ಮಂಗಳೂರು (ಮಾ. 10): ಮಂಗಳೂರಿನ ಸೂಸೈಡ್ ಬ್ರಿಡ್ಜ್ ಎಂದೇ ಕುಖ್ಯಾತಿ ಗಳಿಸಿದ್ದ ನೇತ್ರಾವತಿ ಸೇತುವೆಗೆ ಭದ್ರತೆಯನ್ನು ಹೆಚ್ಚಿಸಲಾಗಿದೆ. ಬಹು ಕೋಟಿ ಒಡೆಯ, ಕೆಫೆ ಕಾಫಿ ಡೇ ಮಾಲೀಕ ಸಿದ್ದಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡಿದ್ದ ಈ ನೇತ್ರಾವತಿ ನದಿಯ ಸೇತುವೆಗೆ ಈಗ ಸುತ್ತಲೂ ಹದ್ದಿನ ಕಣ್ಣಿಡಲಾಗಿದೆ. ಟೂ ವೇ ಯ ನಾಲ್ಕೂ ಕಡೆಯೂ ಯಾರೂ ಸಹ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳದಂತೆ ತಡೆ ಬೇಲಿ ಹಾಕಿರುವ ಜೊತೆಗೆ, ಇದೀಗ ಸಿ.ಸಿ ಕ್ಯಾಮೆರಾ ಅಳವಡಿಕೆಯೂ ಆಗಿದೆ.
ಬಹು ಕೋಟಿ ಉದ್ಯಮಿ, ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ದಾರ್ಥ್ ಆತ್ಮಹತ್ಯೆ ಮಾಡಿಕೊಂಡಿದ್ದ ಮಂಗಳೂರು ಹೊರವಲಯದ ತೊಕ್ಕೊಟ್ಟು ಸಮೀಪದ ನೇತ್ರಾವತಿ ಸೇತುವೆ ಸುತ್ತಾ ಬಿಗಿ ರಕ್ಷಣಾ ಕ್ರಮ ಕೈಗೊಳ್ಳಲಾಗಿದೆ. ಸೂಸೈಡ್ ಬ್ರಿಡ್ಜ್ ಎಂಬ ಕುಖ್ಯಾತಿಯನ್ನು ಹೋಗಲಾಡಿಸಲು ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಮೂಲಕ ಹಲವು ಕ್ರಮ ಕೈಗೊಂಡಿದ್ದಾರೆ. ಸೇತುವೆ ಸುಮಾರು 800 ಮೀ. ಉದ್ದವಿದ್ದು, ಸೇತುವೆಯ ನಾಲ್ಕೂ ಬದಿಯೂ ರಕ್ಷಣಾ ಬೇಲಿ ಅಳವಡಿಸಲಾಗಿದೆ. ಇದರ ಜೊತೆ ಇದೀಗ 5 ಲಕ್ಷ ವೆಚ್ಚದಲ್ಲಿ ಸಿ.ಸಿ ಕ್ಯಾಮೆರಾವನ್ನು ಅಳವಡಿಕೆ ಮಾಡಲಾಗಿದೆ.
ಸಿದ್ದಾರ್ಥ್ ಹೆಗ್ಡೆ 2019ರ ಜುಲೈ 29ರಂದು ಈ ಸೇತುವೆ ಮೇಲಿಂದ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಉದ್ಯಮದ ವಿಚಾರದ ನಷ್ಟದಿಂದ ಮನ ನೊಂದು ಪ್ರಾಣ ಕಳೆದುಕೊಂಡಿದ್ದರು. ಸಿದ್ದಾರ್ಥ್ ಹೆಗ್ಡೆಯ ಕಾರು ನೇತ್ರಾವತಿ ಸೇತುವೆ ಮೇಲೆ ಪತ್ತೆಯಾಗುತ್ತಲೇ, ಸಿದ್ದಾರ್ಥ್ ನದಿಗೆ ಹಾರಿರಬಹುದು ಎಂಬ ಸಂಶಯ ಜನರಿಗೆ ಬರಲಾರಂಭಿಸಿತು. ಇನ್ನೂ ಕೆಲವರು ಬೇರೆ ಕಡೆ ಹೋಗಿರಬಹುದು ಎಂದು ಮಾತಾಡಿಕೊಂಡಿದ್ದರು.
ಇದನ್ನೂ ಓದಿ: Cafe Coffee Day: ಕೆಫೆ ಕಾಫಿ ಡೇ ನೂತನ ಸಿಇಓ ಆಗಿ ವಿ.ಜಿ. ಸಿದ್ಧಾರ್ಥ್ ಪತ್ನಿ ಮಾಳವಿಕಾ ಹೆಗ್ಡೆ ನೇಮಕ
ಉದ್ಯಮಿ ಸಿದ್ಧಾರ್ಥ್ ಹೆಗ್ಡೆ ಅವರ ಈ ನಿಗೂಢ ನಾಪತ್ತೆ ಪ್ರಕರಣವನ್ನು ಬಯಲಿಗೆಳೆಯಲು ಸರ್ಕಾರ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನೇತ್ರಾವತಿ ನದಿಯಲ್ಲಿ ಹುಡುಕಾಟ ಮಾಡಲಾರಂಭಿಸಿತು. ತಟ ರಕ್ಷಣಾ ಪಡೆಯ ದೋಣಿಗಳು, ಮೀನುಗಾರರ ದೋಣಿಗಳು ಜಂಟಿಯಾಗಿ 48 ಗಂಟೆಗಳ ಕಾಲ ಶೋಧ ಕಾರ್ಯ ಮಾಡಿದ್ದರು. 48 ಗಂಟೆಗಳ ಅವಿರತ ಶೋಧದಿಂದ ಸಿದ್ದಾರ್ಥ್ ಮೃತದೇಹ ಕೊನೆಗೂ ಬೊಕ್ಕಪಟ್ಟಣದ ಕಡಲ ಕಿನಾರೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣ ದೇಶದಲ್ಲಿ ಸಂಚಲನ ಮೂಡಿಸುತ್ತಲೇ ಸೇತುವೆ ಬಳಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಾಗಿತ್ತು.
ಆ ಬಳಿಕದಿಂದ ಈವರೆಗೆ 20 ಜನ ಹಾರಿ ಆತ್ಮಹತ್ಯೆಗೆ ಪ್ರಯತ್ನ ಮಾಡಿದ್ದು, ನಾಲ್ವರನ್ನು ರಕ್ಷಿಸಲಾಗಿದ್ದು, 16 ಜನ ಪ್ರಾಣ ಬಿಟ್ಟಿದ್ದಾರೆ. ಹೀಗಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ತಡೆಗೋಡೆಯ ಮೇಲೆ ರಕ್ಷಣಾ ಬೇಲಿಯು 5 ಅಡಿ ಎತ್ತರವಿದ್ದು, ಅದರ ಮೇಲ್ಗಡೆ 1 ಅಡಿಯಷ್ಟು ಮುಳ್ಳು ತಂತಿಯೂ ಇದೆ.ಈ ಬೇಲಿಗಾಗಿಯೇ 55 ಲಕ್ಷ ರೂ ಖರ್ಚು ಮಾಡಲಾಗಿದೆ. ಇದೀಗ ಅತ್ಯಾದುನಿಕ ತಂತ್ರಜ್ಞಾನದ ಐದೂವರೆ ಲಕ್ಷ ರೂ ವೆಚ್ಚದ ನಾಲ್ಕೂ ಸಿ.ಸಿ ಕ್ಯಾಮಾರ ಅಳವಡಿಸಲಾಗಿದೆ. ಇದರಲ್ಲಿ 500 ಮೀ ದೂರದವರೆಗೆ ಸ್ಪಷ್ಟ ವಿಡಿಯೋ ಲಭ್ಯವಾಗುತ್ತೆ. ಇದು ವೈರ್ಲೆಸ್ ಆಗಿದ್ದು ಇದರ ನೇರ ದೃಶ್ಯ ಕಂಕನಾಡಿ ನಗರ ಪೊಲೀಸ್ ಠಾಣೆಗೆ ಲಭ್ಯವಾಗುತ್ತದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ