ಬಿಎಸ್​ವೈ-ಜಿಟಿಡಿ ಭೇಟಿ ಬೆನ್ನಲ್ಲೇ ಮೈಮುಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಆಯ್ಕೆ

ಮೈಮುಲ್ ಅಧ್ಯಕ್ಷ ಸ್ಥಾನದ ಚುನಾವಣೆ ಹಿನ್ನೆಲೆಯಲ್ಲಿ ಜಿಟಿ ದೇವೇಗೌಡರ ಮಾತಿಗೆ ಮನ್ನಣೆ ಕೊಟ್ಟು ಯಡಿಯೂರಪ್ಪ ಅವರು ತಮ್ಮ ತಂಗಿ ಮಗನ ನಾಮಪತ್ರ ವಾಪಸ್ ಪಡೆಸಿಕೊಂಡರೆಂಬ ಸುದ್ದಿ ಇದೆ.

news18-kannada
Updated:August 14, 2019, 2:51 PM IST
ಬಿಎಸ್​ವೈ-ಜಿಟಿಡಿ ಭೇಟಿ ಬೆನ್ನಲ್ಲೇ ಮೈಮುಲ್ ಅಧ್ಯಕ್ಷರಾಗಿ ಮಾವಿನಹಳ್ಳಿ ಸಿದ್ದೇಗೌಡ ಆಯ್ಕೆ
ಎಸ್.ಸಿ. ಅಶೋಕ್ ಮತ್ತು ಮಾವಿನಹಳ್ಳಿ ಸಿದ್ದೇಗೌಡ
  • Share this:
ಮೈಸೂರು(ಆ. 14): ಮಾಜಿ ಸಚಿವ ಹಾಗೂ ಜೆಡಿಎಸ್ ಮುಖಂಡ ಜಿ.ಟಿ. ದೇವೇಗೌಡ ಅವರ ಆಪ್ತ ಮಾವಿನಹಳ್ಳಿ ಸಿದ್ದೇಗೌಡ ಅವರು ಮೈಸೂರು ಹಾಲು ಒಕ್ಕೂಟದ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು. ಇವತ್ತು ನಡೆದ ಕೊನೆಯ ಕ್ಷಣದ ನಾಟಕೀಯ ತಿರುವಿನಲ್ಲಿ ಯಡಿಯೂರಪ್ಪ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು. ಈ ಹಿನ್ನೆಲೆಯಲ್ಲಿ ಮೈಮುಲ್ ಅಧ್ಯಕ್ಷರಾಗಿ ಸಿದ್ದೇಗೌಡರ ಆಯ್ಕೆ ಅವಿರೋಧವಾಗಿ ಆಯಿತು.

ಎನ್.ಸಿ. ಅಶೋಕ್ ಅವರು ಆಗಸ್ಟ್ 5ರಂದು ಮೈಮುಲ್ ಅಧ್ಯಕ್ಷ ಸ್ಥಾನದ ಸ್ಪರ್ಧೆಗೆ ನಾಮಪತ್ರ ಸಲ್ಲಿಸಿದ್ದರು. ತಮ್ಮ ಸಂಬಂಧಿಕರಿಗೆ ಮಣೆ ಹಾಕುತ್ತಿದ್ದಾರೆಂದು ವಿಪಕ್ಷಗಳು ಯಡಿಯೂರಪ್ಪ ವಿರುದ್ಧ ಆರೋಪ ಮಾಡಿದ್ದವು. ಕುತೂಹಲಕಾರಿ ಬೆಳವಣಿಗೆಯಲ್ಲಿ ಇವತ್ತು ಬೆಳಗ್ಗೆ ಜಿ.ಟಿ. ದೇವೇಗೌಡರು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದರು. ಮೈಸೂರು ಹಾಲು ಒಕ್ಕೂಟಕ್ಕೆ ಇವತ್ತೇ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ಇವರಿಬ್ಬರ ಭೇಟಿಯಾಗಿರುವ ಸಾಧ್ಯತೆ ಇದೆ. ಇದಕ್ಕೆ ಪೂರಕವಾಗಿ ಈ ಭೇಟಿ ನಡೆದ ಬೆನ್ನಲ್ಲೇ ಬಿಎಸ್​ವೈ ಅವರ ತಂಗಿ ಮಗ ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದರು.

ಇದನ್ನೂ ಓದಿ: ನೆರೆ ಸಂಬಂಧ ಬೇಕಾಬಿಟ್ಟಿ ಹಣ ಕೊಡಲು ನೋಟ್​ ಪ್ರಿಂಟ್​ ಮಾಡಲ್ಲ ಎಂಬ ಸಿಎಂ ಹೇಳಿಕೆಗೆ ಜೆಡಿಎಸ್ ಖಂಡನೆ​

ಮೈಸೂರು ಹಾಲು ಒಕ್ಕೂಟದಲ್ಲಿ ಒಟ್ಟು 14 ಸದಸ್ಯರಿದ್ದು, ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾಗಲು 8 ಸದಸ್ಯರ ಬೆಂಬಲದ ಅಗತ್ಯವಿತ್ತು. ಎಸ್.ಸಿ. ಅಶೋಕ್ ಅವರು ನಾಮಪತ್ರ ವಾಪಸ್ ಪಡೆದ ಹಿನ್ನೆಲೆಯಲ್ಲಿ ಸ್ಪರ್ಧೆಯಲ್ಲಿದ್ದದ್ದು ಸಿದ್ದೇಗೌಡರು ಮಾತ್ರವೇ. ಹೀಗಾಗಿ, ಅವರು ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಜಿಟಿ ದೇವೇಗೌಡರ ಮಾತಿಗೆ ಸ್ಪಂದಿಸಿ ಯಡಿಯೂರಪ್ಪ ತಮ್ಮ ತಂಗಿ ಮಗನ ನಾಮಪತ್ರ ವಾಪಸ್ ಪಡೆಸಿದ್ದು ರಾಜಕೀಯ ವಲಯದಲ್ಲಿ ಗುಸುಗುಸು ಸುದ್ದಿಗೆ ಕಾರಣವಾಗಿದೆ. ಕಳೆದ ಕೆಲ ತಿಂಗಳಿನಿಂದ ಜಿಟಿ ದೇವೇಗೌಡರು ಬಿಜೆಪಿ ಬಗ್ಗೆ ಸ್ವಲ್ಪ ಸಹಾನುಭೂತಿ ಹೊಂದಿದ್ದಾರೆ. ಯಡಿಯೂರಪ್ಪ, ಮೋದಿ ಬಗ್ಗೆ ಅವರು ಹಲವು ಬಾರಿ ಕನಿಕರದ ಮಾತುಗಳನ್ನಾಡಿದ್ದುಂಟು. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಗೆ ಹೋಗಬಹುದೆಂಬ ಸುದ್ದಿಗಳೂ ಹರಿದಾಡುತ್ತಿದ್ದವು. ಜಿಟಿಡಿ ಈ ಸುದ್ದಿಗಳನ್ನು ತಳ್ಳಿಹಾಕಿದ್ದಾರಾದರೂ ಮೈಮುಲ್ ಅಧ್ಯಕ್ಷ ಚುನಾವಣೆಯಲ್ಲಿ ಅವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

(ವರದಿ: ಪುಟ್ಟಪ್ಪ)

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:August 14, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ