ಕೋಲಾರ(ಫೆ.05): ಕೋಲಾರ ಜಿಲ್ಲೆಯಾದ್ಯಂತ ಈ ವರ್ಷ ಬಂಪರ್ ಮಾವು ಬೆಳೆ ನಿರೀಕ್ಷೆಯಲ್ಲಿ, ಮಾವು ಬೆಳೆಗಾರರು ಇದ್ದಾರೆ. ಆದರೆ ಒಂದು ತಿಂಗಳ ಹಿಂದೆ ಸುರಿದ ಅಕಾಲಿಕ ಮಳೆಯಿಂದ ಇದೀಗ ಮಾವು ಮರಗಳಿಗೆ ವಿವಿಧ ರೋಗಗಳು ಭಾದಿಸುವ ಆತಂಕ ಶುರುವಾಗಿದೆ. ಜಿಲ್ಲೆಯಾದ್ಯಂತ ಒಟ್ಟು 51 ಸಾವಿರಕ್ಕೂ ಹೆಚ್ಚು ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗಿದ್ದು, ಮಾವಿನ ಮರಗಳಲ್ಲಿ ಹೂಗಳು ಕಂಗೊಳಿಸುತ್ತಿವೆ. ಆದರೆ ಬೇಸಿಗೆ ಆರಂಭದಲ್ಲೇ ಕೋಲಾರದಲ್ಲಿ ತಾಪಮಾನ ಏರು-ಪೇರಾಗುವ ಹಿನ್ನಲೆ ಇಳುವರಿಗೂ ಹೊಡೆತ ಬೀಳುವ ಸಾಧ್ಯತೆಯಿದೆ. ಅದರ ಜೊತೆಗೆ ರೋಗಬಾಧೆ, ಕೀಟಬಾಧೆ ಇದೀಗ ರೈತನ ನಿದ್ದೆಗೆಡಿಸಿದೆ.
ಕೋಲಾರ ಜಿಲ್ಲೆಯಾದ್ಯಂತ ಮಾವು ಬೆಳೆಗೆ ರೋಗಬಾಧೆ ಎದುರಾಗುವ ಆತಂಕ ಸೃಷ್ಟಿಯಾಗಿದೆ. ಕೋಲಾರ ಶ್ರೀನಿವಾಸಪುರ, ಮುಳಬಾಗಿಲು ತಾಲೂಕಿನಲ್ಲಿ ಭರ್ಜರಿಯಾಗಿ ಮಾವಿನ ಗಿಡಗಳಲ್ಲಿ ಹೂಗಳು ಬಿಟ್ಟಿದ್ದು, ಕಾಯಿ ಬಿಡುವ ವೇಳೆಯಲ್ಲಿ ರೋಗಬಾಧೆ ಎದುರಾಗುವ ಆತಂಕ ಮನೆಮಾಡಿದೆ. ಕೋಲಾರ ತಾಲೂಕಿನ ತೊಟ್ಲಿ ಗ್ರಾಮದಲ್ಲಿ ರೈತ ರಮೇಶ್ ಎನ್ನುವರು ರೋಗಬಾಧೆಯಿಂದ ಗಿಡಗಳನ್ನ ಸಂರಕ್ಷಿಸಲು ಕೀಟನಾಶಕಗಳನ್ನ ಸಿಂಪಡನೆ ಮಾಡ್ತಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾದಿಗರ ವಿರಾಟ್ ಶಕ್ತಿ ಪ್ರದರ್ಶನ; ಎ.ಜೆ. ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ
ಈ ಬಾರಿ ಗಿಡಗಳಿಗೆ ಬೂದಿರೋಗ, ಮಚ್ಚೆರೋಗ, ತುರುಬು ರೋಗದ ಜೊತೆಗೆ ಕೀಟಗಳ ಕಾಟವು ರೈತನನ್ನ ಆವರಿಸುವ ಭೀತಿ ಎದುರಾಗಿದೆ. ಹೀಗಾಗಿ ಹೂ ಬಿಟ್ಟಿರುವ ಗಿಡಗಳನ್ನು ರಕ್ಷಿಸಿಕೊಳ್ಳಲು ಕೀಟನಾಶಕಗಳನ್ನು ಸಿಂಪಡನೆ ಮಾಡುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಮಾವು ಬೆಳೆಗಾರರು, ಸರ್ಕಾರ ಮುತುವರ್ಜಿ ವಹಿಸಿ ಕೂಡಲೇ ಕೀಟನಾಶಕಗಳನ್ನ ಸಬ್ಸಿಡಿ ದರದಲ್ಲಿ ನೀಡಬೇಕು. ರೋಗ ಬಾಧೆ ತಪ್ಪಿಸುವ ನಿಟ್ಟಿನಲ್ಲಿ ತೋಟಗಾರಿಕಾ ಇಲಾಖೆ ಅಗತ್ಯ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ.
ರೋಗ, ಕೀಟಬಾದೆಯಿಂದ ಮಾವು ಗಿಡಗಳನ್ನು ರಕ್ಷಿಸಿಕೊಳ್ಳಲು ಮುಂದಾಗಿರುವ ರೈತರು , ಔಷಧಿ ಅಂಗಡಿಗಳ ಕಡೆಗೆ ಮುಖ ಮಾಡಿದ್ದಾರೆ, ಕಳೆದ ವರ್ಷ ಕೊರೋನಾ ವೇಳೆಯಲ್ಲೂ ಮಾವು ಬೆಳೆಗೆ ಉತ್ತಮ ದರ ಇದ್ದುದರಿಂದ, ಕೈಗೆ ಬಂದಿದ್ದ ಅಲ್ಪ ಸ್ವಲ್ಪ ಬೆಳೆಯನ್ನ ಮಾರಾಟ ಮಾಡಿ ಕೆಲ ರೈತರು ಭರ್ಜರಿ ಲಾಭವನ್ನ ಗಳಿಸಿದ್ದರು. ಆದರೆ ಈ ಬಾರಿ ಶೇಕಡಾ 50 ರಷ್ಟು ಫಸಲು ಕೈಗೆ ಬರುವ ನಿರೀಕ್ಷೆಯಲ್ಲಿದ್ದ ರೈತರಿಗೆ ರೋಗ ಬಾದೆ ದೊಡ್ಡ ಸವಾಲಾಗಿದೆ.
ಮಾವು ಹೂ ಬಿಡುವ ಸಮಯದಲ್ಲಿ ಮಳೆಯಾಗಿರುವ ಕಾರಣ, ಹೂ ತೆನೆ ಕಪ್ಪಾಗುವ ರೋಗ, ಕೀಟಬಾಧೆ, ಬೂದಿರೋಗ ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಈ ನಿಟ್ಟಿನಲ್ಲಿ ಬೆಳೆ ರಕ್ಷಿಸಿಕೊಳ್ಳಲು ತೋಟಗಾರಿಕಾ ಇಲಾಖೆಯು ರೈತರಿಗೆ ಕೆಲ ಮಾಹಿತಿಯನ್ನ ಒದಗಿಸಿದೆ. ಹೆಕ್ಸಾಕೋನ್ ಜೋಲಾ 2 ಮಿಲಿ ಲೀಟರ್ ಅಥವಾ ಕಾರ್ಬನ್ ಡೈಜಿಮ್ 1.5 ಗ್ರಾಂ ಅನ್ನು ಪ್ರತಿ ಒಂದು ಲೀಟರ್ ನೀರಿಗೆ ಬೆರೆಸಿ ಸಿಂಪಡನೆ ಮಾಡುವಂತೆ ಅಧಿಕಾರಿಗಳು ರೈತರಿಗೆ ಮಾಹಿತಿ ನೀಡಿದ್ದಾರೆ.
ಕೀಟನಾಶಕಗಳನ್ನು ಸಿಂಪಡಿಸುವ ಜೊತೆಗೆ ರೈತರು ಸಾವಯವ ಗೊಬ್ಬರವನ್ನು ಬಳಸುವ ಮೂಲಕ, ಬೇಸಿಗೆಯಲ್ಲಿ ತೇವಾಂಶವನ್ನು ಕಾಪಾಡಿಕೊಂಡು ಗಿಡಗಳನ್ನು ರಕ್ಷಿಸಿಕೊಳ್ಳಬೇಕಿದೆ, ಅದರೆ ಕಳೆದ ವರ್ಷ ಮಾವು ಫಸಲು ನಿರೀಕ್ಷೆಯಂತೆ ಕೈ ಸೇರದ ಕಾರಣ ಕೋಲಾರದ ಮಾವು ಬೆಳೆಗಾರರಿಗೆ ನಿರಾಸೆ ಮೂಡಿಸಿತ್ತು. ಆದರೀಗ ಮರಗಳಲ್ಲಿನ ಹೂಗಳು ಪಿಂದೆಯಾಗುವ ಸಮಯದಲ್ಲಿ ರೋಗ ಬಾಧಿಸುವ ಆತಂಕ ಎದುರಾಗಿದ್ದು, ಮತ್ತೊಮ್ಮೆ ರೈತರಿಗೆ ಇಳುವರಿ ಕುಂಠಿತವಾಗುವ ಭೀತಿಯು ನಿಧಾನವಾಗಿ ಆವರಿಸುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ