ರಾಯಚೂರು (ಫೆ.17): ಜಿಲ್ಲೆಯಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ಎಗ್ಗಿಲ್ಲದಂತೆ ನಡೆಯುತ್ತಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪ್ರಭಾವಿ ವ್ಯಕ್ತಿಗಳ ಮಾಲೀಕತ್ವದ ಹಿನ್ನೆಲೆ ಇದರ ವಿರುದ್ಧ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂಬ ಮಾತು ಕೇಳಿಬಂದಿದ್ದು, ಇದರಿಂದಾಗಿ ಜನ ಸಂಕಷ್ಟ ಅನುಭವಿಸುತ್ತಿದ್ದು, ಜೀವ ಭಯದಲ್ಲಿ ಬದುಕುವಂತೆ ಆಗಿದೆ.
ಇದು ಜಿಲ್ಲೆಯ ತಾಲೂಕು ಕೇಂದ್ರವಾಗಿರುವ ಮಾನ್ವಿ ಪಟ್ಟಣದ ಪರಿಸ್ಥಿತಿ. ಪಟ್ಟಣದಿಂದ ಐದು ಕಿ.ಮೀ ದೂರದಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಆಂಧ್ರದ ಕೃಷ್ಣರೆಡ್ಡಿ ಎಂಬುವವರು ವೆಂಕಟೇಶ್ವರ ಸ್ಟೋನ್ ಕ್ರಶರ್ ಹೆಸರಿನಲ್ಲಿ ಈ ಗಣಿಗಾರಿಕೆ ನಡೆಸುತ್ತಿದ್ದಾರೆ.
ನಿಯಮಗಳ ಪ್ರಕಾರ ಪಟ್ಟಣದಿಂದ ಐದು ಕಿ.ಮೀ ವ್ಯಾಪ್ತಿಯಲ್ಲಿ ಯಾವುದೇ ಕಲ್ಲು ಗಣಿಗಾರಿಕೆ ನಡೆಸುವಂತೆ ಇಲ್ಲ. ಆದರೆ, ಈ ನಿಯಮಗಳನ್ನು ಉಲ್ಲಂಘಿಸಿ ಕಳೆದ ಐದಾರು ವರ್ಷಗಳಿಂದ ಇಲ್ಲಿ ಗಣಿಗಾರಿಕೆ ನಡೆಯುತ್ತಿದೆ. ಹೊತ್ತಿಲ್ಲದ ಹೊತ್ತಿನಲ್ಲಿ ಸಿಡಿಮದ್ದು ಸ್ಪೋಟಕಗಳನ್ನು ಸಿಡಿಸಲಾಗುತ್ತಿದ್ದು, ಜನರು ಬೆಚ್ಚಿ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಸ್ಪೋಟಕ್ಕೆ ಮನೆಗಳು ಬಿರುಕು ಬಿಟ್ಟಿದ್ದು, ಜನ ಜೀವ ಕೈಯಲ್ಲಿಡಿದು ಬದುಕುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗಣಿಗಾರಿಕೆ ವೇಳೆ ಸಿಡಿಮದ್ದು ಸ್ಪೋಟಿಸಲು ಪ್ರತ್ಯೇಕ ಪರವಾನಿಗೆ ಪಡೆಯಬೇಕು ಎಂಬ ನಿಯಮವಿದೆ. ಈ ನಿಯಮಗಳನ್ನು ಕೂಡ ಉಲ್ಲಂಘನೆ ಮಾಡಲಾಗಿದೆ. ಪಟ್ಟಣದಿಂದ ಕೂಗಳತೆ ದೂರದಲ್ಲಿ ಈ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರುವುದರಿಂದ ಜನ ಧೂಳು ಹಾಗೂ ಕರ್ಕಶ ಶಬ್ದದಿಂದ ರೋಸಿ ಹೋಗಿದ್ದು, ಹಲವು ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ.
ಇದರಿಂದಾಗಿ ಪಟ್ಟಣದಲ್ಲಿ ಈಗಾಗಲೇ 40 ಮನೆಗಳು ಬಿರುಕು ಬಿಟ್ಟಿದ್ದು, ತಾಲೂಕು ಆಸ್ಪತ್ರೆಯ ರೋಗಿಗಳು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಗಮನಹರಿಸುವಂತೆ ಅಧಿಕಾರಿಗಳಿಗೆ ಜನರು ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿರುವ ಜಿಲ್ಲಾಧಿಕಾರಿ ವೆಂಕಟೇಶ್ವರ್ಕುಮಾರ್, ಜಿಲ್ಲೆಯಲ್ಲಿ ಗಣಿಗಾರಿಕೆ ಪರವಾನಿಗೆಯನ್ನು ನಿಯಮಾನುಸಾರ ನೀಡಲಾಗುತ್ತಿದೆ. ಆದರೆ, ಮಾನ್ವಿ ಗಣಿಗಾರಿಕೆ ನನ್ನ ಗಮನಕ್ಕೆ ಬಂದಿದೆ. ಇಲ್ಲಿ ಪರವಾನಿಗೆ ಹಾಗೂ ಬ್ಲಾಸ್ಟಿಂಗ್ ಬಗ್ಗೆ ತಾಲೂಕಿನ ತಹಶೀಲ್ದಾರ್ ಹಾಗೂ ಭೂ ಮತ್ತು ಗಣಿ ಇಲಾಖೆಗೆ ಮಾಹಿತಿ ನೀಡಿ ವರದಿ ನೀಡಲು ಸೂಚಿಸಲಾಗಿದೆ. ವರದಿ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.
ಇದನ್ನು ಓದಿ: ಆರ್ಥಿಕ ಸಂಕಷ್ಟದಿಂದ ಪಾರಾಗಲು ದಿನಗೂಲಿ ನೌಕರರ ಕೆಲಸದ ದಿನಗಳ ಕಡಿತಕ್ಕೆ ಮುಂದಾದ ಕೋಚಿಮುಲ್
ಪರವಾನಿಗೆ ಇಲ್ಲದೆ ನಡೆಸುತ್ತಿರುವ ಈ ಗಣಿಗಾರಿಕೆಯ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ಇದ್ದರೂ ಕ್ರಮ ಕೈಗೊಳ್ಳದೆ ಇರುವದಕ್ಕೆ ಗಣಿಗಾರಿಕೆ ನಡೆಸುವವರ ಹಿಂದೆ ಪ್ರಭಾವಿಗಳಿದ್ದಾರೆ ಎನ್ನುವ ಆರೋಪ ಕೂಡ ಕೇಳಿ ಬಂದಿದೆ. ಇನ್ನಾದರೂ ಜನರ ಸಂಕಷ್ಟ ಕಂಡು ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಾರಾ ಕಾದು ನೋಡಬೇಕಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ