Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:May 17, 2019, 10:12 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 17, 2019, 10:12 PM IST
  • Share this:
1. ವಿವಾದ ಹುಟ್ಟಿಸಿದ ಗಾಂಧಿ-ಗೋಡ್ಸೆವಿವಾದ

ಇತ್ತೀಚೆಗೆ ಭೂಪಾಲ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಗಾಂಧಿಯನ್ನು ಹತ್ಯೆ ಮಾಡಿದ್ದ ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಕರೆದಿದ್ದು ದೊಡ್ಡ ಚರ್ಚೆಗೆ ಕಾರಣವಾಗಿತ್ತು. ಅದರ ಬೆನ್ನಿಗೆ ಟ್ವೀಟ್ ಮಾಡಿದ್ದ ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಸಹ ಪೇಚಿಗೆ ಸಿಲುಕಿ ನಂತರ ಟ್ವಿಟರ್​ನಲ್ಲಿ ತನ್ನ ಸ್ಟೇಟಸ್​ ಅನ್ನು ಡಿಲೀಟ್ ಮಾಡಿದ್ದರು. ಈಗ ವಿವಾದಕ್ಕೆ ಹೆಸರಾದ ಅನಂತಕುಮಾರ್ ಹೆಗಡೆ ಸಹ ಈ ಕುರಿತು ಟ್ವೀಟ್ ಮಾಡಿದ್ದು ಹೊಸದೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ.  ಉತ್ತರ ಕನ್ನಡ ಸಂಸದ ಅನಂತ್​ಕುಮಾರ್​ ಹೆಗಡೆ ಖಾಸಗಿ ಟ್ವೀಟರ್ ಅಕೌಂಟ್​ನಲ್ಲಿ ಈ ಕುರಿತು ಟ್ವೀಟ್ ಮಾಡಿದ್ದು, “ಕಳೆದ 7 ದಶಕದಲ್ಲಿ ನಾಥೂರಾಮ್ ಗೋಡ್ಸೆ ಬಗ್ಗೆ ಈ ತಲೆಮಾರು ಮೊದಲ ಬಾರಿಗೆ ಬದಲಾದ ಹೊಸ ಗ್ರಹಿಕೆಯ ಪರಿಸರದಲ್ಲಿ ಚರ್ಚೆ ಮಾಡುತ್ತಿದೆ. ಕೊನೆಗೂ ಗೋಡ್ಸೆ ಬಗೆಗಿನ ಇಂತಹ ಚರ್ಚೆಗಳು ಸಂತಸ ನೀಡುತ್ತಿವೆ” ಎಂದು ಬರೆದುಕೊಂಡಿದ್ದರು.

2. ಬಿಜೆಪಿ ನಾಯಕರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾದ ಪಕ್ಷ

ನಾಥೂರಾಮ್ ಗೋಡ್ಸೆಯನ್ನು ದೇಶಭಕ್ತ ಎಂದು ಹೇಳುವ ಮೂಲಕ ಗಾಂಧಿಗೆ ಅಪಮಾನಿಸಲಾಗಿದೆ. ಈ ಕಾರಣಕ್ಕೆ ಸಾಧ್ವಿ ಪ್ರಜ್ಞಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ ಕುಮಾರ್ ಮೂವರ ವಿರುದ್ಧವೂ ಬಿಜೆಪಿ ಪಕ್ಷ ಶಿಸ್ತು ಕ್ರಮಕ್ಕೆ ಮುಂದಾಗಿದೆ. ಅಲ್ಲದೆ ಈ ಕುರಿತು 10 ದಿನದೊಳಗಾಗಿ ಶಿಸ್ತುಕ್ರಮ ಸಭೆಯ ಮುಂದೆ ಹಾಜರಾಗಿ ವಿವರಣೆ ನೀಡಬೇಕು ಎಂದು ತಾಕೀತು ಮಾಡಿದೆ. ಸಾಧ್ವಿ ಪ್ರಜ್ಞಾ ಸಿಂಗ್, ನಳಿನ್ ಕುಮಾರ್ ಕಟೀಲ್ ಹಾಗೂ ಅನಂತ್ ಕುಮಾರ್ ಹೇಳಿಕೆಯಿಂದ ಚುನಾವಣಾ ಸಂದರ್ಭಲ್ಲಿ ಬಿಜೆಪಿ ಪಕ್ಷದ ವರ್ಚಸ್ಸಿಗೆ ಧಕ್ಕೆ ಉಂಟಾಗಿದ್ದು ಪಕ್ಷ ಇದನ್ನು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೆ ಈ ಮೂವರ ವಿರುದ್ಧ ಕಠಿಣ ಕ್ರಮಕ್ಕೂ ಮುಂದಾಗಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

3. ಐದು ವರ್ಷಗಳ ನಂತರ ಪ್ರಧಾನಿ ಮೊದಲ ಪತ್ರಿಕಾಗೋಷ್ಠಿ

2019ರ ಲೋಕಸಭಾ ಚುನಾವಣೆಯ ಕಡೆಯ ಹಂತದ ಮತದಾನಕ್ಕೆ ಬಹಿರಂಗ ಪ್ರಚಾರಕ್ಕೆ ತೆರೆಬಿದ್ದಿದೆ. ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್​ ಶಾ ಸೇರಿದಂತೆ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಇದರಲ್ಲಿ  ಮೋದಿಯವರು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನಡೆಸುತ್ತಿರುವ ಮೊದಲ ಬಾರಿಗೆ ಬಹಿರಂಗ ಪತ್ರಿಕಾಗೋಷ್ಠಿ ಇದಾಗಿದೆ. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಮತ್ತೆ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬರುವ ವಿಶ್ವಾಸ ವ್ಯಕ್ತಪಡಿಸಿದರು. "ಭಾರತ ದೇಶದ ಚುನಾವಣಾ ಇತಿಹಾಸದಲ್ಲಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದು ಐದು ವರ್ಷಗಳ ನಂತರ ಮತ್ತೆ ಪೂರ್ಣ ಬಹುಮತ ಪಡೆದು ಅಧಿಕಾರಕ್ಕೆ ಯಾವ ಸರ್ಕಾರವೂ ಬಂದಿಲ್ಲ. ಜತೆಗೆ ದೇಶದಲ್ಲಿ ಈವರೆಗೆ ಬಂದಿರುವ ಬಹುತೇಕ ಪ್ರಧಾನಿಗಳು ವಂಶಪಾರಂಪರ್ಯವಾಗಿ ಬಂದಿದ್ದಾರೆ. ಅಥವಾ ಮೈತ್ರಿ ಪಕ್ಷಗಳು ಅಧಿಕಾರ ಹಿಡಿದಿವೆ ಮತ್ತು ಎರಡು ವರ್ಷ, ಒಂದು ವರ್ಷ ಹೀಗೇ ಬೇರೆ ಬೇರೆ ಅವಧಿಗೆ ಪ್ರಧಾನಿ ಸ್ಥಾನಕ್ಕೇರಿದ್ದಾರೆ. ಆದರೆ ಮೊದಲ ಬಾರಿಗೆ 2014ರಲ್ಲಿ ಭಾರತೀಯರು ಮೊದಲ ಬಾರಿಗೆ ಜನರ ನಡುವಿನಿಂದಲೇ ಬಂದ ನನ್ನನ್ನು ಅಧಿಕಾರಕ್ಕೆ ತಂದರು. ಅದೇ ಅವಕಾಶ ಈಗ ಮತ್ತೆ 2019ರಲ್ಲೂ ಬಂದಿದೆ. ನಾವು ಈ ಬಾರಿಯೂ ಅಧಿಕಾರಕ್ಕೆ ಬರುತ್ತೇವೆ," ಎಂಬ ವಿಶ್ವಾಸವನ್ನು ಪ್ರಧಾನಿ ವ್ಯಕ್ತಪಡಿಸಿದರು.

4. ಕುಂದಗೋಳ, ಚಿಂಚೋಳಿ ಬಹಿರಂಗ ಪ್ರಚಾರ ಅಂತ್ಯಲೋಕಸಭಾ ಚುನಾವಣೆ ಬಳಿಕ ರಾಜ್ಯದಲ್ಲಿ ಗಮನ ಸೆಳೆದಿರುವ ಚಿಂಚೋಳಿ, ಕುಂದಗೋಳ ವಿಧಾನಸಭಾ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಇಂದು ಅಂತಿಮ ತೆರೆ ಬಿದ್ದಿದೆ. ಸಿಎಸ್​ ಶಿವಳ್ಳಿ ಸಾವಿನಿಂದ ತೆರವಾಗಿದ್ದ ಕುಂದಗೋಳ ಹಾಗೂ ಉಮೇಶ್​ ಜಾಧವ್​ ರಾಜೀನಾಮೆಯಿಂದ ತೆರವಾಗಿದ್ದ ಚಿಂಚೋಳಿ ಕ್ಷೇತ್ರಗಳು ಕಾಂಗ್ರೆಸ್​ ಹಾಗೂ ಬಿಜೆಪಿಗೆ ಸೀಟು ಹೆಚ್ಚಳದ ದೃಷ್ಟಿಯಿಂದ ಅತಿ ಮುಖ್ಯ ಚುನಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್​ ಹಾಗೂ ಬಿಜೆಪಿಯ ಘಟಾನುಘಟಿ ನಾಯಕರು ಕ್ಷೇತ್ರಗಳಲ್ಲಿ ಮೊಕ್ಕಂ ಹೂಡಿ ಒಂದು ತಿಂಗಳ ಕಾಲ ಚುನಾವಣಾ ಪ್ರಚಾರ ನಡೆಸಿದರು.
ಬಹಿರಂಗ ಚುನಾವಣೆ ಪ್ರಚಾರ ಇಂದು ಮುಗಿದ್ದಿದೆ. ಇದೇ ದಿನ ಎರಡು ಪಕ್ಷದ ನಾಯಕರು ರೋಡ್​ ಶೋ ನಡೆಸಲು ಮುಂದಾಗಿದ್ದರು. ಆದರೆ, ಪಶ್ಚಿಮ ಬಂಗಾಳದಲ್ಲಿ ರೋಡ್​ ಶೋ ವೇಳೆ ನಡೆದ ಹಿಂಸಾಚಾರ ಹಿನ್ನೆಲೆಯಲ್ಲಿ ಎಚ್ಚೆತ್ತ ಜಿಲ್ಲಾಡಳಿತ ಕಾನೂನು ಸುವ್ಯವಸ್ಥೆ ಕಾರಣ ನೀಡಿ, ರೋಡ್​ ಶೋಗೆ ತಡೆ ನೀಡಿತ್ತು

5. ಮೋದಿಗಿಲ್ಲದ ಕಠಿಣ ಪ್ರಶ್ನೆ ನನಗೆ ಏಕೆ; ರಾಹುಲ್​

ಇದೇ ಮೊದಲ ಬಾರಿಗೆ ಪ್ರಧಾನಿ ಮೋದಿ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ, ಈ ಬಾರಿಯೂ ಕೂಡ ಬಿಜೆಪಿ ಸ್ಪಷ್ಟ ಬಹುಮತ ಪಡೆದು, ಎನ್​ಡಿಎ ಮೈತ್ರಿಕೂಟದೊಂದಿಗೆ ಸರ್ಕಾರ ರಚಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಸಹ ಸುದ್ದಿಗೋಷ್ಠಿ ನಡೆಸಿ, ಕಾಂಗ್ರೆಸ್ ಗೆಲುವಿನ ವಿಶ್ವಾಸ ಪ್ರಕಟಿಸಿದರು. ಈ ವೇಳೆ ಮಾತನಾಡಿದ ರಾಹುಲ್ ಗಾಂಧಿ, ಮಾಧ್ಯಮದವರು ನನಗೆ ಮಾತ್ರ ಕಠಿಣವಾದ ಪ್ರಶ್ನೆಗಳನ್ನು ಕೇಳುತ್ತಾರೆ. ಮತ್ತು ಮೋದಿಗೆ ಬಟ್ಟೆ ಮತ್ತು ಮಾವಿನ ಬಗ್ಗೆ ಪ್ರಶ್ನೆಗಳನ್ನು ಕೇಳುತ್ತೀರಾ ಎಂದು ಸುದ್ದಿಗಾರರಿಗೆ ಹೇಳಿದರು. ನರೇಂದ್ರ ಮೋದಿ ಮತ್ತು ಬಿಜೆಪಿ ಬಳಿ ಹೇರಳ ಹಣವಿದೆ ಮತ್ತು ಯಥೇಚ್ಚವಾಗಿ ಮಾರುಕಟ್ಟೆಯೂ ಇದೆ. ಅದು ನಮಗಿಂತ ಹೆಚ್ಚಿನ ಪ್ರಮಾಣದಲ್ಲಿ ಇದೆ. ಎಷ್ಟು ಪ್ರಮಾಣದಲ್ಲಿ ಅಂದರೆ 1:20ರ ಅನುಪಾತದಲ್ಲಿ ಇದೆ. ನಮ್ಮ ಬಳಿ ಇರುವುದು ಸತ್ಯ ಮಾತ್ರ. ಮತ್ತು ಸತ್ಯ ಮಾತ್ರವೇ ಗೆಲ್ಲುವುದು ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು

6 ಮೋದಿ ಓರ್ವ ನಾಟಕಕಾರ; ಪ್ರಿಯಾಂಕಾ

"ಜಗತ್ತಿನಲ್ಲೇ ಓರ್ವ ಅದ್ಭುತವಾದ ನಟನನ್ನು ನೀವು ನಿಮ್ಮ ಪ್ರಧಾನಿಯಾಗಿ ಆಯ್ಕೆ ಮಾಡಿಕೊಂಡಿದ್ದೀರಿ. ಆದರೆ, ನರೇಂದ್ರ ಮೋದಿಗಿಂತ ನೀವು ಅಮಿತಾಬ್ ಬಚ್ಚನ್​ರನ್ನೇ ಪ್ರಧಾನಿ ಹುದ್ದೆಗೆ ಆಯ್ಕೆ ಮಾಡಿಕೊಳ್ಳಬಹುದಿತ್ತು. ಏಕೆಂದರೆ ಈ ಇಬ್ಬರೂ ನಾಯಕರು ಒಳ್ಳೆಯ ನಟರು ಆದರೆ, ಜನರಿಗಾಗಿ ಏನನ್ನೂ ಮಾಡಲೊಲ್ಲರು" ಎಂದು ಹೀಯಾಳಿಸುವ ಮೂಲಕ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಮತ್ತೆ ಪ್ರಧಾನಿ ಮೋದಿಯ ಕಾಲೆಳೆದಿದ್ದಾರೆ.  “ಮೋದಿ ಜಗತ್ತಿನಲ್ಲೇ ಸುಪ್ರಸಿದ್ಧ ನಟ. ಅವರಂತೆ ನಟಿಸಲು ಯಾರಿಂದಲೂ ಸಾಧ್ಯವಿಲ್ಲ. ಅಭಿವೃದ್ಧಿಯ ಹೆಸರಲ್ಲಿ ಕಳೆದ ಐದು ವರ್ಷದಿಂದ ಅವರು ನಿರಂತರವಾಗಿ ನಟನೆ ಮಾಡುತ್ತಲೇ ಇದ್ದಾರೆ. ನೀವು ಸಹ ಒಬ್ಬ ನಟನೇ ತಮಗೆ ಬೇಕು ಎಂದು ಕಳೆದ ಬಾರಿ ಮೋದಿಯನ್ನೇ ಆಯ್ಕೆ ಮಾಡಿಕೊಂಡಿದ್ದೀರಿ. ಆದರೆ, ಮೋದಿಗಿಂತ ತಾವು ಖ್ಯಾತ ನಟ ಅಮಿತಾಬ್ ಬಚ್ಚನ್​ರನ್ನೇ ಪ್ರಧಾನಿಯಾಗಿ ಆಯ್ಕೆ ಮಾಡಬಹುದಿತ್ತು” ಎಂದು ಹೀಯಾಳಿಸಿದ್ದಾರೆ

7. ಕಾಂಗ್ರೆಸ್​ ಮುಖಂಡೆ ರೇಷ್ಮಾ ಪಡೇಕನೂರು ಕೊಲೆ

ವಿಜಯಪುರದ ಕಾಂಗ್ರೆಸ್ ಮುಖಂಡೆ, ಜೆಡಿಎಸ್​ ಮಾಜಿ ಜಿಲ್ಲಾಧ್ಯಕ್ಷೆ ರೇಷ್ಮಾ ಪಡೇಕನೂರ ಅವರನ್ನು ದುಷ್ಕರ್ಮಿಗಳು ಹತ್ಯೆಗೈದು, ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ಕೋಲ್ಹಾರ ಬಳಿಯ ಕೃಷ್ಣಾ ನದಿಯ ಸೇತುವೆ ಕೆಳಗೆ ಮೃತದೇಹ ಪತ್ತೆಯಾಗಿದೆ. ಕಳೆದ ರಾತ್ರಿ ದುಷ್ಕರ್ಮಿಗಳು ಕೊಲೆ‌ ಮಾಡಿ‌ರುವ ಶಂಕೆ ವ್ಯಕ್ತವಾಗಿದೆ. ನಿನ್ನೆ ರಾತ್ರಿ ನೆರೆಯ ಮಹಾರಾಷ್ಟ್ರದ ಎಂಐಎಂ ಮುಖಂಡನೊಬ್ಬನೊಂದಿಗೆ ರೇಷ್ಮಾ ಕಾರಿನಲ್ಲಿ ತೆರಳಿದ್ದರು ಎಂದು  ಹೇಳಲಾಗುತ್ತಿದೆ. ಕೋಲ್ಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

8. ಸಿಲಿಕಾನ್​ ಸಿಟಿಯಲ್ಲಿ ಆಲಿಕಲ್ಲು ಮಳೆ

ಕಳೆದೆರಡು ದಿನಗಳಿಂದ ನಗರದಲ್ಲಿ ಸುರಿಯುತ್ತಿದ್ದ ಮಳೆ ಇಂದು ಕೂಡ ಆಗಮಿಸಿದ್ದು, ಮಧ್ಯಾಹ್ನ ಗುಡುಗುಸಹಿತ ಧಾರಕಾರ ಮಳೆಯಾಗಿದೆ. ಮಳೆಯಿಂದಾಗಿ ವಾಹನ ಸವಾರರು ಪರದಾಡುವಂತಾಯಿತು. ಬೆಂಗಳೂರಿನ ಬಹುತೇಕ ಕಡೆ ಆಲಿಕಲ್ಲು ಮಳೆಯಾಗಿದೆ. ಸತತ ಒಂದು ಗಂಟೆಯಿಂದ ಮಳೆ ಸುರಿಯುತ್ತಿದ್ದು, ಬಿಸಿಲಿನ ಬೇಗೆಯಿಂದ ಬಳಲಿದ್ದ ಜನರಿಗೆ ತಂಪೆರೆದಿದೆ. ಪೂರ್ವ ಮುಂಗಾರಿನಲ್ಲಿ ಆಲಿ ಕಲ್ಲು ಮಳೆ ಸಾಮಾನ್ಯವಾಗಿದೆ. ತಾಪಮಾನ ತಕ್ಷಣ ಕಡಿಮೆಯಾದಾಗ ಆಲಿ ಕಲ್ಲು ಮಳೆ ಬರುತ್ತದೆ. ಇಂದು ಸಂಜೆ 6 ಗಂಟೆವರೆಗೆಕ ಮೋಡ ಕವಿದ ವಾತಾವರಣವಿರಲಿದ್ದು, ನಾಳೆ ಯಥಾ ಪ್ರಕಾರ  ಬಿಸಿಲು ಬರಲಿದೆ ಎಂದರು  ಕೆಎಸ್ಎನ್ಎಂಡಿಸಿ   ನಿರ್ದೇಶ ಡಾ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.

9 ಮೋಸ್ಟ್​ ಡಿಸೈರಬಲ್​ ಮ್ಯಾನ್​-2018, ಯಶ್​ಗೆ 14ನೇ ಸ್ಥಾನ

ಟಾಲಿವುಡ್​ ರೌಡಿ ವಿಜಯ್​ ದೇವರಕೊಂಡ ಅವರ ಖ್ಯಾತಿ ದಿನೇ ದಿನೇ ಹೆಚ್ಚುತ್ತಲೇ ಇದೆ. 'ಅರ್ಜುನ್​ ರೆಡ್ಡಿ' ಸಿನಿಮಾದ ನಂತರ ರಾತ್ರೋರಾತ್ರಿ ಸ್ಟಾರ್​ ಪಟ್ಟಕ್ಕೇರಿದ ನಟ ವಿಜಯ್​. ಟಾಲಿವುಡ್​ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲೂ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ. ನಟ ವಿಜಯ್​ ದೇವರಕೊಂಡ ಅವರು 'ಮೋಸ್ಟ್​ ಡಿಸೈರಬಲ್​ ಮ್ಯಾನ್​ 2108'ರ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಖ್ಯಾತಿ ದೇಶದಾದ್ಯಂತ ವ್ಯಾಪ್ತಿಸುತ್ತಿರುವುದಕ್ಕೆ ಇದು ಒಂದು ಉದಾಹರಣೆ. ಟೈಮ್ಸ್​ ಸಂಸ್ಥೆ ಭಾರತದಲ್ಲಿ ನಡೆಸಿರುವ 'ಮೋಸ್ಟ್​ ಡಿಸೈರಬಲ್​ ಮ್ಯಾನ್​ 2108 ಸಮೀಕ್ಷೆಯಲ್ಲಿ ಬಾಲಿವುಡ್​ ನಟ ವಿಕ್ಕಿ ಕೌಶಲ್​ ಮೊದಲ ಸ್ಥಾನ ಪಡೆದುಕೊಂಡರೆ, ವಿಜಯ್​ ದೇವರಕೊಂಡ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೃತಿಕ್​ ರೋಷನ್​, ಜಾನ್​ ಅಬ್ರಹಂ, ಸುಶಾಂತ್ ಸಿಂಗ್​ ಅವರನ್ನು ಹಿಂದಿಕ್ಕಿ ವಿಜಯ್​ ಈ ಸ್ಥಾನಕ್ಕೇರಿದ್ದಾರೆ

10 ವಿಶ್ವಕಪ್ ಪ್ರಶಸ್ತಿ ಮೊತ್ತ ಪ್ರಕಟ: ಚಾಂಪಿಯನ್ ತಂಡಕ್ಕೆ ಸಿಗಲಿರುವ ಮೊತ್ತ ಎಷ್ಟು ಗೊತ್ತೆ?

ವಿಶ್ವಕಪ್ ಕ್ರಿಕೆಟ್​ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಇದರ ಬೆನ್ನಲ್ಲೇ ಇಂಟರ್​ನ್ಯಾಷನಲ್ ಕ್ರಿಕೆಟ್​ ಕೌನ್ಸಿಲ್ ಈ ಬಾರಿಯ ವಿಶ್ವಕಪ್ ವಿಜೇತರರಿಗೆ ನೀಡುವ ಬಹುಮಾನ ಮೊತ್ತವನ್ನು ಪ್ರಕಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದೆ. ಮೇ.30 ರಂದು ವಿಶ್ವಕಪ್ ಆರಂಭವಾಗಲಿದ್ದು, ಈ ಪಂದ್ಯಾವಳಿಯಲ್ಲಿ ಸುಮಾರು 70 ಕೋಟಿ 20 ಲಕ್ಷ 40 ಸಾವಿರವನ್ನು ಬಹುಮಾನವಾಗಿ ನೀಡುವುದಾಗಿ ಐಸಿಸಿ ಘೋಷಿಸಿದೆ. ಈ ಹಿಂದಿನ ವಿಶ್ವಕಪ್​ ಹೋಲಿಸಿದರೆ ಈ ಬಾರಿ ವಿಜೇತರಿಗೆ ನೀಡುವ ಬಹುಮಾನ ಮೊತ್ತವನ್ನು ಏರಿಸಲಾಗಿದೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಹಲೋ-ಆ್ಯಪ್ ನಲ್ಲೂ ಹಿಂಬಾಲಿಸಿ'
First published:May 17, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ