ಪೊಲೀಸರೆ ನನ್ನ ಬಳಿ ಬರಲಿ; ತನ್ನ ಉದ್ಯೋಗಿ ಪರ ಟ್ವಿಟರ್ ಇಂಡಿಯಾ ಕೋರ್ಟ್ ನಲ್ಲಿ ಹೀಗೆ ಹೇಳಿದ್ಯಾಕೆ?

ಮನೀಶ್​ ಮಹೇಶ್ವರಿ

ಮನೀಶ್​ ಮಹೇಶ್ವರಿ

  • Share this:




    ಬೆಂಗಳೂರು:  ಗಾಜಿಯಾಬಾದ್‌ ಹಲ್ಲೆ ವೀಡಿಯೊ ಟ್ವೀಟ್‌ ಆಗಲು ಕಾರಣವಾದ ಘಟನೆಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ನಡೆಸುತ್ತಿರುವ ತನಿಖೆಗೆ ಅಡ್ಡಿಯುಂಟು ಮಾಡಲು ತಮ್ಮ ಕಕ್ಷೀದಾರರು ಯಾವುದೇ ಕಾರಣಕ್ಕೂ ಇಚ್ಚಿಸುವುದಿಲ್ಲ ಎಂದು ಟ್ವಿಟರ್‌ ಇಂಡಿಯಾ ಉದ್ಯೋಗಿ ಪರ ಹಿರಿಯ ನ್ಯಾಯವಾದಿ ಸಿ ವಿ ನಾಗೇಶ್‌ ವಾದ ಮಂಡಿಸಿದ್ದಾರೆ.








    ತಮ್ಮ ವಾದದ ನಡುವೆ ಗಾದೆ ಮಾತು ಉಲ್ಲೇಖಿಸಿದ ಸಿ.ವಿ.ನಾಗೇಶ್​ ಅವರು “ಮೊಹಮ್ಮದ್‌ ಬೆಟ್ಟದ ಬಳಿಗೆ ತೆರಳಲು ಸಾಧ್ಯವಾಗದಿದ್ದರೆ ಬೆಟ್ಟವೇ ಮೊಹಮ್ಮದನ ಬಳಿಗೆ ಬರಬೇಕು ಎಂಬ ನಾಣ್ನುಡಿಯಂತೆ ಉತ್ತರಪ್ರದೇಶ ಪೊಲೀಸರೇ ಮನೀಶ್‌ ಬಳಿಗೆ ಬರಲಿ. ತನಿಖೆಗೆ ಅಡ್ಡಿ ಉಂಟು ಮಾಡಲು ನನಗೆ ಯಾವುದೇ ಆಸಕ್ತಿ ಇಲ್ಲ” ಎಂದು ಅವರು ಮನೀಶ್‌ ಪರವಾಗಿ ತಿಳಿಸಿದರು.

    ಗಾಜಿಯಾಬಾದ್‌ ದಾಳಿ ವಿಡಿಯೋಗೆ ಸಂಬಂಧಿಸಿದಂತೆ ಉತ್ತರಪ್ರದೇಶ ಪೊಲೀಸರು ಸಿಆರ್‌ಪಿಸಿ ಸೆಕ್ಷನ್‌ 41 ಎ ಅಡಿ ನೀಡಿದ್ದ ನೋಟಿಸ್‌ ಪ್ರಶ್ನಿಸಿ ಮನೀಶ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ರಾಜ್ಯದಲ್ಲಿ ವ್ಯಾಜ್ಯ ಕಾರಣ (Cause of Action) ಇರುವುದರಿಂದ ಪ್ರಕರಣವನ್ನು ಆಲಿಸುವ ಅಧಿಕಾರ ಕರ್ನಾಟಕ ಹೈಕೋರ್ಟ್‌ಗೆ ಇದೆ ಎಂದು ನಾಗೇಶ್‌ ಈ ವೇಳೆ ವಾದಿಸಿದರು.

    "ನಾನು (ಮನೀಶ್‌) ಬೆಂಗಳೂರಿನ ನಿವಾಸಿಯಾಗಿದ್ದೇನೆ, ನನ್ನ ಕಚೇರಿ ಬೆಂಗಳೂರಿನಲ್ಲಿ ಇದೆ. ಬೆಂಗಳೂರು ಮೂಲದ ನನ್ನ ಅಧಿಕೃತ ಇಮೇಲ್ ಐಡಿಗೆ ಪೊಲೀಸ್ ನೋಟಿಸ್ ನೀಡಲಾಗಿದೆ. ಈ ರಾಜ್ಯದಲ್ಲಿ ವ್ಯಾಜ್ಯ ಕಾರಣದ ಒಂದು ಪಾಲು ಸೃಷ್ಟಿಯಾಗಿದೆ" ಎಂದು ಅವರು ತಿಳಿಸಿದರು.

    ಸಿಆರ್‌ಪಿಸಿಯ ಸೆಕ್ಷನ್ 160ರ ಅಡಿಯಲ್ಲಿ [ಸಾಕ್ಷಿಗಳ ಹಾಜರಾತಿಗೆ ಸೂಚಿಸುವ ಪೊಲೀಸ್ ಅಧಿಕಾರಿಯ ಅಧಿಕಾರ], ಪೊಲೀಸ್ ಠಾಣೆಯ ಪ್ರಾದೇಶಿಕ ಸ್ಥಳದ ವ್ಯಾಪ್ತಿಗೊಳಪಟ್ಟ ವ್ಯಕ್ತಿಗೆ ಈ ಕಾನೂನುಬಾಧ್ಯತೆಯು ಅನ್ವಯವಾಗುತ್ತದೆ. ಕಾನೂನಿನ ಅಡಿ ನೀಡಿರುವ ರಕ್ಷಣೆ ಇದಾಗಿದೆ. ಇಲ್ಲದಿದ್ದರೆ ಪೊಲೀಸರು ಜನರಿಗೆ ಕಿರುಕುಳ ನೀಡಬಹುದು ಎಂದು ಅವರು ಈ ವೇಳೆ ಹೇಳಿದರು.

    ಆಗ ನ್ಯಾಯಾಲಯ ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ನೋಟಿಸ್‌ ನೀಡಿದ ಬಳಿಕ ಸೆಕ್ಷನ್‌ 41ಎ ಪ್ರಕಾರ ನೋಟಿಸ್‌ ನೀಡಲು ಪೊಲೀಸರಿಗೆ ಅಡ್ಡಿಯುಂಟಾಗುತ್ತದೆಯೇ ಎಂದು ಪ್ರಶ್ನಿಸಿತು.

    ಇದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಉತ್ತರಿಸಿದ ನಾಗೇಶ್‌ “ಸಿಆರ್‌ಪಿಸಿ ಸೆಕ್ಷನ್‌ 160ರ ಅಡಿ ನೋಟಿಸ್‌ ನೀಡದೆ ಸೆಕ್ಷನ್‌ 41 ಎ ಅಡಿ ನೋಟಿಸ್‌ ನೀಡಿದ್ದರೆ ಆಗ ಸನ್ನಿವೇಶ ಭಿನ್ನವಾಗಿರುತ್ತದೆ” ಎಂದರು.















    “ಸೆಕ್ಷನ್‌ 41 ಎ ಅಡಿ ಯಾರಿಗೆ ನೋಟಿಸ್‌ ನೀಡಬೇಕು ಎಂಬ ವರ್ಗೀಕರಣಕ್ಕೆ ನಾನು (ಮನೀಶ್‌) ಒಳಪಡದೇ ಇದ್ದರೆ ಆಗ ನೋಟಿಸ್‌ ನೀಡಲು ಕಾನೂನು ಮಂಜೂರಾತಿ (sanction of law) ಇರುವುದಿಲ್ಲ... ಆಗ (ಸಂವಿಧಾನದ) 226 ಎ ಅಡಿ ಹೈಕೋರ್ಟ್‌ ನ್ಯಾಯವ್ಯಾಪ್ತಿಯನ್ನು ಆಹ್ವಾನಿಸಲು ನನಗೆ ಅರ್ಹತೆ ಇದೆ" ಎಂದರು. ಈ ವಿಚಾರವಾಗಿ ನ್ಯಾಯಲಯದಲ್ಲಿ ಇದೇ ಶುಕ್ರವಾರ (ಜುಲೈ 9) ಪ್ರಕರಣದ ವಿಚಾರಣೆ ಮುಂದುವರೆಯಲಿದೆ.

    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.  ಅನಗತ್ಯವಾಗಿ ಹೊರಗೆ ಹೋಗಬೇಡಿ, ಗುಂಪುಗೂಡುವುದನ್ನು ತಡೆಯಿರಿ.












    Published by:HR Ramesh
    First published: