• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಮಸ್ಕಿ ಉಪಚುನಾವಣೆ: ಸಣ್ಣ-ಪುಟ್ಟ ಘಟನೆ ಹೊರತುಪಡಿಸಿ ರಣಬಿಸಿಲಿನ ಮಧ್ಯೆ ಶಾಂತಿಯುತ ಮತದಾನ

ಮಸ್ಕಿ ಉಪಚುನಾವಣೆ: ಸಣ್ಣ-ಪುಟ್ಟ ಘಟನೆ ಹೊರತುಪಡಿಸಿ ರಣಬಿಸಿಲಿನ ಮಧ್ಯೆ ಶಾಂತಿಯುತ ಮತದಾನ

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ತುರ್ವಿಹಾಳ ಹಾಗು ಮಸ್ಕಿಯಲ್ಲಿ ಜನಸ್ನೇಹಿ, ಮಹಿಳೆಯರನ್ನು ಮತದಾನದತ್ತ ಸೆಳೆಯಲು ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮತಗಟ್ಟೆಯಲ್ಲಿ ಸಿಬ್ಬಂದಿಗಳು ಪಿಂಕ್ ಉಡುಪು ತೊಟ್ಟು ಕರ್ತವ್ಯ ಮಾಡಿದರು. ಇಲ್ಲಿ ಅಂಗವಿಕಲರಿಗೆ ವ್ಹೀಲ್ ಚೇರ್, ಹೊಸ‌ ಮತದಾರರಿಗೆ ಗಿಡಗಳನ್ನು ನೀಡಿ ಸತ್ಕರಿಸಲಾಯಿತು.

ಮುಂದೆ ಓದಿ ...
  • Share this:

ರಾಯಚೂರು(ಏ.17): ರಣ ಬಿಸಿಲು, ಹೊರಗೆ ಬಾರದಷ್ಟು ತಾಪಮಾನ ಹೆಚ್ಚಿದ್ದರೂ ಜನರು ಉತ್ಸಾಹದಿಂದ ಮತದಾನ ಮಾಡಿದ್ದಾರೆ. ಕಳೆದ ಎರಡು ವರ್ಷಗಳಿಂದ ಶಾಸಕರು ಕಾಣದೇ ಇದ್ದ ಕ್ಷೇತ್ರಕ್ಕೆ ಇಂದು ಚುನಾವಣೆ ನಡೆದಿದೆ. ರಾಯಚೂರಿನ ಮಸ್ಕಿ ವಿಧಾನಸಭಾ ಉಪ ಚುನಾವಣೆ ಶಾಂತಿಯುತ ಅಂತ್ಯ ಕಂಡಿದ್ದು, ಇನ್ನೇನಿದ್ದರೂ ಫಲಿತಾಂಶ ಬರೋದೊಂದೆ ಬಾಕಿಯಿದೆ. 


ರಣಬಿಸಿಲನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಕಳೆದ ಎರಡು ತಿಂಗಳಿನಿಂದ ಬಿರುಸಿನ ಪ್ರಚಾರ ನಡೆಸಿದ್ದರು. ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಹಾಗೂ ಕಾಂಗ್ರೆಸ್ ನ ಬಸನಗೌಡ ತುರುವಿಹಾಳ ಮಸ್ಕಿ ಚುಕ್ಕಾಣಿಗಾಗಿ ತಂತ್ರ ಪ್ರತಿತಂತ್ರ ಹೆಣೆದಿದ್ದಾರೆ. ಈ‌ ನಡುವೆ ರಾಜ್ಯದ ಘಟಾನುಘಟಿ ನಾಯಕರೂ ಸಹ ತಮ್ಮ ತಮ್ಮ ಅಭ್ಯರ್ಥಿಗಳ ಪರವಾಗಿ ಕ್ಷೇತ್ರದಲ್ಲೇ ಬೀಡುಬಿಟ್ಟು ತಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸಿದ್ದರು.


ಸದ್ಯ ಇಂದು ಚುನಾವಣೆ ಮುಕ್ತಾಯವಾಗಿದೆ. ಕೆಲವು ಕಡೆ ಅಹಿತಕರ ಬಿಟ್ಟರೆ ಎಲ್ಲೆಡೆ ಶಾಂತಿಯುತ ಮತದಾನವಾಗಿದೆ. ಇಂದು ಬೆಳಿಗ್ಗೆ 7 ಗಂಟೆಗೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಗೌಡ ಪಾಟೀಲ್ ಕುಟುಂಬಸ್ಥರು ಮಸ್ಕಿ ಪಟ್ಟಣದಲ್ಲಿ ತಮ್ಮ ಹಕ್ಕು ಚಲಾಯಿಸಿದರು. ವಾರ್ಡ್ ನಂಬರ್ 8ರ ಮತಗಟ್ಟೆ ಸಂಖ್ಯೆ 88 ಹಾಗೂ 89 ರಲ್ಲಿ ಪ್ರತಾಪ್ ಗೌಡ ಪತ್ನಿ ಪದ್ಮಾವತಿ ಮಗಳು ಪ್ರೀತಿ ಹಾಗೂ‌ ಮೂವರು ಮಕ್ಕಳು ಮತ್ತು ಸೊಸೆಯಂದಿರು ಮತದಾನ ಮಾಡಿದ್ದಾರೆ.


ಪ್ರತಾಪ್ ಗೌಡಗೆ ಕೊರೋನಾ ಸೋಂಕು ದೃಢಪಟ್ಟಿದ್ದರಿಂದ ಸಂಜೆ 6 ರಿಂದ 7 ಗಂಟೆಯೊಳಗೆ ಪಿಪಿಇ ಕಿಟ್ ಧರಿಸಿ ಮತದಾನ ಮಾಡಲಿದ್ದಾರೆ. ಇತ್ತ ಕೈ ಅಭ್ಯರ್ಥಿ ಬಸನಗೌಡ ತುರುವಿಹಾಳ ಸಹ ತುರುವಿಹಾಳ ಪಟ್ಟಣದಲ್ಲಿ ಬೆಳಿಗ್ಗೆ 7:30 ಕ್ಕೆ ಮತದಾನ ಮಾಡಿದ್ದು, ಮತದಾನಕ್ಕೂ ಮುನ್ನ ಬಸನಗೌಡ ಟೆಂಪಲ್ ರನ್ ಮಾಡಿದ್ದಾರೆ.


ಕೊರೋನಾ ಲಸಿಕೆ ಕೊರತೆ ಹಿನ್ನೆಲೆ ಎಚ್ಚೆತ್ತುಕೊಂಡ ಸರ್ಕಾರ; ಸೆಪ್ಟೆಂಬರ್‌ನೊಳಗೆ ತಿಂಗಳಿಗೆ 10 ಕೋಟಿ ಕೋವ್ಯಾಕ್ಸಿನ್‌ ಡೋಸ್‌ ಉತ್ಪಾದನೆ


ಇನ್ನೂ ತುರ್ವಿಹಾಳ ಹಾಗು ಮಸ್ಕಿಯಲ್ಲಿ ಜನಸ್ನೇಹಿ, ಮಹಿಳೆಯರನ್ನು ಮತದಾನದತ್ತ ಸೆಳೆಯಲು ಪಿಂಕ್ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಈ ಮತಗಟ್ಟೆಯಲ್ಲಿ ಸಿಬ್ಬಂದಿಗಳು ಪಿಂಕ್ ಉಡುಪು ತೊಟ್ಟು ಕರ್ತವ್ಯ ಮಾಡಿದರು. ಇಲ್ಲಿ ಅಂಗವಿಕಲರಿಗೆ ವ್ಹೀಲ್ ಚೇರ್, ಹೊಸ‌ ಮತದಾರರಿಗೆ ಗಿಡಗಳನ್ನು ನೀಡಿ ಸತ್ಕರಿಸಲಾಯಿತು. ನಿನ್ನೆ ಸಂಜೆಯಿಂದ ಪಿಂಕ್ ಮತಗಟ್ಟೆಗಳು ದೀಪಾಲಂಕಾರದಿಂದ‌ ಜಗಮಗಿಸುವಂತೆ ಸಜ್ಜುಗೊಳಿಸಿದ್ದರು.


ಮಸ್ಕಿ ಉಪ ಕದನ ಇಂದು ಅದ್ಧೂರಿಯಾಗಿ ಅಂತ್ಯ ಕಂಡಿದೆ. ಕ್ಷೇತ್ರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನೊಂದಿಗೆ ಹಲವೆಡೆ ಶಾಂತಿಯುತ ಮತದಾನವಾಗಿದ್ರೆ, ಕೆಲವೆಡೆ ಗಲಾಟೆ ಗದ್ದಲದ ನಡುವೆ ನಡೆದ ಮತದಾನ ಜೋರಾಗಿತ್ತು. ಮಸ್ಕಿ ಕ್ಷೇತ್ರದ ಬರೋಬ್ಬರಿ 305 ಬೂತ್ ಗಳಲ್ಲಿ ಮತದಾನವಾಗಿದೆ. ಬೆಳಿಗ್ಗೆ 7 ರಿಂದ ಸಂಜೆ 7 ರ ವರೆಗೂ ನಡೆದ ಮತದಾನ ಪ್ರಕ್ರಿಯೆಯಲ್ಲಿ, ಕೈ ಕಮಲ ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮತದಾರರು ಸುಡು ಬಿಸಿಲಲ್ಲಿ ಸರದಿ ಸಾಲಿನಲ್ಲಿ‌ ನಿಂತು ತಮ್ಮ ಹಕ್ಕು ಚಲಾಯಿಸಿದ್ರು.


ಈ ನಡುವೆ ಹಂಚಿನಾಳ ಗ್ರಾಮದಲ್ಲಿ ಬೆಳಿಗ್ಗೆ ಮತಯಂತ್ರಗಳ ಬ್ಯಾಟರಿ ದೋಷದಿಂದ ಎರಡು ಗಂಟೆ ನಂತರ ಮತದಾನ ಆರಂಭವಾಗಿತ್ತು. ಇತ್ತ ಕನ್ನಾಳ ಗ್ರಾಮದಲ್ಲಿ  ಕೈ ಕಮಲದ ಪಕ್ಷದ ಮುಖಂಡರ ಮಧ್ಯೆ ಗುಂಪು ಘರ್ಷಣೆಯಾಗಿ ಕೈ ಕೈ ಮಿಲಾಯಿಸುವ ಹಂತಕ್ಕೆ ತೆರಳಿತ್ತು. ಮತಗಟ್ಟೆ ಕೇಂದ್ರದ ಗಡಿ ರೇಖೆ ಒಳಗಡೆ ಮತದಾರರನ್ನ ಕರೆದುಕೊಂಡು ಹೋಗ್ತಿದ್ದಿದ್ಕೆ ಗಲಾಟೆಯಾಗಿದ್ದು, ಪರಿಸ್ಥಿತಿ ವಿಕೋಪಕ್ಕೆ ಹೋಗ್ತಿರೋದನ್ನ ಅರಿತ ಸ್ಥಳೀಯರಿಂದ ಎರಡೂ ಕಡೆಯ ಕಾರ್ಯಕರ್ತರನ್ನ ಸಮಾಧಾನ ಪಡಿಸಿದ್ದಾರೆ.


ಇನ್ನೂ ವಟಗಲ್ ಗ್ರಾಮದ ಬಸವರಾಜ್ ಎಂಬ ವ್ಯಕ್ತಿ ತಾನು ಮತ ಚಲಾಯಿಸಿದ ವಿಡಿಯೋ ಹರಿಬಿಟ್ಟು ಯಡವಟ್ಟು ಮಾಡಿಕೊಂಡಿದ್ದಾನೆ. ಬಸವರಾಜ್ ವಿರುದ್ಧ ಎ.ಆರ್.ಒ ರಾಜಶೇಖರ ಡಂಬಳ ದೂರು ದಾಖಲಿಸಿದ್ದು, ಕವಿತಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಹಾಲಾಪುರ ಗ್ರಾಮದಲ್ಲಿ 100  ಮೀಟರ್ ಒಳಗಡೆ ಜನ ಜಂಗುಳಿ ಸೇರಿದ್ರಿಂದ ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಗರಂ ಆಗಿದ್ದಾರೆ. ಗುಂಪು ನೆರೆದಿದ್ದವರನ್ನು‌ ಚದುರಿಸಲು ಪೊಲೀಸರು ಮತದಾರರಿಗೆ ಲಾಠಿ ರುಚಿ ತೋರಿಸಿದ್ದಾರೆ. ಈ ‌ನಡುವೆ ಕಾಂಗ್ರೆಸ್ ಅಭ್ಯರ್ಥಿ ಭಾವಚಿತ್ರ ಇರುವ ಮತದಾರರ ಚೀಟಿ ಹಂಚ್ತಿದ್ದ ವ್ಯಕ್ತಿಯನ್ನು ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಬಂಧಿಸಲಾಗಿದೆ.


ಇತ್ತ ಕುರುಕುಂದಾ ಗ್ರಾಮದಲ್ಲಿ ಪೊಲೀಸರೊಂದಿಗೆ ಕಾಂಗ್ರೆಸ್ ಕಾರ್ಯಕರ್ತೆ ವಾಗ್ವಾದಕ್ಕಿಳಿದಿದ್ರು. ಮತಗಟ್ಟೆ ಹತ್ತಿರ ಬಿಜೆಪಿ ಕಾರ್ಯಕರ್ತರನ್ನು ಬಿಡುತ್ತಿರುವುದಕ್ಕೆ ಆಕ್ರೋಶಗೊಂಡ ಕಾಂಗ್ರೆಸ್ ಕಾರ್ಯಕರ್ತೆ ಪದ್ಮಾವತಿ ಆಕ್ಷೇಪ ವ್ಯಕ್ತಪಡಿಸಿದ್ರು. ಕಾಂಗ್ರೆಸ್ ಕಾರ್ಯಕರ್ತರನ್ನು ದೂರ ಕಳಿಸಿ, ಬಿಜೆಪಿ ಕಾರ್ಯಕರ್ತರಿಗೆ ಮತಗಟ್ಟೆ ಬಿಡುತ್ತಿದ್ದಾರೆ ಎಂಬ ಆರೋಪಿಸಿದ್ರಿಂದ ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿದೆ.


ಇಷ್ಟೆಲ್ಲ ಗದ್ದಲಗಳ ನಡುವೆ ಮಸ್ಕಿ ವಿಧಾನಸಭಾ ಉಪ ಚುನಾವಣೆ ಯಶಸ್ವಿಯಾಗಿ ನಡೆದಿದೆ. ಆದ್ರೆ ಚುನಾವಣಾ ಕಾರ್ಯಕ್ಕೆ ಹಾಜರಾಗದ 29 ಸಿಬ್ಬಂದಿ ವಿರುದ್ಧ ಚುನಾವಣಾ ಆಯೋಗ ಕ್ರಮಕ್ಕೆ‌ ಮುಂದಾಗಿದೆ. ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಎ ಆರ್ ಓ ರಾಜಶೇಖರ ಡಂಬಳೆಯಿಂದ ಮಸ್ಕಿ ಠಾಣೆಗೆ ದೂರು ಸಲ್ಲಿಸಲಾಗಿದ್ದು, ಮಸ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಒಟ್ಟಾರೆಯಾಗಿ ಮಸ್ಕಿ ಚುನಾವಣೆ ಇಂದು ಅಂತ್ಯ ಕಂಡಿದ್ದು, ಮೇ 2 ರ ಫಲಿತಾಂಶ ನಂತರ ಮತದಾರ ಯಾರ ಕೈ ಹಿಡೀತಾನೆ ಕಾದುನೋಡಬೇಕಿದೆ.

Published by:Latha CG
First published: