ಮಸ್ಕಿ ಉಪಚುನಾವಣೆ: ದಿನಾಂಕ ಘೋಷಣೆಗೂ ಮುನ್ನ ಸರ್ಕಾರದಿಂದ ಭರ್ಜರಿ ಅನುದಾನ ಬಿಡುಗಡೆ

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಪ್ರತಾಪಗೌಡ ಪಾಟೀಲರನ್ನು ಗೆಲ್ಲಿಸಲು ಸರಕಾರದಿಂದ ಭರಪೂರ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಫೆಬ್ರುವರಿ 6ರಂದು ಲೋಕೋಪಯೋಗಿ ಇಲಾಖೆಯ ಆರ್ಥಿಕ ಕೋಶದಿಂದ ತಕ್ಷಣ 82.33 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಿದೆ.

ಪ್ರತಾಪಗೌಡ ಪಾಟೀಲ

ಪ್ರತಾಪಗೌಡ ಪಾಟೀಲ

  • Share this:
ರಾಯಚೂರು(ಫೆ.08): ಮಸ್ಕಿ ವಿಧಾನಸಭಾ ಕ್ಷೇತ್ರಕ್ಕೆ ಇಷ್ಟರಲ್ಲಿಯೇ ಉಪಚುನಾವಣೆ ನಡೆಯಲಿದೆ.  ಈಗಾಗಲೇ ಅಭಿವೃದ್ಧಿ ಮಂತ್ರ ಹಾಕಿ ಹೆಚ್ಚು ಸ್ಥಾನ ಗಳಿಸಿರುವ ಬಿಜೆಪಿ ಇಲ್ಲಿಯೂ ಚುನಾವಣೆಯ ಮುನ್ನ ಮಸ್ಕಿಯಲ್ಲಿಯೂ ಅಭಿವೃದ್ಧಿ ಮಂತ್ರ ಜಪಿಸುತ್ತಿದೆ. ನೂರಾರು ಕೋಟಿ ರೂಪಾಯಿ ಯೋಜನೆಗಳಿಗೆ ಸರಕಾರದಿಂದ ಮಂಜೂರಾತಿ ನೀಡಿದ್ದು, ಉಪಚುನಾವಣೆಗೆ ಸರಕಾರದಿಂದ ಅನುದಾನ ಬಳಸಿಕೊಂಡು ಪಕ್ಷಕ್ಕೆ ಲಾಭ ಮಾಡಿಕೊಳ್ಳಲು ಸಕಲ ಸಿದ್ದತೆ ನಡೆಸಿದೆ.

2008 ರಿಂದ ನೂತನ ವಿಧಾನಸಭಾ ಕ್ಷೇತ್ರವಾಗಿರುವ ಮಸ್ಕಿ ವಿಧಾನಸಭಾ ಕ್ಷೇತ್ರವು ಈಗಾಗಲೇ 3 ಬಾರಿ ಚುನಾವಣೆ ಏದುರಿಸಿದೆ, ಇದೇ ಮೊದಲು ಬಾರಿ ಉಪಚುನಾವಣೆ ಎದುರಿಸಲು ಸಿದ್ದವಾಗಿದೆ. 2018 ರಲ್ಲಿ ಕಾಂಗ್ರೆಸ್ಸಿನಿಂದ ಆಯ್ಕೆಯಾಗಿದ್ದ ಪ್ರತಾಪಗೌಡ ಪಾಟೀಲ, ಈ ಮೊದಲು ಎರಡು ಚುನಾವಣೆಯಲ್ಲೂ ಅವರೇ ಶಾಸಕರಾಗಿದ್ದರು. 2018 ರ ಚುನಾವಣೆ ಫಲಿತಾಂಶ ಬಂದ ನಂತರದಿಂದಲೂ ಭಿನ್ನಮತಕ್ಕೆ ನಾಂದಿ ಹಾಡಿದ್ದರು.

ಕುಮಾರಸ್ವಾಮಿ ಸರಕಾರ ರಚನೆಯಾಗುವಾಗ ಬಹುಮತ ಸಾಬೀತು ಮಾಡುವಾಗಲೂ ಮೊದಲು ತಪ್ಪಿಸಿಕೊಂಡಿದ್ದು ಕೊನೆಯ ಘಳಿಗೆಯಲ್ಲಿ ಬಂದು ಸರಕಾರದ ಪರ ಚಲಾಯಿಸಿದ್ದರು.  ನಂತರದಲ್ಲಿ ಸಮ್ಮಿಶ್ರ ಸರಕಾರ ಕೆಡುವಲ್ಲಿಯೂ ಸಹ ಪ್ರಮುಖ ಪಾತ್ರ ವಹಿಸಿ ಕುಮಾರಸ್ವಾಮಿ ಸರಕಾರ ಪತನವಾಗಿ ಬಿಜೆಪಿ ಸರಕಾರ ಬಂದಿದೆ. ಯಡಿಯೂರಪ್ಪ ಸರಕಾರ ಬಂದ ನಂತರ 20 ಕ್ಷೇತ್ರಗಳಿಗೆ ಚುನಾವಣೆ ನಡೆದು 17 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈಗ ಮತ್ತೆ ಮೂರು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ, ಅದರಲ್ಲಿ ಮಸ್ಕಿ ವಿಧಾನ ಸಭಾ ಕ್ಷೇತ್ರವು ಒಂದು.

ಫೇಸ್​ಬುಕ್​​​ ಫ್ರೆಂಡ್​​​ ಭೇಟಿಯಾಗಲು ಹೋಗಿ 1 ಕೋಟಿ ರೂ. ಮೌಲ್ಯದ ಕೇರಳ ಲಾಟರಿ ಗೆದ್ದ ಮಂಡ್ಯದ ಯುವಕ..!

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಪ್ರತಾಪಗೌಡ ಪಾಟೀಲರನ್ನು ಗೆಲ್ಲಿಸಲು ಸರಕಾರದಿಂದ ಭರಪೂರ ಅನುದಾನ ಬಿಡುಗಡೆ ಮಾಡುತ್ತಿದೆ. ಈ ಮಧ್ಯೆ ಫೆಬ್ರುವರಿ 6ರಂದು ಲೋಕೋಪಯೋಗಿ ಇಲಾಖೆಯ ಆರ್ಥಿಕ ಕೋಶದಿಂದ ತಕ್ಷಣ 82.33 ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಲು ಆದೇಶ ಹೊರಡಿಸಿದೆ. ಮಸ್ಕಿ ತಾಲೂಕಿನ 17 ಕೆರೆಗಳಿಗೆ ನಾರಾಯಣಪುರ ಜಲಾಶಯದಿಂದ ನೀರು ತುಂಬಿಸಲು ಒಟ್ಟು 457.18 ಕೋಟಿ ರೂಪಾಯಿ ಯೋಜನೆಗೆ ಮಂಜೂರಾತಿ ನೀಡಿದ್ದು ಮೊದಲು ಕಂತಾಗಿ 18.33 ಕೋಟಿ ಹಣ ಬಿಡುಗಡೆ ಮಾಡಿ ಟೆಂಡರ್ ಕರೆಯಲು ಸಣ್ಣ ನೀರಾವರಿ ಇಲಾಖೆಗೆ ಸೂಚಿಸಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಸಾಕಷ್ಟು ಅನುದಾನ ನೀಡುತ್ತಿದ್ದು, ಈ ಮಧ್ಯೆ ಕಳೆದ ಹದಿನೈದು ದಿನಗಳ ಹಿಂದೆ‌ ಮೂರು ಕನಕ ಹಾಗು ಹೇಮರಡ್ಡಿ ಮಲ್ಲಮ್ಮ ಭವನಗಳಿಗಾಗಿ 2.50 ಕೋಟಿ ರೂಪಾಯಿ ಮಂಜೂರಾತಿ ನೀಡಿದೆ.  ಈ ಮಧ್ಯೆ ಭಾನುವಾರ ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ವಟಗಲ್ ನಲ್ಲಿ ಒಂದು ಕೋಟಿ ರೂಪಾಯಿಯಲ್ಲಿ ನಿರ್ಮಾಣವಾದ ಇಂದಿರಾಗಾಂಧಿ ವಸತಿ ಶಾಲೆಗಳ ಉದ್ಘಾಟನೆ ಮಾಡಿದ್ದಾರೆ. ಉಪಚುನಾವಣೆ ದಿನಾಂಕ ಘೋಷಣೆಯ ಮುನ್ನ ಸರಕಾರದಿಂದ ಅನುದಾನ ಬಿಡುಗಡೆ ಮಾಡಿ ಮತದಾರರನ್ನು ಸೆಳೆಯಲು ಮುಂದಾಗಿದೆ.

ಮಸ್ಕಿ ವಿಧಾನಸಭಾ ಕ್ಷೇತ್ರದ 110 ಹಳ್ಳಿಗಳಿಗೆ ನೀರಾವರಿ ಸೌಲಭ್ಯ ಒದಗಿಸುವ 5A ಕಾಲುವೆಗಾಗಿ ರೈತರು ಪಾಮನಕಲ್ಲೂರಿನಲ್ಲಿ 81  ದಿನಗಳಿಂದ ಸತ್ಯಾಗ್ರಹ ನಡೆಸುತ್ತಿದ್ದಾರೆ. ಈ ಹೋರಾಟವನ್ನು ಒಡೆಯಲು ಪ್ರತಾಪಗೌಡ ಅನೇಕ ರೀತಿಯ ಯತ್ನ ನಡೆಸಿದ್ದಾರೆ. ಆದರೆ ರೈತರು ಕಾಲುವೆಯಾಗುವವರೆಗೂ ನಮ್ಮ ಹೋರಾಟ ಬಿಡುವುದಿಲ್ಲ ಎಂದು ಪಟ್ಟು ಹಿಡಿದು ಹೋರಾಟ ಮುಂದುವರಿಸಿದ್ದಾರೆ. ಈ ಮಧ್ಯೆ ಸರಕಾರದಿಂದ ಕೆರೆ ತುಂಬಿಸುವ ಯೋಜನೆ ಮಂಜೂರು ಮಾಡಿ ರೈತರ ಹೋರಾಟಕ್ಕೆ ಕೌಂಟರ್ ಕೊಡಲು ಸಿದ್ದವಾಗಿದೆ.

ಕಾಲುವೆಯ ಹೋರಾಟದಿಂದಾಗಿ ಪ್ರತಾಪಗೌಡರಿಗೆ ಮತ ವಿಭಜನೆಯಾಗುವ ಲಕ್ಷಣವಿರುವದರಿಂದ ಈಗ ಸರಕಾರದಿಂದ ಅನುದಾನ ತಂದು ಅಭಿವೃದ್ಧಿ ಪರ ಮಂತ್ರ ಜಪಿಸುತ್ತಾ ಮತಗಳಿಕೆಗೆ ಮುಂದಾಗಿದ್ದಾರೆ, ಈ ಯತ್ನಕ್ಕೆ ಸರಕಾರವು ಸಹ ಸ್ಪಂದಿಸಿದ್ದು, ಪ್ರತಾಪಗೌಡರಿಗೆ ಸರಕಾರದಿಂದ ನೀಡಿದ ಅನುದಾನ ವರದಾನವಾಗಲಿದೆಯೇ ಎಂಬುವುದನ್ನು ಕಾದು ನೋಡಬೇಕು.
Published by:Latha CG
First published: