Monsoon: ಕೇರಳ, ಕರ್ನಾಟಕದಲ್ಲಿ ಬಿರುಸಿನ ಮಳೆ, ವರುಣನ ಆಗಮನದ ನಿರೀಕ್ಷೆಯಲ್ಲಿ ದೆಹಲಿ

ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ

ರಾಜ್ಯದಲ್ಲಿ ಮಳೆ.

ರಾಜ್ಯದಲ್ಲಿ ಮಳೆ.

  • Share this:
    ದೇಶದೆಲ್ಲೆಡೆ ನೈರುತ್ಯ ಮುಂಗಾರು ಅಬ್ಬರ ಜೋರಾಗಿದ್ದು, ದಕ್ಷಿಣ ಭಾರತ ಸೇರಿದಂತೆ ಉತ್ತರ ಭಾರದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗಿದೆ. ಭಾನುವಾರ ಸುರಿದ ಭಾರಿ ಮಳೆಗೆ ಉತ್ತರ ಪ್ರದೇಶ ಮತ್ತು ರಾಜಸ್ಥಾನ್​, ಗುಜರಾತ್​, ಹಿಮಾಚಲ ಪ್ರದೇಶದ ಜನ ಜೀವನ ಅಸ್ತ ವ್ಯಸ್ತವಾಗಿದೆ. ಈ ನಡುವೆ ಸುಡುವ ಬಿಸಿಲಿನಿಂದ ತತ್ತರಿಸಿರುವ ದೆಹಲಿ ಜನರು ಮಳೆಗಾಗಿ ಎದುರು ನೋಡುತ್ತಿದ್ದಾರೆ. ಕೇರಳದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದ್ದು, ಈಗಾಗಲೇ ರಾಜ್ಯದ ಐದು ಜಿಲ್ಲೆಗಳಲ್ಲಿ ಆರೆಂಜ್​ ಆಲರ್ಟ್​ ಘೋಷಿಸಲಾಗಿದೆ. ಬಲವಾದ ಗಾಳಿ ಬೀಸುವ ಹಿನ್ನಲೆ ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಈ ನಡುವೆ ಈ ಗಾಳಿ ಗುಜರಾತ್ ​ವರೆಗೂ ಸಾಗಲಿದ್ದು, ಹಲವು ಭಾಗಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆ ಇದೆ.

    ಕರ್ನಾಟಕ
    ಕರ್ನಾಟಕದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅತಿಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಕಳೆದೊಂದು ವಾರದಿಂದ ಕೊಂಚ ವಿರಾಮ ನೀಡಿದ್ದ ಮಳೆ ಕಳೆದ ಮೂರು ದಿನಗಳಿಂದ ಬಿರುಸು ಕೊಂಡಿದೆ. ಈಗಾಗಲೇ ಚಿಕ್ಕಮಗಳೂರು, ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇನ್ನು ಮೂರು ದಿನ ಇದೇ ರೀತಿ ಮಳೆಯಾಗಲಿದೆ. ಅರಬ್ಬಿ ಸಮುದ್ರದಲ್ಲಿ ಏಳುವ ಗಾಳಿ ಯಿಂದ ಅಲೆಗಳ ಹೊಡೆತ ಇನ್ನಷ್ಟು ಹೆಚ್ಚಲಿದ್ದು, ಕಡಲ ಕೊರೆತ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನಲೆ ಈಗಾಗಲೇ ಈ ಪ್ರದೇಶಗಳಲ್ಲಿ ರೆಡ್​ ಆಲರ್ಟ್​ ಘೋಷಣೆ ಮಾಡಲಾಗಿದೆ.

    ಕೇರಳ:
    ಜೂನ್​ನಲ್ಲಿ ವಾಡಿಕೆ ಮಳೆ ಕೊರತೆ ಅನುಭವಿಸಿದ್ದ ಕೇರಳದಲ್ಲಿ ಮುಂದಿನ ನಾಲ್ಕಿ ದಿನ ಭಾರೀ ಪ್ರಮಾಣದ ಮಳೆಯಾಗಲಿದ್ದು, ಇಡುಕ್ಕಿ, ಕಣ್ಣೂರು, ಕಸರಾಗೋಡ್​​ ಆರೆಂಜ್​ ಆಲರ್ಟ್​, ಮತ್ತು ಉಳಿದ ಜಿಲ್ಲೆಗಳಲ್ಲಿ ಹಳದಿ ಆಲರ್ಟ್​ ಘೋಷಿಸಲಾಗಿದೆ. ಮಳೆ ಹಿನ್ನಲೆ ಜನರು ಎಚ್ಚರಿಕೆ ವಹಿಸುವಂತೆ ಐಎಂಡಿ ತಿಳಿಸಿದೆ. ಕೇರಳದಲ್ಲಿ ಕಳೆದ 39 ವರ್ಷಗಳಲ್ಲಿಯೇ ಅತಿ ಕಡಿಮೆ ಯಾಗಿದೆ. ರಾಜ್ಯದಲ್ಲಿ ಕೇವಲ 408.44 ಮಿಮೀ ಮಳೆಯಾಗಿದೆ. ಇದು ಶೇ 36ರಷ್ಟು ಕಡಿಮೆ ಮಳೆ. ಜೂನ್​ನಲ್ಲಿ ಸಾಮಾನ್ಯವಾಗಿ 643 ಮಿ.ಮೀ ವಾಡಿಕೆ ಮಳೆ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನು ಓದಿ: ಮೈಸೂರು ಅರಸು ಮನೆತನದ ಹೆಸರಲ್ಲಿ ವಂಚನೆ; ಓದಿದ್ದು 7ನೇ ಕ್ಲಾಸ್​ ಆದ್ರೂ ವಿದೇಶಿ ಭಾಷೆಯಲ್ಲಿ ನಿಪುಣ

    ತಮಿಳುನಾಡು , ಆಂಧ್ರ
    ತಮಿಳುನಾಡಿನ ಕೊಯಿಮತ್ತೂರು, ಥೆನಿ, ನೀಲಿಗಿರಿಯ ಪಶ್ವಿಮ ಘಟ್ಟದಲ್ಲಿ ಕೂಡ ಮುಂದಿನ ನಾಲ್ಕು ದಿನ ಭಾರೀ ಮಳೆಯಾಗಲಿದೆ. ಬಂಗಾಳ ಕೊಲ್ಲಿಯ ಮಧ್ಯ ಪಶ್ಚಿಮ ಮತ್ತು ವಾಯುವ್ಯದಲ್ಲಿ ಕಡಿಮೆ ಒತ್ತಡ ಪ್ರದೇಶ ನಿರ್ಮಾಣವಾಗಲಿದೆ. ಈ ಹಿನ್ನಲೆ ಆಂಧ್ರ ಪ್ರದೇಶ ಮತ್ತು ಒಡಿಶಾದಲ್ಲೂ ಕೂಡ ಮಳೆಯಾಗಲಿದೆ. ಆಂಧ್ರ ಪ್ರದೇಶದ ರಾಯಲ ಸೀಮಾದಲ್ಲಿ ಕೂಡ ಸಾಧಾರಣಾ ಮಳೆಯಾದರೆ, ಪೂರ್ವ ಗೋದಾವರಿ, ವಿಶಾಖ ಪಟ್ಟಣಂನಲ್ಲಿ ಅಧಿಕ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

    ಇದನ್ನು ಓದಿ: 50 ಮಕ್ಕಳ ದತ್ತು ಪಡೆದ ಮಹಿಳಾ ಕಾನ್ಸ್​ಟೇಬಲ್​; ಈಕೆ ಮುಂಬೈನ ಮದರ್​ ತೆರೇಸಾ

    ಗುಜರಾತ್​, ಮಹಾರಾಷ್ಟ್ರದಲ್ಲೂ ಮಳೆ
    ಗುಜರಾತ್​ನಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆ ಕೂಡ ಇದೆ, ಅದರಲ್ಲೂ ಮುಖ್ಯವಾಗಿ ಪಶ್ಚಿಮ ಗುಜರಾತ್​ಮ ರಾಜ್​ಕೋಟ್​, ಅಮ್ರೇಲಿ, ಅಹಮದಬಾದ್​, ಭಾವನಗರ್​ ಸೂರತ್​, ಕೆಶೋಡ್​ನಲ್ಲಿ ಮುಂದಿನ 24 ರಿಂದ 48 ಗಂಟೆ ಸಾಧಾರಣಾ ಮಳೆಯಾಗುವ ನಿರೀಕ್ಷೆ ಇದೆ.
    ಮಹಾರಾಷ್ಟ್ರದಲ್ಲಿ ಈಗಾಗಲೇ ಭಾರೀ ಮಳೆಯಾಗುತ್ತಿದ್ದು, ಮುಂದುನ ಮೂರನಾಲ್ಕು ದಿನ ಇದೇ ರೀತಿ ವರುಣ ಆರ್ಭಟಿಸಲಿದ್ದಾನೆ. ಥಾಣೆ, ಪಲ್ಗಾರ್​​, ದಕ್ಷಿಣ ಕೊಂಕಣದಲ್ಲಿ ಮಳೆಯಾಗುವ ನಿರೀಕ್ಷೆ ಹೆಚ್ಚಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.
    Published by:Seema R
    First published: