Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 20, 2019, 5:46 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 20, 2019, 5:46 PM IST
  • Share this:
1.  ನಟ ಕಮಲ್​ ಗೆ ಷರತ್ತು ಬದ್ಧ ಜಾಮೀನು

ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತು ಚುನಾವಣಾ ಪ್ರಚಾರದ ವೇಳೆ ವಿವಾದಾತ್ಮ ಹೇಳಿಕೆ ನೀಡುವ ಮೂಲಕ ದೇಶದಾದ್ಯಂತ ಸದ್ದು ಮಾಡಿದ್ದ ನಟ ರಾಜಕಾರಣಿ ಕಮಲ್​ ಹಾಸನ್​ಗೆ ಮದ್ರಾಸ್ ಹೈಕೋರ್ಟ್​ನ ಮಧುರೈ ಪೀಠ ಷರತ್ತು ಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶಿಸಿದೆ. ಕಳೆದ 12ನೇ ತಾರೀಖು ತಿರುಪ್ಪರಗುಂಡ್ರಂ ವಿಧಾನಸಭಾ ಕ್ಷೇತ್ರದಲ್ಲಿ ತನ್ನ ಪಕ್ಷದ ಅಭ್ಯರ್ಥಿ ಪರ ಪ್ರಚಾರದ ವೇಳೆ ಮಾತನಾಡಿದ್ದ ಕಮಲ್ ಹಾಸನ್​ “ನಾನು ಇದು ಮುಸ್ಲೀಮರ ಪ್ರದೇಶ ಎಂಬ ಕಾರಣಕ್ಕೆ ಈ ಹೇಳಿಕೆ ನೀಡುತ್ತಿಲ್ಲ. ಗಾಂಧಿಯ ಪ್ರತಿಮೆಯ ಮುಂದೆ ನಿಂತು ಹೇಳುತ್ತಿದ್ದೇನೆ. ಸ್ವತಂತ್ರ್ಯ ಭಾರತದ ಮೊದಲ ಉಗ್ರ ಓರ್ವ ಹಿಂದು. ಆತನ ಹೆಸರು ನಾಥೂರಾಮ್​ ಗೋಡ್ಸೆ. ನಾನು ಮಹಾತ್ಮಾ ಗಾಂಧಿಯ ಮೊಮ್ಮಗನಾಗಿ ಆ ಹತ್ಯೆಗೆ ನ್ಯಾಯ ಕೇಳಲು ಇಲ್ಲಿಗೆ ಬಂದಿದ್ದೇನೆ” ಎಂದು ಹೇಳಿಕೆ ನೀಡಿದ್ದರು. ನಂತರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು

2. ಮಹಾ ಮೈತ್ರಿಗೆ ಆರಂಭದಲ್ಲೇ ವಿಘ್ನ; ಸೋನಿಯಾ ಭೇಟಿ, ಕಾಂಗ್ರೆಸ್ ಜೊತೆಗಿನ ಮೈತ್ರಿ ಸಾಧ್ಯವಿಲ್ಲ ಎಂದ ಮಾಯಾವತಿ

ಚುನಾವಣೋತ್ತರ ಸಮೀಕ್ಷೆಗಳ ಹಿನ್ನೆಲೆಯಲ್ಲಿ ಬಿಎಸ್​ಪಿ ಪಕ್ಷದ ಮುಖ್ಯಸ್ಥೆ ಮಾಯಾವತಿ ಸೋಮವಾರ ದೆಹಲಿಯಲ್ಲಿ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ಮಾಯಾವತಿ ಇದನ್ನು ತಳ್ಳಿ ಹಾಕಿದ್ದು ಸೋನಿಯಾ ಗಾಂಧಿ ಜೊತೆಗೆ ಯಾವುದೇ ಭೇಟಿ ಇಲ್ಲ ಎಂದು ವದಂತಿಗಳನ್ನು ಅಲ್ಲಗೆಳೆದಿದ್ದಾರೆ. ಸೋಮವಾರ ದೆಹಲಿಯಲ್ಲಿ ಮಾಯಾವತಿಗೆ ಯಾವುದೇ ಕಾರ್ಯಕ್ರಮವಿಲ್ಲ. ಸೋನಿಯಾ ಗಾಂಧಿಯನ್ನು ಭೇಟಿಯಾಗುವುದಿಲ್ಲ. ಬದಲಿಗೆ ಇಡೀ ದಿನ ಅವರು ಲಕ್ನೋದಲ್ಲೇ ಇರಲಿದ್ದಾರೆ ಎಂದು ಬಿಎಸ್​ಪಿ ನಾಯಕ ಸತೀಶ್ ಚಂದ್ರ ಸ್ಪಷ್ಟಪಡಿಸಿದ್ದಾರೆ.

3.ಅವಕಾಶ ವಂಚಿತ ವಿದ್ಯಾರ್ಥಿಗಳಿಗೆ ಇಂದು ನೀಟ್​ ಮರುಪರೀಕ್ಷೆ

ರೈಲು ವಿಳಂಬದಿಂದ ವೈದ್ಯ ಹಾಗೂ ದಂತ ವೈದ್ಯಕೀಯ ಕೋರ್ಸ್​​ಗಳ ಪ್ರವೇಶಕ್ಕೆ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯಿಂದ(ನೀಟ್​​ ಪರೀಕ್ಷೆ) ವಂಚಿತರಾದ ಅಭ್ಯರ್ಥಿಗಳಿಗೆ ಇಂದು ಬೆಂಗಳೂರಿನಲ್ಲಿ ನೀಟ್​ ಮರುಪರೀಕ್ಷೆ ನಡೆಯುತ್ತಿದೆ. ಹಂಪಿ ಎಕ್ಸ್​ಪ್ರೆಸ್​​ ರೈಲು 7 ಗಂಟೆ ತಡವಾಗಿ ಬೆಂಗಳೂರಿಗೆ ಬಂದ ಕಾರಣ ಸುಮಾರು 500 ವಿದ್ಯಾರ್ಥಿಗಳು ಮೇ 5 ರಂದು ಬರೆಯಬೇಕಿದ್ದ ನೀಟ್​ ಪರೀಕ್ಷೆಯಿಂದ ವಂಚಿತರಾಗಿದ್ದರು. ಬೆಳಗ್ಗೆ 7.30 ಕ್ಕೆ ತಲುಪಬೇಕಿದ್ದ ರೈಲು ಮಧ್ಯಾಹ್ನ 2.30 ಕ್ಕೆ ಆಗಮಿಸಿತ್ತು. ರೈಲು ಬೆಂಗಳೂರಿಗೆ ಆಗಮಿಸುವ ವೇಳೆಗೆ ಪರೀಕ್ಷೆ ಪ್ರಾರಂಭವಾಗಿತ್ತು. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲುಪಲಾಗದೆ, ಪರೀಕ್ಷೆಯಿಂದ ವಂಚಿತರಾಗಿದ್ದರು.

4. ಭವಿಷ್ಯ ನುಡಿದ ಸಚಿವ ರಾಜ್ಬರ್​ನ​ನ್ನು ಸಂಪುಟದಿಂದ ಕಿತ್ತೊಗೆದ ಯೋಗಿಉತ್ತರ ಪ್ರದೇಶದಲ್ಲಿ ಎಸ್ಪಿ-ಬಿಎಸ್ಪಿ ಮೈತ್ರಿ ಪಕ್ಷ ಗೆಲುವು ಸಾಧಿಸಲಿದೆ ಎಂದು ಭವಿಷ್ಯ ನುಡಿದಿದ್ದ, ಯೋಗಿ​ ಸರ್ಕಾರದ ಹಿಂದುಳಿದ ವರ್ಗಗಳ ಮತ್ತು ದಿವ್ಯಜ್ಞಾನ ಸಬಲೀಕರಣ ಸಚಿವ ಒಪಿ ರಾಜ್ಬರ್​ ನನ್ನು ಆದಿತ್ಯನಾಥ್ ಸಂಪುಟದಿಂದ ಕಿತ್ತೊಗೆದಿದ್ದಾರೆ. ಸುಹೆಲ್ದೇವ್​ ಭಾರತೀಯ ಸಮಾಜಪಕ್ಷ ನಾಯಕ ಓಂ ಪ್ರಕಾಶ್​​ ರಾಜ್ಬರ್​ನ್ನು ಸಂಪುಟದಿಂದ ಕೈ ಬಿಡುವ ಕುರಿತು ಸಿಎಂ ಯೋಗಿ ರಾಜ್ಯಪಾಲರ ಬಳಿ ಮನವಿ ಮಾಡಿದ್ದರು. ಈ ಮನವಿಯನ್ನು ರಾಜ್ಯಪಾಲರು ಅಂಗೀಕರಿಸಿದ್ದು, ಅವರನ್ನು ಸಂಪುಟದಿಂದ ಕೈ ಬಿಡಲಾಗಿದೆ. ಈ ಕುರಿತು ಯೋಗಿ ಟ್ವಿಟರ್​ನಲ್ಲಿ ಅಧಿಕೃತವಾಗಿ ತಿಳಿಸಿದ್ದಾರೆ.

5. ಮಧ್ಯಪ್ರದೇಶ; ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತುಪಡಿಸಲು ಕೋರಿ ರಾಜ್ಯಪಾಲರಿಗೆ ಪತ್ರ ಬರೆದ ಬಿಜೆಪಿ

ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದ ಬೆನ್ನಲ್ಲೇ ಮಧ್ಯಪ್ರದೇಶದಲ್ಲಿ ಮಹತ್ವದ ರಾಜಕೀಯ ಬೆಳವಣಿಗೆಗಳು ಜರುಗಿವೆ. ಮಧ್ಯಪ್ರದೇಶ ಸರ್ಕಾರಕ್ಕೆ ಬೇಕಾದ ಬಹುಮತವಿಲ್ಲ ಎಂದು ಆರೋಪಿಸಿರುವ ಬಿಜೆಪಿ, ವಿಧಾನಸಭೆ ವಿಶೇಷ ಅಧಿವೇಶನ ಕರೆಯುವಂತೆ ರಾಜ್ಯಪಾಲರಿಗೆ ಪತ್ರ ಬರೆದಿದೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್​​ ಸರ್ಕಾರ ಹೆಚ್ಚು ದಿನ ಉಳಿಯುವುದಿಲ್ಲ. ಬಹುಬೇಗ ಪತನವಾಗಲಿದೆ ಎಂದು ಸಹ ಹೇಳಿದೆ. ವಿಪಕ್ಷ ನಾಯಕ ಗೋಪಾಲ್​ ಭಾರ್ಗವ್​ ರಾಜ್ಯಪಾಲ ಆನಂದಿಬೇನ್​ ಪಟೇಲ್​ ಅವರಿಗೆ ಪತ್ರ ಬರೆದಿದ್ದಾರೆ. ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲನಾಥ್ ನೇತೃತ್ವದ ಸರ್ಕಾರ​ ಬಹುಮತ ಹೊಂದಿಲ್ಲ. ವಿಧಾನಸಭೆ ವಿಶೇಷ ಅಧಿವೇಶನ ಕರೆದು ಬಹುಮತ ಸಾಬೀತು ಪಡಿಸುವಂತೆ ತಾಕೀತು ಮಾಡಿದ್ದಾರೆ.

6. ಚುನಾವಣೋತ್ತರ ಸಮೀಕ್ಷೆಯಲ್ಲಿ ಎನ್​ಡಿಎಗೆ ಬಹುಮತ; ಏರಿಕೆ ಕಂಡ ಷೇರು ಮಾರುಕಟ್ಟೆ, ಸೆನ್ಸೆಕ್ಸ್​ 1000 ಅಂಶ ಹೆಚ್ಚಳ
17ನೇ ಲೋಕಸಭಾ ಚುನಾವಣೆಯ ಫಲಿತಾಂಶಕ್ಕೆ ಇನ್ನು ಮೂರು ದಿನ ಬಾಕಿ ಇರುವಂತೆ ಭಾನುವಾರ ಪ್ರಕಟವಾದ ಚುನಾವಣೋತ್ತರ ಫಲಿತಾಂಶ ದೇಶೀಯ ಷೇರು ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ. ಚುನಾವಣೋತ್ತರ ಫಲಿತಾಂಶ ಪ್ರಕಟವಾಟ ಮರುದಿನ ಆರಂಭವಾದ ಬಿಎಸ್​ಇ ವಹಿವಾಟಿನಲ್ಲಿ ಸೆನ್ಸೆಕ್ಸ್​ 1000ಕ್ಕೂ ಹೆಚ್ಚು ಅಂಶ ಏರಿಕೆ ಕಂಡಿದೆ. ಎಸ್​ ಮತ್ತು ಪಿ ಬಿಎಸ್​ಇ ಸೆನ್ಸೆಕ್ಸ್​ 1,041.98 ಅಂಶ ಏರಿಕೆಯಾಗುವ ಮೂಲಕ 38,972.75 ಅಂಶ ತಲುಪಿದೆ. ಮತ್ತು ಎನ್​ಎಸ್​ಇ ನಿಫ್ಟಿ 11,713.90ಕ್ಕೆ ಏರಿಕೆಯಾಗುವ ಮೂಲಕ 306.75 ಅಂಶ ತಲುಪಿ ದಿನದ ವಹಿವಾಟು ಅಂತ್ಯಗೊಳಿಸಿತು. ಚುನಾವಣೆ ಫಲಿತಾಂಶದವರೆಗೂ ಮಾರುಕಟ್ಟೆ ಇದೇ ಸ್ಥಿತಿ ಕಾಯ್ದುಕೊಳ್ಳಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.


7. ಚುನಾವಣೋತ್ತರ ಸಮೀಕ್ಷೆಯೇ ಬೇರೆ, ವಸ್ತುಸ್ಥಿತಿಯೇ ಬೇರೆ; ಎಕ್ಸಿಟ್​ ಪೋಲ್​ ಬಗ್ಗೆ ಪರಮೇಶ್ವರ್​ ಮಾತು

ಲೋಕಸಭಾ ಚುನಾವಣೆಯ ಏಳನೇ ಹಂತ ಮತದಾನ ಬುಧವಾರ ಪೂರ್ಣಗೊಂಡಿದ್ದು, ಫಲಿತಾಂಶಕ್ಕೆ ಕ್ಷಣಗಣನೆ ಶುರುವಾಗಿದೆ. ಫಲಿತಾಂಶ ಬಗ್ಗೆ ದೇಶದ ಜನರು ಸೇರಿದಂತೆ ರಾಜಕೀಯ ನಾಯಕರು ಬಹಳ  ನಿರೀಕ್ಷೆಯಲ್ಲಿದ್ದಾರೆ. ಈ ಮಧ್ಯೆ, ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿದ್ದು, ಮೈತ್ರಿ ನಾಯಕರಲ್ಲಿ ಆತಂಕ ಸೃಷ್ಟಿಯಾಗಿದೆ. ಎಕ್ಸಿಟ್​ ಪೋಲ್​ ಕುರಿತು ಡಿಸಿಎಂ ಪರಮೇಶ್ವರ್​​ ಮಾತನಾಡಿದ್ದು, ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ಧಾರೆ. " ಬಿಜೆಪಿ ಅಧ್ಯಕ್ಷರು ಸಮೀಕ್ಷೆಯನ್ನು ಹೇಳಿ ಮಾಡಿಸಿದ ಹಾಗಿದೆ. ಆದರೆ ದೇಶದಲ್ಲಿ ವಸ್ತುಸ್ಥಿತಿ ಬೇರೆ ರೀತಿಯಲ್ಲಿದೆ. ಮೇ 23 ರಂದು ಫಲಿತಾಂಶ ಬಂದ ಬಳಿಕ ಚಿತ್ರಣ ಗೊತ್ತಾಗಲಿದೆ. ರಾಜ್ಯದಲ್ಲಿ ಬಿಜೆಪಿಗೆ 18 ಸೀಟು ಬರುತ್ತೆಂದರೆ ನಂಬಲು ಸಾಧ್ಯವಾ," ಎಂದು ಡಿಸಿಎಂ ಪರಮೇಶ್ವರ್​ ಪ್ರಶ್ನಿಸಿದ್ದಾರೆ

8. ಎನ್​ಡಿಎ 225 ಸ್ಥಾನಗಳಲ್ಲಿ ಗೆದ್ದರೆ ಹೆಚ್ಚು; ಗೃಹ ಸಚಿವ  ಎಂಬಿ ಪಾಟೀಲ್ ಭವಿಷ್ಯ

"ಚುನಾವಣೋತ್ತರ ಸಮೀಕ್ಷೆಗಳ ಮೇಲೆ ನಮಗೆ ನಂಬಿಕೆ ಇಲ್ಲ. ನಮ್ಮ ಪ್ರಕಾರ ಎನ್​ಡಿಎ ಮೈತ್ರಿ ಕೂಟ ಒಟ್ಟಾರೆ 225 ಸ್ಥಾನಗಳಲ್ಲಿ ಗೆದ್ದರೆ ಹೆಚ್ಚು" ಎಂದು ರಾಜ್ಯ ಗೃಹಖಾತೆ ಸಚಿವ ಎಂ.ಬಿ. ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. ಕೊನೆಯ ಹಂತದ ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ದೇಶದಾದ್ಯಂತ ಚುನಾವಣೋತ್ತರ ಸಮೀಕ್ಷೆಗಳದ್ದೆ ಸದ್ದು ಎಂಬಂತಾಗಿದೆ. ರಾಷ್ಟ್ರ ಮಟ್ಟದ ಎಲ್ಲಾ ಸಮೀಕ್ಷೆಗಳು ಬಿಜೆಪಿ ಹಾಗೂ ಎನ್​ಡಿಎ ಮೈತ್ರಿ ಕೂಟಕ್ಕೆ ಹೆಚ್ಚು ಬಹುಮತ ನೀಡಿವೆ. ಆದರೆ, ಈ ಸಮೀಕ್ಷೆಗಳನ್ನು ಕಾಂಗ್ರೆಸ್ ಹಾಗೂ ಇತರೆ ನಾಯಕರು ಅಲ್ಲಗೆಳೆದಿದ್ದಾರೆ.

9. ಯುವರತ್ನ ಚಿತ್ರದಲ್ಲಿ ಅಪ್ಪು ಹೊಸ ಲುಕ್​ ಹೇಗಿದೆ ಗೊತ್ತಾ..?

ಯುವರತ್ನ' ಪುನೀತ್​ ರಾಜ್​ಕುಮಾರ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ. ಸಂತೋಷ್​ ರಾಮ್​ ನಿದೇರ್ಶನದಲ್ಲಿ ಮೂಡಿಬರಲಿರುವ ಈ ಚಿತ್ರದಲ್ಲಿ ಪುನೀತ್​ ಕಾಲೇಜು ವಿದ್ಯಾರ್ಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾದಲ್ಲಿ ಪುನೀತ್​ ಹೇಗೆ ಕಾಣಿಸಿಕೊಳ್ಳಲಿದ್ದಾರೆ ಅಂತ ಚಿತ್ರದ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಒಂದು ಪುಟ್ಟ ಸ್ಯಾಂಪಲ್​ ಕೊಟ್ಟಿದ್ದಾರೆ. ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಟ್ವೀಟ್​ ಮಾಡಿರುವ ಪುನೀತ್​ ಅವರ ಯಂಗ್​ ಲುಕ್​ನ ಈ ಚಿತ್ರ ಈಗ ವೈರಲ್​ ಆಗುತ್ತಿದೆ. ಹೌದು, ಈಗ ಅಪ್ಪು ಅಭಿಮಾನಿಗಳು ತಮ್ಮ ವಾಟ್ಸ್​ಆ್ಯಪ್​ ಡಿಪಿ, ಫೇಸ್​ಬುಕ್​, ಟ್ವಿಟರ್​ನಲ್ಲಿ ಪುನೀತ್​ರ ಈ ಚಿತ್ರವೇ ಹರಿದಾಡುತ್ತಿದೆ. ಇನ್ನೂ ಈ ಸಿನಿಮಾದ ಚಿತ್ರೀಕರಣ ಆರಂಭವಾಗಿಲ್ಲ. ಶೂಟಿಂಗ್​ಗಾಗಿ ನಿರ್ದೇಶಕ ಸಂತೋಷ್​ ರಾಮ್​, ಕಲಾ ನಿರ್ದೇಶಕ ಶಿವಕುಮಾರ್​ ಅವರೊಂದಿಗೆ ಲೊಕೇಶನ್​ ಹುಡುಕಾಟದಲ್ಲಿ ನಿರತರಾಗಿದ್ದಾರೆ

10.ವಿಶ್ವದ ನಂ.1 ಆಟಗಾರನನ್ನು ಸೋಲಿಸಿ ಇಟಾಲಿಯನ್ ಒಪನ್ ಪ್ರಶಸ್ತಿ ಮುಡಿಗೇರಿಸಿದ ರಫೆಲ್ ನಡಾಲ್

2019ರ ಇಟಾಲಿಯನ್ ಒಪನ್ ಟೆನಿಸ್ ಟೂರ್ನಿಯಲ್ಲಿ  ಸ್ಪೇನ್​ನ ಶ್ರೇಷ್ಠ ಆಟಗಾರ ರಫೆಲ್ ನಡಾಲ್ ಚಾಂಪಿಯನ್​ ಆಗಿ ಹೊರಹೊಮ್ಮಿದ್ದಾರೆ. ವಿಶ್ವದ ಅಗ್ರ ಶೇಯಾಂಕದ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್​ರನ್ನು 2ನೇ ಶ್ರೇಯಾಂಕಿತ ನಡಾಲ್  6-0, 4-6, 6-1 ಸೆಟ್‌ಗಳಿಂದ ಪರಾಭವಗೊಳಿಸಿದರು. ಭಾರೀ ಕುತೂಹಲ ಮೂಡಿಸಿದ್ದ ಫೈನಲ್ ಪಂದ್ಯವು ರೋಚಕತೆಯಿಂದ ಕೂಡಿತ್ತು. ಎರಡು ಗಂಟೆ 25 ನಿಮಿಷಗಳವರೆಗೆ ಮುಂದುವರೆದ ಈ ಪಂದ್ಯದಲ್ಲಿ ಮೊದಲ ಸೆಟ್​ಅನ್ನು ನಡಾಲ್  6-0 ಗೆದ್ದರೆ, ಎರಡನೇ ಸೆಟ್​ನಲ್ಲಿ ಜೊಕೆವಿಚ್ ಕಂಬ್ಯಾಕ್ ಮಾಡಿ 4-6 ಅಂತರದಿಂದ ಗೆದ್ದುಕೊಂಡರು.  ಆದರೆ ಅತ್ಯುತ್ತಮ ಸರ್ವ್​ಗಳ ಮೂಲಕ ವಿಶ್ವದ ನಂಬರ್ ಒನ್ ಆಟಗಾರರನ್ನು ಕಾಡಿದ ನಡಾಲ್ ಮೂರನೇ ಸೆಟ್​ಅನ್ನು  6-1 ಅಂತರದಿಂದ ಸೋಲಿಸಿ ಇಟಾಲಿಯನ್ ಒಪನ್ ಚಾಂಪಿಯನ್​ ಆಗಿ ಕಿರೀಟ ಮುಡಿಗೇರಿಸಿದರು
First published:May 20, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ