ಮಸ್ಕಿ ಉಪಚುನಾವಣೆ; ಕುತೂಹಲ ಮೂಡಿಸಿದ ಬಿ.ವೈ. ವಿಜಯೇಂದ್ರ-ವಿರುಪಾಕ್ಷಪ್ಪ ಭೇಟಿ

ಮಸ್ಕಿಯಲ್ಲಿ ಸುಮಾರು 25 ಸಾವಿರ ಕುರುಬ ಜನಾಂಗದ ಮತಗಳಿವೆ. ಕುರುಬ ಜನಾಂಗದ ಮತಗಳನ್ನು ಬಿಜೆಪಿ ಪರವಾಗಿ ಇರುವಂತೆ ಮಾಡುವ ಉದ್ದೇಶದಿಂದ ಸಿಎಂ ಪುತ್ರ ವಿಜಯೇಂದ್ರ ವಿರುಪಾಕ್ಷಪ್ಪರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ.

news18-kannada
Updated:November 21, 2020, 3:12 PM IST
ಮಸ್ಕಿ ಉಪಚುನಾವಣೆ; ಕುತೂಹಲ ಮೂಡಿಸಿದ ಬಿ.ವೈ. ವಿಜಯೇಂದ್ರ-ವಿರುಪಾಕ್ಷಪ್ಪ ಭೇಟಿ
ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ ವೈ ವಿಜಯೇಂದ್ರ
  • Share this:
ರಾಯಚೂರು(ನ.21): ಶಿರಾ ಹಾಗೂ ಆರ್ ಆರ್ ನಗರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿ, ಮುಂಬರುವ ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಹಾಗೂ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಗೆಲ್ಲಲೇಬೇಕು ಎನ್ನುವ ಹಠಕ್ಕೆ ಬಿದ್ದಂತೆ ಇದೆ. ಹೀಗಾಗಿ ಉಪಚುನಾವಣೆಯ ದಿನಾಂಕ ಘೋಷಣೆಗೂ ಮುನ್ನ ಕಾರ್ಯತಂತ್ರ ರೂಪಿಸುತ್ತಿದೆ. ಇದಕ್ಕೆ ಪೂರಕ ಎಂಬಂತೆ ಕಾಂಗ್ರೆಸ್ ಮುಖಂಡ ಕೊಪ್ಪಳ‌ ಮಾಜಿ ಸಂಸದ ಕೆ ವಿರುಪಾಕ್ಷಪ್ಪರನ್ನು ಸಿಎಂ ಪುತ್ರ ವಿಜಯೇಂದ್ರ ಭೇಟಿ ಮಾಡಿದ್ದು, ಕುತೂಹಲ ಮೂಡಿಸಿದೆ. ಕಾಂಗ್ರೆಸ್ಸಿನಿಂದ ಸಿಂಧನೂರಿನಲ್ಲಿ ಎರಡು ಬಾರಿ ಶಾಸಕರಾಗಿ ಒಮ್ಮೆ ಕೊಪ್ಪಳ ಲೋಕಸಭಾ ಸದಸ್ಯರಾಗಿರುವ ಕೆ ವಿರುಪಾಕ್ಷಪ್ಪ ಸಿಂಧನೂರು ಮಸ್ಕಿ ಭಾಗದಲ್ಲಿ ಪ್ರಭಾವಿ ನಾಯಕ.

ಕುರುಬ ಜನಾಂಗಕ್ಕೆ ಸೇರಿದ ವಿರುಪಾಕ್ಷಪ್ಪ, ಕುರುಬರಿಗೆ ಎಸ್ಟಿ ಮೀಸಲಾತಿ ಗಾಗಿ ಹೋರಾಟ ನಡೆಸುವ ಸಂಘಟನೆಯ ಸಂಚಾಲಕರಾಗಿದ್ದಾರೆ, 2009 ರಲ್ಲಿ ಕಾಂಗ್ರೆಸ್ ವಿರುಪಾಕ್ಷಪ್ಪ ರಿಗೆ ಲೋಕಸಭಾ ಟಿಕೆಟ್ ನಿರಾಕರಿಸಿದ್ದರಿಂದ ಬಿಜೆಪಿ ಸೇರಿದ್ದರು, 2018ರಲ್ಲಿ ಸಿಂಧನೂರಿನಲ್ಲಿ ಬಿಜೆಪಿಯಿಂದ ವಿಧಾನಸಭೆ ಸ್ಪರ್ಧಿಸಲು ಯತ್ನಿಸಿದ್ದರು. ಆದರೆ ಬಿಜೆಪಿ ಟಿಕೆಟ್ ನೀಡದ ಹಿನ್ನಲೆಯಲ್ಲಿ ಮತ್ತೆ ಕಾಂಗ್ರೆಸ್ ಸೇರಿದ್ದಾರೆ, ಈಗಲೂ ಕಾಂಗ್ರೆಸ್ಸಿನಲ್ಲಿದ್ದಾರೆ.ಈ ಮಧ್ಯೆ ಮಸ್ಕಿಯ ಬೈ ಎಲೆಕ್ಷನ್ ದಿನಾಂಕ ಇಷ್ಟರಲ್ಲಿಯೇ ಘೋಷಣೆಯಾಗುವ ಸಾಧ್ಯತೆ ಇದೆ.

ಮಸ್ಕಿಯಲ್ಲಿ ಸುಮಾರು 25 ಸಾವಿರ ಕುರುಬ ಜನಾಂಗದ ಮತಗಳಿವೆ. ಕುರುಬ ಜನಾಂಗದ ಮತಗಳನ್ನು ಬಿಜೆಪಿ ಪರವಾಗಿ ಇರುವಂತೆ ಮಾಡುವ ಉದ್ದೇಶದಿಂದ ಸಿಎಂ ಪುತ್ರ ವಿಜಯೇಂದ್ರ ವಿರುಪಾಕ್ಷಪ್ಪರನ್ನು ಭೇಟಿಯಾಗಿದ್ದಾರೆ ಎನ್ನಲಾಗಿದೆ. ಒಂದು ಮೂಲದ ಪ್ರಕಾರ ವಿರುಪಾಕ್ಷಪ್ಪರ ಅಳಿಯ ದೊಡ್ಡಬಸವರಾಜರಿಗೆ ತುಂಗಭದ್ರಾ ಕಾಡಾ ಅಧ್ಯಕ್ಷ ಸ್ಥಾನ ನೀಡಲು ಮುಂದಾಗಿದೆ ಎನ್ನಲಾಗಿದೆ.

ಅನಾವಶ್ಯಕವಾಗಿ ಬಂದ್ ಮಾಡಿದ್ರೆ ನಾನು ಸಹಿಸಲ್ಲ; ಕನ್ನಡಪರ ಸಂಘಟನೆಗಳಿಗೆ ಸಿಎಂ ಯಡಿಯೂರಪ್ಪ ಎಚ್ಚರಿಕೆ

ಬಸನಗೌಡ ತುರ್ವಿಹಾಳರ ರಾಜಿನಾಮೆಯಿಂದ ತೆರವಾದ ಕಾಡಾ ಅಧ್ಯಕ್ಷ ಸ್ಥಾನಕ್ಕೆ ದೊಡ್ಡಬಸವರಾಜರಿಗೆ ನೀಡಿ ವಿರುಪಾಕ್ಷಪ್ಪ ರನ್ನು ತಮ್ಮ ಸೆಳೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ನಿನ್ನೆ ಸಿಂಧನೂರಿನ ಲ್ಲಿ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆ ನಡೆಯುವ ಮಧ್ಯೆ ವಿಜಯೇಂದ್ರ ವಿರುಪಾಕ್ಷಪ್ಪರನ್ನು ಭೇಟಿ ಮಾಡಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿದ ವಿರುಪಾಕ್ಷಪ್ಪ ವಿಜಯೇಂದ್ರ ನಮ್ಮ ಮನೆಗೆ ಬಂದಿದ್ದರು,  5 ನಿಮಿಷ ಇದ್ದ ಚಹ ಕುಡಿದು ಹೋದರು, ಆದರೆ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ, ದೊಡ್ಡಬಸವರಾಜರಿಗೆ ಕಾಡಾ ಅಧ್ಯಕ್ಷ ಸ್ಥಾನ ನೀಡುವ ಬಗ್ಗೆಯೂ ಚರ್ಚೆಯಾಗಿಲ್ಲ, ಔಪಚಾರಿಕವಾಗಿ ಮಸ್ಕಿ ಬೈ ಎಲೆಕ್ಷನ್ , ಕುರುಬ ಸಮಾಜಕ್ಕೆ ಎಸ್ಟಿ ಮೀಸಲಾತಿ ಹೋರಾಟದ ಬಗ್ಗೆ ಮಾತನಾಡಿದ್ದೇವೆ ಎಂದಿದ್ದಾರೆ.
ಈ ಮಧ್ಯೆ ವಿರುಪಾಕ್ಷಪ್ಪ ಬಿಜೆಪಿ ಸೇರುತ್ತಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿದ್ದು, ಇದಕ್ಕೂ ಯಾರು ಕಿವಿಗೊಡಬಾರದು ಎಂದು ವಿರುಪಾಕ್ಷಪ್ಪ ಸ್ಪಷ್ಠನೆ ನೀಡಿದ್ದಾರೆ, ಆದರೆ ಮಸ್ಕಿ ಬೈ ಎಲೆಕ್ಷನ್ ಸಂದರ್ಭದಲ್ಲಿ ಭೇಟಿಯು ಕುತೂಹಲ ಮೂಡಿಸಿದ್ದು ಮುಂದೆ ಏನಾಗುತ್ತಾ ಕಾದು ನೋಡಬೇಕು.
Published by: Latha CG
First published: November 21, 2020, 3:12 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading