ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ

news18
Updated:June 14, 2018, 2:02 PM IST
ಮೈದುಂಬಿ ಧುಮ್ಮಿಕ್ಕುತ್ತಿದೆ ವಿಶ್ವವಿಖ್ಯಾತ ಜೋಗ ಜಲಪಾತ
news18
Updated: June 14, 2018, 2:02 PM IST
- ಜಿ.ಹರೀಶಕುಮಾರ, ನ್ಯೂಸ್ 18 ಕನ್ನಡ 

ಬೆಂಗಳೂರು ( ಜೂನ್ 14) :  ಪ್ರಕೃತಿಯ ಸುಂದರ ಬೆಟ್ಟಗಳ ಸಾಲಿನಲ್ಲಿ ಶರಾವತಿ ನದಿ ನೀರಿನಿಂದ ನೈಸರ್ಗಿಕವಾಗಿ ಕಣಿವೆಯಲ್ಲಿ ಕಾಣುವ ಜೋಗ ಜಲಪಾತದ ಮಹಾ ವೈಭವವು ಮಳೆಗಾಲದಲ್ಲಿ  ನೋಡುವುದೇ ಚಂದ. ಈ ಜಲಪಾತದ ರುದ್ರ ರಮಣೀಯ ಸೌಂದರ್ಯವನ್ನು ಕಣ್ಣಾರೆ ಕಂಡಾಗಲೇ ಅನಿಸುವುದು ಜೀವನ ಸಾರ್ಥಕವೆಂದು.

ಉತ್ತರ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆ ಅಪ್ಪಟ ಗಡಿಯಲ್ಲಿ ಧುಮುಕುವ ಜಲಪಾತ ವಿಶ್ವವಿಖ್ಯಾತ ಜೋಗ ಜಲಪಾತ. ರಾಜ, ರಾಣಿ, ರೋವರ್  ಮತ್ತು ರಾಕೆಟ್ ಎಂಬ ಅಕ್ಕಪಕ್ಕದ ಜಲಪಾತಗಳು ಸೇರಿ ಜೋಗ ಜಲಪಾತವೆಂದು ಹೆಸರಾಗಿದೆ. ಬೇಸಿಗೆ, ಚಳಿಗಾಲದಲ್ಲಿ ಅಪ್ಪಟ ಸ್ಫಟಿಕದಂತೆ ಕಾಣುವ ಮತ್ತು ಮಳೆಗಾಲದಲ್ಲಿ ಮೈದುಂಬಿ ರುದ್ರನಂತೆ ತೋರುವ ಈ ಜಲಪಾತದ ನೋಟ ಎಂಥವರನ್ನೂ ತನ್ನೆಡೆ ಸೆಳೆಯುತ್ತದೆ.

ಮಳೆಗಾಲ ಬಂತೆಂದರೆ ಇಡೀ ಜಲಪಾತವು ಅದ್ಭುತವಾದ ನೀರಿನ ಪದರದಂತೆ ಕಾಣುತ್ತದೆ. ನೇರವಾಗಿ ನೆಲಕ್ಕೆ ಜೋಡಿಸುತ್ತಿರುವ ಕೆಂಪು ಹಾಸಿನಂತೆ ಕಾಣುತ್ತದೆ. 830 ಅಡಿಗಳಷ್ಟು ಎತ್ತರದಿಂದ ಬೀಳುವ ಶರಾವತಿ ನೀರು ಬಂಡೆಗಳ ಸಾಲಿನಲ್ಲಿ ಬರುವ ಆಳವಾದ ಕಲ್ಲು ಮತ್ತು ಇತರೆ ತೊಡಕುಗಳಿಗೆ ಧೃತಿಗೆಡದೆ ಮುನ್ನುಗ್ಗುವುದನ್ನು ನೋಡುವುದೇ ಒಂದು ಹಬ್ಬ. ಈ ಸುಂದರ ದೃಶ್ಯವನ್ನು ನೋಡಲೆಂದೇ ವಿಶ್ವದೆಲ್ಲೆಡೆಯಿಂದ ಸಾವಿರಾರು ಪ್ರವಾಸಿಗರು ಆಕರ್ಷಿತರಾಗಿ ಬರುತ್ತಲೇ ಇದ್ದಾರೆ.

ಜಲಪಾತಕ್ಕೆ ಹಸಿರಿನ ಸಾಥ್......

ಜಲಪಾತದ ರಮ್ಯ ಸೌಂದರ್ಯಕ್ಕೆ ಸುತ್ತಲಿರುವ ಹಸಿರಿನಿಂದ ಕಂಗೊಳಿಸುತ್ತಿರುವ ಗುಡ್ಡಗಳು ಮತ್ತಷ್ಟು ಮೆರಗು ನೀಡುತ್ತವೆ. ಜೋಗ ಜಲಪಾತದ ರಮ್ಯದೃಶ್ಯವನ್ನು ನೋಡಲು ಅನೇಕ ಅನುಕೂಲಕರ ವೀಕ್ಷಣಾ ಸ್ಥಳಗಳಿವೆ. ಅವುಗಳಲ್ಲಿ ಬಹಳ ಪ್ರಸಿದ್ಧವಾದುದು ವಾಟ್ಕಿನ್ಸ್ ಪ್ಲ್ಯಾಟ್ ಫಾಮ್. ಜಲಪಾತದ ಕೆಳೆಗಿನವರೆಗೂ ಹೋಗಿ ಅಲ್ಲಿಂದ ಬೆಟ್ಟ ಹತ್ತಿ ಮೇಲೇರಿ ಬರುವುದು ಬಹಳ ಕ್ಲಿಷ್ಟಕರ ಹಾಗೂ ಶ್ರಮದ ಕೆಲಸವಾಗಬಹುದು ಮತ್ತು ಈ ಕೆಲಸ ತಮ್ಮ ಸ್ನಾಯುಗಳನ್ನು ಬಲಿಷ್ಠಪಡಿಸಲು ಇಚ್ಛಿಸುವವ ಯುವಸಮೂಹಕ್ಕೆ ಉತ್ತಮ ಚಾರಣವಾಗುತ್ತದೆ.

ಪ್ರಶಸ್ತ ಸಮಯ....
Loading...

ಜಗತ್ಪಸಿದ್ಧ ತಾಣವಾಗಿರುವ ಜೋಗ್ ಜಲಪಾತಕ್ಕೆ ಸಾರಿಗೆ ಸಂಪರ್ಕ ವ್ಯವಸ್ಥೆ ಕೂಡ ಅನುಕೂಲಕರವಾಗಿದೆ. ಕರ್ನಾಟಕದಲ್ಲಿನ ಶಿವಮೊಗ್ಗ ಜಿಲ್ಲೆಯ ಸಾಗರ ಪಟ್ಟಣವು ಜೋಗ ಜಲಪಾತ ದಿಂದ ಅತ್ಯಂತ ಸಮೀಪದ ನಗರ. ಜೋಗ್ ಜಲಪಾತ ಮತ್ತು ಸಾಗರದ ಮಧ್ಯೆ  ಹಲವಾರು ಬಸ್ ಸಂಚರಿಸುತ್ತಿದ್ದು, ಕಾರವಾರ ಅಥವಾ ಹೊನ್ನಾವರದಿಂದ ಕೂಡ ಬಸ್ ವ್ಯವಸ್ಥೆ ಇದೆ. ಇದೀಗ ಮಳೆಗಾಲದ ಸಮಯವಾಗಿದ್ದು ನೀರಿನ ಮಟ್ಟ ಹೆಚ್ಚಾಗಿರುತ್ತದೆ. ಇದರಿಂದ ಜಲಪಾತದಲ್ಲಿ ನೀರು ಧುಮ್ಮಿಕ್ಕಿ ಹಾಲಿನಂತೆ ಹರಿಯುವುದನ್ನು ನೋಡುವ ಆನಂದ ಅವರ್ಣನೀಯ. ಆದ್ದರಿಂದ ಈ ಸಮಯದಲ್ಲೆ ಜೋಗ ಜಲಪಾತ ನೋಡಲು ಹೋಗುವುದು ಸೂಕ್ತ. ಇಲ್ಲಿನ ಇತರೆ ಆಕರ್ಷಣೆಗಳೆಂದರೆ ಜೋಗದ ಸುತ್ತಮುತ್ತಲ್ಲಿನಲ್ಲಿರುವ ಕಾಡುಮೇಡು, ಸ್ವರ್ಣನದಿ ಹಾಗೂ ಶರಾವತಿ ಕಣಿವೆ.
First published:June 14, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...