ ಚುನಾವಣೆಯ ಫಲಿತಾಂಶ ನಾಳೆ ಪ್ರಕಟವಾಗಲಿದೆ. ಬೆಳಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಸಂಜೆ 6 ಗಂಟೆಯ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ. 543 ಲೋಕಸಭಾ ಕ್ಷೇತ್ರಗಳ ಪೈಕಿ 542 ಕ್ಷೇತ್ರಗಳಿಗೆ ಏಳು ಹಂತದಲ್ಲಿ ಮತದಾನ ಕಳೆದೊಂದು ತಿಂಗಳಿಂದ ಮತದಾನ ನಡೆದಿತ್ತು. ಒಟ್ಟಾರೆ ಶೇ.67.11ರಷ್ಟು ಮತದಾನವಾಗುವ ಮೂಲಕ ಈ ಹಿಂದಿನ ಎಲ್ಲ ಚುನಾವಣೆ ಮತದಾನದ ದಾಖಲೆಗಳನ್ನು ಈ ಬಾರಿಯ ಚುನಾವಣೆ ಮುರಿದಿದೆ. ತಮಿಳುನಾಡಿನ ವೆಲ್ಲೂರು ಕ್ಷೇತ್ರದಲ್ಲಿ ಭಾರೀ ಪ್ರಮಾಣದಲ್ಲಿ ಅಕ್ರಮ ಹಣ ಪತ್ತೆಯಾದ ಹಿನ್ನೆಲೆಯಲ್ಲಿ ಈ ಒಂದು ಕ್ಷೇತ್ರದ ಚುನಾವಣೆಯನ್ನು ತಡೆಹಿಡಿಯಲಾಗಿದೆ. ಆಯಾ ಕ್ಷೇತ್ರಗಳ ಇವಿಎಂಗಳನ್ನು ಜಿಲ್ಲಾ ಕೇಂದ್ರದಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು, ನಾಳೆ ಬೆಳಗ್ಗೆ ಸರಿಯಾಗಿ ಎಂಟು ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿ, ಬೂತ್​ ಏಜೆಂಟರ ಸಮ್ಮುಖದಲ್ಲಿ ಸ್ಟ್ರಾಂಗ್​ ರೂಂ ಬಾಗಿಲು ತೆರೆಯಲಾಗುತ್ತದೆ

2.ಲೋಕಸಭೆ ಫಲಿತಾಂಶಕ್ಕೆ 2 ರಿಂದ 3 ದಿನ ತಡವಾಗಬಹುದು; ಸ್ಪಷ್ಟನೆ ನೀಡಿದ ಚುನಾವಣಾ ಆಯೋಗ

ವಿವಿಪ್ಯಾಟ್ ಪರಿಶೀಲನೆ ಕುರಿತ ವಿರೋಧ ಪಕ್ಷಗಳ ಬೇಡಿಕೆಗೆ ಸಮ್ಮತಿಸಿ ಸೂಚಿಸದರೆ ಬಹುನಿರೀಕ್ಷಿತ ಲೋಕಸಭಾ ಚುನಾವಣೆ ಫಲಿತಾಂಶವನ್ನು ನಿಖರವಾಗಿ ನೀಡಲು 2 ರಿಂದ 3 ದಿನ ತಡವಾಗಬಹುದು ಎಂದು  ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟ್ ಆದೇಶದಂತೆ ಪ್ರತಿಯೊಂದು ಮತಗಟ್ಟೆಯಲ್ಲೂ ಯಾದೃಚ್ಚಿಕವಾಗಿ ಮೊದಲು 5 ವಿವಿಪ್ಯಾಟ್​ಗಳ ಜೊತೆ ಮತಗಳನ್ನು ತಾಳೆ ಹಾಕಿ, ತದನಂತರ ಉಳಿದೆಲ್ಲಾ ಯಂತ್ರಗಳ ಮತಗಳನ್ನು ಎಣಿಸಬೇಕು. ಅಕಸ್ಮಾತ್ ಯಾವುದೇ ವಿವಿಪ್ಯಾಟ್​ ಮತಕ್ಕೂ ಇವಿಎಂ ಯಂತ್ರದಲ್ಲಿ ದಾಖಲಾಗಿರುವ ಮತಕ್ಕೂ ವ್ಯತ್ಯಾಸ ಕಂಡುಬಂದರೆ ಆ ಮತಗಟ್ಟೆಯ ಎಲ್ಲಾ ಯಂತ್ರಗಳನ್ನು ವಿವಿಪ್ಯಾಟ್​ ಜೊತೆ ತಾಳೆ ಹಾಕಿಯೇ ಫಲಿತಾಂಶ ನೀಡಬೇಕು ಎಂದು ಒತ್ತಾಯಿಸಿ 22  ವಿರೋಧ ಪಕ್ಷಗಳ ನೇತೃತ್ವದ ಆಯೋಗ ಮಂಗಳವಾರ ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಿತ್ತು.

3.ಇಸ್ರೊ ಮುಡಿಗೆ ಮತ್ತೊಂದು ಯಶಸ್ಸಿನ ಗರಿ

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ (ಇಸ್ರೊ) ಹೊಸ ಮುಕುಟ ಸೇರ್ಪಡೆಯಾಗಿದೆ. ಬುಧವಾರ ಮುಂಜಾನೆ ಭೂ ಪರಿವೀಕ್ಷಣೆ ಉಪಗ್ರಹ ರಿಸ್ಯಾಟ್​- 2ಬಿಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಬುಧವಾರ ಬೆಳಗ್ಗೆ 5.30ಕ್ಕೆ ಉಪಗ್ರಹವನ್ನು ಶ್ರೀಹರಿಕೋಟಾದಿಂದ ಹಾರಿಸಲಾಗಿದೆ. 615 ಕೆಜಿ ತೂಕ ಇರುವ ಈ ಉಪಗ್ರಹ ರಕ್ಷಣೆಗೆ ಸಂಬಂಧಿಸಿದ್ದಾಗಿದೆ. ಭಾರತೀಯ ಗಡಿ ಮೇಲೆ ಸೆಟಲೈಟ್​ ಕಣ್ಗಾವಲು ಇಡಲಿದೆ. ಇದರಿಂದ ದೇಶದ ಭದ್ರತೆಗೆ ಪುಷ್ಟಿ ಸಿಕ್ಕಂತಾಗಿದೆ. ಈ ಮೊದಲು ರಿಸ್ಯಾಟ್​-1 ಹಾಗೂ ರಿಸ್ಯಾಟ್​-2 ಉಪಗ್ರಹಗಳನ್ನು ಇಸ್ರೋ ಹಾರಿಬಿಟ್ಟಿತ್ತು. ಇವುಗಳಿಗಿಂತ ಈ ಉಪಗ್ರಹ ಹೆಚ್ಚು ಶಕ್ತಿಶಾಲಿಯಾಗಿದೆ. ರಿಸ್ಯಾಟ್​-2ಬಿ  ಹೆಚ್ಚು ನಿಖರವಾಗಿ ಫೋಟೋ ತೆಗೆಯುವ ಸಾಮರ್ಥ್ಯ ಹೊಂದಿದೆ ಎನ್ನಲಾಗಿದೆ

4.ಇವಿಎಂ ತಿರುಚುವ ಆರೋಪ; ರಾತ್ರಿಯಿಡೀ ಸ್ಟ್ರಾಂಗ್ ರೂಂ ಕಾವಲು ಕಾಯ್ದ ವಿರೋಧ ಪಕ್ಷಗಳುನಾಳೆ ಲೋಕಸಭೆ ಚುನಾವಣೆಯ ಫಲಿತಾಂಶ ಪ್ರಕಟವಾಗಲಿದ್ದು, ಹಲವು ರಾಜ್ಯಗಳಲ್ಲಿ ವಿರೋಧ ಪಕ್ಷಗಳ  ನಾಯಕರು ಇವಿಎಂಗಳನ್ನು ಇರಿಸಲಾಗಿರುವ ಸ್ಟ್ರಾಂಗ್​ ರೂಂ ಹೊರಭಾಗದಲ್ಲಿ ರಾತ್ರಿಯಿಂದ ಕಾವಲು ಕಾಯುತ್ತಿದ್ದಾರೆ. ಇವಿಎಂಗಳನ್ನು ತಿರುಚಲಾಗುತ್ತದೆ ಎಂಬ ಆರೋಪ ಕೇಳಿಬಂದ ಕಾರಣದಿಂದ ವಿರೋಧ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಇವಿಎಂ ಇರಿಸಲಾದ ಸ್ಥಳಗಳಲ್ಲಿ ಕಾವಲಿದ್ದಾರೆ. ಹಾಗೆಯೇ ಉತ್ತರಪ್ರದೇಶದಲ್ಲಿ ಇವಿಎಂಗಳನ್ನು ಅಕ್ರಮವಾಗಿ ಸಾಗಿಸಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆದ ಬಳಿಕ ಇದಕ್ಕೆ ಪ್ರತಿಭಟನೆಯನ್ನೂ ಮಾಡಲಾಗಿದೆ.

5.ಸುಪ್ರೀಂ ಆದೇಶಕ್ಕೆ ಬೆನ್ನು ತೋರಿಸಿದ ಆಯೋಗ; ಮತ ಎಣಿಕೆಗೆ ಮುಂಚೆಯೇ ವಿವಿಪ್ಯಾಟ್ ತಾಳೆಗೆ ವಿರೋಧ ಪಕ್ಷಗಳ ಪಟ್ಟು

ಚುನಾವಣೆ ಮತ ಎಣಿಕೆಗೆ ಮುಂಚಿತವಾಗಿಯೇ ಆಯ್ದ 5 ವಿವಿಪ್ಯಾಟ್ ಯಂತ್ರಗಳ ಮತಗಳನ್ನು ತಾಳೆ ಹಾಕಬೇಕು. ಮತಗಳು ತಾಳೆಯಾದ ನಂತರವೇ ಉಳಿದ ಎಲ್ಲಾ ಯಂತ್ರಗಳ ಮತ ಎಣಿಕೆ ನಡೆಸಬೇಕು ಎಂದು ಒತ್ತಾಯಿಸಿ 22 ವಿರೋಧ ಪಕ್ಷಗಳು ಚುನಾವಣಾ ಆಯೋಗದ ಮೊರೆ ಹೋಗಿವೆ. ಅಲ್ಲದೆ ವಿವಿಪ್ಯಾಟ್ ಪರಿಶೀಲನೆ ಸಮಯದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದರೆ, ಆ ಮತಗಟ್ಟೆಯ ಎಲ್ಲಾ ಮತಯಂತ್ರಗಳ ಜೊತೆಗೂ ಶೇ.100 ರಷ್ಟು ವಿವಿಪ್ಯಾಟ್​ ಮತಗಳನ್ನು ಖಡ್ಡಾಯವಾಗಿ ತಾಳೆ ಹಾಕಬೇಕು. ಆ ನಂತರವೇ ಫಲಿತಾಂಶ ಘೋಷಿಸಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ.

6.ಸರ್ಕಾರಿ ಶಾಲೆಯಲ್ಲಿ ಇಂಗ್ಲಿಷ್ ಬೋಧನೆಗೆ ನನ್ನ ವಿರೋಧವಿದೆ, ಕನ್ನಡ ಭಾಷೆ ವಿಚಾರದಲ್ಲಿ ರಾಜಿಯಾಗಲ್ಲ; ಸಿದ್ದರಾಮಯ್ಯ

"ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ.  ಕನ್ನಡ ಭಾಷೆ, ನೆಲ, ಜಲದ ವಿಚಾರದಲ್ಲಿ ನಾವು ರಾಜಿ ಆಗಲ್ಲ. ನಾವು ಸಾಮಾನ್ಯ ಕನಿಷ್ಠ ಕಾರ್ಯಕ್ರಮ ಜಾರಿ ಮಾಡಿದ್ದೇವೆ. ಅದರಲ್ಲಿ ಈ ವಿಚಾರ ಇಲ್ಲ. ಆದ್ದರಿಂದ ಮುಖ್ಯಮಂತ್ರಿಯೊಂದಿಗೆ ನಾನು ಮಾತನಾಡುತ್ತೇನೆ" ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಮೈಸೂರಿನ ನೃಪತುಂಗ ಕನ್ನಡ ಮಾಧ್ಯಮ ಇಂಗ್ಲಿಷ್ ಪದವಿ ಪೂರ್ವ ಕಾಲೇಜು ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್​ ಮಾಧ್ಯಮ ಬೋಧನೆಗೆ ನನ್ನ ವಿರೋಧವಿದೆ ಎಂದು ಹೇಳುವ ಮೂಲಕ ಮೈತ್ರಿ ಸರ್ಕಾರದ ನಿರ್ಧಾರಕ್ಕೆ ತನ್ನ ಸಹಮತವಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು.

7.ಮಂಡ್ಯ ಫಲಿತಾಂಶದ ಮೇಲೆ ಸರ್ಕಾರದ ಭವಿಷ್ಯ ನಿಂತಿಲ್ಲ'; ಅನಿತಾ ಕುಮಾರಸ್ವಾಮಿ

ಮಂಡ್ಯದಲ್ಲಿ ನಿಖಿಲ್ ಗೆಲ್ಲುವುದು​ ನೂರಕ್ಕೆ ನೂರು ಖಚಿತ. ಮಂಡ್ಯ ಫಲಿತಾಂಶದ ಮೇಲೆ ಸರ್ಕಾರದ ಭವಿಷ್ಯ ನಿಂತಿಲ್ಲ ಎಂದು ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದ್ದಾರೆ. ಆ ಮೂಲಕ ಮಂಡ್ಯದ ಸೋಲು ಗೆಲುವಿನ ಮೇಲೆ ಸರ್ಕಾರದ ಭವಿಷ್ಯ ನಿಂತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೊತೆಗೆ ತಮ್ಮ ಮಗನ ಗೆಲುವಿನ ಬಗ್ಗೆ ಸಂಪೂರ್ಣ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಲೋಕಸಭಾ ಚುನಾವಣಾ ಫಲಿತಾಂಶ ಹಿನ್ನೆಲೆ, ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಸಿಎಂ ಪತ್ನಿ ಅನಿತಾ ಕುಮಾರಸ್ವಾಮಿ ಹಾಗೂ ಮಗ ನಿಖಿಲ್ ಕುಮಾರಸ್ವಾಮಿ ಟೆಂಪಲ್​ ರನ್​ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನೂರಕ್ಕೆ ನೂರು ಗೆದ್ದೇ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ ಮೈತ್ರಿ ಸರ್ಕಾರ ಬೀಳಲ್ಲ, ಐದು ವರ್ಷ ಪೂರೈಸಲಿದೆ ಎಂದು ಹೇಳಿದರು.

8.ನಾಳೆ ಸಂಜೆಯವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ, ನಂತರ ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧವಾಗಲಿದೆ; ಸದಾನಂದಗೌಡ

ಫಲಿತಾಂಶ ಪ್ರಕಟವಾದ ಬಳಿಕ ಯಾವ್ಯಾವ ರಾಜ್ಯದಲ್ಲಿ ಸಿಎಂಗಳು ಅಧಿಕಾರ ಕಳೆದುಕೊಳ್ಳುತ್ತಾರೋ ಅವರು ತಿರುಗಾಡಲೇಬೇಕು ಎಂದು ಸದಾನಂದಗೌಡ ಹೇಳಿದರು. ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಮತ್ತು ದೇವೇಗೌಡರ ಭೇಟಿ ವಿಚಾರವಾಗಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಬಾಬು ನಾಯ್ಡು ಅವರಿಗೆ ಬೇರೆ ಕೆಲಸ ಇಲ್ಲ. ಚಂದ್ರಬಾಬು ನಾಯ್ಡು ಅವರ ಮನಸ್ಥಿತಿಯೇ ಕುಮಾರಸ್ವಾಮಿ ಅವರಲ್ಲೂ ಇದೆ. ನಾಯ್ಡು ಇಮೇಜ್ ಕಳೆದುಕೊಂಡಿದ್ದಾರೆ. ಅಧಿಕಾರ ಕಳೆದುಕೊಳ್ಳುತ್ತಿರುವವರು ಒಂದೆಡೆ ಸೇರುತ್ತಿದ್ದಾರೆ. ನಾಳೆ ಸಂಜೆವರೆಗೆ ಮಾತ್ರ ಕುಮಾರಸ್ವಾಮಿ ಸಿಎಂ ಆಗಿರುತ್ತಾರೆ. ನಾಡಿದ್ದು ಕುಮಾರಸ್ವಾಮಿ ರಾಜೀನಾಮೆ ಕೊಡ್ತಾರೆ, ಹೊಸ ಸರ್ಕಾರಕ್ಕೆ ವೇದಿಕೆ ಸಿದ್ಧ ಆಗುತ್ತದೆ ಎಂದು ಭವಿಷ್ಯ ನುಡಿದರು.

9.ನಿರೀಕ್ಷಿಸಿ ಜಗ್ಗೇಶ್​ರ ಆತ್ಮಕತೆ: 'ನವರಸ ನಾಯಕನ ನಾಲ್ಕು ಹೆಜ್ಜೆ'ಯಾಗಿ ಜಗ್ಗಣ್ಣನ ಜೀವನದ ಕತೆ..!​

ನಟ ಜಗ್ಗೇಶ್​ ಅವರು ಆಗಾಗ ತಮ್ಮ ಜೀವನದಲ್ಲಿ ಘಟಿಸಿದ ಘಟನೆಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ, ಸಂದರ್ಶನಗಳಲ್ಲಿ ಹೇಳಿಕೊಳ್ಳುತ್ತಲೇ ಇರುತ್ತಾರೆ. ಅವರು ಸವೆಸಿದ ಹಾದಿ ಹೂವಿನ ಹಾಸಿಗೆಯಾಗಿರಲಿಲ್ಲ ಎನ್ನುವುದು ಅವರ ಅನುಭವಗಳನ್ನು ಕೇಳಿದವರಿಗೆ ಪ್ರತ್ಯೇಕವಾಗಿ ಹೇಳಬೇಕಿಲ್ಲ. ರಾಜಕೀಯಕ್ಕೆ ಬಂದರೂ ಕಲಾಸೇವೆಯನ್ನು ಮರೆಯದ ನಟ ಜಗ್ಗೇಶ್​. ಇಂದು ಸುಖದ ಸೋಪಾನದಲ್ಲಿದ್ದರೂ, ಒಂದು ಕಾಲದಲ್ಲಿ ಒಂದೊತ್ತಿನ ಊಟಕ್ಕೂ ಕಷ್ಟಪಡುವ ದಿನಗಳನ್ನು ಕಂಡವರು. ಕಷ್ಟಪಟ್ಟು ಹಂತ ಹಂತವಾಗಿ ಬೆಳೆದ ಜಗ್ಗೇಶ್​ರ ಬದುಕು ಹಲವರಿಗೆ ಸ್ಫೂರ್ತಿ. ಜಗ್ಗೇಶ್​ ತಮ್ಮ ಜೀವನದ ಹಳೇ ದಿನಗಳನ್ನು ನೆನಪಿಸಿಕೊಂಡಾಗ, ಅವರ ಆತ್ಮಕತೆ ಬಗ್ಗೆ ಸಾಕಷ್ಟು ಮಂದಿ ಅವರನ್ನು ಪ್ರಶ್ನಿಸಿರಬಹುದು. ಆದರೆ ಇತ್ತೀಚೆಗೆ ಒಬ್ಬರು ಜಗ್ಗೇಶ್​ ಅವರ ಒಂದು ಟ್ವೀಟ್​ ಒಂದಕ್ಕೆ ಪ್ರತಿಕ್ರಿಯಿಸುವಾಗ, ಅವರ ಆತ್ಮಕತೆ ಬಗ್ಗೆ ಪ್ರಶ್ನಿಸಿದ್ದಾರೆ.

10.27 ವರ್ಷಗಳ ಬಳಿಕ ತಮ್ಮ ಹಿಂದಿನ ಜೆರ್ಸಿಗೆ ಮರಳಿದ ಇಂಗ್ಲೆಂಡ್

2019 ರ ವಿಶ್ವಕಪ್​ಗೆ ದಿನಗಣನೆ ಆರಂಭವಾಗಿದೆ. ತವರಿನಲ್ಲಿ ನಡೆಯಲಿರುವ ಪ್ರತಿಸ್ಠಿತ ವಿಶ್ವಕಪ್​ಗಾಗಿ ಇಂಗ್ಲೆಂಡ್ ಸಕಲ ಸಿದ್ಧತೆಯಲ್ಲಿದ್ದು, ಇದೀಗ ತಂಡ ಹೊಸ ಜೆರ್ಸಿಯನ್ನು ಬಿಡುಗಡೆಗೊಳಿಸಿ ಗಮನ ಸೆಳೆದಿದೆ. 1992 ರ ವರ್ಲ್ಡ್​​ಕಪ್​ ನಲ್ಲಿ ಆಂಗ್ಲರು ತೊಟ್ಟಿದ್ದ ಉಡುಗೆಯಿಂದ ಸ್ಪೂರ್ತಿ ಪಡೆದು ಹೊಸ ಜೆರ್ಸಿಯನ್ನು ವಿನ್ಯಾಸಗೊಳಿಸಲಾಗಿದೆ. ಈ ಹಿಂದೆ ಗಾಢ ನೀಲಿ ಬಣ್ಣದೊಂದಿಗೆ ಕಣಕ್ಕಿಳಿಯುತ್ತಿದ್ದ ಇಂಗ್ಲೆಂಡ್ ತಂಡ ಈ ಬಾರಿ ತೆಲು ನೀಲಿ ಜೆರ್ಸಿಯಲ್ಲಿ ಮೈದಾನಕ್ಕಿಳಿಯಲಿದೆ. ಹೊಸ ಜೆರ್ಸಿಯಲ್ಲಿ ನಾಯಕ ಇಯಾನ್ ಮೋರ್ಗನ್, ವಿಕೆಟ್​ ಕೀಪರ್ ಜಾನಿ​​ ಬೇರ್​ಸ್ಟೊ ಮತ್ತು ಆದಿಲ್ ರಶೀದ್ ಕಾಣಿಸಿಕೊಂಡಿದ್ದು, ನೂತನ ವಿನ್ಯಾಸವು ಎಲ್ಲರ ಗಮನ ಸೆಳೆದಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'
First published:May 22, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ