ನನಸಾಗುವುದೇ ಮಂತ್ರಾಲಯ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದ ಕನಸು!

ನೀರಿನ ಕೊರತೆ ನಿವಾರಣೆಗೆ ರಾಜ್ಯ ಸರ್ಕಾರ  ಮಂತ್ರಾಲಯ ಹಾಗೂ ಚಿಕ್ಕ ಮಂಚಾಲೆಯ ಮಧ್ಯೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಯೋಜನೆ ಸಿದ್ದಪಡಿಸಿದೆ.

ತುಂಗಭದ್ರಾ ನದಿ

ತುಂಗಭದ್ರಾ ನದಿ

  • Share this:
ರಾಯಚೂರು (ಜ. 23): ದೋ ಅಬ್ (ಎರಡು ನದಿಗಳ ನಡುವಿನ)​ ಪ್ರದೇಶ ಎಂದೇ ಖ್ಯಾತಿ  ಪಡೆದ ಜಿಲ್ಲೆ ರಾಯಚೂರು. ಒಂದು ಕಡೆ ತುಂಗಭದ್ರಾ ಹರಿದರೆ, ಮತ್ತೊಂದು ಕಡೆ ಕೃಷ್ಣಾ ನದಿ ಹರಿಯುತ್ತಾಳೆ. ಇಲ್ಲಿನ ಪ್ರಸಿದ್ಧ ಯಾತ್ರಾಸ್ಥಳವಿರುವುದು ಇದೇ ತುಂಗಭದ್ರಾ ನದಿಯ ದಡದಲ್ಲಿ. ಸಾಮಾನ್ಯವಾಗಿ ಬೇಸಿಗೆಯಲ್ಲಿ ಒಣಗುವ ಈ ತುಂಗಭದ್ರಾ ನದಿಯಿಂದ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರಿಗೆ ನೀರಿನ ಕೊರತೆ ಉಂಟಾಗುತ್ತದೆ. ಇದೇ ಕಾರಣಕ್ಕಾಗಿ ರಾಜ್ಯ ಸರ್ಕಾರ  ಮಂತ್ರಾಲಯ ಹಾಗೂ ಚಿಕ್ಕ ಮಂಚಾಲೆಯ ಮಧ್ಯೆ ಬ್ರಿಜ್ ಕಂ ಬ್ಯಾರೇಜ್ ನಿರ್ಮಿಸುವ ಯೋಜನೆ ಸಿದ್ದಪಡಿಸಿದೆ. ಈ ಯೋಜನೆಗೆ ಕುಮಾರಸ್ವಾಮಿ ಮಂಡಿಸಿದ 2019 ರ ಬಜೆಟ್ಟಿನಲ್ಲಿ 50 ಕೋಟಿ ರೂಪಾಯಿ ಅನುದಾನ ನೀಡುವುದಾಗಿ ಘೋಷಿಸಿದ್ದರು.  ಆದರೆ ಯೋಜನೆ ಘೋಷಣೆಯಾಗಿ ಎರಡು ವರ್ಷಗಳಾದರೂ ಇನ್ನೂ ಆರಂಭವಾಗಿಲ್ಲ.

ತುಂಗಭದ್ರಾ ನದಿಯ ದಂಡೆ ಮೇಲೆ ಒಂದು ಕಡೆ ಮಂತ್ರಾಲಯ, ಇನ್ನೊಂದು ಕಡೆ ರಾಯರು ತಪಸ್ಸು ಮಾಡಿದ ಗಾಣಾದಾಳದ ಪಂಚಮುಖಿ ದೇವಸ್ಥಾನವಿದೆ.  ಈ ಎರಡು ಸನ್ನಿಧಾನಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಾರೆ.  ಮಂತ್ರಾಲಯಕ್ಕೆ ಬರುವ ಭಕ್ತರು ಗಾಣದಾಳಕ್ಕೂ ಭೇಟಿ ನೀಡುತ್ತಾರೆ, ಮಂತ್ರಾಲಯ ಹಾಗೂ ಗಾಣಾದಾಳ ಮಧ್ಯೆ ಇರುವುದು ತುಂಗಭದ್ರಾ ನದಿ ಹರಿವಿನ ಅಂತರ ಮಾತ್ರ.  ಆದರೆ ಇಲ್ಲಿ ಬಂದು ಹೋಗಲು ಭಕ್ತರು ಸುತ್ತಿ ಬಳಸಿ ಪ್ರಯಾಣಿಸಬೇಕು.  ಕೇವಲ ನಾಲ್ಕೈದು ಕಿಮೀ ದೂರದ ಮಂತ್ರಾಲಯ ಹಾಗೂ ಗಾಣದಾಳಕ್ಕೆ ಸುಮಾರು 30 ಕಿ.ಮೀ ದೂರ ಸಾಗಬೇಕು. ಈ ಬ್ರಿಜ್​ ಕಂ ಬ್ಯಾರೇಜ್​ ನಿರ್ಮಾಣವಾದರೆ ಈ ದೂರ ಕಡಿಮೆ ಆಗಲಿದೆ ಎಂಬ ಲೆಕ್ಕಾಚಾರ ಕೂಡ ಇತ್ತು.

ಈ ಕಾಮಗಾರಿ ನಿರ್ಮಾಣಕ್ಕೆ  ಈಗ ಕೇವಲ 50 ಕೋಟಿ ರೂಪಾಯಿ ಘೋಷಣೆಯಾಗಿದೆ. ಇದಕ್ಕೆ ಸುಮಾರು 100 ಕೋಟಿ ರೂಪಾಯಿ ಬೇಕಾಗಿದೆ,. ಪೂರ್ಣ ಪ್ರಮಾಣದ ಅನುದಾನ ಸಿಕ್ಕರೆ ಯೋಜನೆ ಬೇಗನೆ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಈ ಯೋಜನೆ ಘೋಷಣೆ ಬಳಿಕ ಸರ್ಕಾರ ಬದಲಾದ ಕಾರಣ ಈ ಯೋಜನೆ ತಾತ್ಕಲಿಕವಾಗಿ ಸ್ಥಗಿತಗೊಂಡಿದೆ. '

ಇದನ್ನು ಓದಿ: ಆನೆ ಮೇಲೆ ಬೆಂಕಿ ಟೈರ್​​ ಎಸೆದು ಕ್ರೌರ್ಯ ಮೆರೆದ ದುಷ್ಕರ್ಮಿಗಳು; ವಿಡಿಯೋ ವೈರಲ್

ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ,  ಯೋಜನೆಗೆ ಆರ್ಥಿಕ ಮಂಜೂರಾತಿ ಸಿಗಲಿದೆ.  ಇಷ್ಟರಲ್ಲಿಯೇ ಟೆಂಡರ್ ಕರೆಯಲಾಗುವುದು ಎಂದು ಭರವಸೆ ನೀಡುತ್ತಾರೆ.

ತುಂಗಭದ್ರಾ ನದಿಯು ಕರ್ನಾಟಕ, ಆಂಧ್ರ ಹಾಗು ತೆಲಂಗಾಣ ರಾಜ್ಯಗಳ ಮಧ್ಯೆ ಹರಿಯುತ್ತಿದ್ದು, ನದಿಯಲ್ಲಿ ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣಕ್ಕೆ ಮೂರು ಸರಕಾರಗಳ ಪರವಾನಿಗೆ ಬೇಕಾಗಿದೆ.  ಈ ನಿಟ್ಟಿನಲ್ಲಿ ಕರ್ನಾಟಕ ಸರಕಾರ ಮುತುವರ್ಜಿ ವಹಿಸಿದೆ.  ಬ್ರಿಜ್ ಕಂ ಬ್ಯಾರೇಜ್ ನಿರ್ಮಾಣದಿಂದ ಈ ಭಾಗದ ಜನರಿಗೆ ಅನುಕೂಲವಾಗಲಿದೆ.  ಬ್ಯಾರೇಜ್ ನಿರ್ಮಿಸುವುದರಿಂದ ನದಿಯ ದಡದಲ್ಲಿರುವ ರೈತರ ಭೂಮಿಗೆ ಅಂತರ್ಜಲ ನೀರು ದೊರೆಯಲಿದೆ.  ನದಿಯ ದಡದಲ್ಲಿರುವ ಕರ್ನಾಟಕ ಹಾಗೂ ಆಂಧ್ರದ ಗ್ರಾಮಗಳಿಗೆ ಕುಡಿಯುವ ನೀರು ಸಹ ಸಿಗಲಿದೆ.  ಈ ಹಿನ್ನಲೆಯಲ್ಲಿ ಈಗಲಾದರೂ ಯೋಜನೆಗೆ ಚಾಲನೆ ಸಿಗುತ್ತದೆಯೋ ಎಂದು ಜನರು ಎದುರು ನೋಡುತ್ತಿದ್ದಾರೆ.
Published by:Seema R
First published: