ರಾಯಚೂರು(ಏ.15): ಮೊನ್ನೆ ಡಿಸಿಎಂ ಗೋವಿಂದ ಕಾರಜೋಳರಿಗೆ, ನಿನ್ನೆ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ, ಇಂದು ಚುನಾವಣೆ ಉಸ್ತುವಾರಿ ವಹಿಸಿಕೊಂಡಿರುವ ರಾಜುಗೌಡರಿಗೆ, ಮುಂದೆ ಇನ್ನೂ ಎಷ್ಟು ಜನರಿಗೊ, ಪ್ರಚಾರದಲ್ಲಿ ಭಾಗಿಯಾಗಿರುವ ಸಿಎಂ ಯಡಿಯೂರಪ್ಪ, ಸಚಿವರಿಗೂ ಕೊರೋನಾ ಸೋಂಕು ಹರಡುವ ಆತಂಕ ಸೃಷ್ಠಿಯಾಗಿದೆ.
ಏಪ್ರಿಲ್ 17ರಂದು ನಡೆಯುವ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಪ್ರಚಾರದ ಭರಾಟೆ ಜೋರಾಗಿದೆ. ಈ ಸಂದರ್ಭದಲ್ಲಿ ಒಬ್ಬೊಬ್ಬರಿಗೆ ಕೊರೊನಾ ಸೋಂಕು ತಗುಲಿದೆ. ಏಪ್ರಿಲ್ 5 ರಂದು ಮಸ್ಕಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಗೋವಿಂದ ಕಾರಜೋಳರಿಗೆ ಏಪ್ರಿಲ್ 8 ರಂದು ಕೊರೋನಾ ಸೋಂಕು ದೃಡಪಟ್ಟಿತ್ತು, ಇದರ ನಂತರ ಏಪ್ರಿಲ್ 11 ರಂದು ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಈ ನಂತರ ಇಂದು ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರದಲ್ಲಿದ್ದ ಸುರಪುರ ಶಾಸಕ ರಾಜುಗೌಡರಿಗೂ ಕೊರೋನಾ ಸೋಂಕು ದೃಢಪಟ್ಟಿದೆ. ತಮಗೆ ಸೋಂಕು ದೃಢಪಟ್ಟ ಹಿನ್ನಲೆಯಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ರಾಜುಗೌಡ, ಆಸ್ಪತ್ರೆಯಿಂದ ವಿಡಿಯೋ ಮಾಡಿ ನನಗೆ ಕೊರೊನಾ ಸೋಂಕು ದೃಢಪಟ್ಟಿದೆ, ಚಿಕಿತ್ಸೆ ಪಡೆಯುತ್ತಿದ್ದೇನೆ, ಆತಂಕ ಪಡುವ ಅವಶ್ಯಕತೆ ಇಲ್ಲ, ನನ್ನ ಸಂಪರ್ಕದಲ್ಲಿರುವವರು ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಫಲವತ್ತಾದ ಕೆರೆಗಳ ಮಣ್ಣು ಖಾಸಗಿ ಬಡಾವಣೆಗಳ ಪಾಲು; ಅಧಿಕಾರಿಗಳ ಜಾಣ ಕುರುಡಿಗೆ ಜನರ ಆಕ್ರೋಶ
ರಾಜುಗೌಡ ಕಳೆದ 10-12 ದಿನಗಳಿಂದ ಕ್ಷೇತ್ರದಲ್ಲಿ ತಿರುಗಾಡಿದ್ದು ಮುಖ್ಯಮಂತ್ರಿ ಗಳು ಭಾಗಿಯಾಗಿರುವ ಬೃಹತ್ ಸಮಾವೇಶಗಳಲ್ಲಿ ಭಾಗಿಯಾಗಿದ್ದರು. ಮಸ್ಕಿ ಬೈ ಎಲೆಕ್ಷನ್ ನಲ್ಲಿ ಚುನಾವಣಾ ಆಯೋಗ ಹಾಗೂ ಆರೋಗ್ಯ ಇಲಾಖೆಯು ವಿಧಿಸಿದ ಮಾನದಂಡಗಳನ್ನು ಪಾಲಿಸಿಲ್ಲ. ಒಂದೊಂದು ಸಮಾವೇಶದಲ್ಲಿ ಸಾವಿರಾರು ಜನ ಸೇರಿದ್ದು, ಕೋವಿಡ್ ನಿಯಮಾವಳಿಗಳನ್ನು ಪಾಲಿಸಿಲ್ಲ. ಈಗ ಒಬ್ಬೊಬ್ಬರಿಗೆ ಕೊರೋನಾ ಸೋಂಕು ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಠಿಯಾಗಿದೆ.
ಇದೇ ವೇಳೆ ಚುನಾವಣೆ ಸಂದರ್ಭದಲ್ಲಿ ಸೋಂಕು ಕಾಣಿಸಿಕೊಂಡು ಪ್ರಚಾರದಿಂದ ದೂರ ಉಳಿದ ಪ್ರತಾಪಗೌಡ ಪಾಟೀಲ ವಿಡಿಯೋ ಸಂದೇಶದ ಮುಖಾಂತರ ಮತದಾರರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಏಪ್ರಿಲ್ 17 ರಂದು ನಡೆಯುವ ಚುನಾವಣೆಯಲ್ಲಿ ಬೆಂಬಲಿಸುವಂತೆ ಮನವಿ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದಾಗಿ ಪ್ರಚಾರಕ್ಕೆ ಬರಲು ಆಗುತ್ತಿಲ್ಲ. ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದೇನೆ. ನೀವು ಹಾಕುವ ಮತ ಕೇವಲ ಒಬ್ಬ ಶಾಸಕನ ಆಯ್ಕೆಗಾಗಿ ಮತ ಹಾಕುವುದಿಲ್ಲ. ಒಬ್ಬ ಮಂತ್ರಿಯಾಗುವವರಿಗೆ ಮತ ಹಾಕುತ್ತೀರಿ, ನನ್ನ ಪರವಾಗಿ ಬಿಜೆಪಿ ಮುಖಂಡರು ಪ್ರಚಾರ ಮಾಡುತ್ತಿದ್ದಾರೆ, ಗುಣಮುಖರಾದ ನಂತರ ನಿಮಗೆ ಕೃತಜ್ಞತೆ ಸಲ್ಲಿಸುತ್ತೇನೆ. 12 ವರ್ಷದ ರಾಜಕೀಯ ಜೀವನದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ, ನೀರಾವರಿಗೆ ಆದ್ಯತೆ ನೀಡಿದ್ದೇನೆ, ನನ್ನನ್ನು ಮತ್ತೊಮ್ಮೆ ಬೆಂಬಲಿಸಿ ಎಂದು ಮನೆಯಿಂದ ವಿಡಿಯೋ ಸಂದೇಶ ಕಳುಹಿಸಿದ ಮಸ್ಕಿ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಮನವಿ ಮಾಡಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ