ಹಾಸನ (ಜ.24): ಕಳೆದ ಬಾರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಹಾಸನ ಜಿಲ್ಲೆ ಹೊಸ ದಾಖಲೆ ಸೃಷ್ಟಿಸಿತ್ತು. ಜಿಲ್ಲೆಯ ಈ ಸಾಧನೆಗೆ ತಮ್ಮ ಹೆಂಡತಿ ಭವಾನಿ ಶ್ರಮ ಹೆಚ್ಚಿದೆ ಎಂದು ಅವರನ್ನು ಕೊಂಡಾಡಿದ್ದರು ಆಗಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರೇವಣ್ಣ. ಅಚ್ಚರಿಯೆಂಬಂತೆ ಫಲಿತಾಂಶ ನೀಡಿದ್ದ ಜಿಲ್ಲೆಯ ಈ ಸಾಧನೆಯ ರಹಸ್ಯ ಈಗ ಬಯಲಾಗಿದ್ದು, ದಿಗ್ಭ್ರಾಂತಿ ಮೂಡಿಸಿದೆ.
ಹೌದು. ಜಿಲ್ಲೆಯ ಈ ಸಾಧನೆಯ ಹಿಂದಿನ ಕಾರಣ ಸಾಮೂಹಿಕ ನಕಲು ಎಂಬ ಸತ್ಯ ಹೊರ ಬಿದ್ದಿದೆ. ಈ ಕುರಿತು ಶಿವಕುಮಾರ್ ಎಂಬ ಹೆಸರಿನಲ್ಲಿ ನೊಂದ ಶಿಕ್ಷಕರೊಬ್ಬರು ಪತ್ರ ಬರೆದಿದ್ದಾರೆ.
ಕಳೆದ ಬಾರಿ ಫಲಿತಾಂಶದಲ್ಲಿ
ಮೊದಲ ಸ್ಥಾನ ಪಡೆಯಲು ಉಪನಿರ್ದೇಶಕರಾದ ಮಂಜುನಾಥ್, ಪರೀಕ್ಷಾ ಕೇಂದ್ರಗಳಲ್ಲಿ ಸಾಮೂಹಿಕ ನಕಲು ಮಾಡಲು ಅನುಕೂಲ ಮಾಡಿಕೊಡಲು ಮೌಖಿಕ ಆದೇಶ ನೀಡಿದ್ದರು. ಇದರ ಜೊತೆಗೆ ಚನ್ನರಾಯಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಾವತಿ ನಕಲು ಮಾಡಿಸಲು ಮಾರ್ಗದರ್ಶನ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ ಎಂದಿದ್ದಾರೆ.
ಇನ್ನು ಪ್ರಸಕ್ತ ವರ್ಷದಲ್ಲಿ ಕೂಡ ಇದೇ ರೀತಿ ಅಕ್ರಮ ಎಸಗಲು ಸಿದ್ದತೆ ನಡೆಸಿದ್ದು, ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸೋಮನಾಥ ಕೂಡ ಸಿದ್ಧತೆ ನಡೆಸಿದ್ದಾರೆ. ಈ ಹಿನ್ನೆಲೆ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿ, ಪಾರದರ್ಶಕವಾಗಿ ಪರೀಕ್ಷೆ ನಡೆಸುವಂತೆ ಕರ್ನಾಟಕ ಫ್ರೌಡ ಶಾಲಾ ಪರೀಕ್ಷಾ ಮಂಡಳಿ ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ.
ಇದನ್ನು ಓದಿ: ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಮೊದಲ ಸ್ಥಾನ ಬಿಟ್ಟು ಕೊಡೋ ಮನಸ್ಸಿಲ್ಲ - ಮಕ್ಕಳ ಪ್ರಗತಿಗಾಗಿ ಕುಟುಂಬ ಸಮೇತ ದುಡೀತೀವಿ ; ಭವಾನಿ ರೇವಣ್ಣ
ಈ ಪತ್ರದ ಹಿನ್ನೆಲೆ, ಶಿಕ್ಷಣ ಇಲಾಖೆ ಆಯುಕ್ತರು ರಾಜ್ಯಾದ್ಯಂತ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಕಟ್ಟುನಿಟ್ಟಿನ ಕ್ರಮದೊಂದಿಗೆ, ಪಾರದರ್ಶಕವಾಗಿ ಪರೀಕ್ಷೆ ನಡೆಸಬೇಕೆಂದು ಸೂಚನೆ ನೀಡಿದ್ದಾರೆ ಎಂದು ಡಿಡಿಪಿಐ ಪ್ರಕಾಶ್ ತಿಳಿಸಿದ್ದಾರೆ.
ಇದನ್ನು ಓದಿ: ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಸರಿಯಲ್ಲ - ಮುಂಚಿತವಾಗಿಯೇ ಪೂರ್ವ ತಯಾರಿ ಮಾಡಿಕೊಳ್ಳಲು ವಿದ್ಯಾರ್ಥಿಗಳಿಗೆ ಭವಾನಿ ರೇವಣ್ಣ ಸಲಹೆ
ಇನ್ನು, ಶಿವಕುಮಾರ್ ಎಂಬ ಹೆಸರಿನಲ್ಲಿ ಬಂದ ಪತ್ರದ ಕುರಿತು ಕೂಡ ತನಿಖೆ ನಡೆಯುತ್ತಿದೆ. ಚನ್ನರಾಯಪಟ್ಟಣದಲ್ಲಿ ಈ ಹೆಸರಿನ ಶಿಕ್ಷಕರಿದ್ದು ಅವರನ್ನು ವಿಚಾರಣೆಗೆ ಒಳಪಡಿಸಲಾಗುವುದು ಎಂದು ಕೂಡ ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ