Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:May 15, 2019, 9:36 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
  • News18
  • Last Updated: May 15, 2019, 9:36 PM IST
  • Share this:
1.ಬಿಜೆಪಿಗೆ ಭಾರೀ ಬಹುಮತ; ರಾಜನಾಥ್​ ಸಿಂಗ್​ ಭವಿಷ್ಯ

ಬಿಜೆಪಿ ಸರಳ ಬಹುಮತಕ್ಕಿಂತ ಹೆಚ್ಚಿನ ಸೀಟು ಗೆಲ್ಲಲಿದೆ ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್ ಭವಿಷ್ಯ ನುಡಿದಿದ್ದಾರೆ. ಕಳೆದ ಎರಡು ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಗೆ ಭಾರಿ ಬಹುಮತ ಸಿಗಲಿದೆ. ಐದು ವರ್ಷಗಳ ಹಿಂದೆ ಜನರಿಗೆ ನೀಡಿದ್ದ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿಯವರು ಈಡೇರಿಸಿದ್ಧಾರೆ. ಹಾಗಾಗಿ ಮತದಾರ ಈ ಸಲವೂ ಭಾರೀ ಬಹುಮತದೊಂದಿಗೆ ಬಿಜೆಪಿಯನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಕೇಂದ್ರ ಸಚಿವ ರಾಜನಾಥ್​​ ಸಿಂಗ್​ ಅವರು, ಪ್ರಧಾನಿ ಮೋದಿಯವರ ಮೇಲೆ ಜನರಿಗಿದ್ದ ಭರವಸೆ ಈಗ ನಂಬಿಕೆಯಾಗಿ ಪರಿವರ್ತನೆ ಆಗಿದೆ. ನಮ್ಮ ಆಡಳಿತದ ಕಳೆದ ಐದು ವರ್ಷಗಳಲ್ಲಿ ಎಲ್ಲಿಯೂ ಹಣದುಬ್ಬರ ಸಮಸ್ಯೆ ಎದುರಾಗಲಿಲ್ಲ. ಚುನಾವಣಾ ಪ್ರಚಾರ ಸಂದರ್ಭದಲ್ಲೂ ಎಲ್ಲಿಯೂ ಕೇಳಿ ಬರಲಿಲ್ಲ. ಈ ಸಾಧನೆ ಕೇಂದ್ರ ಸರ್ಕಾರದ ಹಣಕಾಸು ಸಾಮರ್ಥ್ಯವನ್ನು ತೋರಿಸುತ್ತದೆ' ಎಂದರು

2ರಾಹುಲ್​ ವಿರುದ್ಧ ಮೋದಿ ಕಿಡಿ

1984ರ ಸಿಖ್​ ಹತ್ಯಾಕಾಂಡದ ಕುರಿತು ಸ್ಯಾಮ್ ಪಿತ್ರೋಡ ಹೇಳಿಕೆ ಖಂಡನಾರ್ಹ ಆದರೆ, ನೀವು ಆ ಹೇಳಿಕೆಯನ್ನು ಟೀಕಿಸುವ ನಾಟಕವಾಡಬೇಡಿ ಬದಲಿಗೆ ಇಷ್ಟು ವರ್ಷ ಸಿಖ್ ಹತ್ಯಾಕಾಂಡದ ಬಲಿಪಶುಗಳಿಗೆ ನ್ಯಾಯ ಒದಗಿಸಲಾಗದ್ದನ್ನು ನೆನೆದು ನಾಚಿಕೆಪಟ್ಟುಕೊಳ್ಳಿ ಎಂದು ಕಾಂಗ್ರೆಸ್ ರಾಷ್ಟ್ರಾಧ್ಯಕ್ಷ ರಾಹುಲ್ ವಿರುದ್ಧ ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದ್ದಾರೆ.ಲಕಳೆದ ವಾರ ಪತ್ರಿಕಾಗೋಷ್ಠಿ ನಡೆಸಿದ್ದ ಕಾಂಗ್ರೆಸ್ ಹಿರಿಯ ನಾಯಕ, ಸಾಗರೋತ್ತರ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಸ್ಯಾಮ್ ಪಿತ್ರೋಡ 1984ರ ಸಿಖ್ ಹತ್ಯಾಕಾಂಡ ಕುರಿತ ಪತ್ರಕರ್ತರ ಪ್ರಶ್ನೆಗೆ ಉತ್ತರಿಸುತ್ತಾ ‘ಆಗಿದ್ದು ಆಗಿ ಹೋಗಿದೆ’ (ಹುವಾ ತೋ ಹುವಾ) ಎಂಬರ್ಥದಲ್ಲಿ ಹೇಳಿಕೆ ನೀಡಿದ್ದರು. ಅವರ ಈ ಹೇಳಿಕೆ ಸಿಖ್ ಸಮುದಾಯವನ್ನು ಕೆರಳಿಸಿತ್ತು. ಅಲ್ಲದೆ ವಿರೋಧ ಪಕ್ಷಗಳು ಸೇರಿದಂತೆ ಸ್ವಪಕ್ಷೀಯರಿಂದಲೇ ಈ ಹೇಳಿಕೆ ಟೀಕೆಗೆ ಒಳಗಾಗಿತ್ತು

3 ಜೆಟ್ ಏರ್​ವೇಸ್ ಸಿಇಒ ರಾಜೀನಾಮೆ

ಹಣಕಾಸು ಬಿಕ್ಕಟ್ಟಿಗೆ ಸಿಲುಕಿರುವ ಜೆಟ್ ಏರ್​ವೇಸ್ ಸಂಸ್ಥೆಯ ಇಬ್ಬರು ಅಗ್ರಗಣ್ಯ ಅಧಿಕಾರಿಗಳು ರಾಜೀನಾಮೆ ನೀಡಿದ್ದಾರೆ. ಇವತ್ತು ಬೆಳಗ್ಗೆ ಚೀಫ್ ಫೈನಾನ್ಷಿಯಲ್ ಆಫೀಸರ್ (ಮುಖ್ಯ ಹಣಕಾಸು ಅಧಿಕಾರಿ) ಅಮಿತ್ ಅಗರ್ವಾಲ್ ರಾಜೀನಾಮೆ ನೀಡಿದರು. ಇದರ ಬೆನ್ನಲ್ಲೇ ಮಧ್ಯಾಹ್ನ ಮುಖ್ಯ ಕಾರ್ಯಕಾರಿ ಅಧಿಕಾರಿ (ಸಿಇಓ) ವಿನಯ್ ದುಬೇ ಕೂಡ ರಾಜೀನಾಮೆ ನೀಡಿದ್ಧಾರೆ. ವೈಯಕ್ತಿಕ ಕಾರಣಗಳನ್ನು ನೀಡಿ ಇಬ್ಬರೂ ಕಂಪನಿಗೆ ವಿದಾಯ ಹೇಳಿದರೆನ್ನಲಾಗಿದೆ.

4.ಕಮಲ್​ ಹೇಳಿಕೆಗೆ ನೋ ಕಾಮೆಂಟ್ಸ್​ ಎಂದ ರಜನಿಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಕುರಿತ ನಟ ಹಾಗೂ ಮಕ್ಕಳ್ ನೀಧಿ ಮಯ್ಯಂ ಸಂಸ್ಥಾಪಕ ಕಮಲಹಾಸನ್ ಅವರ ಹೇಳಿಕೆಗೆ ತಾವು ಪ್ರತಿಕ್ರಿಯೆ ನೀಡುವುದಿಲ್ಲ  ಎಂದು ಸೂಪರ್ ಸ್ಟಾರ್ ರಜಿನೀಕಾಂತ್ ತಿಳಿಸಿದ್ದಾರೆ. ತಮಿಳುನಾಡಿನ ತಿರುಪ್ಪರಕುಂಡ್ರಂ, ಅರವಕ್ಕುರುಚ್ಚಿ ಸೇರಿಂದತೆ 4 ವಿಧಾನಸಭಾ ಕ್ಷೇತ್ರಗಳಿಗೆ ಇದೇ ಮೇ.19 ರಂದು ಉಪ ಚುನಾವಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ಅರವಕ್ಕುರುಚ್ಚಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ತಮ್ಮ ಪಕ್ಷದ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದ ಕಮಲ ಹಾಸನ್, “ಮುಸ್ಲಿಂ ಜನ ಹೆಚ್ಚಿರುವ ಕಾರಣ ನಾನು ಇದನ್ನು ಹೇಳುತ್ತಿಲ್ಲ. ಮಹಾತ್ಮಾ ಗಾಂಧಿಯ ಪ್ರತಿಮೆ ಮುಂದೆ ನಿಂತು ಈ ಹೇಳಿಕೆ ನೀಡುತ್ತಿದ್ದೇನೆ. ಸ್ವಾತಂತ್ರ್ಯ ಭಾರತದ ಮೊದಲ ಉಗ್ರ ಓರ್ವ ಹಿಂದೂ. ಆತನ ಹೆಸರು ನಾಥೂರಾಮ್ ವಿನಾಯಕ್ ಗೋಡ್ಸೆ” ಎಂದು ಹೇಳುವ ಮೂಲಕ ಹೊಸ ವಿವಾದಕ್ಕೆ ನಾಂದಿ ಹಾಡಿದ್ದರು

5.ಸಿಎಂ ಆಗುವ ಆತುರ ನನಗೆ ಇಲ್ಲ; ಡಿಕೆ ಶಿವಕುಮಾರ್​

ನಾನು ಸಿಎಂ ಆಗಬೇಕೆಂದು ಆತುರದಲ್ಲಿ ಇಲ್ಲ. ಇನ್ನು ನಾಲ್ಕು ವರ್ಷ ಕುಮಾರಸ್ವಾಮಿ ಸಿಎಂ ಆಗಿ ಮುಂದುವರೆಯಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ. ನಂತರ ನಮ್ಮ ಪಕ್ಷದ ನಾಯಕರು ಏನು ಮಾಡುತ್ತಾರೆ ನೋಡೋಣ ಎಂದು ಸಚಿವ ಡಿಕೆ ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ನ್ಯೂಸ್​ 18 ಕನ್ನಡದೊಂದಿಗೆ ಮಾತನಾಡಿದ ಅವರು, ನಾನು ಸನ್ಯಾಸಿಯಲ್ಲ, ಆಸೆಯಿಲ್ಲ ಅಂತಾ ಹೇಳಿಕೊಳ್ಳಲ್ಲ. ಮಾಡೋ ಪ್ರಯತ್ನ ಎಲ್ಲ ಮಾಡುತ್ತೇನೆ, ಫಲಿತಾಂಶ ದೇವರಿಗೆ ಬಿಟ್ಟದ್ದು ಎನ್ನುವ ಮೂಲಕ ತಾವು ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂಬುದನ್ನು ಹೇಳಿದರು. ಕಳೆದ ವರ್ಷ ನನ್ನ ಹುಟ್ಟುಹಬ್ಬದ ದಿನ ಚುನಾವಣೆ ಫಲಿತಾಂಶವಿತ್ತು. ಈ ವರ್ಷ ನನ್ನ ಆತ್ಮೀಯ ಸ್ನೇಹಿತನ ಚುನಾವಣೆ ಮಾಡ್ತಾ ಇದೀನಿ. ಅಭಿಮಾನಿಗಳ, ಕಾರ್ಯಕರ್ತರು ಹುಡುಕಿಕೊಂಡು ಹುಬ್ಬಳ್ಳಿಗೆ ಬರಬೇಡಿ. ನಾಳೆ ನನ್ನ ಆರಾಧ್ಯ ದೈವ ಲಕ್ಷ್ಮೇಶ್ವರದ ಮುಕ್ತಿ ಮಂದಿರಕ್ಕೆ ಭೇಟಿ ಕೊಡುತ್ತಿದ್ದೇನೆ. ನಿಮ್ಮ ಆಶೀರ್ವಾದ, ಅಭಿಮಾನ ನನ್ನ ಜೊತೆಗಿದೆ.

6.ನಿಖಿಲ್​ ಗೆಲುವು ಸಿದ್ದರಾಮಯ್ಯಗೆ ಇಷ್ಟವಿಲ್ಲ

ಸಮ್ಮಿಶ್ರ ಸರ್ಕಾರಕ್ಕೆ ಸಿದ್ದರಾಮಯ್ಯ ಟೈಮ್​ ಬಾಂಬ್​​ ಫಿಕ್ಸ್​​ ಮಾಡಿದ್ದಾರೆ. ಸಮಯ ನಿಗದಿ ಮಾಡಿ ಬಟನ್​ ಒತ್ತಿದರೆ ಬಾಂಬ್​ ಸ್ಫೋಟವಾಗುತ್ತದೆ. ಮೇ 23ರ ಬಳಿಕ ಸಿದ್ದರಾಮಯ್ಯ ಆ ಬಾಂಬ್​​ ಬಟನ್​ ಒತ್ತುತ್ತಾರೆ. ಮೈತ್ರಿ ಸರ್ಕಾರದ ಎಲ್ಲಾ ಗೊಂದಲಗಳ ಕೇಂದ್ರ ಬಿಂದು ಸಿದ್ದರಾಮಯ್ಯ ಎಂದು ಮಾಜಿ ಸಿಎಂ ಜಗದೀಶ್​​ ಶೆಟ್ಟರ್​ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದರು. ಸುಮಲತಾ ಅಂಬರೀಶ್​ ಸ್ಪರ್ಧೆ ಹಿಂದೆ ಸಿದ್ದರಾಮಯ್ಯ ಇದ್ದಾರೆ. ಪಕ್ಷೇತರವಾಗಿ ಸ್ಪರ್ಧೆ ಮಾಡುವಂತೆ ಸಿದ್ದರಾಮಯ್ಯನವರೇ ಹೇಳಿದ್ದಾರೆ. ಸಿದ್ದರಾಮಯ್ಯ ಆಪ್ತರೆಲ್ಲ ಸುಮಲತಾ ಜೊತೆ ಔತಣಕೂಟದಲ್ಲಿ ಪಾಲ್ಗೊಂಡಿದ್ದೆ ಇದಕ್ಕೆ ಸಾಕ್ಷಿ. ನಿಖಿಲ್​​ ಕುಮಾರಸ್ವಾಮಿ ಗೆದ್ದು ಬರುವುದು ಸಿದ್ದರಾಮಯ್ಯಗೆ ಬೇಕಾಗಿಲ್ಲ. ಮೈತ್ರಿಯಲ್ಲಿನ ಮುಸುಕಿನ ಗುದ್ದಾಟ ಈಗ ಹೊರಗೆ ಬರುತ್ತಿದೆ ಎಂದರು.

7.ಜನ ಆಶೀರ್ವದಿಸಿದರೆ ಸಿಎಂ ಆಗುವೆ; ಸಿದ್ದರಾಮಯ್ಯ

ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ವಿಚಾರ ವ್ಯಾಪಕವಾಗಿದ್ದು, ದೋಸ್ತಿ ನಾಯಕರ ನಡುವೆ ಆರೋಪ-ಪ್ರತ್ಯಾರೋಪಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ ಎಂದು ಕಾಂಗ್ರೆಸ್​ ಕೆಲ ಶಾಸಕರು ದಿನನಿತ್ಯ ಹೇಳಿಕೆ ನೀಡುತ್ತಿದ್ದರೆ ಇದಕ್ಕೆ ಜೆಡಿಎಸ್​ ಕೆಲ ಮುಖಂಡರು ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಸಿದ್ದರಾಮಯ್ಯ ಅವರನ್ನು ಟೀಕಿಸುತ್ತಿದ್ದಾರೆ. ಮುಖ್ಯಮಂತ್ರಿ ವಿಚಾರವಾಗಿ ಇಂದು ಮತ್ತೆ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ, ಜನರ ಆಶೀರ್ವಾದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​  ಬಹುಮತ ಪಡೆದರೆ ಆಗ ನಾನೇ ಮುಖ್ಯಮಂತ್ರಿ ಆಗಬಹುದು. ಈಗ ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಅವರೇ ಸಿಎಂ ಆಗಿ ಮುಂದುವರೆಯಲಿದ್ದಾರೆ. ನಾನು ಮುಂದಿನ  ಚುನಾವಣೆಗೆ ನಿಲ್ಲುವುದಿಲ್ಲ. ನನ್ನ ಹೇಳಿಕೆಗೆ ಬದ್ಧವಾಗಿದ್ದೇನೆ ಎಂದು ಹೇಳಿದ್ದಾರೆ.

8ಬರ ನಿರ್ವಹಣೆಗೆ ಮುಂದಾದ ಸಿಎಂ

ಕಳೆದ ಎರಡು ತಿಂಗಳಿನಿಂದ ಚುನಾವಣಾ ಪ್ರಚಾರ ಹಾಗೂ ರೆಸಾರ್ಟ್, ರೆಸ್ಟ್ ಎಂದು ಜನರ ಹಾಗೂ ವಿರೋಧ ಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ ಕೊನೆಗೂ ರಾಜ್ಯದ ಬರ ಪರಿಸ್ಥಿತಿ ನಿರ್ವಹಣೆಗೆ ಮುಂದಾಗಿದ್ದಾರೆ. ಮೇ.15ರಂದು ಕಲಬುರಗಿ ಹಾಗೂ ಧಾರವಾಡ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಎಲ್ಲಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸಮಾಲೋಚನೆ ನಡೆಸಲಿರುವ ಮುಖ್ಯಮಂತ್ರಿ, ಬರದ ಕುರಿತು ಸಂಪೂರ್ಣ ಮಾಹಿತಿ ಸಂಗ್ರಹಿಸಲಿದ್ದಾರೆ. ಅಲ್ಲದೆ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ, ಜಾನುವಾರುಗಳ ರಕ್ಷಣೆಗೆ ಮೇವು ಬ್ಯಾಂಕ್, ಉದ್ಯೋಗ ಸೃಜನೆ ಕಾಮಗಾರಿಗಳ ಪ್ರಗತಿ ಸೇರಿದಂತೆ ಹಲವಾರು ವಿಚಾರಗಳ ಕುರಿತು ಚರ್ಚಿಸಲಿದ್ದಾರೆ

9.ಕೂಲ್​ ಕೂಲ್​ ಸುಮಲತಾ

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಕೆಲವೇ ದಿನಗಳು ಬಾಕಿ ಇದೆ. ಈ ನಡುವೆ ತಮ್ಮ ಸಿನಿಮಾ ಬಿಡುಗಡೆ ಕುರಿತು ಮಾತನಾಡಿರುವ ನಟಿ ಇದು ನನ್ನ ಸಿನಿಮಾ ಖುಷಿಯಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇನೆ. ಯಾವ ರಾಜಕೀಯ ಒತ್ತಡಾನೂ ಇಲ್ಲ. ಚುನಾವಣಾ ಫಲಿತಾಂಶದ ಬಗ್ಗೆ ತುಂಬಾ ತಲೆಕೆಡಿಸಿಕೊಂಡಿಲ್ಲ. ನಾನು ಅಷ್ಟೊಂದು ಚಿಂತೆ ನಾನು ಮಾಡಲ್ಲ. ಅಂಬರೀಷ್​ ಚುನಾವಣಾ ಫಲಿತಾಂಶ ಇದ್ದಾಗ ಬಿಂದಾಸ್ ಆಗಿ ಇರುತ್ತಿದ್ದರು. ಆದರೆ ನನಗೆ ಸ್ವಲ್ಪ ಕುತೂಹಲವಿದೆ. ದಿನಕ್ಕೊಂದು ಸಮೀಕ್ಷೆ ಬರುತ್ತಿದೆ. ಅದರ ಕುರಿತು ನಾನೇನು ಚಿಂತಿಸುತ್ತಿಲ್ಲ. ನರೇಂದ್ರ ಸ್ವಾಮಿ- ಅನ್ನದಾನಿ ನಡುವಿನ ಮನಸ್ತಾಪಕ್ಕೆ ನಾನು ಕಾರಣವಲ್ಲ. ಅದು ಅವರ ವೈಯಕ್ತಿಕ‌ ವಿಚಾರ‌ ಎಂದು ಸಮಾಧಾನದಿಂದಲೇ ಉತ್ತರಿಸಿದರು ಸುಮಲತಾ.

10.ಮೊಣಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಬ್ಯಾಟ್ ಬೀಸಿದ್ದ ವಾಟ್ಸನ್

ಭಾನುವಾರ ನಡೆದ ಐಪಿಎಲ್ ಫೈನಲ್​ನಲ್ಲಿ ರೋಹಿತ್ ಶರ್ಮಾ ನೇತೃತ್ವದ ಮುಂಬೈ ಇಂಡಿಯನ್ಸ್ ಗೆದ್ದು ಬೀಗಿತ್ತು. ಈ ಪಂದ್ಯದಲ್ಲಿ ಬ್ಯಾಟ್ಸ್​ಮನ್​​​ ಶೇನ್ ವಾಟ್ಸನ್ ಅಬ್ಬರದ ಆಟವಾಡಿ ಸಿಎಸ್​ಕೆಯನ್ನು ಗೆಲುವಿನ ಸಮೀಪ ಕರೆತಂದಿದ್ದರು. ಆದರೆ, ಕೊನೆಯ ಓವರ್​ನಲ್ಲಿ ರನ್ಔಟ್ ಆಗಿದ್ದು, ಚೆನ್ನೈ ಸೋಲಿಗೆ ಕಾರಣವಾಗಿತ್ತು. ಅಚ್ಚರಿ ಎಂದರೆ, ಅವರ ಕಾಲಲ್ಲಿ ರಕ್ತ ಸುರಿಯುತ್ತಿದ್ದರೂ ಯಾರಿಗೂ ಹೇಳದೇ ಬ್ಯಾಟ್ ಬೀಸಿದ್ದಾರೆ. ರನೌಟ್ ಆಗುವುದರಿಂದ ತಪ್ಪಿಸಿಕೊಳ್ಳಲು ಡೈವ್ ಮಾಡುವಾಗ ಪೆಟ್ಟಾಗಿದ್ದು, ಆಟ ಮುಗಿದ ನಂತರ 6 ಸ್ಟಿಚ್​ಗಳನ್ನು ಹಾಕಲಾಗಿದೆ. ಮೊಣಕಾಲ ಬಳಿ ರಕ್ತ ಬಂದಿದ್ದರಿಂದ ಹಳದಿ ಇದ್ದ ಪ್ಯಾಂಟ್ ಕೆಂಪಾಗಿದ್ದು, ಈ ಫೋಟೋ ಸಾಮಾಜಿಕ ತಾಣಗಳಲ್ಲು ಹರಿದಾಡುತ್ತಿದೆ. ಜೊತೆಗೆ ಇದನ್ನು ನೋಡಿದ ಅನೇಕರು ವಾಟ್ಸನ್ ಕ್ರೀಡಾ ಸ್ಫೂರ್ತಿಗೆ ತಲೆ ಬಾಗಿದ್ದಾರೆ.

'ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್ ನಲ್ಲೂ ಹಿಂಬಾಲಿಸಿ'
First published:May 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ