Maski Bypoll: ಮಸ್ಕಿ ಉಪ ಚುನಾವಣೆಯಿಂದ ದೂರ ಉಳಿದ ಶಿವನಗೌಡ ನಾಯಕ

ದೇವದುರ್ಗಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿರುವ ಶಿವನಗೌಡ ನಾಯಕ ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಪ್ರಭಾವಿ ಶಾಸಕರಾಗಿರುವ ಶಿವನಗೌಡ ನಾಯಕರನ್ನು ಉಸ್ತುವಾರಿ ಸಮಿತಿಯಿಂದ ದೂರ ಇಟ್ಟಿದ್ದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.

ಶಿವನಗೌಡ ನಾಯಕ

ಶಿವನಗೌಡ ನಾಯಕ

  • Share this:
ರಾಯಚೂರು(ಮಾ.22): ಏಪ್ರಿಲ್ 17ರಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ. ಚುನಾವಣೆಗೆ ಜಿದ್ದಾಜಿದ್ದಿನ ಅಖಾಡ ಸಿದ್ಧವಾಗಿದೆ. ಬಿಜೆಪಿ ಚುನಾವಣಾ ಪ್ರಚಾರದಿಂದ ದೇವದುರ್ಗಾ ಶಾಸಕ ಶಿವನಗೌಡ ನಾಯಕ ದೂರ ಉಳಿದಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ರಾಯಚೂರು ಜಿಲ್ಲೆಯ ಪ್ರಭಾವಿ ಶಾಸಕ ಪ್ರಚಾರದಿಂದ ದೂರ ಉಳಿಯುತ್ತಿರುವುದು ಅನೇಕ ರೀತಿಯ ಚರ್ಚೆಗೆ ಕಾರಣವಾಗಿದೆ.

2018ರಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ ತಮಗೆ ಕಾಂಗ್ರೆಸ್ ನಲ್ಲಿ ಸ್ಥಾನಮಾನ ನೀಡಿಲ್ಲ. ಮೂರು ಬಾರಿ ಆಯ್ಕೆಯಾದರೂ ಸಚಿವ ಸ್ಥಾನ ನೀಡಿಲ್ಲ ಎಂಬ ಕಾರಣಕ್ಕೆ 2019ರಲ್ಲಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದಾರೆ, ಅವರೊಂದಿಗೆ 17 ಜನ ಶಾಸಕರು ರಾಜೀನಾಮೆಯಿಂದಾಗಿ ಅಂದಿನ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿಯ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದಿದೆ.

ಬಿಜೆಪಿ ಸರಕಾರ ಬಂದ ನಂತರ ಮೊದಲು 15 ಸ್ಥಾನಗಳಿಗೆ ಚುನಾವಣೆ ನಡೆಯಿತು. ನಂತರ 2 ಸ್ಥಾನಗಳಿಗೆ ಉಪಚುನಾವಣೆಗಳು ನಡೆದವು. ಆದರೆ ಮಸ್ಕಿ ಕ್ಷೇತ್ರದಲ್ಲಿ 2018ರಲ್ಲಿ ಅಕ್ರಮ ಮತದಾನ ನಡೆದಿದೆ ಎಂದು ಹೈಕೋರ್ಟ್ ನಲ್ಲಿ ಪ್ರಕರಣ ದಾಖಲಿಸಿದ್ದರಿಂದ ಉಪಚುನಾವಣೆ ನಡೆದಿರಲಿಲ್ಲ. ಈಗ ಉಪಚುನಾವಣೆ ಘೋಷಣೆ ಮಾಡಿದೆ. ಈ ಹಿಂದೆ ನಡೆದ 17 ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ 14 ಸ್ಥಾನಗಳನ್ನು ಗೆದ್ದಿದೆ. ಈಗ ಮತ್ತೆ ಎರಡು ವಿಧಾನಸಭಾ ಹಾಗೂ ಒಂದು ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಬಿಜೆಪಿ ಚುನಾವಣಾ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ.

Anekal: ಸ್ವಯಂ ಕೃಷಿ ಸಾವಯವ ತೋಟದಲ್ಲಿ ತಾಜಾ ಕೃಷಿ ಉತ್ಪನ್ನಗಳ ರೈತರ ಮಾರುಕಟ್ಟೆ

ಅದರಲ್ಲಿ ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಜಿಲ್ಲೆಯವರೇ ಆದ ಶಿವನಗೌಡ ನಾಯಕರನ್ನು ಉಸ್ತುವಾರಿ ಸಮಿತಿಯಿಂದ ದೂರ ಇಡಲಾಗಿದೆ.ಬಿಜೆಪಿ ಉಪಾಧ್ಯಕ್ಷ, ಸಿಎಂ ಪುತ್ರ ಬಿ ವೈ ವಿಜಯೇಂದ್ರ, ಸಚಿವ ಶ್ರೀರಾಮುಲು, ವಿಧಾನಪರಿಷತ್ ಸದಸ್ಯ ರವಿಕುಮಾರ, ಶಾಸಕರಾದ ರಾಯಚೂರಿನ ಡಾ ಶಿವರಾಜ ಪಾಟೀಲ, ಸುರಪುರದ ರಾಜೂಗೌಡರನ್ನು ನೇಮಿಸಲಾಗಿದೆ, ರಾಯಚೂರು ಜಿಲ್ಲೆಯಲ್ಲಿ ಈಗ ಇಬ್ಬರು ಬಿಜೆಪಿ ಶಾಸಕರಿದ್ದು ಅದರಲ್ಲಿ ಚುನಾವಣಾ ಉಸ್ತುವಾರಿಯಲ್ಲಿ ಶಿವನಗೌಡ ನಾಯಕರನ್ನು ಕೈ ಬಿಡಲಾಗಿದೆ.

ದೇವದುರ್ಗಾ ಕ್ಷೇತ್ರದಿಂದ ನಾಲ್ಕು ಬಾರಿ ಆಯ್ಕೆಯಾಗಿರುವ ಶಿವನಗೌಡ ನಾಯಕ ಒಮ್ಮೆ ಸಚಿವರಾಗಿಯೂ ಕೆಲಸ ಮಾಡಿದ್ದಾರೆ, ಪ್ರಭಾವಿ ಶಾಸಕರಾಗಿರುವ ಶಿವನಗೌಡ ನಾಯಕರನ್ನು ಉಸ್ತುವಾರಿ ಸಮಿತಿಯಿಂದ ದೂರ ಇಟ್ಟಿದ್ದು ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ.

ಶಿವನಗೌಡ ನಾಯಕ ಹಾಗು ಪ್ರತಾಪಗೌಡ ಪಾಟೀಲ ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದು ಸಚಿವ ಸ್ಥಾನದ ಮೇಲೆ ಇಬ್ಬರದು ಕಣ್ಣಿದೆ, ಪ್ರತಾಪಗೌಡ ಗೆಲುವು ಸಾಧಿಸಿದರೆ ಸಚಿವರಾಗುತ್ತಾರೆ ಈ ಸಂದರ್ಭದಲ್ಲಿ ಶಿವನಗೌಡರಿಗೆ ಸಚಿವ ಸ್ಥಾನ ತಪ್ಪಲಿದೆ ಈ ಕಾರಣಕ್ಕಾಗಿಯೇ ಶಿವನಗೌಡರನ್ನು ಉಸ್ತುವಾರಿ ಸಮಿತಿ ದೂರ ಇಡಲಾಗಿದೆ ಎನ್ನಲಾಗಿದೆ.

ಈ ಮಧ್ಯೆ ಮಾರ್ಚ್​ 20 ರಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ, ಸಚಿವರಾದ ಲಕ್ಷ್ಮಣ ಸವದಿ, ಶ್ರೀರಾಮುಲು, ಗೋವಿಂದ ಕಾರಜೋಳ ಸೇರಿದಂತೆ ರಾಯಚೂರು ಹಾಗು ಕೊಪ್ಪಳ ಜಿಲ್ಲೆಯ ಬಿಜೆಪಿ ಜನಪ್ರತಿನಿಧಿಗಳು ಹಾಗು ಬಿಜೆಪಿ ಮುಖಂಡರು ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದರು, ಆದರೆ ಈ ಸಭೆಗೆ ಶಾಸಕ ಶಿವನಗೌಡ ನಾಯಕ ಗೈರು ಹಾಜರಾಗಿದ್ದು ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ಜಿಲ್ಲಾ ಬಿಜೆಪಿ ಅಧ್ಯಕ್ಷ ರಮಾನಂದ ಯಾದವರನ್ನು ಕೇಳಿದರೆ ಶಿವನಗೌಡರನ್ನು ನಿರ್ಲಕ್ಷಿಸಿಲ್ಲ, ಅವರು ಪ್ರಚಾರದಲ್ಲಿ ಭಾಗಿಯಾಗುತ್ತಾರೆ ಎಂದರೆ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಡಿಸಿಎಂ ಲಕ್ಷ್ಮಣ ಸವದಿ ಕೇಳಿದರೆ ನಾವೆಲ್ಲರೂ ಪ್ರಚಾರ ಮಾಡುತ್ತೇವೆ, ಯಾವುದೇ ಗೊಂದಲವಿಲ್ಲ ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಶಿವನಗೌಡ ನಾಯಕ ಮಸ್ಕಿ ಚುನಾವಣೆಯಿಂದ ದೂರ ಉಳಿದಿದ್ದು ಹಲವಾರು ಜಿಜ್ಞಾಸೆಗೆ ಕಾರಣವಾಗಿದೆ.
Published by:Latha CG
First published: