ಬೆಂಗಳೂರು: ಪ್ರತ್ಯೇಕ ಘಟನೆಯಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಇಂದು ಒಂದೇ ದಿನ ದಂಪತಿ ಸೇರಿದಂತೆ ಮೂವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಪೀಣ್ಯ ಪೊಲೀಸ್ ಠಾಣೆಯ (Peenya Police Station) ವ್ಯಾಪ್ತಿಯಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಜಗದೀಶ್, ನಂದಿನಿ ಎಂದು ಗುರುತಿಸಲಾಗಿದೆ. ಮೂಲತಃ ತುಮಕೂರಿನವರಾಗಿದ್ದ (Tumakuru) ದಂಪತಿಗಳು ಪೀಣ್ಯದಲ್ಲಿ ವಾಸವಾಗಿದ್ದರು. ಜಗದೀಶ್ ಚಾಲಕನಾಗಿ (Driver) ಕೆಲಸ ಮಾಡಿಕೊಂಡಿದ್ದರೆ, ನಂದಿನಿ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ಇಬ್ಬರ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಘಟನೆ ಸಂಬಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಮೂಲತಃ ದಾವಣಗೆರೆ ಚನ್ನಗಿರಿ ಮೂಲದ ಜಗದೀಶ್ ನಿವೇಶನವೊಂದರ ಸಂಬಂಧ ಕುಟುಂಬ ಸದಸ್ಯರೊಂದಿಗೆ ಜಗಳ ಮಾಡಿಕೊಂಡಿದ್ದರಂತೆ. ಇದೇ ಕೋಪದಲ್ಲಿ ನಿವೇಶನದ ಕಾಗದ ಪತ್ರಗಳ ಸುಟ್ಟು ಬಂದಿದ್ದರಂತೆ. ಇತ್ತ ಪೀಣ್ಯದ ಮನೆಯಲ್ಲಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಒಂದೇ ಪ್ಯಾನಿಗೆ ನೇಣುಬಿಗಿದುಕೊಂಡು ದಂಪತಿ ಆತ್ಮಹತ್ಯೆ ಶರಣಾಗಿದ್ದು, ಡೆತ್ನೋಟ್ನಲ್ಲಿ ತಂದೆ ಮತ್ತು ಮನೆಯ ಕುಟುಂಬದ ಸದಸ್ಯರ ಹೆಸರು ಬರೆದಿಟ್ಟಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ಹಿನ್ನಲೆ ಐಪಿಸಿ ಸೆಕ್ಷನ್ 306ರ ಅಡಿ ಎಫ್ಐಆರ್ ದಾಖಲು ಮಾಡಿಕೊಂಡಿದ್ದಾರೆ. ಮೃತದೇಹಗಳು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ. ಘಟನೆ ಸಂಬಂದ ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.
ಕಚೇರಿಯ ಕಿಟಕಿಯಿಂದ ಹಾರಿ ಆತ್ಮಹತ್ಯೆಗೆ ಶರಣು!
ಇನ್ನು, ಕೆಲಸ ಮಾಡುತ್ತಿದ್ದ ಕಚೇರಿಯ ಕಿಟಕಿಯಿಂದ ಹಾರಿ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಪೊರೇಷನ್ ಬಳಿಯ ಯೂನಿಟಿ ಬಿಲ್ಡಿಂಗ್ನಲ್ಲಿ ನಡೆದಿದೆ. ಮೃತ ಮಹಿಳೆಯನ್ನು ಅಪರ್ಣ ಕುಮಾರಿ ಎಂದು ಗುರುತಿಸಲಾಗಿದೆ. ಸಂಜೆ 6:30ರ ವೇಳೆ ಘಟನೆ ನಡೆದಿದೆ.
ನಾಲ್ಕನೇ ಮಹಡಿಯಲ್ಲಿದ್ದ ಕಚೇರಿಯ ಕಿಟಕಿಯಿಂದ ಹಾರಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಶರಣಾದ ಮಹಿಳೆಯನ್ನು ರಕ್ಷಣೆ ಮಾಡುವ ನಿಟ್ಟಿನಲ್ಲಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯವನ್ನು ಮಾಡಲಾಗಿತ್ತು, ಆದರೆ ಮಹಿಳೆ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವನ್ನಪ್ಪಿದ್ದಾರೆ.
ಮೃತ ಅಪರ್ಣ ಕುಮಾರಿ ಮೂಲತಃ ಒರಿಸ್ಸಾ ಮೂಲದವರಾಗಿದ್ದು, ಇಂಡಿಯನ್ ಆಯಲ್ ಕಂಪನಿ ಸೀನಿಯರ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಮೃತ ಮಹಿಳೆಗೆ ಇಬ್ಬರು ಮಕ್ಕಳಿದ್ದು, ಹಲವು ವರ್ಷಗಳಿಂದ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ವಿಕ್ಟೋರಿಯಾ ಲೇಔಟ್ ನಲ್ಲಿ ವಾಸವಿದ್ದ ಅಪರ್ಣ ಅವರು ಇತ್ತೀಚೆಗೆ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದಳು ಎನ್ನಲಾಗುತ್ತಿದೆ. ಇನ್ನು, ಘಟನಾ ಸ್ಥಳಕ್ಕೆ ಎಸ್.ಜೆ.ಪಾರ್ಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಚೇರಿಯಲ್ಲಿದ್ದ ಮಹಿಳೆಯ ಡೈರಿ ಹಾಗೂ ಮೊಬೈಲ್ ಫೋನ್ಅನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ