Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು

ರಾಜ್ಯ, ದೇಶ, ವಿದೇಶಗಳಲ್ಲಿನ ಸುದ್ದಿ ಪ್ರತಿಯೊಬ್ಬರ ಜೀವನದ ಆಗುಹೋಗುಗಳ ಮೇಲೆ ಪರಿಣಾಮವನ್ನು ಹೊಂದಿದ್ದು, ಈ ಹಿನ್ನೆಲೆಯಲ್ಲಿ ಇಂದು ನಡೆದ ಘಟನಾವಳಿ ಕುರಿತು ನೀವು ಓದಲೇ ಬೇಕಾದ ಸುದ್ದಿಗಳಿವು

Seema.R | news18
Updated:March 6, 2019, 6:24 PM IST
Evening Digest: ಈ ದಿನದ ನೀವು ಓದಲೇಬೇಕಾದ ಟಾಪ್​ 10 ಸುದ್ದಿಗಳು
ಸಾಂದರ್ಭಿಕ ಚಿತ್ರ
Seema.R | news18
Updated: March 6, 2019, 6:24 PM IST
1. ಅಯೋಧ್ಯೆ ತೀರ್ಪು ಕಾಯ್ದಿರಿಸಿದರ ಸುಪ್ರೀಂಕೋರ್ಟ್

ದೇಶದ ಅತೀ ದೊಡ್ಡ ವಿವಾದಾತ್ಮಕ ಆಯೋಧ್ಯೆ ಪ್ರಕರಣವನ್ನು ಮಧ್ಯಸ್ಥಿಕೆ ಮೂಲಕ ಪರಿಹರಿಸಿಕೊಳ್ಳುವ ಸಂಬಂಧ ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೋಗೊಯ್​ ನೇತೃತ್ವದ ಪಂಚಸದಸ್ಯ ಸಾಂವಿಧಾನಿಕ ಪೀಠ ತೀರ್ಪನ್ನು ಕಾಯ್ದಿರಿಸಿದೆ. ಹಿಂದಿನ ವಿಚಾರಣೆಯಲ್ಲಿ ನ್ಯಾ.ರಂಜನ್ ಗೋಗೊಯ್ ಅವರು ಎರಡು ಪಾರ್ಟಿಗಳಿಗೆ ದಶಕದ ವಿವಾದವನ್ನು ಮಧ್ಯಸ್ಥಿಕೆದಾರರ ಮೂಲಕ ಬಗೆಹರಿಸಿಕೊಳ್ಳುವ ಬಗ್ಗೆ ಹೇಳಿದ್ದರು. ವಿಚಾರಣೆ ವೇಳೆ ಉತ್ತರಪ್ರದೇಶ ಸರ್ಕಾರ ರಾಮಜನ್ಮ ಭೂಮಿ-ಬಾಬರಿ ಮಸೀದಿ ಪ್ರಸ್ತುತ ಸಂದರ್ಭದಲ್ಲಿ ಸಂಧಾನಕ್ಕೆ ಸೂಕ್ತವಲ್ಲ. ಇದು ಹಿಂದೂಗಳ ಭಾವನಾತ್ಮಕ ವಿಚಾರ ಎಂದು ವಾದ ಮಂಡಿಸಿತು.

2.ರಫೇಲ್​ ಹಗರಣ; ಮಾ.14ಕ್ಕೆ ವಿಚಾರಣೆ

 ರಫೇಲ್​ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದ್ದನ್ನು ಪ್ರಶ್ನಿಸಿ ಸಲ್ಲಿಕೆಯಾದ ಅರ್ಜಿ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್​​ ಮುಕ್ತನ್ಯಾಯಾಲಯದಲ್ಲಿ ವಿಚಾರಣೆ ನಡೆಸಿತು. ರಫೇಲ್​ ಒಪ್ಪಂದದ ದಾಖಲೆಗಳು ಕಳ್ಳತನವಾಗಿವೆ. ಅದನ್ನು ತೋರಿಸಲು ಸಾಧ್ಯವಿಲ್ಲ ಎಂದು  ಸುಪ್ರೀಂಗೆ ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ. ಇದಕ್ಕೆ ಪ್ರತಿಯಾಗಿ ಕೇಂದ್ರವನ್ನು ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಇವತ್ತಿನ ಕೋರ್ಟ್ ವಿಚಾರಣೆಯಲ್ಲಿ ರಫೇಲ್ ಜೊತೆಗೆ ಎಫ್-16, ಬೋಫೋರ್ಸ್ ಮೊದಲಾದ ವಿಚಾರಗಳು ಸದ್ದು ಮಾಡಿದವು. ಕೇಂದ್ರಕ್ಕೆ ಮುಜುಗರದ ಪರಿಸ್ಥಿತಿ ನಡುವೆ ಸುಪ್ರೀಂ ಕೋರ್ಟ್ ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಮಾರ್ಚ್ 14ಕ್ಕೆ ನಿಗದಿ ಮಾಡಿದೆ.

3.ಬಿಜೆಪಿಗೆ ಸೇರ್ಪಡೆಯಾದ ಉಮೇಶ್​ ಜಾಧವ್

ಕಾಂಗ್ರೆಸ್​ ಹಿರಿಯ ​ಸಂಸದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ನಿಲ್ಲಿಸುವ ಸಲುವಾಗಿ ಬಿಜೆಪಿ ಕಾಂಗ್ರೆಸ್​ ಶಾಸಕ ಉಮೇಶ್​ ಜಾಧವ್​ಗೆ ಗಾಳ ಹಾಕಿ ಪಕ್ಷ ತೊರೆಯುವಂತೆ ಮಾಡುವಲ್ಲಿ ಸಫಲರಾಗಿದ್ದಾರೆ. ಹಲವು ದಿನಗಳಿಂದ ಉಮೇಶ್​ ಜಾಧವ್​ ಬಿಜೆಪಿ ಸೇರುವುದು ಬಹುತೇಕ ಖಚಿತ ಎನ್ನಲಾಗಿತ್ತು. ಈಗ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗುವ ಮೂಲಕ ಕಾಂಗ್ರೆಸ್​ಗೆ ಜಾಧವ್​ ಸೆಡ್ಡು ಹೊಡೆದಿದ್ದಾರೆ. ಕಲಬುರಗಿಯಲ್ಲಿ ನಡೆದ ಸಮಾವೇಶದಲ್ಲಿ, ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಮುನ್ನವೇ ಜಾಧವ್​ ಬಿಜೆಪಿ ಸೇರ್ಪಡೆಯಾದರು.4.  ರಮೇಶ್​ ಜಾರಕಿಹೊಳಿ ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ

ಉಮೇಶ್​ ಜಾಧವ್​ ಪಕ್ಷ ತೊರೆದ ಬೆನ್ನಲ್ಲೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಇಂದು ಕಾಂಗ್ರೆಸ್​ ಅತೃಪ್ತ ಶಾಸಕ ರಮೇಶ್​ ಜಾರಕಿಹೊಳಿ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದ್ದಾರೆ. ಈ ವೇಳೆ ಮತ್ತೊಬ್ಬ ಅತೃಪ್ತ ಶಾಸಕ ಅಥಣಿಯ ಮಹೇಶ ಕುಮಟಳ್ಳಿ ಕೂಡ ಉಪಸ್ಥಿತರಿದ್ದರು. ಇದಾದ ಬಳಿಕ ಮಾತನಾಡಿರುವ ರಮೇಶ್​ ಜಾರಕಿಹೊಳಿ ನನಗೆ ಸಿಎಂ ಬಗ್ಗೆ ಬೇಸರವಿಲ್ಲ. ಕಾಂಗ್ರೆಸ್​ ಬಗ್ಗೆ ಅಸಮಾಧಾನವಿದೆ ಎಂದರು.

5. 10 ಸೀಟನ್ನಾದರೂ ನೀಡಿ; ದೇವೇಗೌಡ

 ಮೈತ್ರಿ ಸರ್ಕಾರದಲ್ಲಿ ಕಗ್ಗಂಟಾಗಿರುವ ಸೀಟು ಹಂಚಿಕೆ ವಿಚಾರವಾಗಿ ಇಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನವದೆಹಲಿಯ ತಮ್ಮ ನಿವಾಸದಲ್ಲಿ ಕಾಂಗ್ರೆಸ್​ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಚರ್ಚೆ ನಡೆಸಿದ್ದಾರೆ. ಬಳಿಕ ಮಾತನಾಡಿದ ಅವರು, ಸಮ್ಮಿಶ್ರ ಸರ್ಕಾರದಲ್ಲಿ ಕಾಂಗ್ರೆಸ್​ ಮತ್ತು ಜೆಡಿಎಸ್​ ಪಕ್ಷಗಳ ನಡುವಿನ ಸೀಟು ಹಂಚಿಕೆ ಬಗ್ಗೆ ಎಐಸಿಸಿ ಅಧ್ಯಕ್ಷ ರಾಹುಲ್​ ಗಾಂಧಿ ಜೊತೆ ಚರ್ಚಿಸಿದ್ದೇನೆ. ಇದು ಮೊದಲ ಚರ್ಚೆಯಾಗಿದೆ. ನಮ್ಮಲ್ಲಿ ಒಟ್ಟು 28 ಸೀಟುಗಳು ಇವೆ. ಮೊದಲು ಜೆಡಿಎಸ್ 12 ಸೀಟು ಕೇಳಿತ್ತು. ರಾಹುಲ್ ಬಳಿಯೂ ನಾನು 12 ಸೀಟು ಕೇಳಿದ್ದೇನೆ. ಕೊನೆಗೆ ಕನಿಷ್ಠ 10 ಸೀಟುಗಳನ್ನಾದರೂ ಕೊಡಲಿ. ಗೆಲ್ಲುವ ದೃಷ್ಟಿಯಿಂದ ನಾನು ರಾಹುಲ್ ಗಾಂಧಿ ಜೊತೆ​ ಚರ್ಚೆ ಮಾಡಿದ್ದೇನೆ ಎಂದು ಹೇಳಿದರು.

6.ಎಂಬಿ ಪಾಟೀಲ್​ಗೆ ತರಾಟೆ ತೆಗೆದುಕೊಂಡ ಮಲ್ಲಿಕಾರ್ಜುನ

ಗೃಹ ಸಚಿವ ಎಂ.ಬಿ. ಪಾಟೀಲ್​ ಅವರನ್ನು ಮನೆಗೆ ಊಟಕ್ಕೆ ಆಹ್ವಾನಿಸಿ, ನಂತರ ಮಾಧ್ಯಮದವರ ಎದುರೇ ಗೃಹಸಚಿವರನ್ನು ಶಾಮನೂರು ಶಿವಶಂಕರಪ್ಪ ಮಗ ಹಾಗೂ ಮಾಜಿ ಸಚಿವ ಎಸ್​.ಎಸ್.ಮಲ್ಲಿಕಾರ್ಜುನ್ ಕ್ಲಾಸ್​ ತೆಗೆದುಕೊಂಡ ಘಟನೆ ನಡೆದಿದೆ.
ಇಂದು ಎಂ.ಬಿ.ಪಾಟೀಲ್ ಅವರನ್ನು ಶಾಮನೂರು ಶಿವಶಂಕರಪ್ಪ ಊಟಕ್ಕೆಂದು ಮನೆಗೆ ಆಹ್ವಾನಿಸಿದ್ದರು. ಈ ವೇಳೆ ಮಾಧ್ಯಮದವರು ಮತ್ತು ಕಾರ್ಯಕರ್ತರು ಸ್ಥಳದಲ್ಲಿ ನೆರೆದಿದ್ದರು. ಈ ವೇಳೆ ಮಲ್ಲಿಕಾರ್ಜುನ ಅವರು, "ಚುನಾವಣೆಯಲ್ಲಿ ನಾವೇ ಸೋತು ಸುಣ್ಣ ಆಗಿದ್ದೀವಿ. ನೀನು ನಮ್ಮ ಅಪ್ಪನ ಬಗ್ಗೆ ಮಾತಾಡ್ತಿಯಾ. ನೀನು ಏನೋ ಈಗ ಮಿನಿಸ್ಟರ್​ ಆಗಿದಿಯಾ," ಅಂತ ಪಾಟೀಲ್​ಗೆ ಕ್ಲಾಸ್ ತೆಗೆದುಕೊಂಡ‌ರು. ಈ ವೇಳೆ ಏನು ಮಾಡಬೇಕೆಂದು ದಿಕ್ಕುತೋಚದ ಎಂಬಿ ಪಾಟೀಲ್​ ತಣ್ಣಗಾದರು.

7.ಜೆಡಿಎಸ್​ ವಿರುದ್ಧ ಸುಧಾಕರ್​ ಅಸಮಾಧಾನ

ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಹುದ್ದೆ ಕೈ ತಪ್ಪಿದ್ದರಿಂದ ಅಸಮಾಧಾನಗೊಂಡಿರುವ ಕಾಂಗ್ರೆಸ್​ ಶಾಸಕ ಕೆ.ಸುಧಾಕರ್​ ಅವರು ಬಹಿರಂಗವಾಗಿ ಜೆಡಿಎಸ್​ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪುಟಗೋಸಿ ಚೇರ್​ಮನ್​ ಗಿರಿ ಯಾರಿಗ್ರಿ ಬೇಕು. ನೀವು ನನಗೆ ಆ ಸ್ಥಾನವನ್ನಷ್ಟೇ ತಪ್ಪಿಸಬಹುದೇ ಹೊರತು ನನ್ನ ಶಾಸಕ ಸ್ಥಾನವನ್ನು ಕಿತ್ತುಕೊಳ್ಳಲು ಆಗುವುದಿಲ್ಲ ಎಂದು ಸಾರ್ವಜನಿಕ ಕಾರ್ಯಕ್ರಮದಲ್ಲಿ ಜೆಡಿಎಸ್​ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ.

8.ರಾಜ್ಯ ಸರ್ಕಾರದ ವಿರುದ್ಧ ಮೋದಿ ವಾಗ್ದಾಳಿ

ಕಲಬುರಗಿಯಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಮೋದಿ ಸಮ್ಮಿಶ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕರ್ನಾಟಕ ಸರ್ಕಾರ ರೈತ ವಿರೋಧಿ ಸರ್ಕಾರವಾಗಿದೆ. ಇಲ್ಲಿನ ಸಿಎಂ ಅವರ ರಿಮೋಟ್​ ಮತ್ತೊಬ್ಬರ ಬಳಿ ಇದೆ. ಅವರು ಹೇಳಿದಂತೆ ಇವರು ಕೇಳಬೇಕು. ಮೈತ್ರಿಯಲ್ಲಿ ಸರಿಯಾದ ಸಹಕಾರ ಸಿಗುತ್ತಿಲ್ಲ. ರೈತರ ಸಾಲ ಮನ್ನಾ ಮಾಡದೆ ಬೆಂಗಳೂರಿನಲ್ಲಿ ಕೂತ ಸರ್ಕಾರ ಹಣ ನೀಡದೆ ಅವರಿಗೆ ಮೋಸ ಎಸಗುತ್ತಿದೆ. ಆದರೆ, ದೆಹಲಿಯಲ್ಲಿರುವ ಮೋದಿ ಸರ್ಕಾರ ನೇರವಾಗಿ ರೈತರ ಖಾತೆಗೆ ಹಣವನ್ನು ವರ್ಗಾವಣೆ ಮಾಡುತ್ತಿದೆ. ಕರ್ನಾಟದ ರೈತರು ಈ ರಾಜ್ಯ ಸರ್ಕಾರವನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.

9. ಬಿಜೆಪಿಯಿಂದಲೇ ಕುಂಕುಮ ಮತ್ತು ಕಾವಿ ಪಾವಿತ್ರ್ಯನಾಶ - ಸಿದ್ದರಾಮಯ್ಯ

ಬಿಜೆಪಿಯಿಂದಲೇ ಕುಂಕುಮ ಮತ್ತು ಕಾವಿ ಪಾವಿತ್ರ್ಯ ನಾಶವಾಗಿದೆ ಎನ್ನುವ ಮೂಲಕ ಮಾಜಿ ಸಿಎಂ ಸಿದ್ದರಾಮಯ್ಯನವರು ಮತ್ತೊಂದು ವಿವಾದಕ್ಕೆ ಎಡೆಮಾಡಿಕೊಟ್ಟಿದ್ದಾರೆ. ಉದ್ದ ನಾಮ ಹಾಕಿಕೊಂಡವರನ್ನ ಕಂಡರೇ ಭಯವಾಗುತ್ತದೆ ಎಂಬ ತಮ್ಮ ಹೇಳಿಕೆ ಸಮರ್ಥಸಿಕೊಂಡಿರುವ ಸಿದ್ದರಾಮಯ್ಯ, "ಬಿಜೆಪಿಯವರೇ ಕುಂಕುಮ, ನಾಮ, ಕಾವಿ ಬಟ್ಟೆಗಳನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಹೀಗಾಗಿ ಕುಂಕಮಧಾರಿಯನ್ನು ನೋಡಿದಾಗ ಭಯವಾಗುತ್ತದೆ ಎಂದು ಹೇಳಿದ್ದೆ. ಉದ್ದ ನಾಮ ಎಳೆದು ರಾಜಕೀಯ ಮಾಡೋರನ್ನ ಕಂಡಲ್ಲಿ ಜನರಿಗೆ ಭಯ ಹುಟ್ಟದೇ, ಮತ್ತೇನು ಗೌರವ ಹುಟ್ಟುತ್ತಾ ಎಂದು ಟ್ವಿಟರ್​ನಲ್ಲಿ ಪ್ರಶ್ನಿಸಿದ್ದಾರೆ.

10 ಯುವರಾಜ್ ಸಿಂಗ್ರ ಜೆರ್ಸಿ ಬಿಡುಗಡೆಗೊಳಿಸಿದ ಮುಂಬೈ

ಟೀಂ ಇಂಡಿಯಾಕ್ಕೆ ಕಮ್ಬ್ಯಾಕ್ ಮಾಡಲು ಹರಸಾಹಸ ಪಡುತ್ತಿರುವ ಸಿಕ್ಸ್ರ್ಗಳ ಸರದಾರ ಯುವರಾಜ್ ಸಿಂಗ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಮುಂಬೈ ಪರ ಕಣಕ್ಕಿಳಿಯಲಿರುವ ಯುವರಾಜ್ಗೆ ತಂಡ ಹೊಸ ಜೆರ್ಸಿಯನ್ನು ಸಿದ್ಧಗೊಳಿಸಿದೆ. ಯುವಿ ಲಕ್ಕಿ ನಂಬರ್ 12 ಅನ್ನು ಒಳಗೊಂಡ ಜೆರ್ಸಿ ಇದಾಗಿದ್ದು, ನೀಲಿ ಕಲರ್ನಲ್ಲಿ ಯುವಿ ಮಿಂಚುತ್ತಿದ್ದಾರೆ. ಮುಂಬೈ ಇಂಡಿಯನ್ಸ್ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಈ ಜೆರ್ಸಿಯನ್ನು ಬಿಡುಗಡೆಗೊಳಿಸಲಾಗಿದೆ. ಯುವಿ ಜೊತೆ ರೋಹಿತ್ ಶರ್ಮಾ ಕೂಡ ಫೋಟೋ ಶೂಟ್ ನಡೆಸಿದ್ದು, ಈ ಪೋಟೋಗಳು ಸಾಮಾಜಿಕ ತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
First published:March 6, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ