HOME » NEWS » State » MANIPAL HOSPITAL REFUSES TO GRANT HOSPITAL BED TO EX CM HD KUMARASWAMY DBLTV MAK

HD Kumaraswamy: ಹೆಚ್​.ಡಿ. ಕುಮಾರಸ್ವಾಮಿಗೂ ಕೊರೋನಾ ಸೋಂಕು; ಮಾಜಿ ಸಿಎಂಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ...!

ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ.

news18-kannada
Updated:April 17, 2021, 2:36 PM IST
HD Kumaraswamy: ಹೆಚ್​.ಡಿ. ಕುಮಾರಸ್ವಾಮಿಗೂ ಕೊರೋನಾ ಸೋಂಕು; ಮಾಜಿ ಸಿಎಂಗೆ ಬೆಡ್ ಇಲ್ಲ ಎಂದ ಮಣಿಪಾಲ್ ಆಸ್ಪತ್ರೆ...!
ಹೆಚ್​.ಡಿ. ಕುಮಾರಸ್ವಾಮಿ.
  • Share this:
ಬೆಂಗಳೂರು: ಮಾಜಿ ಮುಖ್ಯಮಂತ್ರಿಯೊಬ್ಬರಿಗೆ ಆಸ್ಪತ್ರೆಯಲ್ಲಿ‌ ಬೆಡ್ ದೊರೆಯದ ದುಸ್ಥಿತಿ ರಾಜ್ಯದಲ್ಲಿ ಎದುರಾಗಿದೆ.  ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಕೊರೋನಾ ಸೋಂಕು ತಗಲಿದ್ದು, ಚಿಕಿತ್ಸೆ ಪಡೆಯಲು ಮಣಿಪಾಲ್ ಆಸ್ಪತ್ರೆ ಸೇರಬಯಸಿದ ಅವರಿಗೆ ಬೆಡ್ ಸಿಕ್ಕಿಲ್ಲ. ಕುಮಾರಸ್ವಾಮಿಯಂತಹ ಪ್ರಭಾವಿ ನಾಯಕರಿಗೇ ಈ ಸ್ಥಿತಿ ಬಂದಿರುವಾಗ ಸೋಂಕು ತಗಲಿರುವ ಸಾಮಾನ್ಯ ಜನ ಚಿಕಿತ್ಸೆಗಾಗಿ ಬೆಡ್ ಪಡೆಯಲು ಏನು ಮಾಡಬೇಕು? ಎಂಬ ಪ್ರಶ್ನೆ ಉದ್ಭವವಾಗಿದೆ. ಬಸವಕಲ್ಯಾಣ ಕ್ಷೇತ್ರದ ಉಪಚುನಾವಣೆಯ ಪ್ರಚಾರಕ್ಕೆ ಹೋಗಿದ್ದ ಕುಮಾರಸ್ವಾಮಿ ಅವರಿಗೆ ಶುಕ್ರವಾರ ಸಂಜೆಯೇ ಆಯಾಸ ಕಾಣಿಸಿಕೊಂಡಿತ್ತು. ಹೀಗಾಗಿಯೇ ಬೆಂಗಳೂರಿಗೆ ಮರಳಿದವರು ಮನೆಗೆ ಹೋಗದೆ ಖಾಸಗಿ ಹೋಟೆಲ್‌ನಲ್ಲಿ ರಾತ್ರಿ ಉಳಿದುಕೊಂಡಿದ್ದರು. ಇಂದು ಬೆಳಿಗ್ಗೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆಗೊಳಗಾದ ಅವರಿಗೆ ಕೋವಿಡ್ ಪಾಸಿಟಿವ್ ಇರುವುದು ಧೃಢಪಟ್ಟಿದೆ.

ಹೀಗಾಗಿ ವೈದ್ಯರ ಬಳಿ ಮಾತುಕತೆ ನಡೆಸಿ, ತಮ್ಮ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆದು ಚಿಕಿತ್ಸೆ ಪಡೆಯುವುದಾಗಿ ಅವರು ಹೇಳಿದ್ದಾರಾದರೂ ವೈದ್ಯರು ಅದನ್ನೊಪ್ಪಿಲ್ಲ. ಮಧುಮೇಹ ಖಾಯಿಲೆ ಹಾಗೂ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಕಾರಣ ಅವರಿಗೆ ಸೂಕ್ತ ಚಿಕಿತ್ಸೆ ಅಗತ್ಯ ಎಂದು ವೈದ್ಯರು ಸಲಹೆ ನೀಡಿದ್ದರು.

ವೈದ್ಯರು, ಈ ವಿಷಯದಲ್ಲಿ ರಿಸ್ಕ್ ಬೇಡ. ಹೀಗಾಗಿ ತಕ್ಷಣವೇ ಆಸ್ಪತ್ರೆಗೆ ದಾಖಲಾಗಲಾಗಿ ಎಂದು ಹೇಳಿದ್ದರು .ಹೀಗಾಗಿ ಮಣಿಪಾಲ್ ಆಸ್ಪತ್ರೆ ಸೇರಲು ನಿರ್ಧರಿಸಿದ ಅವರು ಸಂಬಂಧಿಸಿದವರನ್ನು ಸಂಪರ್ಕಿಸಿದರೆ, ಬೆಡ್ ಇಲ್ಲ ಎಂಬ ಉತ್ತರ ಸಿಕ್ಕಿದೆ.

ಈ ಮಧ್ಯೆ ವಿಷಯ ತಿಳಿದ ಕೂಡಲೇ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರು ಕುಮಾರಸ್ವಾಮಿ ಅವರಿಗೆ ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರಕಿಸಿಕೊಡಲು ಯತ್ನಿಸಿದ್ದಾರಾದರೂ ಅದು ಫಲ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಮತ್ತೊಂದು ಖಾಸಗಿ ಆಸ್ಪತ್ರೆಗೆ ಫೋನು ಮಾಡಿದ್ದರ ಫಲವಾಗಿ ಬೆಡ್ ಸಿಕ್ಕಿದೆ. ಅದರೆ ಬೆಡ್ ಸಿಕ್ಕರೂ ಅವರು ತಕ್ಷಣ ಅಡ್ಮಿಟ್ ಆಗಲು ಸಾಧ್ಯವಾಗಿಲ್ಲ.

ಕೋರ್ಟ್‌ಗೆ ಹಾಜರು: 

ಕೋವಿಡ್ ಸೋಂಕಿತರಾಗಿದ್ದರೂ, ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಲೇಬೇಕಾದ ಅನಿವಾರ್ಯತೆ ಕುಮಾರಸ್ವಾಮಿ ಮುಂದಿದೆ. ಹೀಗಾಗಿ ಕೋರ್ಟ್‌ಗೆ ವಿಡಿಯೋ ಕಾನ್ಫರೆನ್ಸ್ ಮುಗಿದ ಬಳಿಕ ಇನ್ನೊಂದು ಖಾಸಗಿ ಆಸ್ಪತ್ರೆಗೆ ದಾಖಲಾಗಲಿದ್ದಾರೆ. ಮಣಿಪಾಲ್ ಆಸ್ಪತ್ರೆಯಲ್ಲಿ ಕುಮಾರಸ್ವಾಮಿಯವರನ್ನು ದಾಖಲಿಸಿಕೊಳ್ಳಲು ಮಣಿಪಾಲ್ ಆಸ್ಪತ್ರೆ ನಿರಾಕರಿಸಿದ ಮಾಹಿತಿಯನ್ನು ವಿಧಾನಪರಿಷತ್ ಸದಸ್ಯ ಹೆಚ್. ಎಂ. ರಮೇಶಗೌಡ ಇದನ್ನು ಖಚಿತಪಡಿಸಿದ್ದಾರೆ. ಆದರೆ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾತ್ರ ಭಿನ್ನವಾದ ಹೇಳಿಕೆ ನೀಡಿದರು. ಮಣಿಪಾಲ್ ಆಸ್ಪತ್ರೆಯಲ್ಲಿ ಬೆಡ್ ದೊರೆತಿದೆ. ರಮೇಶ್ ಗೌಡ ಅವರಿಗೆ ಮಾಹಿತಿ ಕೊರತೆ ಇದೆ ಎಂದಿದ್ದಾರೆ.

ಕೊನೆಗೂ ಬೆಡ್ ನೀಡಲು ಒಪ್ಪಿದ ಮಣಿಪಾಲ್: ಮೊದಲು ನಿರಾಕರಿಸಿದ್ದ ಮಣಿಪಾಲ್ ಆಸ್ಪತ್ರೆ, ನಂತರ ಬೆಡ್ ನೀಡಲು ಒಪ್ಪಿಗೆ ನೀಡಿತು. 1156ನೇ ಕೊಠಡಿಯಲ್ಲಿ ಬೆಡ್ ವ್ಯವಸ್ಥೆ ಮಾಡಿತು. ಆದರೆ ಕುಮಾರಸ್ವಾಮಿ ಮಣಿಪಾಲ್‌ಗೆ ದಾಖಲಾಗಲು ಒಪ್ಪಲಿಲ್ಲ. ಬನ್ನೇರುಘಟ್ಟ ರಸ್ತೆಯ ಅಪೋಲೋ ಅಸ್ಪತ್ರೆಗೆ ದಾಖಲಾಗಲು ತೀರ್ಮಾನಿಸಿದರು. ಅಪೋಲೋ ಆಸ್ಪತ್ರೆಯಲ್ಲಿ ಈ ಹಿಂದೆ ಹೃದಯ ಶಸ್ತ್ರ ಚಿಕಿತ್ಸೆ ಒಳಗಾಗಿದ್ದ ಕಾರಣ,‌ಅದೇ ಆಸ್ಪತ್ರೆಯಲ್ಲಿ ದಾಖಲಾಗಿ, ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಭಾರತದಲ್ಲಿ ಕೊರೋನಾ ಪೀಡಿತರ ಸಂಖ್ಯೆ ದಿನಿದಿಂದ ದಿನಕ್ಕೆ ಏರುತ್ತಲೇ ಇದೆ. ಸರಾಸರಿಯಾಗಿ ಒಂದು ದಿನಕ್ಕೆ ದೇಶದಾದ್ಯಂತ 1.5 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುತ್ತಿವೆ. ಕೇಂದ್ರ ಸರ್ಕಾರ ಕೊರೋನಾ ಸೋಂಕಿಗೆ ಲಸಿಕೆ ನೀಡುತ್ತಿರುವ ಬೆನ್ನಿಗೆ ಮತ್ತೊಂದೆಡೆ ಸೋಂಕು ಪೀಡಿತರ ಸಂಖ್ಯೆ ಅಧಿಕವಾಗುತ್ತಿರುವುದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿದೆ. ಅಲ್ಲದೆ, ಮಹಾರಾಷ್ಟ್ರ, ಗುಜರಾತ್ ನಲ್ಲಿ ಪರಿಸ್ಥಿತಿ ಕೈಮೀರಿದ್ದು, ಕರ್ನಾಟಕ ಸರ್ಕಾರ ಈಗಾಗಲೆ ನೆರೆಯ ರಾಜ್ಯಗಳ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಿದೆ.

(ವರದಿ: ದಶರಥ್ ಸಾವೂರು)
Published by: MAshok Kumar
First published: April 17, 2021, 2:31 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories