Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

Evening Digest: ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 18, 2019, 7:38 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 18, 2019, 7:38 PM IST
  • Share this:
1.ಒಂದು ಕೇಂದ್ರಾಡಳಿತ ಪ್ರದೇಶ, 7 ರಾಜ್ಯಗಳ 59 ಕ್ಷೇತ್ರಗಳಿಗೆ ನಾಳೆ ಮತದಾನ

ಲೋಕಸಭಾ ಚುನಾವಣೆಯ ಅಂತಿಮ ಹಂತದ ಮತದಾನ ನಾಳೆ ನಡೆಯಲಿದೆ. ಭಾನುವಾರ(ಮೇ.19) ನಡೆಯಲಿರುವ ಮತದಾನಕ್ಕೆ ಕೇಂದ್ರ ಚುನಾವಣಾ ಆಯೋಗ ಸಕಲ ಸಿದ್ದತೆ ಮಾಡಿಕೊಂಡಿದೆ. ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಬಿಹಾರ, ಮಧ್ಯಪ್ರದೇಶ, ಪಂಜಾಬ್‌ ಸೇರಿದಂತೆ ಕೆಲವು ಈಶಾನ್ಯ ರಾಜ್ಯಗಳ 59 ಕ್ಷೇತ್ರಗಳಿಗೆ ಮತದಾನ ಆಗಲಿದೆ. ಅಂತೆಯೇ ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಕೊನೆಯ ಹಂತದ ಮತದಾನ ಆಗಿರುವುದರಿಂದ ನಿನ್ನೆ ಶುಕ್ರವಾರ ಸಂಜೆಯೇ ಬಹಿರಂಗ ಪ್ರಚಾರ ಅಂತ್ಯಗೊಂಡಿದೆ. ಈ ಬೆನ್ನಲ್ಲೇ ಪ್ರಮುಖ ರಾಜಕೀಯ ಪಕ್ಷಗಳ ನಾಯಕರು ಸುದ್ದಿಗೋಷ್ಠಿ ನಡೆಸಿದ್ದು, ಮತದಾರರಿಗೆ ಧನ್ಯವಾದ ತಿಳಿಸಿದ್ದಾರೆ. ಇತ್ತ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಜನರಿಗೆ ಧನ್ಯವಾದ ಹೇಳಿದರೆ, ಅತ್ತ ಕಾಂಗ್ರೆಸ್​​ ಅಧ್ಯಕ್ಷ ರಾಹುಲ್ ಕೂಡ ಜನರಿಗೆ ವಂದನೆ ಅರ್ಪಿಸಿದ್ದಾರೆ.

2.ಕೇದರನಾಥಕ್ಕೆ ಇಂದು ಭೇಟಿ ನೀಡಿದ ಪ್ರಧಾನಿ; ನಾಳೆ ಬದ್ರಿನಾಥ್​ಗೆ ಪ್ರವಾಸ


ಲೋಕಸಭಾ ಚುನಾವಣಾ ಕೊನೆ ಹಂತದ ಮತದಾನ ನಾಳೆ ನಡೆಯಲಿದ್ದು, ಅದಕ್ಕೂ ಮುನ್ನ ಮೋದಿ ಟೆಂಪಲ್​ ರನ್​ ನಡೆಸಲಿದ್ದಾರೆ. ಇಂದು ಉತ್ತರಖಂಡದ ಕೇದರನಾಥಕ್ಕೆ ಭೇಟಿ ನೀಡಿದರು. ಮೋದಿ ಅಲ್ಲಿಯೇ ರಾತ್ರಿ ಕಳೆಯಲಿದ್ದಾರೆ. ನಾಳೆ ಬದ್ರಿನಾಥ್​ಕ್ಕೆ ಭೇಟಿ ನೀಡಲಿದ್ದಾರೆ. ಮೋದಿ ಚುನಾವಣೆ ಎದುರಿಸುತ್ತಿರುವ ವಾರಣಾಸಿ ಕ್ಷೇತ್ರ ಸೇರಿದಂತೆ 59 ಕ್ಷೇತ್ರಗಳಲ್ಲಿ ನಾಳೆ ಕೊನೆಯ ಹಾಗೂ ಏಳನೇ ಹಂತದ ಮತದಾನ ನಡೆಯಲಿದೆ. ಪ್ರಧಾನಿ ಆಗಮನದ ಹಿನ್ನೆಲೆಯಲ್ಲಿ ದೇವಸ್ಥಾನದ ಸುತ್ತ ಬಿಗಿ ಭದ್ರತೆ ಕಲ್ಪಿಸಲಾಗಿದೆ.


3.ನೋಟು ಅಮಾನ್ಯೀಕರಣ ಮಾಡುವಾಗ ಸಚಿವರನ್ನೂ ಕೂಡಿಹಾಕಿದ್ದರು; ರಾಹುಲ್ ಗಂಭೀರ ಆರೋಪ

ದೇಶದಲ್ಲಿ ನೋಟುಗಳ ಅಮಾನ್ಯೀಕರಣ (ಡಿಮಾನಿಟೈಶೇಷನ್) ತೀರ್ಮಾನ ಘೋಷಣೆ ಮಾಡುವ ಮುನ್ನ ಪ್ರಧಾನಿ ಮೋದಿ ತಮ್ಮ ಕ್ಯಾಬಿನೆಟ್​ ನಲ್ಲಿರುವ ಎಲ್ಲಾ ಸಚಿವರನ್ನೂ ಕೂಡಿ ಹಾಕಿದ್ದರು ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ. ಶುಕ್ರವಾರ ಸಂಜೆ ಹಿಮಾಚಲ ಪ್ರದೇಶದ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿ ದೇಶದ ಮೇಲೆ ನೋಟುಗಳ ಅಮಾನ್ಯೀಕರಣದಂತಹ ಕಠಿಣ ನಿಲುವನ್ನು ಹೇರುವ ಮೊದಲು ತಮ್ಮ ಕ್ಯಾಬಿನೆಟ್​ನಲ್ಲಿನ ಎಲ್ಲಾ ಸಚಿವರನ್ನು ಪ್ರಧಾನಿ ಮಂತ್ರಿಗಳ ಮನೆಯಿರುವು ದೆಹಲಿ ರೇಸ್​ಕೋರ್ಟ್​ ರಸ್ತೆಯಲ್ಲಿರುವ ಒಂದು ಕಟ್ಟಡದಲ್ಲಿ ಕೂಡಿ ಹಾಕಿದ್ದರು ಎಂಬುದೇ ಸತ್ಯ” ಎಂದು ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.

4.ಮಹಾಘಟಬಂಧನ್​​ಗೆ ಸಿಎಂ ಚಂದ್ರಬಾಬು ನಾಯ್ದು ನೇತೃತ್ವ; ಇಂದು ಮಾಯಾವತಿ ಜತೆ ಮಾತುಕತೆ

ಬಿಜೆಪಿ ವಿರೋಧಿ ಪಕ್ಷಗಳನ್ನು ಒಗ್ಗೂಡಿಸಿ ಕೇಂದ್ರದಲ್ಲಿ ಸರ್ಕಾರ ರಚನೆಗೆ ಮುಂದಾಗಿರುವ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಅವರು ಇಂದು ಮಹತ್ವದ ಸಭೆ ನಡೆಸಲಿದ್ದಾರೆ. ಮೊದಲು ದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಬಳಿಕ ಉತ್ತರ ಪ್ರದೇಶಕ್ಕೆ ತೆರಳಿ ಬಿಎಸ್​​ಪಿ ನಾಯಕಿ ಮಾಯಾವತಿ ಮತ್ತು ಎಸ್​​ಪಿ ನಾಯಕ ಅಖಿಲೇಶ್ ಯಾದವ್ ಅವರ ಜತೆಗೆ ಮಾತುಕತೆ ನಡೆಸಲಿದ್ದಾರೆ ಎನ್ನಲಾಗಿದೆ. "ಅಷ್ಟೇ ಅಲ್ಲದೇ ಬಿಜೆಪಿ ವಿರುದ್ಧದ ಎಲ್ಲಾ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದೇವೆ. ಈಗಾಗಲೇ ಸಿಎಂ ಕೆಸಿಆರ್​​ ನೇತೃತ್ವದ ಟಿಆರ್​​ಎಸ್​​​ ಮಹಾಘಟಬಂಧನ್​​​ ಸೇರಲು ಮುಂದಾಗಿದೆ. ಹೀಗೆ ಕೇಸರಿ ಪಕ್ಷವನ್ನು ವಿರೋಧಿಸುವ ಯಾವುದೇ ಪಕ್ಷವಾಗಲೀ ನಮ್ಮ ಜೊತೆ ಕೈಜೋಡಿಸಬಹುದು" ಎಂದು ಸಿಎಂ ಚಂದ್ರಬಾಬು ನಾಯ್ಡು ಅವರು ಘೋಷಿಸಿದ್ದಾರೆ.

5.ದೇವೇಗೌಡರ 87ನೇ ಹುಟ್ಟುಹಬ್ಬ; ಇಲ್ಲಿದೆ ಮಾಜಿ ಪ್ರಧಾನಿ ನಡೆದು ಬಂದ ಹಾದಿ

ಜೆಡಿಎಸ್​​ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್​​.ಡಿ ದೇವೆಗೌಡರ ಅವರಿಗೆ ಇಂದು 87ನೇ ಹುಟ್ಟುಹಬ್ಬ. ಪ್ರತಿ ವರ್ಷದಂತೆ ಈ ವರ್ಷವೂ ಹುಟ್ಟಹುಬ್ಬ ಆಚರಿಸಿಕೊಳ್ಳಲು ಹೆಚ್​.ಡಿ. ದೇವೇಗೌಡರ ಇಡೀ ಕುಟುಂಬ ತಿರುಪತಿಗೆ ತೆರಳಿದೆ. ತಿರುಪತಿ ದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಹುಟ್ಟುಹಬ್ಬ ಆಚರಣೆಗೆ ಇಡೀ ಕುಂಟುಂಬ ಮುಂದಾಗಿದೆ. ನಿನ್ನೆ ಶುಕ್ರವಾರ ಸಂಜೆಯೇ ಸಿಎಂ ಎಚ್​​.ಡಿ ಕುಮಾರಸ್ವಾಮಿ ಸೇರಿದಂತೆ ಇಡೀ ಕುಟುಂಬ ಎರಡು ವಿಶೇಷ ವಿಮಾನಗಳಲ್ಲಿ ತಿರುಪತಿಗೆ ಹೊರಟಿದೆ. 87ನೇ ವಸಂತಕ್ಕೆ ಕಾಲಿಟ್ಟ ಮಾಜಿ ಪ್ರಧಾನಿ ಎಚ್​​.ಡಿ ದೇವೇಗೌಡ ಜತೆಗೆ ಪತ್ನಿ ಚನ್ನಮ್ಮ, ಶಾಸಕಿ ಅನಿತಾ ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ, ಭವಾನಿ ರೇವಣ್ಣ ಹಾಗೂ ಮೊಮ್ಮಕ್ಕಳು ಸೇರಿ ಒಟ್ಟು 23 ಮಂದಿ ತೆರಳಿದ್ದಾರೆ.

6.ವಿವಾದಾತ್ಮಕ ಹೇಳಿಕೆ ನೀಡದಂತೆ ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ಸಿಎಂ ಕುಮಾರಸ್ವಾಮಿ ಮನವಿ

ದಿನದಿಂದ ದಿನಕ್ಕೆ ದೋಸ್ತಿ ಪಕ್ಷಗಳ ನಾಯಕರು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಮೈತ್ರಿ ಸರ್ಕಾರಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ. ಒಬ್ಬೊಬ್ಬರು ಒಂದೊಂದು ಹೇಳಿಕೆ ನೀಡುತ್ತಿರುವುದು ಸರ್ಕಾರದ ಮೇಲೆ ನೇರ ಪರಿಣಾಮ ಉಂಟು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಉಭಯ ಪಕ್ಷಗಳ ನಾಯಕರು ಇಂತಹ ಹೇಳಿಕೆ ನೀಡಬಾರದು ಎಂದು ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಇದೇ ವಿಚಾರವಾಗಿ ಸಿಎಂ ಕುಮಾರಸ್ವಾಮಿ ಅವರು, "ಕೇಂದ್ರದಲ್ಲಿ ಇನ್ನೊಂದು ಹೊಸ ಸರ್ಕಾರ ರಚನೆಯಾಗುವ ಮಹತ್ತರ ಘಟ್ಟದಲ್ಲಿ ನಾವಿದ್ದೇವೆ. ಕೇಂದ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆ ನಮ್ಮೆಲ್ಲರ ಆಶಯ ಸಾಕಾರಗೊಳಿಸುವ ಪ್ರಯತ್ನಗಳು ನಡೆಯುತ್ತಿರುವ ಸಂದರ್ಭದಲ್ಲಿ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಪಕ್ಷಗಳ ಮುಖಂಡರು ವ್ಯತಿರಿಕ್ತ ಹೇಳಿಕೆಗಳನ್ನು ನೀಡುವುದು ಇಂತಹ ಪ್ರಯತ್ನಗಳಿಗೆ ಹಿನ್ನಡೆಯಾಗಬಹುದು. ಆದ್ದರಿಂದ ಉಭಯ ಪಕ್ಷಗಳ ಮುಖಂಡರು ಇಂತಹ ಆಶಯಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ,  ಯಾವುದೇ ವಿಭಿನ್ನ, ವಿವಾದಾತ್ಮಕ ಹೇಳಿಕೆ ನೀಡದಂತೆ ನನ್ನ ಕಳಕಳಿಯ ಮನವಿ," ಎಂದು ಟ್ವೀಟ್​ ಮಾಡಿದ್ದಾರೆ

7. ವಿಜಯಪುರದಲ್ಲಿ ಭೀಕರ ರಸ್ತೆ ಅಪಘಾತ; ಸಾವಿನ ಸಂಖ್ಯೆ 6 ಕ್ಕೆ ಏರಿಕೆ

ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಮನೆಗೆ ಹೊರಟಿದ್ದವರು ಮಸಣ ಸೇರಿರುವ ದಾರುಣ ಘಟನೆ ವಿಜಯಪುರದಲ್ಲಿ ನಡೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕಂದಗನೂರ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐದು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವಾಗ ಮತ್ತೋರ್ವ ಮೃತಪಟ್ಟಿದ್ದು, ಸಾವಿನ ಸಂಖ್ಯೆ 6 ಕ್ಕೆ ಏರಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆ ಮುಗಿಸಿ ಟಾಟಾ ಏಸ್​ ವಾಹನದಲ್ಲಿ ಮನೆಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ಟಾಟಾ ಏಸ್​ ಪಲ್ಟಿಯಾಗಿ ಸ್ಥಳದಲ್ಲೇ ಐವರು ಮೃತಪಟ್ಟಿದ್ದಾರೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಆಸ್ಪತ್ರೆಗೆ ಸಾಗಿಸುವ ವೇಳೆ ಮತ್ತೋರ್ವ ಮೃತಪಟ್ಟಿದ್ದಾನೆ.

8. ಗೊಂದಲದಲ್ಲಿ ಸರ್ಕಾರ ನಡೆಸುವುದಕ್ಕಿಂತ ವಿಧಾನಸಭೆ ವಿಸರ್ಜನೆ ಮಾಡಿ; ಬಸವರಾಜ ಹೊರಟ್ಟಿ ಹೇಳಿಕೆ

ಗೊಂದಲದಲ್ಲಿ ಸರ್ಕಾರ ನಡೆಸಲು ಸಾಧ್ಯವಿಲ್ಲ. ಗೊಂದಲದಲ್ಲಿ ಸರ್ಕಾರ ನಡೆಸುವುದಕ್ಕಿಂತ ವಿಧಾನಸಭೆ ವಿಸರ್ಜನೆ ಮಾಡಿ ಮತ್ತೊಮ್ಮೆ ಚುನಾವಣೆಗೆ ಹೋಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಜೆಡಿಎಸ್ ಹಿರಿಯ ಮುಖಂಡ ಬಸವರಾಜ ಹೊರಟ್ಟಿ ಹೇಳಿದ್ದಾರೆ. ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಸಿರುಗಟ್ಟುವ ವಾತಾವರಣದಲ್ಲಿ ಸರ್ಕಾರ ನಡೆಸೋದು ಕಷ್ಟವಾಗುತ್ತದೆ. ಕಾಂಗ್ರೆಸ್ ಮುಖಂಡರು ಸಿದ್ದರಾಮಯ್ಯ ಸಿಎಂ ಆಗಲಿ ಅಂತ ಪದೇಪದೇ ಹೇಳಿಕೆ ಕೊಡುತ್ತಿದ್ದಾರೆ. ಹೀಗಾಗಿ ರಾಜ್ಯದಲ್ಲಿ ಮತ್ತೆ ವಿಧಾನಸಭೆ ಚುನಾವಣೆ ನಡೆದು ಬಹುಮತದ ಸರ್ಕಾರ ಬರಲಿ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದ್ದಾರೆ. ಮೈತ್ರಿಯಲ್ಲಿನ ಗೊಂದಲ ಪರಿಹರಿಸಲು ಸಾಧ್ಯವಾಗದಿದ್ದ ಮೇಲೆ, ವಿಧಾನಸಭೆ ವಿಸರ್ಜಿಸಿ ಚುನಾವಣೆ ಎದುರಿಸುವುದು ಉತ್ತಮ ಎಂದು ಹೊರಟ್ಟಿ ಹೇಳಿರುವುದು ರಾಜ್ಯ ರಾಜಕೀಯದಲ್ಲಿ ಸಂಚಲನ ಮೂಡಿಸಿದೆ. ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಇನ್ನೊಂದು ವಾರ ಬಾಕಿ ಇರುವಂತೆ ಹೊರಟ್ಟಿ ನೀಡಿರುವ ಈ ಹೇಳಿಕೆ ತೀವ್ರ ಕುತೂಹಲವನ್ನು ಮೂಡಿಸಿದೆ

9. ಸ್ಟಾರ್​ ನಟಿಯರ ಗುಟ್ಟು ರಟ್ಟು ಮಾಡುತ್ತಾರಂತೆ ಮಾಲಿವುಡ್​ ನಟಿ ಶಕೀಲಾ..!

ನಟಿ ಶಕೀಲಾ ಬಗ್ಗೆ ಪರಿಚಯ ಮಾಡಿಕೊಡುವ ಅಗತ್ಯ ಇಲ್ಲ. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಅಭಿನಯಿಸಿರುವ ಶಕೀಲಾ ಅತಿ ಹೆಚ್ಚು ಕಾಣಿಸಿಕೊಂಡಿದ್ದು ವಯಸ್ಕರ ಚಿತ್ರಗಳಲ್ಲೇ. ಆದರೆ 2003ರ ನಂತರ ಶಕೀಲಾ ವಯಸ್ಕರ ಚಿತ್ರಗಳಲ್ಲಿ ಅಭಿನಯಿಸುವುದನ್ನು ನಿಲ್ಲಿಸಿದ್ದು, ಈಗ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಾತ್ರ ನಟಿಸುತ್ತಿದ್ದಾರೆ. 110 ಸಿನಿಮಾಗಳಲ್ಲಿ ಅಭಿನಯಿಸಿರುವ ಶಕೀಲಾ, ಮಲಯಾಳಂ, ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳಿನಲ್ಲಿ ಅಭಿನಯಿಸಿದ್ದಾರೆ. ಇಂತಹ ನಟಿ ಶಕೀಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ತಮಗಾಗಿದ್ದ ಕಹಿ ಅನುಭವ, 16 ವರ್ಷವಿದ್ದಾಗ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದು, ಸಿನಿ ರಂಗದಲ್ಲಿ ತನ್ನ ದೇಹವನ್ನು ಶೃಂಗಾರದ ಸಂಕೇತವಾಗಿ ತೋರಿಸಲಾಗುತ್ತಿತ್ತು, ಆದರೆ ನನ್ನಲ್ಲಿದ್ದ ಅಭಿನಯ ಪ್ರತಿಭೆಯನ್ನು ಹೆಕ್ಕಿ ತೆಗೆಯಲು ಯಾರೂ ಮುಂದೆ ಬರಲಿಲ್ಲ ಎಂದು ತಮ್ಮ ಅನುಭವಗಳ ಹಂಚಿಕೊಂಡಿದ್ದಾರೆ.

10.ಯುದ್ಧಪೀಡಿತರಿಗೆ ನೆರವು ನೀಡಿ ಮಾನವೀಯತೆ ಮೆರೆದ ಕ್ರಿಸ್ಟಿಯಾನೊ ರೊನಾಲ್ಡೊ

ಫುಟ್​ಬಾಲ್​ ದಂತಕಥೆ ಕ್ರಿಸ್ಟಿಯಾನೊ ರೊನಾಲ್ಡೊ ತಾನೇಗೆ ಇತರೆ ವಿಶ್ವ ತಾರೆಗಳಿಕ್ಕಿಂತ ಭಿನ್ನ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದ್ದಾರೆ. ಈಗಾಗಲೇ ಯುದ್ದದಿಂದ ತತ್ತರಿಸಿ ಹೋಗಿರುವ ಪ್ಯಾಲೆಸ್ತೀನ್​ನ ಗಾಝಾ ನಿವಾಸಿಗಳಿಗಾಗಿ ಕ್ರಿಸ್ಟಿಯಾನೊ 1.5 ಮಿಲಿಯನ್ ಡಾಲರ್ ದಾನ ನೀಡಿದ್ದಾರೆ ಎಂದು ವರದಿಯಾಗಿದೆ. ಅಂದರೆ ಈ ಫುಟ್​ಬಾಲ್ ದಿಗ್ಗಜ ನೀಡಿರುವುದು ಸುಮಾರು 10.5 ಕೋಟಿ ರೂ. ಇಸ್ರೇಲ್ ದಾಳಿಯಿಂದ ತೀವ್ರ ಸಂಕಷ್ಟದಲ್ಲಿರುವ ಗಾಝಾ ನಗರದ ಮುಸ್ಲಿಮರು ಪವಿತ್ರ ರಂಜಾನ್ ಉಪವಾಸವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇವರ ನೆರೆವಿಗಾಗಿ ಕ್ರಿಸ್ಟಿಯಾನೊ ಬೃಹತ್ ಮೊತ್ತವನ್ನು ದೇಣಿಗೆಯಾಗಿ ನೀಡಿದ್ದಾರೆ. ವಿಶ್ವ ಐಕ್ಯತೆ, ಸಾಮರಸ್ಯ, ಸೌಹಾರ್ದತೆಯನ್ನು ಸಾರಲು ಹಾಗೂ ಮಾನವೀಯತೆಯನ್ನು ಎತ್ತಿ ಹಿಡಿಯಲು ರೊನಾಲ್ಡೊ ಪ್ಯಾಲೆಸ್ತೀನಿಯರಿಗೆ ಸಹಾಯ ಮಾಡಿದ್ದಾರೆ ಎಂದು ಟೆಲಿಸರ್ ಸುದ್ದಿ ಸಂಸ್ಥೆ ವರದಿ ಮಾಡಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'

 
First published:May 18, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ