ಮಸ್ಕಿ ಉಪಚುನಾವಣೆ: ಬಿಜೆಪಿಗೆ ಬಿಸಿ ತುಪ್ಪವಾದ 5ಎ ಕಾಲುವೆ ಹೋರಾಟ

 5A ಕಾಲುವೆ ಅನುಷ್ಠಾನದ ಬಗ್ಗೆ ಬಿಜೆಪಿ ಸರಕಾರ ಕಾಳಜಿ‌ ವಹಿಸಿಲ್ಲ ಎಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿ ಶ್ರೀರಾಮುಲು ಮತ್ತು ಸಂಸದ ಸಂಗಣ್ಣ ಕರಡಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ.

ಬಿಜೆಪಿ ನಾಯಕರಿಗೆ ಗ್ರಾಮಸ್ಥರಿಂದ ತರಾಟೆ

ಬಿಜೆಪಿ ನಾಯಕರಿಗೆ ಗ್ರಾಮಸ್ಥರಿಂದ ತರಾಟೆ

  • Share this:
ರಾಯಚೂರು (ಏ.3): ಮಸ್ಕಿ ವಿಧಾನಸಭಾ ಉಪಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಅಬ್ಬರ ಪ್ರಚಾರಕ್ಕೆ ಮುಂದಾಗಿವೆ. ಈ ನಡುವೆ ನಾರಾಯಣಪುರ ಬಲದಂಡೆ ನಾಲೆಯಿಂದ ನೀರಾವರಿ ಸೌಲಭ್ಯ ಒದಗಿಸಿ ಎಂದು ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿ ಹೋರಾಟಗಾರರ ಹಾಗೂ ರೈತರ ವಿರೋಧ ಬಿಜೆಪಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ. 5A ಕಾಲುವೆ ಅನುಷ್ಠಾನದ ಬಗ್ಗೆ ಬಿಜೆಪಿ ಸರಕಾರ ಕಾಳಜಿ‌ ವಹಿಸಿಲ್ಲ ಎಂದು ಚುನಾವಣಾ ಪ್ರಚಾರಕ್ಕೆ ಆಗಮಿಸಿ ಶ್ರೀರಾಮುಲು ಮತ್ತು ಸಂಸದ ಸಂಗಣ್ಣ ಕರಡಿಗೆ ಗ್ರಾಮಸ್ಥರು ತರಾಟೆ ತೆಗೆದುಕೊಂಡಿದ್ದಾರೆ. ಅಮಿನಗಡ, ವಟಗಲ್ ಗ್ರಾಮಗಳಿಗೆ  ತೆರಳಿದ ಬಿಜೆಪಿ ನಾಯಕರನ್ನು ಮುತ್ತಿಗೆ ಹಾಕಿ ವಾಗ್ವಾದ ನಡೆಸಿದರು. ಇದೇ ವೇಳೆ ವಟಗಲ್ ಗ್ರಾಮದಲ್ಲಿ ನಾವು ಉಪ್ಪು ನೀರು ಕುಡಿಯುತ್ತೇವೆ. ನೀವು ಇದೇ ನೀರು ಕುಡಿಯಿರಿ ಎಂದು ನೀರು ಕೊಟ್ಟರು. ಗ್ರಾಮಸ್ಥರ ಹಠಾತ್​ ನಡೆಗೆ ಸಚಿವ ಶ್ರೀರಾಮುಲು ತಬ್ಬಿಬ್ಬಾದರು.ಈ ಸಂದರ್ಭದಲ್ಲಿ ಮಾತನಾಡಿದ ಶ್ರೀರಾಮುಲು ಈ ಹೋರಾಟವನ್ನು ಮುಂದುವರಿಸಿ. ಆದರೆ, ಇನ್ನೂ 20 ದಿನ ನನಗೆ ಅವಕಾಶ ನೀಡಿ ಈಗ ನೀತಿ ಸಂಹಿತೆ ಜಾರಿಯಲ್ಲಿದೆ. ಈಗ ಭರವಸೆ ನೀಡಲು ಬರುವುದಿಲ್ಲ, ಚುನಾವಣೆ ಮುಗಿದ ನಂತರ ಈ ಬಗ್ಗೆ ಸ್ಪಷ್ಠತೆ ನೀಡಲಾಗುವುದು. ಸಿಎಂ ಬಳಿ ನಾನೇ ನಿಮ್ಮನ್ನೆಲ್ಲ ಕರೆದುಕೊಂಡು ಹೋಗಿ ಜಾರಿಗೊಳಿಸುವ ಬಗ್ಗೆ ಒತ್ತಾಯಿಸುತ್ತೇವೆ ನನ್ನನ್ನು ನಂಬಿ ಎಂದು ರೈತರ ಮನವೊಲಿಸಲು ಹೆಣಗಾಡಿದರು.

ನಾರಾಯಣಪುರ ಬಲದಂಡೆ ನಾಲೆಯಿಂದ 5A ಕಾಲುವೆ ನಿರ್ಮಿಸಿ ಮಸ್ಕಿ ತಾಲೂಕಿನ 110 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ ಯೋಜನೆ ಇದಾಗಿದೆ.  ಈ ಯೋಜನೆಗಾಗಿ ಕಳೆದ 12 ವರ್ಷಗಳಿಂದ ಈ ಭಾಗದ ರೈತರು ಬೇಡಿಕೆ ಸಲ್ಲಿಸುತ್ತಾ ಬಂದಿದ್ದಾರೆ. ಈ ಕಾಲುವೆಗೆ ನೀರಿನ ಲಭ್ಯತೆ ಹಾಗು ತಾಂತ್ರಿಕವಾಗಿ ಕಾಲುವೆ ನಿರ್ಮಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕೆ ಸರಕಾರ ಕಾಲುವೆ ನಿರ್ಮಿಸಲು ಮುಂದಾಗುತ್ತಿಲ್ಲ. ಆದರೆ ಈ ಬಗ್ಗೆ ಸರಕಾರ ಮನಸ್ಸು ಮಾಡಿ ತಾಂತ್ರಿಕ ತೊಂದರೆ ನಿವಾರಿಸಿ ಅನುಷ್ಠಾನಗೊಳಿಸಲು ಸಾಧ್ಯವಿದೆ ಎಂದು ರೈತರು ಹೋರಾಟ ನಡೆಸುತ್ತಿದ್ದಾರೆ.

ಈ ಮಧ್ಯೆ ನಂದವಾಡಗಿ ಏತ ನೀರಾವರಿಯ ಎರಡನೆಯ ಹಂತದಲ್ಲಿ ಹರಿ ನೀರು ಕಾಲುವೆ ಹಾಗು ವಟಗಲ್ ಬಸವೇಶ್ವರ ಏತ ನೀರಾವರಿಗೆ ಮಂಜೂರಾತಿ ನೀಡಲಾಗಿದೆ, ಇದರಿಂದ ಈ ಭಾಗಕ್ಕೆ ನೀರು ಹರಿಸಲು ಪರ್ಯಾಯ ವ್ಯವಸ್ಥೆ ಮಾಡಲಾಗುವುದು ಎಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡರ ಅನಿಸಿಕೆ.

5A ಕಾಲುವೆಗಾಗಿ ಆಗ್ರಹಿಸಿ ಪಾಮನಕಲ್ಲೂರಿನಲ್ಲಿ ರೈತರು ಕಳೆದ 135 ದಿನಗಳಿಂದ ಅನಿರ್ಧಿಷ್ಠಾವಧಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ, ಈ ಮಧ್ಯೆ ನಾಲ್ಕು ಗ್ರಾಮ ಪಂಚಾಯತಿಗಳಾದ ಪಾಮನಕಲ್ಲೂರು, ಅಮಿನಗಡ, ವಟಗಲ್ ಹಾಗು ಅಂಕುಶದೊಡ್ಡಿಯಲ್ಲಿ ಡಿಸೆಂಬರ್ ನಲ್ಲಿ ನಡೆದ ಗ್ರಾಮ ಪಂಚಾಯತಿ ಚುನಾವಣೆ ಬಹಿಷ್ಕರಿಸಿದ್ದರು, ಆದರೆ ಮಾರ್ಚ 29 ರಂದು ಮತ್ತೆ ಚುನಾವಣೆ ನಡೆದಿದೆ. ಒಟ್ಟು ನಾಲ್ಕು ಗ್ರಾಮ ಪಂಚಾಯತಿ ವ್ಯಾಪ್ತಿಯ ೩೪ ಗ್ರಾಮಗಳಲ್ಲಿ 5A ಕಾಲುವೆಯ ಹೋರಾಟದ ತೀವ್ರತೆ ಅಧಿಕವಾಗಿದೆ, ಯಾರು ನಮ್ಮ ಕಾಲುವೆ ಅನುಷ್ಠಾನಗೊಳಿಸುತ್ತಾರೊ ಅವರಿಗೆ ನಮ್ಮ ಮತ ಎಂದು ಘೋಷಿಸಿದ್ದಾರೆ ಇದರಿಂದಾಗಿ ಬಿಜೆಪಿಗೆ ಇದು ಬಿಸಿ ತುಪ್ಪವಾಗಿದ್ದು ಹೇಗೆ ಮತದಾರರನ್ನು ಸೆಳೆಯುತ್ತಾರೆ ಎಂಬುವುದನ್ನು ಕಾದು ನೋಡಬೇಕು.
Published by:Seema R
First published: