ಮೈಸೂರು (ಜ. 24): ಗ್ರಾಮದ ವಾರ್ಡ್ ಸಭೆಗಳಲ್ಲಿ ಊರಿನ ಸಮಸ್ಯೆ, ಜಗಳ ಮತ್ತಿದ್ಯಾದಿಗಳನ್ನು ಬಗೆಹರಿಸುವ ಉದಾಹರಣೆ ಇದೆ. ಆದರೆ, ಇದೇ ಮೊದಲ ಬಾರಿಗೆ ಗ್ರಾಮ ಪಂಚಾಯತಿ ಸಭೆಯೊಂದು ಪ್ರೇಮಿಗಳಿಬ್ಬರಿಗೆ ಮದುವೆ ಮಂಟಪವಾದ ಘಟನೆ ಸಾಂಸ್ಕೃತಿಕ ನಗರಿ ಮೈಸೂರಿನ ನಂಜನಗೂಡು ತಾಲೂಕು ಹರದನಹಳ್ಳಿ (Haradanahalli) ಗ್ರಾಮಪಂಚಾಯ್ತಿಯಲ್ಲಿ ನಡೆದಿದೆ. ಕುಟುಂಬಗಳ ನಡುವಿನ ಕಲಹದಿಂದ ನೊಂದಿದ್ದ ಪ್ರೇಮಿಗಳಿಬ್ಬರಿಗೆ (Lovers) ಪಿಡಿಓ (PDO) ಒಬ್ಬರು ಪರಿಹಾರ ಸೂಚಿಸಿ ಹೊಸ ಬದುಕಿಗೆ ದಾರಿ ತೋರಿಸಿದ್ದಾರೆ.
ನಂಜನಗೂಡು ತಾಲೂಕು ಹರದನಹಳ್ಳಿ ಗ್ರಾಮಪಂಚಾಯ್ತಿ ಕಚೇರಿ ಇಂದು ಅಕ್ಷರಸಃ ಮದುವೆ ಮಂಟಪವಾಯ್ತು. ವಾರ್ಡ್ ಗಳ ಕುಂದುಕೊರತೆಗಳನ್ನ ಬಗೆಹರಿಸಲು ವಾರ್ಡ್ ಸಭೆಯನ್ನು ಕರೆಯಲಾಗಿತ್ತು. ಆದರೆ, ಈ ಸಭೆ ಪ್ರೇಮಿಗಳ ಪಾಲಿನ ಮದುವೆ ಮಂಟಪವಾಗಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ಪಿಡಿಓ. ಕಳೆದೆರಡು ವರ್ಷಗಳಿಂದ ಪ್ರೀತಿಸುತ್ತಿದ್ದರೂ ಕುಟುಂಬಸ್ಥರ ವಿರೋಧದಿಂದ ಪ್ರೇಮಿಗಳು ದೂರಾಗಿದ್ದರು. ಈ ವಿಚಾರ ಕುರಿತು ಸಭೆಯಲ್ಲಿ ಎದ್ದ ಗದ್ದಲ ತಿಳಿದು ಬಂದ ಪಿಡಿಒ ಇದಕ್ಕೆ ಶಾಶ್ವತ ಪರಿಹಾರ ಕಲ್ಪಿಸಿದ್ದಾರೆ ಪಿಡಿಓ ಮಹದೇವಸ್ವಾಮಿ ಸಮಯ ಪ್ರಜ್ಞೆ ಯಿಂದಾಗಿ ಪ್ರೇಮಿಗಳು ಒಂದಾಗಿರುವ ಜೊತೆಗೆ ಎರಡು ಕುಟುಂಬಸ್ಥರ ನಡುವಿನ ಕಲಹ ಕೂಡ ದೂರ ಆಗಿದೆ. ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹರದನಹಳ್ಳಿಯ ಪ್ರೇಮಿಗಳಾದ ಬಸವರಾಜು (24) ಹಾಗೂ ಸುಚಿತ್ರ (19) ಬಾಳ ಸಂಗಾತಿಗಳಾಗಿದ್ದು, ಗ್ರಾಮದ ಮುಖಂಡರುಗಳು ಹಾರೈಸಿದ್ದಾರೆ.
ಏನಿದು ಗಲಾಟೆ
ಹರದನಹಳ್ಳಿಯ ಈ ಜೋಡಿ ಎರಡು ವರ್ಷಗಳಿಂದ ಪ್ರೀತಿಸುತ್ತಿತ್ತು. ಮದುವೆಗೆ ಇಬ್ಬರ ಮನೆಯಲ್ಲೂ ಭಾರಿ ವಿರೋಧ ವ್ಯಕ್ತವಾಗಿದೆ. ಈ ವಿಚಾರದಲ್ಲಿ ಎರಡೂ ಮನೆಗಳ ಮಧ್ಯೆ ಗಲಾಟೆ ಆಗಿತ್ತು. ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೂ ಕೂಡ ಏರಿತ್ತು. ಎರಡು ಕುಟುಂಬದ ನಡುವೆ ಪ್ರತಿಷ್ಠೆಯ ವಿಚಾರವಾಗಿ ನಿರ್ಮಾಣವಾಗಿದ್ದ ಈ ಪ್ರಕರಣದಿಂದ ಜೋಡಿಗಳು ಒಂದಾಗಲು ಸಾಧ್ಯವೇ ಆಗಿರಲಿಲ್ಲ.
ಗ್ರಾಮ ಸಭೆ ವೇಳೆ ನಡೆದ ಗಲಾಟೆ
ಇಂದು ಹರದನಹಳ್ಳಿ ಗ್ರಾಮ ಪಂಚಾಯ್ತಿಯಲ್ಲಿ ವಾರ್ಡ್ ಸಭೆ ಹಮ್ಮಿಕೊಳ್ಳಲಾಗಿತ್ತು. ವಾರ್ಡ್ ಸದಸ್ಯರು ಸೇರಿದಂತೆ ಪಿಡಿಓ ಮಹದೇವಸ್ವಾಮಿ ಸಭೆಯಲ್ಲಿ ಭಾಗವಹಿಸಿದ್ದರು. ಸಭೆ ನಡೆಯುತ್ತಿದ್ದ ವೇಳೆಯೇ ಗ್ರಾಮ ಪಂಚಾಯ್ತಿ ಕಚೇರಿ ಪಕ್ಕದ ಮನೆಯಲ್ಲೇ ಪ್ರೇಮಿಗಳ ವಿಚಾರದಲ್ಲಿ ಗಲಾಟೆ ಶುರುವಾಗಿತ್ತು. ಎರಡೂ ಮನೆಗಳ ಮಧ್ಯೆ ಗಲಾಟೆ ನಡೆಯುತ್ತಿತ್ತು. ಇದರಿಂದ ಸಭೆಗೆ ಅಡ್ಡಿ ಉಂಟಾಯಿತು. ಇದರಿಂದ ಗ್ರಾಮದ ಮುಖಂಡರು ದಂಡ ಕಟ್ಟಿಸಿಕೊಂಡು ಮದುವೆ ಮಾಡಿಸಲು ತೀರ್ಮಾನಿಸಿದರು. ಗಲಾಟೆ ಶಬ್ಧ ಕೇಳಿದ ಪಿಡಿಓ ಮಹದೇವಸ್ವಾಮಿ ಸ್ಥಳಕ್ಕೆ ಧಾವಿಸಿ ಜಗಳದ ಕಾರಣ ತಿಳಿದುಕೊಂಡಿದ್ದಾರೆ. ಒಪ್ಪಿಗೆಗೆ ದಂಡ ಹಾಕುವುದು ಕಾನೂನಿಗೆ ವಿರೋಧ ಎಂದು ಮಹದೇವಸ್ವಾಮಿ ಮುಖಂಡರಿಗೆ ತಿಳಿ ಹೇಳಿದ್ದಾರೆ.
ಇದನ್ನು ಓದಿ: ಅರ್ಧ ಆಯ್ತು, ಸ್ವಲ್ಪ ಆಯ್ತು ಅಂದರೆ ಹೆಣ ಎತ್ತಿಬಿಡ್ತೀನಿ - ಸಚಿವ ವಿ ಸೋಮಣ್ಣ ಆವಾಜ್
ಗ್ರಾಮಸ್ಥರ ಓಲೈಸಿ ಮದುವೆ ಮಾಡಿಸಿದ ಪಿಡಿಒ
ಕಾನೂನಿಗೆ ವಿರುದ್ದವಾಗಿ ನಡೆದುಕೊಳ್ಳಬಾರದೆಂದು ಸಲಹೆ ನೀಡಿದ್ದಲ್ಲದೆ ಪ್ರೇಮಿಗಳನ್ನ ಸಭೆ ನಡೆಯುತ್ತಿದ್ದ ಸ್ಥಳಕ್ಕೆ ಕರೆತಂದು ವಾರ್ಡ್ ಸದಸ್ಯರ ಸಮ್ಮುಖದಲ್ಲಿ ಹಾರ ಬದಲಿಸುವ ಮೂಲಕ ಮದುವೆ ಮಾಡಿಸಿದ್ದಾರೆ. ಜೊತೆಗೆ ಪ್ರೇಮಿಗಳ ಪೋಷಕರನ್ನೂ ಸಹ ಮನ ಒಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದನ್ನು ಓದಿ: BBMP ಅಧಿಕಾರಿಗಳಿಂದ ನಕಲಿ ದಾಖಲೆ ಸೃಷ್ಟಿಸಿ ವಂಚನೆ- ಮೂವರ ವಿರುದ್ಧ ಪ್ರಕರಣ ದಾಖಲು
ಒಟ್ಟಾರೆ ಕುಂದುಕೊರತೆಗಳ ಬಗ್ಗೆ ಚರ್ಚೆ ನಡೆಯಬೇಕಿದ್ದ ವಾರ್ಡ್ ಸಭೆ ಕಲ್ಯಾಣ ಮಂಟಪವಾಗಿ ಮಾರ್ಪಟ್ಟಿದ್ದು ವಿಶೇಷ. ನೂತನ ವಧುವರರಿಗೆ ವಾರ್ಡ್ ಸದಸ್ಯರೂ ಸಹ ಶುಭಕೋರಿ ಆಶೀರ್ವದಿಸಿದ್ದಾರೆ. ಸಂಧಿಗ್ಧ ಪರಿಸ್ಥಿತಿಗೆ ಸಿಲುಕಿದ್ದ ಜೋಡಿಗೆ ಪಿಡಿಓ ಮಹದೇವಸ್ವಾಮಿ ನೆರವಾಗಿ ಮಾನವೀಯತೆ ಮೆರೆದಿದ್ದಾರೆ.ವರದಿ ದಿವ್ಯೇಶ್ ಜಿವಿ
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ