• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Mattur Nandakumara: ಕನ್ನಡಿಗನಿಗೆ ಒಲಿದ ಲಂಡನ್ ಗೌರವ, ಇದು ಭಾರತೀಯ ಕಲೆಗೆ ಸಂದ ಮನ್ನಣೆ

Mattur Nandakumara: ಕನ್ನಡಿಗನಿಗೆ ಒಲಿದ ಲಂಡನ್ ಗೌರವ, ಇದು ಭಾರತೀಯ ಕಲೆಗೆ ಸಂದ ಮನ್ನಣೆ

ಮತ್ತೂರು ನಂದಕುಮಾರ

ಮತ್ತೂರು ನಂದಕುಮಾರ

ಕರ್ನಾಟಕ ಮೂಲದ ಡಾ ಮತ್ತೂರು ನಂದಕುಮಾರ್​ಗೆ ಯುಕೆ ಸರ್ಕಾರ ವಿದೇಶಿಯರಿಗೆ ನೀಡುವ ಅತ್ಯುನ್ನತ ಗೌರವ ಒಲಿದು ಬಂದಿದೆ. ನಮ್ಮ ದೇಶದ ಪದ್ಮ ಪ್ರಶಸ್ತಿಗಳಿಗೆ ಸಮಾನವಾದ ಮೆಂಬರ್ ಆಫ್ ದ ಆರ್ಡರ್ ಆಫ್ ದಿ ಬ್ರಿಟಿಷ್ ಎಂಪೈರ್ ಎನ್ನುವ ವಿಶೇಷ ಮನ್ನಣೆ ದೊರೆತಿದೆ.

 • Local18
 • 3-MIN READ
 • Last Updated :
 • Shimoga, India
 • Share this:

ಬೆಂಗಳೂರು: ಇನ್ಫೋಸಿಸ್ ಸಂಸ್ಥಾಪಕಿ ಶ್ರೀಮತಿ ಸುಧಾ ಮೂರ್ತಿ ಹೀಗೆಂದರು: " ಕಳೆದ 45 ವರ್ಷಗಳಿಂದ ನಂದಕುಮಾರ್ ಲಂಡನ್ನಿನ (London) ಭಾರತೀಯ ವಿದ್ಯಾಭವನದಲ್ಲಿ ಭಾರತೀಯ ಸಂಸ್ಕೃತಿಯ (Indian Culture and Arts) ವಾತಾವರಣ ನಿರ್ಮಿಸಿದ್ದಾರೆ. ಭಾರತೀಯ ವಿದ್ಯಾಭವನಕ್ಕೆ ಹೋದ್ರೆ ಬೆಂಗಳೂರಿಗೆ ಹೋದ ಹಾಗೇ ಅನಿಸುತ್ತೆ. ಅಲ್ಲಿನ ಪ್ರತಿಯೊಂದು ಕೋಣೆಯಲ್ಲೂ ವಿವಿಧ ರೀತಿಯ ಕಲೆಯನ್ನ ಕಲಿಸ್ತಾ ಇರ್ತಾರೆ. ಒಂದು ಕೋಣೆಯಲ್ಲಿ ಕರ್ನಾಟಕ ಶಾಸ್ತ್ರೀಯ ನಂಗೀತ, (Music) ಮತ್ತೊಂದರಲ್ಲಿ ಹಿಂದುಸ್ತಾನಿ, (Dance) ಇನ್ನೊಂದು ಕಡೆ ಕುಚ್ಚಿಪುಡಿ, ಮತ್ತೊಂದರಲ್ಲಿ ಭರತನಾಟ್ಯ..ಹೀಗೆ ಭಾರತದಲ್ಲಿ ಇರೋ ನಾನಾ ಬಗೆಯ ಕಲೆಯನ್ನ ಅಲ್ಲಿ ಕಲಿಸಿಕೊಡ್ತಾರೆ."


"ಇದೆಲ್ಲಾ ಮಾಡೋದಕ್ಕೆ ಅಲ್ಲಿ ವಿದ್ಯಾರ್ಥಿಗಳನ್ನ ಕರೆದುಕೊಂಡು ಬರೋದು, ಅಗತ್ಯವಿರುವ ಶಿಕ್ಷಕರನ್ನ ಆರಿಸಿ ಕರೆಸುವುದು ಇದೆಲ್ಲಾ ಸುಲಭದ ವಿಚಾರಗಳಲ್ಲ. ಆದ್ರೆ ನಂದಕುಮಾರ್ ಅದನ್ನ ಮಾಡ್ತಾ ಇದ್ದಾರೆ. ಅವರು ಸಜ್ಜನರು, ಕವಿಗಳು, ಹೃದಯವಂತರು, ವಿದ್ವಾಂಸರು. ವಾರಾಂತ್ಯದಲ್ಲಿ ರಾಮಾಯಣ ಮತ್ತು ಮಹಾಭಾರತದ ತರಗತಿಗಳನ್ನೂ ತೆಗೆದುಕೊಳ್ತಾರೆ. ಯಾವಾಗಲಾದ್ರೂ ಒಂದೆರಡು ತಿಂಗಳ ಮಟ್ಟಿಗೆ ನಾನು ಅಲ್ಲಿ ಇರುವ ಸಂದರ್ಭ ಬಂದ್ರೆ ನಿಮ್ಮ ಬಳಿ ರಘುವಂಶ ಕಲಿಯಬೇಕು ಅಂತ ಈಗಾಗ್ಲೇ ಹೇಳಿದ್ದೀನಿ" ಹೀಗೆ ನಂದಕುಮಾರ್ ಮತ್ತವರ ಸಾಧನೆಯ ಬಗ್ಗೆ ಆಪ್ತವಾಗಿ ಮಾತನಾಡಿದ್ದು ಇನ್ಫೋಸಿಸ್ ನ ಶ್ರೀಮತಿ ಸುಧಾಮೂರ್ತಿ.


ಯಾರು ಈ ನಂದಕುಮಾರ್?


ಮತ್ತೂರು ನಂದಕುಮಾರ್ ಅವರ ಪೂರ್ತಿ ಹೆಸರು. ಊರು, ಶಿವಮೊಗ್ಗ ಜಿಲ್ಲೆಯ ಮತ್ತೂರು. ಗ್ರಾಮದ ಜನರೆಲ್ಲಾ ಸಂಸ್ಕೃತದಲ್ಲೇ ಮಾತಾಡ್ತಾರೆ. ಹಾಗಾಗಿ ನಂದಕುಮಾರ್​ಗೆ ಸಂಸ್ಕೃತ ಸರಾಗವಾಗಿ ಒಲಿದು ಬಂತು. ಸಂಸ್ಕೃತದಲ್ಲೇ ಎಂ ಎ ಮುಗಿಸಿ ಕೆಲಸ ಅರಸಿ ಬೆಂಗಳೂರಿಗೆ ಬಂದ ಇವರಿಗೆ ಮಲ್ಲೇಶ್ವರಂನ ರಾಘವೇಂದ್ರ ಹೈಸ್ಕೂಲ್​ನಲ್ಲಿ ಸಂಸ್ಕೃತ ಶಿಕ್ಷಕರಾಗಿ ತಿಂಗಳಿಗೆ 475 ರೂಪಾಯಿ ಸಂಬಳದ ಕೆಲಸ ಸಿಕ್ಕಿತು. ಆದ್ರೆ ಈ ಸಂಬಳ ಕೂಡಾ ಮೊದಲ 8 ತಿಂಗಳು ಬರಲೇ ಇಲ್ವಂತೆ!


ಸಂಸ್ಕೃತ ಮೇಷ್ಟ್ರಾಗಿದ್ರೂ ಕನ್ನಡ ಶಿಕ್ಷಕರ ಅಭಾವವಿದ್ದಾಗ ಇವರೇ ಕನ್ನಡ ವ್ಯಾಕರಣ ತರಗತಿಗಳನ್ನೂ ತೆಗೆದುಕೊಳ್ತಿದ್ರು. ಅಲ್ಲಿನ ಮಕ್ಕಳಿಗೂ ಇವರೆಂದರೆ ಬಹಳ ಇಷ್ಟ. ಇದೇ ಸಂದರ್ಭದಲ್ಲಿ ಲಂಡನ್ನಿನಲ್ಲಿ ಆಗಿನ ಭಾರತೀಯ ವಿದ್ಯಾಭವನದ ಮುಂದಾಳತ್ವ ವಹಿಸಿದ್ದ ಮತ್ತೂರು ಕೃಷ್ಣಮೂರ್ತಿಯವರ ಶಿಷ್ಯೆ ಜೆನಿನ್ ಮಿಲ್ಲರ್ ಭಾರತ ನೋಡೋಕೆ ಬೆಂಗಳೂರಿಗೆ ಬಂದ್ರು.
ಆಗ ನಂದಕುಮಾರ್ ತಮ್ಮ ಅರ್ಧಂಬರ್ಧ ಇಂಗ್ಲಿಷ್ ಮೂಲಕವೇ ಆಕೆಗೆ ಇಲ್ಲಿನ ಸ್ಥಳಗಳ ಜೊತೆ ಸಂಸ್ಕೃತಿ, ಕಲೆಯ ಪರಿಚಯವನ್ನೂ ಮಾಡಿಕೊಟ್ಟಿದ್ರು. ಇದರಿಂದ ಬಹಳ ಖುಷಿಪಟ್ಟ ಆಕೆ ಲಂಡನ್ನಿಗೆ ಮರಳುವಾಗ, “ನೀನೇನಾದ್ರೂ ಉನ್ನತ ವಿದ್ಯಾಭ್ಯಾಸಕ್ಕೆ ಲಂಡನ್ನಿಗೆ ಬರೋದಾದ್ರೆ ಉಳಿದುಕೊಳ್ಳುವ ವ್ಯವಸ್ಥೆ ನಾನು ನೋಡಿಕೊಳ್ತೀನಿ” ಎಂದಿದ್ದರು. ಆಗ ನಂದಕುಮಾರ್​ಗೆ ಸಣ್ಣದಾಗಿ ಆಸೆ ಚಿಗುರಿತ್ತಂತೆ.


ಕೈ ಹಿಡಿದ ಸಂಸ್ಕೃತ


ಕೆಲ ಸಮಯದ ನಂತರ ಮತ್ತೂರು ಕೃಷ್ಣಮೂರ್ತಿಯವರು ನಂದಕುಮಾರ್​ಗೆ ಲಂಡನ್ನಿಗೆ ಬಂದು ಪಿಎಚ್​ಡಿ ಮಾಡುವಂತೆ ಸೂಚಿಸಿದ್ರು. ಅದರಂತೆ ಲಂಡನ್ನಿಗೆ ತೆರಳಿದ ನಂದಕುಮಾರ್ ಅಲ್ಲಿ ಮೊದಲು ಪಿಎಚ್​ಡಿ ಮುಗಿಸಿ, ಜೊತೆಗೇ ಅಲ್ಲಿನ ಭಾರತೀಯ ವಿದ್ಯಾಭವನದಲ್ಲಿ ಸಂಸ್ಕೃತ ಪಾಠಗಳನ್ನೂ ಹೇಳುತ್ತಿದ್ದರು. ಕ್ರಮೇಣ ಅಲ್ಲೇ ನೆಲೆಯೂರಿ ಮತ್ತೂರು ಕೃಷ್ಣಮೂರ್ತಿಗಳು ಅಲ್ಲಿನ ಜವಾಬ್ದಾರಿಗಳಿಂದ ನಿವೃತ್ತರಾದಾಗ ಇವರನ್ನೇ ಭವನದ ಮುಖ್ಯಸ್ಥರನ್ನಾಗಿ ನೇಮಿಸಿದರು.


ಅಂದಿನಿಂದ ಇಂದಿನವರೆಗೂ ಭಾರತೀಯ ಕಲೆ ಮತ್ತು ಸಂಸ್ಕೃತಿಯನ್ನು ಲಂಡನ್ ನೆಲದಲ್ಲಿ ಯಶಸ್ವಿಯಾಗಿ ಪಸರಿಸುತ್ತಿದ್ದಾರೆ. ನಂದಕುಮಾರ್ ಅವರ ಇಡೀ ಕುಟುಂಬ ಭಾರತೀಯ ಕಲೆಯ ಸೇವೆಯಲ್ಲೇ ತೊಡಗಿಸಿಕೊಂಡಿದೆ.


ಮತ್ತೂರು ನಂದಕುಮಾರ


“ಅವರ ಮನೆಯಂತೂ ಸದಾ ಬಾಗಿಲು ತೆರೆದಿರುವ ಮನೆ. ಅವರ ಮನೆಯಲ್ಲಿ ಸದಾ ಬಂದವರಿಗೆ ಅಡುಗೆ ಸಿದ್ಧವಾಗೇ ಇರುತ್ತೆ. ನಂದಕುಮಾರ್ ಪತ್ನಿ ಜಾನಕಿಯಂತೂ ಇಲ್ಲಿಂದ ಹೋಗುವ ಎಲ್ಲಾ ಕಲಾವಿದರಿಗೂ ಕಲಾಸಕ್ತರಿಗೂ ಅನ್ನಪೂರ್ಣೆಯೇ. ಆಕೆ ಅದನ್ನೆಲ್ಲಾ ಖುಷಿಯಿಂದ ಮಾಡುತ್ತಾರೆ. ಯಾರಿಗೂ ಅನಾನುಕೂಲವಾದಂತೆ ಅವರಿಬ್ಬರೂ ಸೇರಿ ಕಲಾವಿದರನ್ನ ತಮ್ಮ ಮನೆಯಲ್ಲೇ ಇರಿಸಿಕೊಂಡು ಸತ್ಕಾರ ಮಾಡ್ತಾರೆ. ಸಾಮಾನ್ಯವಾಗಿ ಎಲ್ಲಾ ಕಲಾವಿದರು ಅವರಲ್ಲಿಗೆ ಹೋಗುತ್ತಾರೆ.”


ಬೇಸಿಗೆ ಶಿಬಿರಕ್ಕೆ ಸುಧಾ ಮೂರ್ತಿ ಬೆಂಬಲ


“ಪ್ರತೀ ವರ್ಷ ಜೂನ್-ಜುಲೈ ತಿಂಗಳಲ್ಲಿ ಅವರು ಬೇಸಿಗೆ ಶಿಬಿರ ಆಯೋಜಿಸ್ತಾರೆ. ಅದನ್ನು ಸಮ್ಮರ್ ಸ್ಕೂಲ್ ಅಂತಾರೆ. ಅಲ್ಲಿ ಬಹಳ ದೊಡ್ಡ ಕಲಾವಿದರನ್ನ ಕರೆಸಿ ಮಕ್ಕಳಿಗೆ ಪಾಠ ಹೇಳಿಸ್ತಾರೆ. ಭಾರತದ ಇಷ್ಟೆಲ್ಲಾ ವೈವಿಧ್ಯಮಯ ಕಲೆಗಳನ್ನ ದೂರದ ಲಂಡನ್ನಿನಲ್ಲಿ ಪರಿಚಯಿಸೋದು, ಅಲ್ಲಿ ಅದನ್ನ ಹರಡುವಂತೆ ಮಾಡೋದು ನಿಜಕ್ಕೂ ಅದ್ಭುತ ಕೆಲಸ. ಅದನ್ನು ನಂದಕುಮಾರ್ ಅತ್ಯುತ್ತಮವಾಗಿ ನಿರ್ವಹಿಸ್ತಾ ಇದ್ದಾರೆ. ಅವರಿಗೆ ಸಿಕ್ಕ ಈ ಗೌರವ ಬಹಳ ಸೂಕ್ತವಾಗಿದೆ. ಅವರು ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಆಶೀರ್ವದಿಸ್ತೀನಿ” ಎಂದು ಇನ್ಫೋಸಿಸ್​ನ ಶ್ರೀಮತಿ ಸುಧಾ ಮೂರ್ತಿ ನ್ಯೂಸ್ 18 ಕನ್ನಡಕ್ಕೆ ತಿಳಿಸಿದ್ರು.


ಇದನ್ನೂ ಓದಿ: ಭಾರತದ ಶ್ರೀಮಂತ ಕಲೆ-ಸಂಸ್ಕೃತಿಯ ಹೆಗ್ಗುರುತು ನೀತಾ ಮುಕೇಶ್ ಅಂಬಾನಿ ಕಲ್ಚರಲ್ ಸೆಂಟರ್


ಲಂಡನ್ನಿನ ಭಾರತೀಯ ವಿದ್ಯಾಭವನದಲ್ಲಿ ನಡೆಯುವ ಸಮ್ಮರ್ ಸ್ಕೂಲ್​ನ ತರಗತಿಗಳ ವೆಚ್ಚವನ್ನು ಶ್ರೀಮತಿ ಸುಧಾಮೂರ್ತಿ ಭರಿಸುತ್ತಾರೆ. ಅದೇ ರೀತಿ ಸಾಧ್ಯವಾದರು ತಮ್ಮ ಕೈಲಾದ ಮಟ್ಟಿಗೆ ಇಲ್ಲಿಯ ಕಲೆ ಮತ್ತು ಸಂಸ್ಕೃತಿಯ ಕೆಲಸಕ್ಕೆ ಸಹಾಯ ಮಾಡಿದ್ರೆ ದೂರದ ದೇಶದಲ್ಲಿ ಇರುವ ನಮ್ಮ ಮನೆಯಂತೆಯೇ ಈ ಎಲ್ಲಾ ಜವಾಬ್ದಾರಿಗಳನ್ನು ಆಸ್ಥೆಯಿಂದ ನಿರ್ವಹಿಸುತ್ತಿರುವ ನಂದಕುಮಾರ್​ ಅವರ ಪರಿಶ್ರಮಕ್ಕೆ ತಕ್ಕಮಟ್ಟಿಗೆ ಸಹಾಯ ಮಾಡಿದಂತಾಗುತ್ತದೆ.

First published: