Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

G Hareeshkumar | news18
Updated:May 16, 2019, 6:09 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 16, 2019, 6:09 PM IST
  • Share this:
1.ಕಮಲ್ ಹಾಸನ್​​​​ ಮೇಲೆ ಚಪ್ಪಲಿ ಎಸೆತ; ಓರ್ವ ಆರೋಪಿ ಪೊಲೀಸ್​​ ವಶಕ್ಕೆ

ನಟ, ಮಕ್ಕಳ ನೀಧಿ ಮಯ್ಯಂ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಅವರ ಮೇಲೆ ಅಪರಿಚಿತರು ಚಪ್ಪಲಿ ಎಸೆದ ಘಟನೆ ಬುಧವಾರ ನಡೆದಿದೆ. ನಿನ್ನೆ ಸಂಜೆ ತಮಿಳುನಾಡಿನ ತಿರುಪ್ಪರನಕುಂಡ್ರಂ ವಿಧಾನಸಭೆ ಕ್ಷೇತ್ರದಲ್ಲಿ ಕಮಲ್​​ ಹಾಸನ್​ ಚುನಾವಣೆ ಪ್ರಚಾರ ನಡೆಸುತ್ತಿದ್ದರು. ಇಲ್ಲಿನ ​ಸಾರ್ವಜನಿಕರನ್ನುದ್ದೇಶಿಸಿ ಕಮಲ್​​ ಮಾತನಾಡುತ್ತಿದ್ದಾಗ ಯಾರೋ ಚಪ್ಪಲಿ ಎಸೆದಿದ್ದಾರೆ. ಕಮಲ್​​ ವೇದಿಕೆ ಮೇಲಿದ್ದ ಕಾರಣ​​ ಚಪ್ಪಲಿ ಜನರ ಗುಂಪಿನ ನಡುವೆ ಬಿದ್ದಿದೆ. ಈ ಸಂಬಂಧ ಹನ್ನೊಂದರು ಜನರ ವಿರುದ್ಧ ದೂರು ದಾಖಲಾಗಿದೆ. ಬಿಜೆಪಿ ಮತ್ತು ಹನುಮಾನ್ ಸೇನೆಯ ಕಾರ್ಯಕರ್ತರ ವಿರುದ್ಧ ಮಕ್ಕಳ ನೀಧಿ ಮಯ್ಯಂ ಪಕ್ಷದವರು ಪೊಲೀಸರಿಗೆ ದೂರು ನೀಡಿದ್ದಾರೆ. ಸ್ವತಂತ್ರ ಭಾರತದ ಮೊದಲ ಭಯೋತ್ಪಾದಕ ನಾಥುರಾಮ್​​ ಗೋಡ್ಸೆ ಎಂದಿದ್ದಕ್ಕಾಗಿ ಕಮಲ್​​ ಮೇಲೆ ಚಪ್ಪಲಿ ಎಸೆಯಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಬ್ಬರನ್ನು ವಶಕ್ಕೆ ಪಡೆದಿದ್ದಾರೆ.

2. ಪುಲ್ವಾಮದಲ್ಲಿ ಗುಂಡಿನ ಸದ್ದು: ಓರ್ವ ಯೋಧ ಹುತಾತ್ಮ

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಗುಂಡಿನ ಸದ್ದು ಕೇಳಿ ಬಂದಿದೆ. ಇಲ್ಲಿನ ಪುಲ್ವಾಮಾದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುರುವಾರ ಬೆಳಿಗ್ಗೆಯೇ ಗುಂಡಿನ ಚಕಮಕಿ ನಡೆದಿದೆ. ಭದ್ರತಾ ಪಡೆಯ ಯೋಧರೊಬ್ಬರು ಹುತಾತ್ಮರಾಗಿದ್ದು, ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಸಿಆರ್‌ಪಿಎಫ್‌, ರಾಷ್ಟ್ರೀಯ ರೈಫಲ್ಸ್‌ ಹಾಗೂ ವಿಶೇಷ ಕಾರ್ಯಾಚರಣೆ ತಂಡಗಳು ಉಗ್ರರಿಗಾಗಿ ಶೋಧಕಾರ್ಯ ನಡೆಸುತ್ತಿದ್ದವು. ಈ ವೇಳೆ ಯೋಧರ ಮೇಲೆ ಉಗ್ರರು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರು. ಇದಕ್ಕೆ ಪ್ರತಿದಾಳಿ ನಡೆಸಿದ ಭದ್ರತಾ ಪಡೆಗಳು ತಕ್ಕ ಉತ್ತರ ನೀಡಿವೆ.

3. ಧ್ವಂಸಗೊಂಡ ವಿದ್ಯಾಸಾಗರ್ ಪ್ರತಿಮೆಯ ಸುತ್ತ ಬಿಜೆಪಿ-ಟಿಎಂಸಿ ರಾಜಕಾರಣ

ಈಶ್ವರ ಚಂದ್ರ ವಿದ್ಯಾಸಾಗರ್​ ಪ್ರತಿಮೆಯನ್ನು ತೃಣಮೂಲ ಕಾಂಗ್ರೆಸ್​ ನಾಯಕರು ಧ್ವಂಸಗೊಳಿಸಿದ್ದು, ನಾವು ಆ ಸ್ಥಳದಲ್ಲಿ ಬೃಹತ್​ ಪ್ರತಿಮೆ ನಿರ್ಮಾಣ ಮಾಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿ ಟಿಎಂಸಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಅವರು, "ಕೋಲ್ಕತ್ತಾದಲ್ಲಿ ಬುಧವಾರ ಸಹೋದರ ಅಮಿತ್​ ಷಾ ರೋಡ್​ ಶೋ ವೇಳೆ ಟಿಎಂಸಿ ನಾಯಕರು ಗೂಂಡಾಗಿರಿ ತೋರಿದ್ದಾರೆ. ಈ ವೇಳೆ ಅವರು ಸಾಮಾಜಿಕ ಸುಧಾರಕ ಈಶ್ವರ್​ ಚಂದ್ರ ವಿದ್ಯಾಸಾಗರ್​ ಪ್ರತಿಮೆ ಧ್ವಂಸಗೊಳಿಸಿದ್ದಾರೆ. ವಿದ್ಯಾಸಾಗರ್​ ಅವರ ಚಿಂತನೆ ಕುರಿತ ಒಲವು, ಬದ್ಧತೆಯನ್ನು ಹೊಂದಿರುವ ನಾವು, ಈ ಮೊದಲು ವಿದ್ಯಾಸಾಗರ್​ ಅವರ ಪ್ರತಿಮೆ ಇದ್ದ ಸ್ಥಳದಲ್ಲಿಯೇ ಹೊಸ ಬೃಹತ್​ ಪ್ರತಿಮೆ ನಿರ್ಮಾಣ ಮಾಡುತ್ತೇವೆ" ಎಂದು ಭರವಸೆ ನೀಡಿದ್ದಾರೆ

4. ಪ್ರಧಾನಿ ನರೇಂದ್ರ ಮೋದಿ ಅವರನ್ನುಕಾಲೆಳೆದ ಎಐಸಿಸಿ ಅಧ್ಯಕ್ಷ ರಾಹುಲ್ಕಾಂಗ್ರೆಸ್ ಪಕ್ಷದ ರಾಷ್ಟ್ರಾಧ್ಯಕ್ಷ ರಾಹುಲ್ ಗಾಂಧಿ ಮತ್ತೆ ಪ್ರಧಾನಿ ನರೇಂದ್ರ ಮೋದಿಯ ಕಾಲೆಳೆದಿದ್ದಾರೆ. “ಇಂಗ್ಲೀಷ್​ ಡಿಕ್ಷನರಿಯಲ್ಲಿ ‘ಮೋದಿಲೈ’ (modilie-ಮೋದಿ ಸುಳ್ಳು) ಎಂಬ ಹೊಸ ಪದವೊಂದು ಸೇರ್ಪಡೆಯಾಗಿದೆ. ಮೋದಿಲೈ ಎಂದರೆ ನಿರಂತರವಾಗಿ ಸತ್ಯವನ್ನು ಮಾರ್ಪಡಿಸುವವನು ಎಂದು ಅರ್ಥ” ಎಂದಿರುವ ರಾಹುಲ್ ಡಿಕ್ಷನರಿ ಪೋಟೋ ಸಮೇತ ಟ್ವೀಟ್ ಮಾಡುವ ಮೂಲಕ ಪ್ರಧಾನಿಯನ್ನು ಕಿಚಾಯಿಸಿದ್ದಾರೆ. ಆಕ್ಸ್​ಫರ್ಡ್​ ಡಿಕ್ಷನರಿಯಲ್ಲಿ ‘ಮೋದಿಲೈ’ ಎಂದು ಟೈಪಿಸಿದರೆ ಅಲ್ಲಿ “ಸುಮ್ಮನೆ ಸುಳ್ಳು, ದಿನಂಪ್ರತಿ ಸುಳ್ಳು ಮತ್ತು ವಿಶ್ರಾಂತಿ ಇಲ್ಲದೆ ಸುಳ್ಳು” ಎಂಬ ಫಲಿತಾಂಶಗಳು ಹೊರಬರುತ್ತಿವೆ ಎಂಬ ರೀತಿಯಲ್ಲಿ  ಪೋಟೋ ತೆಗೆದು ಟ್ವೀಟ್ ಮಾಡಿರುವ ರಾಹುಲ್ ಗಾಂಧಿ ಆ ಮೂಲಕ ಮೋದಿಯ ಸುಳ್ಳು ಆಶ್ವಾಸನೆಗಳ ಬಗ್ಗೆ ಮತ್ತೆ ಅವಹೇಳನ ಮಾಡಿದ್ದಾರೆ. ಅಲ್ಲದೆ ಮೋದಿಯೊಬ್ಬ ಸುಳ್ಳುಗಾರ ಎಂದು ಮತ್ತೆ ಮತ್ತೆ ಬಹಿರಂಗವಾಗಿ ಪ್ರಸ್ತಾಪಿಸುತ್ತಿದ್ದಾರೆ

5. ಫನಿ ಚಂಡಮಾರುತದಿಂದ 12 ಸಾವಿರ ಕೋಟಿ ನಷ್ಟ

ಫನಿ ಚಂಡಮಾರುತದಿಂದ ರಾಜ್ಯಕ್ಕೆ ಸುಮಾರು 12 ಸಾವಿರ ಕೋಟಿ ರೂ. ನಷ್ಟವಾಗಿದೆ. 64 ಜನ ಮೃತಪಟ್ಟಿದ್ದಾರೆ, ಸುಮಾರು 5 ಲಕ್ಷಕ್ಕೂ ಹೆಚ್ಚು ಜನ ಮನೆ ಮಠ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ ಎಂದು ಒಡಿಶಾ ಸರ್ಕಾರ ಕೇಂದ್ರಕ್ಕೆ ತಾತ್ಕಾಲಿಕ ವರದಿ ಸಲ್ಲಿಸಿದೆ. ಫನಿ ಚಂಡಮಾರುತದಿಂದ ಉಂಟಾದ ನಷ್ಟದ ಕುರಿತು ಅಂದಾಜಿಸಲು ಬುಧವಾರ ಕೇಂದ್ರ ತಂಡ ಬುಧವಾರ ಒಡಿಶಾಗೆ ಭೇಟಿ ನೀಡಿತ್ತು. ಈ ವೇಳೆ ರಾಜ್ಯ ಸರ್ಕಾರ ಕೇಂದ್ರದ ತಂಡಕ್ಕೆ 12 ಸಾವಿರ ಕೋಟಿ ನಷ್ಟ ಉಂಟಾಗಿದೆ ಎಂದು ಪ್ರಾಥಮಿಕ ವರದಿ ಸಲ್ಲಿಸಿದೆ. ಅಲ್ಲದೆ ಇದು ಅಂದಾಜಿನ ನಷ್ಟದ ಪ್ರಮಾಣವಾಗಿದ್ದು, ನಷ್ಟದ ವಾಸ್ತವಿಕ ಪ್ರಮಾಣ ತಿಳಿಯಲು ಅಧಿಕಾರಿಗಳು ಶೀಘ್ರದಲ್ಲಿ ಮನೆ ಮನೆಗೂ ಭೇಟಿ ನೀಡಿ ಸಮೀಕ್ಷೆ ನಡೆಸಲಿದ್ದಾರೆ. ಸಮೀಕ್ಷೆಯಲ್ಲಿ ನಷ್ಟದ ಪ್ರಮಾಣ ಅಧಿಕವಾಗುವ ಸಾಧ್ಯತೆ ಇದೆ. ಸಮೀಕ್ಷೆ ಪೂರ್ಣಗೊಂಡ ಬಳಿಕ ವಿವರವಾದ ವರದಿಯನ್ನು ಸಿದ್ದಪಡಿಸಲಾಗುವುದು ಎಂದು ಒಡಿಶಾ ರಾಜ್ಯ ಸರ್ಕಾರದ ವಿಶೇಷ ಪರಿಹಾರ ಆಯುಕ್ತ ಬಿ.ಪಿ. ಸೇಠಿ ತಿಳಿಸಿದ್ದಾರೆ

6 ಚುನಾವಣೆ ಮುಗಿಯುತ್ತಿದ್ದಂತೆ ಸರ್ಕಾರದಿಂದ ಬೆಲೆ ಏರಿಕೆ ಅಸ್ತ್ರ

ಲೋಕಸಭೆ ಚುನಾವಣೆ ಮುಗಿಯುತ್ತಿದ್ದಂತೆ ರಾಜ್ಯದ ಜನರ ಮೇಲೆ ಬೆಲೆ ಏರಿಕೆ ಬಿಸಿ ತಾಗಿಸಲು ಸರ್ಕಾರ ಸಿದ್ದವಾಗಿದೆ. ಕುಡಿಯುವ ನೀರಿನ ದರ ಏರಿಸುವ ಮೂಲಕ ಬೆಂಗಳೂರಿನ ಜನರಿಗೆ ಶಾಕ್ ನೀಡುವ ಸೂಚನೆಯನ್ನು ಈ ಮುಂಚೆಯೇ ನೀಡಿದ್ದ ಸರ್ಕಾರ ಇದೀಗ ವಿದ್ಯುತ್​ ದರದಲ್ಲೂ ಏರಿಕೆ ಮಾಡುವ ಮೂಲಕ ಎಲ್ಲರ ಜೇಬಿಗೂ ಕತ್ತರಿ ಹಾಕಲು ಮುಂದಾಗಿದೆ. ಈಗಾಗಲೇ ಬೆಲೆ ಏರಿಕೆ ಪ್ರಮಾಣದ ಕುರಿತು ವಿದ್ಯುತ್ ಇಲಾಖೆ ಹಾಗೂ ಬೆಂಗಳೂರು ಜಲ ಮಂಡಳಿ(ಬಿಡಬ್ಲ್ಯೂಎಸ್​ಎಸ್​ಬಿ) ಕಳೆದ ಜನವರಿ-ಫೆಬ್ರವರಿ ತಿಂಗಳಲ್ಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಚುನಾವಣೆ ಇದ್ದ ಕಾರಣ ಸರ್ಕಾರ ಬೆಲೆ ಏರಿಕೆ ಮಾಡಲು ಮುಂದಾಗಿರಲಿಲ್ಲ. ಆದರೆ, ಗುರುವಾರ ಮುಖ್ಯಮಂತ್ರಿ ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಇಂಧನ ಹಾಗೂ ಜಲಮಂಡಳಿ ಇಲಾಖೆ ಅಧಿಕಾರಿಗಳ ಜೊತೆಗೆ ಸಭೆ ನಡೆಸಿದ್ದು ಮೇ.23ರ ಫಲಿತಾಂಶದ ನಂತರ ಬೆಲೆ ಏರಿಸಲು  ಸಿಎಂ ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

 7.ಮಾಜಿ ಸಿಎಂ -ಹಾಲಿ ಸಿಎಂ ಟ್ವೀಟ್​ ವಾರ್

ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿಯಾಗಬೇಕಿತ್ತು ಎಂಬ ನನ್ನ ಹೇಳಿಕೆಗೆ ರಾಜಕೀಯ ಬಣ್ಣಕಟ್ಟಿ ಅಪಾರ್ಥ ಕಲ್ಪಿಸುವಂತೆ ವಿಶ್ಲೇಷಿಸುವುದು ಆರೋಗ್ಯಕರವಲ್ಲ ಎಂದು ಸಿಎಂ ಕುಮಾರಸ್ವಾಮಿ ವಿಷಾಧ ವ್ಯಕ್ತಪಡಿಸಿದ್ದಾರೆ. ಬುಧವಾರ ಹುಬ್ಬಳ್ಳಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಪ್ರಸ್ತುತ ಭುಗಿಲೆದ್ದಿರುವ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬ ಕೂಗಿನ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ್ದ ಸಿಎಂ ಕುಮಾರಸ್ವಾಮಿ, "ಮಲ್ಲಿಕಾರ್ಜುನ ಖರ್ಗೆ ಹೆಸರನ್ನು ಪ್ರಸ್ತಾಪಿಸಿ, ಖರ್ಗೆಗೆ ಇರುವ ಸಾಮರ್ಥ್ಯಕ್ಕೆ ಅವರು ಎಂದೋ ಮುಖ್ಯಮಂತ್ರಿಯಾಗಬೇಕಿತ್ತು” ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಈ ಹೇಳಿಕೆ ಮೂಲಕ ಸಿಎಂ ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮಯ್ಯ ಬಣದ ವಿರುದ್ಧ ಮಲ್ಲಿಕಾರ್ಜುನ ಖರ್ಗೆ ಅವರನ್ನು ಎತ್ತಿಕಟ್ಟುವ ಪ್ರಯತ್ನ ಮಾಡುತ್ತಿದ್ಧಾರೆ ಎಂದೇ ಅನುಮಾನಿಸಲಾಗಿತ್ತು.

8.ವಿದ್ಯುತ್ ಸ್ಪರ್ಶಿಸಿದ ಬಾಲಕನ ಸ್ಥಿತಿ ಗಂಭೀರ 

ಆಟವಾಡುತ್ತಿದ್ದ ಬಾಲಕನಿಗೆ ವಿದ್ಯುತ್ ತಂತಿ ಸ್ಪರ್ಶಿಸಿ  ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಮತ್ತಿಕೆರೆಯ ನೇತಾಜಿ ಸರ್ಕಲ್​​​ ಬಳಿ ನಡೆದಿದೆ.  ಗಾಯಗೊಂಡ ಬಾಲಕನನ್ನು14 ವರ್ಷದ ಲಿಖಿತ್ ಎಂದು ಗುರುತಿಸಲಾಗಿದೆ. ರಜೆ ಹಿನ್ನೆಲೆ ಬಾಲಕ ತಮ್ಮ ಮನೆಯ ಮುಂದೆ ಕ್ರಿಕೆಟ್​ ಆಟವಾಡುತ್ತಿದ್ದ. ಈ ವೇಳೆ ಬಾಲು ಮನೆಯ ಮಹಡಿ ಮೇಲೆ ಹೋಗಿದೆ. ಬಾಲ್​ ತರಲು ಮಹಡಿ ಹತ್ತಿದ್ದ ಬಾಲಕ, ಅಚಾನಕ್ಕಾಗಿ ಅಲ್ಲಿಯೇ ಬಿದ್ದಿದ್ದ ಹೈ ಟೆನ್ಷ್ಯನ್​ ವೈರ್​ ತುಳಿದಿದ್ದಾನೆ. ಪರಿಣಾಮ ಬಾಲಕನಿಗೆ ಶಾಕ್​ ಹೊಡೆದಿದೆ. ಶಾಕ್​ನಿಂದ ಗಂಭೀರವಾಗಿ ಗಾಯಗೊಂಡಿದ್ದ ಬಾಲಕನ ದೇಹ ಶೇ.40 ರಷ್ಟು ಸುಟ್ಟುಹೋಗಿದೆ. ಬಾಲಕ ಪ್ರಾಣಾಪಾಯದಿಂದ ಪಾರಾಗಿದ್ದು, ಆವನನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

9. World Cup 2019: ವಿಶ್ವಕಪ್​ನಲ್ಲಿ ಸಚಿನ್ ಬರೆದ​ 10 ದಾಖಲೆಗಳು

ವಿಶ್ವಕಪ್ ಕ್ರಿಕೆಟ್​ ಜ್ವರ ನಿಧಾನಕ್ಕೆ ಕಾವೇರುತ್ತಿದೆ. ಈ ಬಾರಿಯ ಐಸಿಸಿ ಟ್ರೋಫಿಗಾಗಿ ಹತ್ತು ತಂಡಗಳು ಕಣಕ್ಕಿಳಿಯಲಿದ್ದು, ಈಗಾಗಲೇ ಆಟಗಾರರು ಕಠಿಣ ಪರಿಶ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ. 2019 ರ ವಿಶ್ವಕಪ್ ಕ್ರಿಕೆಟ್​ ಜನಕ ಇಂಗ್ಲೆಂಡ್ ಹಾಗೂ ವೇಲ್ಸ್​ನಲ್ಲಿ ನಡೆಯುತ್ತಿರುವುದು ವಿಶೇಷ. ವಿಶ್ವ ಕ್ರಿಕೆಟ್​ ಜಗತ್ತಿನ ಅತ್ಯುತ್ತಮ ಪಿಚ್​ಗಳನ್ನು ಹೊಂದಿರುವ ಆಂಗ್ಲರ ನಾಡಿನಲ್ಲಿ ಕ್ರಿಕೆಟ್ ಪ್ರೇಮಿಗಳು ರೋಚಕ ಹೋರಾಟದ ನಿರೀಕ್ಷೆಯಲ್ಲಿದ್ದಾರೆ. ಅದರಲ್ಲೂ ಭಾರತದ ದಿಗ್ಗಜ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಹೆಸರಿನಲ್ಲಿ ಹತ್ತು ಹಲವು ವಿಶ್ವಕಪ್ ದಾಖಲೆಗಳಿದ್ದು, ಇದನ್ನು ಅಳಿಸಿ ಹಾಕುವ ಆಟಗಾರ ಯಾರೆಂಬ ಕುತೂಹಲ ಕ್ರೀಡಾ ಪ್ರೇಮಿಗಳಲ್ಲಿದೆ.

10. ಉಪರಾಷ್ಟ್ರಪತಿ ಮೆಚ್ಚಿದ 'ಮಹರ್ಷಿ' ಸಿನಿಮಾ

ಟಾಲಿವುಡ್​ ಪ್ರಿನ್ಸ್​ ಮಹೇಶ್​ ಬಾಬು ಅಭಿನಯದ 25ನೇ ಸಿನಿಮಾ ಬಾಕ್ಸಾಫಿಸ್​ನಲ್ಲಿ ಧೂಳೆಬ್ಬಿಸುತ್ತಿದೆ. ತೆರೆ ಕಂಡಾಗಿನಿಂದ ಕೋಟಿ ಕೋಟಿ ಲೂಟಿ ಮಾಡುತ್ತಾ ನಾಲ್ಕು ದಿನಗಳಲ್ಲೇ ಜಾಗತಿಕ ಮಟ್ಟದಲ್ಲಿ 100 ಕೋಟಿ ಬಾಚಿಕೊಂಡಿದೆ. ಈ ಚಿತ್ರದಲ್ಲಿ ಆಯ್ಕೆ ಮಾಡಿಕೊಳ್ಳಲಾಗಿರುವ ರೈತರಿಗೆ ಜನರು ಯಾವ ರೀತಿಯಲ್ಲಿ ನೆರವಾಗಬೇಕು ಹಾಗೂ ಕೃಷಿ ನಮಗೆ ಎಷ್ಟು ಮುಖ್ಯ ಎಂದು ತೋರಿಸಲಾಗಿದೆ. ಈ ಚಿತ್ರದ ಕಥಾ ವಸ್ತು ಹಾಗೂ ನೀಡಲಾಗಿರುವ ಸಂದೇಶಕ್ಕೆ ಸಾಕಷ್ಟು ಮಂದಿ ಫಿದಾ ಆಗಿದ್ದಾರೆ. ಇದಕ್ಕೆ ನಮ್ಮ ದೇಶ್ ಉಪರಾಷ್ಟರಪತಿ ಅವರೂ ಹೊರತಾಗಿಲ್ಲ. ಉಪರಾಷ್ಟ್ರಪತಿ  ಎಂ. ವೆಂಕಯ್ಯ ನಾಯ್ಡು ಅವರು 'ಮಹರ್ಷಿ' ಸಿನಿಮಾ ನೋಡಿದ್ದು, ಅದರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಟ್ವೀಟ್​ ಮಾಡಿದ್ದಾರೆ.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​ಚಾಟ್​  ನಲ್ಲೂ ಹಿಂಬಾಲಿಸಿ'
First published: May 16, 2019, 6:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading