ಮನೀಶ್ ಶೆಟ್ಟಿ ಕೊಲೆ ಪ್ರಕರಣ: ನಾಲ್ವರು ಆರೋಪಿಗಳ ಬಂಧನ; ಇಬ್ಬರ ಕಾಲಿಗೆ ಗುಂಡೇಟು

ಮೊನ್ನೆ ನಡೆದ ಮನೀಶ್ ಶೆಟ್ಟಿ ಹತ್ಯೆ ಪ್ರಕರನದಲ್ಲಿ ಎಲ್ಲಾ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಮಹಜರು ಮಾಡುವ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದಿದೆ.

ಮನೀಶ್ ಶೆಟ್ಟಿ ಕೊಲೆ ಆದ ಸ್ಥಳ

ಮನೀಶ್ ಶೆಟ್ಟಿ ಕೊಲೆ ಆದ ಸ್ಥಳ

  • Share this:
ಬೆಂಗಳೂರು(ಅ. 17): ಬ್ರಿಗೇಡ್ ರಸ್ತೆಯ ಡುಯೆಟ್ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಇಬ್ಬರು ಆರೋಪಿಗಳ ಕಾಲಿಗೆ ಗುಂಡೇಟು ಬಿದ್ದು ಗಾಯಗೊಂಡಿದ್ದಾರೆ. ಆರೋಪಿಗಳಾದ ಶಶಿಕಿರಣ್ ಅಲಿಯಾಸ್ ಮುನ್ನಾ (45), ಗಣೇಶ್ (39), ನಿತ್ಯ (29) ಮತ್ತು ಅಕ್ಷಯ್ (32) ಅವರು ಗಾಂಧಿನಗರದ ಲಾಡ್ಜ್​ವೊಂದರಲ್ಲಿ ಅಡಗಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಆರೋಪಿಗಳನ್ನ ಬಂಧಿಸಿದರೆಂದು ಮಾಹಿತಿ ತಿಳಿದುಬಂದಿದೆ.

ಬಂಧಿತರಲ್ಲಿ ಶಶಿಕಿರಣ್ ಮತ್ತು ನಿತ್ಯ ಕೊಡಗಿನವರಾದರೆ, ಗಣೇಶ್ ಮತ್ತು ಅಕ್ಷಯ್ ಮಂಗಳೂರಿನವರಾಗಿದ್ದಾರೆ. ಮನೀಶ್ ಶೆಟ್ಟಿಯನ್ನು ಹತ್ಯೆಗೈಯಲು ಉಪಯೋಗಿಸಿದ್ದ ಮಾರಕಾಸ್ತ್ರಗಳನ್ನ ಜಫ್ತಿ ಮಾಡಲು ಹೊಸೂರು ರಸ್ತೆಯ ಬಾರ್ಲೆನ್ ಸ್ಮಶಾನ ಬಳಿ ಪೊಲೀಸರು ತಪಾಸಣೆ ಮಾಡುವಾಗ ಆರೋಪಿಗಳು ಹಲ್ಲೆಗೆ ಯತ್ನಿಸಿದ್ದಾರೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಫೈರಿಂಗ್ ಮಾಡಿದ್ದಾರೆ. ಆಗ ಎ1 ಆರೋಪಿ ಶಶಿಕಿರಣ್ ಹಾಗೂ ಎ4 ಆರೋಪಿ ಅಕ್ಷಯ್ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡ ಅವರಿಬ್ಬರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: ಸಿನಿಮೀಯ ರೀತಿಯಲ್ಲಿ ನಡೆದಿತ್ತು ಬೆಂಗಳೂರಿನ ಬಾರ್ ಮಾಲೀಕ ಮನೀಶ್ ಶೆಟ್ಟಿ ಹತ್ಯೆ!

ಅ. 15, ಗುರುವಾರ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿರುವ ಡುಯೆಟ್ ಬಾರ್​ನ ಮಾಲೀಕ ಮನೀಶ್ ಶೆಟ್ಟಿ ಅವರನ್ನು ನಾಲ್ವರು ಆರೋಪಿಗಳು ಹತ್ಯೆಗೈದಿದ್ದರು. ಬ್ರಿಗೇಡ್ ರಸ್ತೆ ಬಳಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ಮನೀಶ್ ಶೆಟ್ಟಿ ಮೇಲೆ ಸಿಂಗಲ್ ಬ್ಯಾರಲ್ ಲೋಡಿಂಗ್ ಗನ್​ನಿಂದ ಆರೋಪಿಗಳು ಮೊದಲಿಗೆ ಫೈರಿಂಗ್ ಮಾಡಿದ್ದರು. ಬಳಿಕ ವಾಪಸ್ ಬಂದು ಮಚ್ಚಿನಿಂದ ನಾಲ್ಕು ಬಾರಿ ಕೊಚ್ಚಿ ಹೊರಟು ಹೋದರು. ಕೊಲೆಗೆ ಬಳಸಿದ್ದ ಮಚ್ಚನ್ನು ಅವರು ಹೊಸೂರು ರಸ್ತೆಯ ಸ್ಮಶಾನದಲ್ಲಿ ಎಸೆದು ಹೋಗಿದ್ದರು. ಈ ಮಾರಕಾಸ್ತ್ರವನ್ನು ಪರಿಶೀಲಿಸುವಾಗ ಮತ್ತು ಸ್ಥಳದ ಮಹಜರು ಮಾಡುವಾಗ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ.

ಗಾಯಗೊಂಡವರಲ್ಲಿ ಒಬ್ಬನಾದ ಎ1 ಆರೋಪಿ ಶಶಿಕಿರಣ್ ಅಲಿಯಾಸ್ ಮುನ್ನಾ ಈ ಕೊಲೆ ಪ್ರಕರಣದ ಮಾಸ್ಟರ್​ಮೈಂಡ್ ಎನ್ನಲಾಗಿದೆ. 200ರಲ್ಲಿ ಮಂಗಳೂರಿನ ಉಲ್ಲಾಳದಲ್ಲಿ ನಡೆದ ಡಬಲ್ ಮರ್ಡರ್, 2002ರಲ್ಲಿ ಕಾರ್ಕಳ ಹಲ್ಲೆ ಪ್ರಕರಣ, 1998ರಲ್ಲಿ ಕದ್ರಿ ಠಾಣಾ ವ್ಯಾಪ್ತಿಯಲ್ಲಿ 307ರ ಅಡಿಯಲ್ಲಿ ದಾಖಲಾದ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ.

ಇದನ್ನೂ ಓದಿ: ಬನ್ನಂಜೆ ರಾಜನ ಆಪ್ತ ಮನೀಶ್​ ಶೆಟ್ಟಿ ಶೂಟೌಟ್; ಹಂತಕರ ಪತ್ತೆಗೆ 9 ವಿಶೇಷ ತಂಡ ರಚನೆ

ಮೊನ್ನೆ ನಡೆದ ಮನೀಶ್ ಹತ್ಯೆಯು ಸೇಡಿನ ಕ್ರಮ ಎಂದು ಹೇಳಲಾಗುತ್ತಿದೆ. ಕೊಲೆಯಾದ ಮನೀಶ್ ಶೆಟ್ಟಿ ಕೂಡ ಅನೇಕ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಅಂಡರ್​ವರ್ಲ್ಡ್ ಜೊತೆ ನಂಟನ್ನು ಹೊಂದಿದ್ದನೆನ್ನಲಾಗಿದೆ. ಹಳೇ ದ್ವೇಷದಲ್ಲಿ ಆತನ ಕೊಲೆಯಾಗಿದೆ. ಈ ಪ್ರಕರಣದಲ್ಲಿ ಆರೋಪಿಗಳನ್ನ ಹಿಡಿಯಲು ಒಂಬತ್ತು ತಂಡಗಳನ್ನ ರಚಿಸಲಾಗಿತ್ತು. ಎರಡು ದಿನಕ್ಕೆ ಮುನ್ನವೇ ಆರೋಪಿಗಳನ್ನ ಪೊಲೀಸರು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ: ಮುನಿರಾಜು ಹೊಸಕೋಟೆ
Published by:Vijayasarthy SN
First published: