Maski Bypoll: ಮಸ್ಕಿ ಉಪಚುನಾವಣೆ ಹಿನ್ನೆಲೆ ನಾಮಪತ್ರ ಸಲ್ಲಿಕೆಯ ಭರಾಟೆ; ಕೋವಿಡ್ ನಿಯಮಾವಳಿಗಳ ಉಲ್ಲಂಘನೆ

ನಾಮಪತ್ರ ಸಲ್ಲಿಸುವಾಗ ಎರಡೂ ಪಕ್ಷದ ಘಟಾನುಘಟಿ ನಾಯಕರುಗಳ ದಂಡೇ ಮಸ್ಕಿಯಲ್ಲಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಬಿ ಶ್ರೀ ರಾಮುಲು ಸೇರಿದಂತೆ ಸಾಕಷ್ಟು ನಾಯಕರು ಬಂದಿದ್ರಿಂದ ಇಬ್ಬರೂ ಅಭ್ಯರ್ಥಿಗಳು ಕೋವಿಡ್ ನಿಯಮಗಳನ್ನ ಗಾಳಿಗೆ ಜಿದ್ದಿಗೆ ಬಿದ್ದು ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಕಂಡುಬಂತು.

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ

  • Share this:
ರಾಯಚೂರು(ಮಾ.29): ಮಸ್ಕಿ ಬೈ ಎಲೆಕ್ಷನ್ ಹಿನ್ನೆಲೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಒಂದೇ ದಿನ ಇಬ್ಬರೂ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯನ್ನ ಮಾಡಿದ್ದು, ಸುಮಾರು 20 ಸಾವಿರಕ್ಕೂ ಅಧಿಕ ಜನರು ಭಾಗಿಯಾಗಿದ್ರು. ಇನ್ನೂ ಕೈ ಕಮಲದ ಅಭ್ಯರ್ಥಿಗಳು ಜಿದ್ದಿಗೆ ಬಿದ್ದವರಂತೆ ಸಾವಿರಾರು ಸಂಖ್ಯೆಯಲ್ಲಿ ಬೆಂಬಲಿಗರನ್ನು ಸೇರಿಸಿ, ಸಂಪೂರ್ಣ ಕೋವೀಡ್ ನಿಯಮಗಳನ್ನು ಗಾಳಿಗೆ ತೂರಿದ್ದು ಕಂಡುಬಂತು.

ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಅವರ ರಾಜೀನಾಮೆಯಿಂದ ತೆರವಾಗಿರೋ ಮಸ್ಕಿ ಕ್ಷೇತ್ರಕ್ಕೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಇಂದು ಅಧಿಕೃತವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಬಿಜೆಪಿ ಅಭ್ಯರ್ಥಿಯಾಗಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ಅಭ್ಯರ್ಥಿಯಾಗಿ ಬಸನಗೌಡ ತುರ್ವಿಹಾಳ ನಾಮಪತ್ರ ಸಲ್ಲಿಕೆ ಮಾಡಿದ್ರು. ನಾಮಪತ್ರ ಸಲ್ಲಿಸುವಾಗ ಎರಡೂ ಪಕ್ಷದ ಘಟಾನುಘಟಿ ನಾಯಕರುಗಳ ದಂಡೇ ಮಸ್ಕಿಯಲ್ಲಿತ್ತು. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವ ಬಿ ಶ್ರೀ ರಾಮುಲು ಸೇರಿದಂತೆ ಸಾಕಷ್ಟು ನಾಯಕರು ಬಂದಿದ್ರಿಂದ ಇಬ್ಬರೂ ಅಭ್ಯರ್ಥಿಗಳು ಕೋವಿಡ್ ನಿಯಮಗಳನ್ನ ಗಾಳಿಗೆ ಜಿದ್ದಿಗೆ ಬಿದ್ದು ಶಕ್ತಿಪ್ರದರ್ಶನಕ್ಕೆ ಮುಂದಾಗಿದ್ದು ಕಂಡುಬಂತು.

ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಬೆಳಗ್ಗೆ 11 ಗಂಟೆಗೆ ಸಚಿವ ಶ್ರೀ ರಾಮುಲು ಜೊತೆ ಗೂಡಿ ನಾಮಪತ್ರ ಸಲ್ಲಿಕೆ ಮಾಡಿದ್ರು. ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಕೂಡಾ ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಜೊತೆಗೆ ಹೋಗಿ ನಾಮಪತ್ರ ಸಲ್ಲಿಸಿದ್ರು.

ಲಾಕ್​ಡೌನ್, ನೈಟ್ ಕರ್ಪ್ಯೂ ಬಗ್ಗೆ ಬೇಕಾಬಿಟ್ಟಿ ಯಾರೂ ಹೇಳಿಕೆ ಕೊಡುವಂತಿಲ್ಲ; ಸಚಿವರು ಮತ್ತು ಅಧಿಕಾರಿಗಳಿಗೆ ಸಿಎಂ ಸೂಚನೆ

ಇನ್ನೂ ನಾಮಪತ್ರ ಸಲ್ಲಿಕೆಗೂ ಮುನ್ನ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಟೆಂಪಲ್ ಮಾಡಿದ್ರು. ಮಸ್ಕಿಯ ಬಲ್ಮುರಿ ಗಣೇಶ್ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ ಪ್ರತಾಪ್ ಗೌಡ ಪಾಟೀಲ್ ನಂತರ ಭ್ರಮರಾಂಭ ದೇವಿಗೆ ಪೂಜೆ ಸಲ್ಲಿಸಿದ್ರು. ಪೂಜೆ ಸಲ್ಲಿಜೆಯ ನಂತರ ಮಾತನಾಡಿದ ಪ್ರತಾಪ್ ಗೌಡ ಪಾಟೀಲ್ ರಮೇಶ್ ಜಾರಕಿಹೊಳಿ ಅವರ ಸಿಡಿ ಕೇಸ್ ಉಪ ಚುನಾವಣೆ ಮೇಲೆ ಪ್ರಭಾವ ಬೀರಲ್ಲ, ಗೆಲುವು ನಮ್ಮದೇ ಅಂತಾ ವಿಶ್ವಾಸ ವ್ಯಕ್ತಪಡಿಸಿದ್ರು.

ಅಲ್ಲದೇ ಈಗ ಬಿಡುಗಡೆ ಮಾಡಿರುವ ಸಿಡಿ ಅದು ನಕಲಿ ಸಿಡಿ, ಈಗಾಗಲೆ ಅದರ ಹಿಂದಿರುವವರ ಹೆಸರು ಹೊರ ಬಂದಿವೆ. ರಮೇಶ್ ಜಾರಕಿಹೊಳಿ ಇಂತಹ ಹೀನ ಕೆಲಸ ಮಾಡಲ್ಲ, ಅವರ ಬಗ್ಗೆ ವಿಶ್ವಾಸ ಇದೆ ಎಂದ ಅವರು ಕೇವಲ ಸಿದ್ದರಾಮಯ್ಯ ಮಾತ್ರ ಅನುದಾನ ಕೊಟ್ಟಿಲ್ಲ, ಯಡಿಯೂರಪ್ಪ, ಸದಾನಂದ ಗೌಡ ಸೇರಿ ಹಲವರು ಅನುದಾನ ಕೊಟ್ಟಿದ್ರಿಂದ ನನ್ನ ಕ್ಷೇತ್ರ ಅಭಿವೃದ್ಧಿಯಾಗಿದೆ. ಅಪವಿತ್ರ ಮೈತ್ರಿಯ ಸಂಮಿಶ್ರ ಸರ್ಕಾರದಲ್ಲಿ ಉಸಿರು ಕಟ್ಟೋ ವಾತಾವರಣ ಇತ್ತು ಹೀಗಾಗಿಯೇ ನಾನು ರಾಜೀನಾಮೆ ನೀಡಿ ಹೊರಬಂದೆ ಎಂದು ಹೇಳಿದ್ರು.

ಇತ್ತ ಕಾಂಗ್ರೆಸ್ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಕೂಡಾ ನಾಮಪತ್ರ ಸಲ್ಲಿಕೆ ಮಾಡಿದ್ರು. ಶಾಸಕ ಅಮರೇಗೌಡ ಬಯ್ಯಾಪುರ ಜೊತೆಗೆ ಬಂದು ಬಸನಗೌಡ ತುರ್ವಿಹಾಳ ನಾಮಪತ್ರ ಸಲ್ಲಿಕೆ ಮಾಡಿದ್ರು. ನಾಮಪತ್ರ ಸಲ್ಲಿಕೆಗಾಗಿ ಬಂದಿದ್ದ ಡಿಕೆಶಿ ಹಾಗೂ ಸಿದ್ದರಾಮಯ್ಯ ನೇರವಾಗಿ ಸಮಾವೇಶದ ಸ್ಥಳಕ್ಕೆ ಬಂದ್ರು. ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಹಣ ಪಡೆದು ಪ್ರತಾಪ್ ಗೌಡ ಪಾಟೀಲ್ ಬಿಜೆಪಿಗೆ ಹೋಗಿದ್ದಾನೆ ಎಂದು ದೂರಿದ್ರು.

ಕಳೆದ ಬಾರಿ ಬಸನಗೌಡ ತುರ್ವಿಹಾಳ ಕೇವಲ 213 ಮತಗಳ ಅಂತರದಿಂದ ಸೋತಿದ್ದಾರೆ. ಇಲ್ಲಿನ ಜನಸಂಖ್ಯೆಯನ್ನ ನೋಡಿದ್ರೆ ಅತೀ ಹೆಚ್ಚಿನ ಮತಗಳ ಅಂತರದಿಂದ ಬಸನಗೌಡ ತುರ್ವಿಹಾಳ ಗೆಲುವು ಶತಸಿದ್ದ ಎಂದು ವಾಗ್ದಾನ ಮಾಡಿದ್ದಲ್ಲದೇ ಚುನಾವಣೆ ಸಂದರ್ಭದಲ್ಲಿ ಮೂರು ದಿನಗಳ ಕಾಲ ಕ್ಷೇತ್ರದಲ್ಲೇ ಇದ್ದು, ನಮ್ಮ ಅಭ್ಯರ್ಥಿಯ ಗೆಲುವಿಗೆ ಪ್ರಚಾರ ಮಾಡ್ತೇನೆ. ಪ್ರತಾಪ್ ಗೌಡ ಪಾಟೀಲರಂತ ದ್ರೋಹಿಗಳನ್ನ ಮತ್ತೇ ಗೆಲ್ಲಿಸಬಾರದೆಂದು ಗುಡುಗಿದ ಸಿದ್ದರಾಮಯ್ಯ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದ್ರು.

ಬಿಸಿಲಿನ ತಾಪಮಾನ ಹೆಚ್ಚಾದಂತೆ ಮಸ್ಕಿ ಬೈ ಎಲೆಕ್ಷನ್ ಕಾವು ಏರತೊಡಗಿದ್ದು, ಕೈ ಕಮಲದ ಅಭ್ಯರ್ಥಿಗಳು ಅಂತಿಮವಾಗಿ ನಾಮಿನೇಷನ್ ಪೈಲ್ ಮಾಡಿದ್ದಾಗಿದೆ. ಬಸನಗೌಡ ತುರ್ವಿಹಾಳ ಹಾಗೂ ಪ್ರತಾಪ್ ಗೌಡ ಪಾಟೀಲ್ ನಡುವೆ ನೇರ ಹಣಾಹಣಿ ಇದ್ದು, ಈಗಾಗಲೇ ಭರ್ಜರಿ ಮತಬೇಟೆ ಆರಂಭಿಸಿದ್ದಾರೆ. ಆದ್ರೆ ಕೊನೆಗೆ ಮತದಾರ ಪ್ರಭುಗಳು ಯಾರ ಕೈ ಹಿಡಿತಾರೆ ಅನ್ನೋದನ್ನ ಕಾದು ನೋಡಬೇಕಿದೆ.
Published by:Latha CG
First published: