Marathi Schools: ಗಡಿ ಬಿಕ್ಕಟ್ಟಿನ ನಡುವೆಯೂ ಮರಾಠಿ ಶಾಲೆಗೆ ದಾಖಲಾಗಲು ರಾಜ್ಯದಲ್ಲಿ ನೂಕುನುಗ್ಗಲು..!

ಇತ್ತೀಚೆಗೆ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೆಳಗಾವಿಯ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಕೊರತೆಯ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮದ ಶಾಲೆಗೆ ದಾಖಲಿಸುತ್ತಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಕರ್ನಾಟಕ ಮತ್ತು ಮಹಾರಾಷ್ಟ್ರದ ನಡುವೆ ಗಡಿ (Border) ಹಾಗೂ ಭಾಷಾ ಬಿಕ್ಕಟ್ಟು(Tension) ತಾರಕಕ್ಕೇರಿದ್ದರೂ, ಕರ್ನಾಟಕದಲ್ಲಿ ಮರಾಠಿ ಮಾಧ್ಯಮ (Karnataka and Maharashtra) ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಏರುಗತಿಯಲ್ಲಿರುವುದು ಅರಗಿಸಿಕೊಳ್ಳಲಾಗದ ವಾಸ್ತವವಾಗಿದೆ. ಕರ್ನಾಟಕದಲ್ಲಿರುವ 1,272 ಸರ್ಕಾರಿ ಹಾಗೂ ಸರ್ಕಾರಿ ಅನುದಾನಿತ ಹಾಗೂ ಖಾಸಗಿ ಮರಾಠಿ (Marathi medium)ಶಾಲೆಗಳಲ್ಲಿ 1.09 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಭ್ಯಾಸ ನಡೆಸುತ್ತಿದ್ದಾರೆ. ಈ ಪೈಕಿ 69,339 ವಿದ್ಯಾರ್ಥಿಗಳು ಸರ್ಕಾರ ನಡೆಸುತ್ತಿರುವ 950 ಮರಾಠಿ ಶಾಲೆಗಳಲ್ಲಿ ವಿದ್ಯಾಭ್ಯಾಸ ಪಡೆಯುತ್ತಿದ್ದರೆ, ಉಳಿದವರು ಅದೇ ಮಾಧ್ಯಮದಲ್ಲಿ ಸರ್ಕಾರಿ ಅನುದಾನಿತ (Government-aided) ಶಾಲೆಗಳು ಅಥವಾ ಖಾಸಗಿ ಶಾಲೆಗಳಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ.

ಮರಾಠಿ ಮಾಧ್ಯಮಕ್ಕೆ ಆದ್ಯತೆ
ಇತ್ತೀಚಿಗೆ ಶಿಕ್ಷಣ ಇಲಾಖೆ ನಡೆಸಿರುವ ಅಧ್ಯಯನದ ಪ್ರಕಾರ, ಉರ್ದು ಶಾಲೆಗಳು ಸೇರಿದಂತೆ ಹಲವಾರು ಅಲ್ಪಸಂಖ್ಯಾತರ ಶಾಲೆಗಳಲ್ಲಿ ದಾಖಲಾತಿಯ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ. ಈ ಪೈಕಿ ಉರ್ದು ಶಾಲೆಗಳಿಗೆ ದಾಖಲಾಗುವವರ ಸಂಖ್ಯೆ ಗರಿಷ್ಠ ಪ್ರಮಾಣದಲ್ಲಿದ್ದರೆ, ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಜಿಲ್ಲೆಗಳಾದ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ಮರಾಠಿ ಭಾಷೆಯ ಪ್ರಭಾವ ಹೆಚ್ಚಿರುವುದರಿಂದ ಮರಾಠಿ ಮಾಧ್ಯಮದ ಶಾಲೆಗಳನ್ನು ಆದ್ಯತೆಯಾಗಿ ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ: Kannada Flag: ಆಗಸದಲ್ಲಿ ಕನ್ನಡದ ಬಾವುಟ ಹಾರಿಸಿ ‘ಮಹಾ’ ಪುಂಡರಿಗೆ ಟಕ್ಕರ್ ಕೊಟ್ಟ ವೀರ ಕನ್ನಡಿಗ

ಸಚಿವ ಬಿ‌.ಸಿ. ನಾಗೇಶ್ ಭೇಟಿ
ಬೆಳಗಾವಿಯಲ್ಲಿ ವಿಧಾನಸಭಾ ಅಧಿವೇಶನ ನಡೆದ ಸಂದರ್ಭದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ‌.ಸಿ. ನಾಗೇಶ್ ಅಲ್ಲಿನ ಕೆಲವು ಮರಾಠಿ ಶಾಲೆಗಳಿಗೆ ಭೇಟಿ ನೀಡಿದ್ದರು. ಅಲ್ಲಿನ ಬಹುತೇಕ ವಿದ್ಯಾರ್ಥಿಗಳು ಕನ್ನಡದಲ್ಲಿ ಸಂಭಾಷಿಸಲು ಸಾಧ್ಯವಾಗದ ಕಾರಣ ಹಾಗೂ ಸಚಿವ ಬಿ.ಸಿ. ನಾಗೇಶ್ ಅವರಿಗೆ ಮರಾಠಿ ಅರ್ಥವಾಗದ ಕಾರಣ ವಿದ್ಯಾರ್ಥಿಗಳೊಂದಿಗೆ ಸಂವಾದಿಸಲು ಅವರಿಗೆ ತುಂಬಾ ಕಷ್ಟವಾಗಿತ್ತು. "ಈ ಸಂದರ್ಭದಲ್ಲಿ ಕನ್ನಡ ಮಾತನಾಡಲು ಬರುತ್ತಿದ್ದ ಮರಾಠಿ ಭಾಷಿಕ ಸ್ಥಳೀಯ ಬ್ಲಾಕ್ ಅಧಿಕಾರಿಯೊಬ್ಬರು ಸಚಿವರ ದುಭಾಷಿಯಾಗಿ ಕಾರ್ಯನಿರ್ವಹಿಸಿದರು" ಎಂದು ಸಚಿವ ಬಿ.ಸಿ.ನಾಗೇಶ್ ಅವರ ಆಪ್ತವರ್ತಿಯೊಬ್ಬರು ತಿಳಿಸಿದ್ದಾರೆ.

ಕನ್ನಡ ಶಿಕ್ಷಣ ಬಯಕೆ
ಅಲ್ಪಸಂಖ್ಯಾತ ಶಾಲೆಗಳಲ್ಲಿ ಅಭ್ಯಾಸ ಮಾಡುತ್ತಿರುವ ಮಕ್ಕಳಿಗೆ ಮೂಲಭೂತ ಕನ್ನಡ ಕಲಿಸುವ ಪ್ರಯತ್ನಗಳು ನಡೆಯುತ್ತಿವೆಯಾದರೂ, ಮಕ್ಕಳು ರಾಜ್ಯ ಭಾಷೆಯಾದ ಕನ್ನಡದಲ್ಲಿ ವ್ಯವಹರಿಸದೆ ಇರುವುದರಿಂದ ಕನ್ನಡ ಭಾಷೆಯನ್ನು ಆಯ್ದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಪಸಂಖ್ಯಾತ ಶಾಲೆಗಳಿಂದ ಕನ್ನಡ ಭಾಷೆಯನ್ನು ಪರಿಚಯಿಸುವಂತೆ ಹಲವಾರು ಮನವಿಗಳು ಬಂದಿವೆ. ಅಲ್ಪಸಂಖ್ಯಾತ ಶಾಲೆಗಳಲ್ಲಿ ರಾಜಕೀಯ ಬೆರೆತಿರುವ ಸಾಧ್ಯತೆ ಇದ್ದರೂ, ಭವಿಷ್ಯದ ಶಿಕ್ಷಣ ಹಾಗೂ ಉದ್ಯೋಗದ ಕಾರಣಕ್ಕೆ ಕೆಲಸ ಮಾಡಲಿಕ್ಕೆ ಸಾಧ್ಯವಾಗುವಷ್ಟದರೂ ಸ್ಥಳೀಯ ಭಾಷೆ ಜ್ಞಾನದ ಅಗತ್ಯವಿರುವುದರಿಂದ ಅಲ್ಪಸಂಖ್ಯಾತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರು ಸದ್ಯ ಕನ್ನಡ ಶಿಕ್ಷಣವನ್ನು ಬಯಸುತ್ತಿದ್ದಾರೆ" ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಆರ್. ವಿಶಾಲ್ ಹೇಳುತ್ತಾರೆ.

ದಾಖಲೆ ಪ್ರಮಾಣ ಶೂನ್ಯ
ಆದರೆ, ಇನ್ನಿತರ ಮಾಧ್ಯಮಗಳಾದ ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ಶಾಲೆಗಳಲ್ಲಿನ ದಾಖಲಾತಿ ಪ್ರಮಾಣ ಗಣನೀಯವಾಗಿ ಕುಸಿತ ಕಂಡಿದೆ. ಮಲಯಾಳಂ ಮಾಧ್ಯಮದ ಪ್ರೌಢಶಾಲೆಗಳಲ್ಲಿನ ದಾಖಲೆ ಪ್ರಮಾಣ ಶೂನ್ಯವಿದ್ದರೆ, ಅದೇ ಮಾಧ್ಯಮದ ಪ್ರಾಥಮಿಕ ಶಾಲೆಗಳಲ್ಲಿ ಕೇವಲ 233 ಮಕ್ಕಳು ಮಾತ್ರ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಹಲವಾರು ಅಲ್ಪಸಂಖ್ಯಾತ ಕುಟುಂಬಗಳ ಪೋಷಕರು ತಮ್ಮ ಮಕ್ಕಳನ್ನು ಇಂಗ್ಲಿಷ್ ಮಾಧ್ಯಮ ಶಾಲೆಗಳಿಗೆ ಬದಲಾಯಿಸುತ್ತಿದ್ದಾರೆ" ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಾರಿಗೆ ಸಂಪರ್ಕ ಕಳಪೆ
ಇತ್ತೀಚೆಗೆ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿರುವ ಬೆಳಗಾವಿಯ ಗ್ರಾಮೀಣ ಪ್ರದೇಶಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳ ಕೊರತೆಯ ಕಾರಣಕ್ಕೆ ಪೋಷಕರು ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮದ ಶಾಲೆಗೆ ದಾಖಲಿಸುತ್ತಿದ್ದಾರೆ. ಇಂತಹ ಗ್ರಾಮಗಳಲ್ಲಿ ಕನ್ನಡ ಮಾಧ್ಯಮ ಶಾಲೆಗಳನ್ನು ತೆರೆಯಲು ಕಾನೂನಿನ ತೊಡಕಿರುವುದರಿಂದ ಬೆಳಗಾವಿ ಗ್ರಾಮೀಣ ಭಾಗದ ಪೋಷಕರು ತಮ್ಮ ಮಕ್ಕಳನ್ನು ಮರಾಠಿ ಮಾಧ್ಯಮದ ಶಾಲೆಗಳಿಗೆ ಅನಿವಾರ್ಯವಾಗಿ ದಾಖಲಿಸುತ್ತಿದ್ದಾರೆ ಎಂದು ವರದಿಯಾಗಿತ್ತು.

ಇದನ್ನೂ ಓದಿ: Kannada Love: ಕೋಲಾರದ ಸರಕಾರಿ ಶಾಲೆಗೆ ಸೇರಿ ಕನ್ನಡ ಪ್ರೀತಿ ಮೆರೆದ ಆಂಧ್ರದ ವಿದ್ಯಾರ್ಥಿಗಳು

ಈ ಕುರಿತು ಪ್ರತಿಕ್ರಿಯಿಸಿದ್ದ ಪೋಷಕರೊಬ್ಬರು, "ನಮಗೆ ನಮ್ಮ ಮಕ್ಕಳನ್ನು ಕನ್ನಡ ಮಾಧ್ಯಮ ಶಾಲೆಗಳಿಗೇ ದಾಖಲಿಸಬೇಕು ಎಂಬ ಇಚ್ಛೆ ಇದ್ದರೂ, ಪ್ರಾಥಮಿಕ ಶಿಕ್ಷಣ ಪೂರೈಸಿದ ನಂತರ ಹತ್ತು ಹನ್ನೆರಡು ಕಿಲೊಮೀಟರ್ ದೂರದ ಕನ್ನಡ ಮಾಧ್ಯಮ ಪ್ರೌಢ ಶಾಲೆಗೆ ನಮ್ಮ ಮಕ್ಕಳನ್ನು ಕಳಿಸಬೇಕಾಗಿದೆ.. ಈ ಭಾಗದಲ್ಲಿ ಸಾರಿಗೆ ಸಂಪರ್ಕ ಕಳಪೆಯಾಗಿರುವುದರಿಂದ ಅಷ್ಟು ದೂರ ಮಕ್ಕಳು ನಡೆದುಕೊಂಡೇ ಶಾಲೆಗೆ ಹೋಗಿ ಬರಬೇಕಾಗುತ್ತದೆ. ಹೀಗಾಗಿ ನಾವು ಅನಿವಾರ್ಯವಾಗಿ ನಮ್ಮ ಮಕ್ಕಳನ್ನು ಮರಾಠಿ ಮಾಧ್ಯಮ ಶಾಲೆಗೆ ದಾಖಲಿಸುತ್ತಿದ್ದೇವೆ" ಎಂದು ಮಾಧ್ಯಮಗಳೆದುರು ಅಲವತ್ತುಕೊಂಡಿದ್ದರು.

ಇದರ ಬೆನ್ನಿಗೇ ಸಾರ್ವಜನಿಕ ಶಿಕ್ಷಣ ಇಲಾಖೆ ನಡೆಸಿರುವ ಅಧ್ಯಯನದಲ್ಲಿ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿನ ಪೋಷಕರು ತಮ್ಮ ಮಕ್ಕಳನ್ನು ಮರಾಠಿ ಶಾಲೆಗೆ ದಾಖಲಿಸಲು ಮುಂದಾಗುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
Published by:vanithasanjevani vanithasanjevani
First published: