G HareeshkumarG Hareeshkumar
|
news18-kannada Updated:February 10, 2020, 9:54 PM IST
ಮಗುವಿನ ಹೊಟ್ಟೆಗೆ ಸೂಜಿದಾರ ಪೋಣಿಸುತ್ತಿರುವುದು
ಕಾರವಾರ(ಫೆ.10) : ಗಂಡು ಮಕ್ಕಳ ಹೊಟ್ಟೆಗೆ ಸೂಜಿದಾರ ಪೋಣಿಸಿ ಹರಕೆ ತೀರಿಸುವುದು ಸೇರಿದಂತೆ ಹಲವು ವಿಶಿಷ್ಟ ಆಚರಣೆಗಳುಳ್ಳ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲ್ಲೂಕಿನ ಮಾಜಾಳಿಯಲ್ಲಿ ನಡೆಯುವ ‘ಮಾರ್ಕೆಪೂನವ್’ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು.
ಪ್ರೌಢಾವಸ್ಥೆಯ ಪೂರ್ವದಲ್ಲಿ ಗಂಡು ಮಕ್ಕಳು ಹೊಕ್ಕಳ ಬಳಿ ದಾರ ಪೋಣಿಸಿಕೊಳ್ಳುವುದರಿಂದ ಒಳ್ಳೆಯದಾಗುತ್ತದೆ ಎನ್ನುವ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಸಂಪ್ರದಾಯ ಹಿಂದಿನಿಂದಲೂ ರೂಢಿಯಲ್ಲಿದ್ದು, ಸೋಮವಾರ ‘ದಾಡ್’ ದೇವಸ್ಥಾನದಲ್ಲಿ 30 ಕ್ಕೂ ಹೆಚ್ಚು ಗಂಡು ಮಕ್ಕಳು ಅರ್ಚಕರಿಂದ ದಾರ ಪೋಣಿಸಿಕೊಂಡು ಹರಕೆ ಅರ್ಪಿಸಿದರು.
ಸೂಜಿ ದಾರವನ್ನು ಮಕ್ಕಳ ಪಾಲಕರೇ ತಂದಿದ್ದರು. ಸೂಜಿ ಚುಚ್ಚುವ ಸಂದರ್ಭದಲ್ಲಿ ಮಕ್ಕಳು ಸಂಪ್ರದಾಯದಂತೆ ‘ಅಯ್ಯೋಯ್ಯೋ’ ಎಂದು ಕೂಗಿದರು. ಶ್ರೀರಾಮನಾಥ ಕ್ಷೇತ್ರದ ಪರಿವಾರ ದೇವರ ಜಾತ್ರೆ ಇದಾಗಿದ್ದು, ಪ್ರತಿವರ್ಷ ಶುದ್ಧ ಪೂರ್ಣಿಮೆಯಂದು ಈ ಜಾತ್ರೆ ಜರುಗುತ್ತದೆ. ಹುಣ್ಣಿಮೆಗೆ ಕೊಂಕಣಿ ಭಾಷೆಯಲ್ಲಿ ‘ಪೂನವ್’ ಎನ್ನುತ್ತಾರೆ. ಹೀಗಾಗಿ ಈ ಜಾತ್ರೆಯನ್ನು ‘ಮಾರ್ಕೆಪೂನವ್’ ಎಂದು ಕರೆಯುತ್ತಾರೆ.
ದೇವರಿಗೆ ನಡೀತು ವಿಶೇಷ ಪೂಜೆ
ದೇವರಿಗೆ ವಿಶೇಷ ಪೂಜೆಗಳು ನೆರವೇರಿತು. ಹೆಣ್ಣು ಮಕ್ಕಳು ಕುಲದೇವರಿಗೆ ದೀವಜ್ (ದೀಪ) ನೀಡಿ ಹರಕೆ ಅರ್ಪಿಸಿದರು. ಈ ಗ್ರಾಮದ ಹುಡುಗಿ ಅಥವಾ ಸೊಸೆಯಾಗಿ ಗ್ರಾಮಕ್ಕೆ ಕಾಲಿರಿಸಿದವಳು ತಲೆ ಮೇಲೆ ದೀಪವನ್ನಿರಿಸಿಕೊಂಡು ‘ದಾಡ್’ ದೇವಸ್ಥಾನದಿಂದ ‘ಮಾರಿಕಾ ದೇವಿ’ (ದೇವತಿ) ದೇವಸ್ಥಾನದವರೆಗೆ ಕಾಲ್ನಡಿಗೆಯಲ್ಲಿ ಬಂದು ಅಲ್ಲಿನ ದೇವತೆಗೆ ತಾವು ಹೊತ್ತು ತಂದ ದೀಪ ತೋರಿಸಿ ಭಕ್ತಿ ಪ್ರದರ್ಶಿಸಿದರು.
ಕಾಕಡ ಹೂವಿನಿಂದ ಅಲಂಕೃತಗೊಂಡ ಬಂಡಿಯನ್ನು ಭಕ್ತರು ದಾಡ್ ದೇವಸ್ಥಾನ ದಿಂದ ದೇವತಿ ದೇವಸ್ಥಾನದವರೆಗೆ ಎಳೆದರು. ಈ ಜಾತ್ರೆಗೆ ಗೋವಾ ಹಾಗೂ ಮಹಾರಾಷ್ಟ್ರ ದಿಂದಲೂ ಸಾವಿರಾರು ಭಕ್ತರು ಬಂದು ಪೂಜೆ ಸಲ್ಲಿಸಿದರು.
ಇದನ್ನೂ ಓದಿ :
ಮಹಿಳಾ ಪೊಲೀಸ್ ಪೇದೆಗೆ ಠಾಣೆಯಲ್ಲಿ ಸೀಮಂತ ಶಾಸ್ತ್ರ! ; ಮಡಿಲು ತುಂಬಿ ಹಾರೈಸಿದ ಸಹೋದ್ಯೋಗಿಗಳುಇಲ್ಲಿನ ಮಾರಿಕಾ ದೇವಿಗೆ ದೀಪದಿಂದ ಆರತಿ ಬೆಳಗುವುದರಿಂದ ಆಕೆ ಕುಲದೇವರ ಪ್ರೀತಿಗೆ ಪಾತ್ರಳಾಗುತ್ತಾಳೆ ಎನ್ನುವುದು ನಂಬಿಕೆ ಹಾಗೂ ದಾಡ್ ದೇವಸ್ಥಾನದಲ್ಲಿ ಗಂಡು ಮಕ್ಕಳು ಪೋಣಿಸಿಕೊಂಡ ದಾರವನ್ನು ಮಾರಿಕಾ ದೇವಿಯ ದೇವಸ್ಥಾನದಲ್ಲಿ ತೆಗೆಯಲಾಗುತ್ತದೆ. ಈ ಹರಕೆ ತೀರಿಸಿದರೆ ಗಂಡು ಮಕ್ಕಳು ಭವಿಷ್ಯ ಉತ್ತಮವಾಗಿರುತ್ತದೆ ಎನ್ನುವುದು ಭಕ್ತರ ನಂಬಿಕೆ.
(ವರದಿ : ದರ್ಶನ್ ನಾಯ್ಕ)
First published:
February 10, 2020, 9:43 PM IST