ಚೂರಿ ಇರಿತಕ್ಕೆ ಒಳಗಾಗಿ ಕೊಲೆಯಾದ ಜಲೀಲ್ ಪ್ರಕರಣ (Suratkal Murder) ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದೆ. ಸ್ಥಳೀಯ ನಿವಾಸಿಗಳು ಜಲೀಲ್ ಮೃತದೇಹ ಇರಿಸಿ ಪ್ರತಿಭಟನೆ (Protest) ನಡೆಸಿ ಪರಿಹಾರಕ್ಕಾಗಿ ಆಗ್ರಹಿಸಿದರು. ಸ್ಥಳಕ್ಕೆ ಜಿಲ್ಲಾಧಿಕಾರಿ ಆಗಮಿಸುವಂತೆ ಆಗ್ರಹಿಸಲಾಯ್ತು. ಸ್ಥಳಕ್ಕೆ ಬಂದ ಮಂಗಳೂರು ಕಮಿಷನರ್ ಶಶಿಕುಮಾರ್ಗೆ (Commissioner Shashikumar) ಸ್ಥಳೀಯರು ಮುತ್ತಿಗೆ ಹಾಕಿದರು. ಕೊನೆ ಸ್ಥಳೀಯರನ್ನ ಕಮಿಷನರ್ ಶಶಿಕುಮಾರ್ ಮನವೊಲಿಸಿದರು. ಸದ್ಯ ಸುರತ್ಕಲ್ನಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿದೆ. ಇನ್ನೊಂದೆಡೆ ಪ್ರಕರಣಕ್ಕೆ ರಾಜಕೀಯ ಲಿಂಕ್ (Politucal Link) ಕೂಡಾ ಸಿಗ್ತಿದೆ.
ಜಲೀಲ್ ಸಹೋದರ ಮಹಮ್ಮದ್ ಮಾತನಾಡಿ, ಮೂಲತ ಕೂಳೂರು ನಿವಾಸಿಯಾಗಿರುವ ಜಲೀಲ್, ಮದುವೆಯಾದ ಬಳಿಕ ಕಾಟಿಪಳ್ಳದಲ್ಲಿ ಮನೆ ಮಾಡಿಕೊಂಡು ಪತ್ನಿಗೆ ಸೇರಿದ ಜಾಗದಲ್ಲಿ ಅಂಗಡಿ ನಡೆಸುತ್ತಿದ್ದರು. ನಿನ್ನೆ ಇಬ್ಬರು ಬೈಕ್ನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ ನಡೆದಿದೆ. ಯಾರು ಕೊಲೆ ಮಾಡಿದ್ದಾರೆ ಎನ್ನುವುದು ತಿಳಿದಿಲ್ಲ. ಆದರೆ ಆತನಿಗೆ ಯಾರ ಜೊತೆಗೂ ದ್ವೇಷ ಇರಲಿಲ್ಲ ಎಂದು ಹೇಳಿದರು.
ಎಲ್ಲಾ ಧರ್ಮದವರೊಂದಿಗೆ ಅನ್ಯೋನ್ಯವಾಗಿದ್ದ ಜಲೀಲ್, ತಾನಾಯಿತು ತನ್ನ ಕೆಲಸವಾಯಿತು ಎನ್ನುವ ಹಾಗಿದ್ದರು. ಇಂಥ ಅಮಾಯಕನನ್ನೇ ಗುರಿ ಮಾಡಿ ರಾಜಕೀಯ ಲಾಭ ಪಡೆಯಲು ಯತ್ನಿಸಲಾಗುತ್ತಿದೆ. ಪೋಲೀಸರು ತಕ್ಷಣ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಬೇಕು. ಸರಕಾರ ಜಲೀಲ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಮಹಮ್ಮದ್ ಆಗ್ರಹಿಸಿದ್ದಾರೆ.
ಮೊಯಿದ್ದೀನ್ ಬಾವ ಆರೋಪ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯಿಂದ ಕೊಲೆ ರಾಜಕೀಯ ನಡೆಯುತ್ತಿದೆ. ಕೊಲೆಯನ್ನು ತಮ್ಮ ಮತಗಳಿಕೆಗಾಗಿ ಬಿಜೆಪಿ ಮಾಡುತ್ತಿದೆ ಎಂದು ಮಾಜಿ ಶಾಸಕ ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವ ಆರೋಪಿಸಿದರು.
ಸುರತ್ಕಲ್ ಪರಿಸರ ಅತ್ಯಂತ ಸೂಕ್ಷ್ಮ ಪ್ರದೇಶವಾಗಿ ಗುರುತಿಸಿಕೊಂಡಿದೆ. ಪೊಲೀಸರು ಇಲ್ಲಿ ಅತ್ಯಂತ ಸನ್ನದ್ಧ ಸ್ಥಿತಿಯಲ್ಲಿ ಕಾರ್ಯಾಚರಿಸಬೇಕು. ಚುನಾವಣೆ ಸಮೀಪಿಸುತ್ತಿರುವಂತೆ ಇಲ್ಲಿ ಮತ್ತಷ್ಟು ಕೊಲೆ ನಡೆಯುವ ಸಾಧ್ಯತೆಯಿದೆ ಎಂದು ಸುರತ್ಕಲ್ ಮಾಜಿ ಶಾಸಕ ಮೊಯಿದ್ದೀನ್ ಬಾವ ಎಂದು ಸ್ಪೋಟಕ ಹೇಳಿಕೆ ನೀಡಿದರು.
ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ದಾಳಿ
ಜಲೀಲ್ ಹತ್ಯೆ ರಾಜಕೀಯ ಲಾಭಕ್ಕಾಗಿ ಮಾಡಿದ ಕೊಲೆ ಎಂದು ಕರ್ನಾಟಕ ಮುಸ್ಲಿಂ ಜಮಾತ್ ರಾಜ್ಯ ಸಮಿತಿ ಸದಸ್ಯ ಅಶ್ರಫ್ ಆರೋಪಿಸಿದರು. ಕೊಲೆ ಮಾಡಿಸಿ ಮುಂದಿನ ಚುನಾವಣೆಯಲ್ಲಿ ಲಾಭ ಪಡೆಯಬಹುದು ಎನ್ನುವ ಉದ್ಧೇಶ ಕೆಲವರಿಗಿದೆ. ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಪರಸ್ಪರ ಕೋಮುಭಾವನೆ ಕೆರಳಿಸುವ ಪ್ರಯತ್ನ ನಡೆಯುತ್ತಿದೆ ಅಶ್ರಫ್ ಆರೋಪಿಸಿದರು.
ಆದರೆ ಇನ್ನು ಕೊಲೆ ಮಾಡಿ ರಾಜಕೀಯ ಲಾಭ ಪಡೆಯಲು ಮುಸ್ಲಿಂ ಸಮುದಾಯ ಬಿಡಲ್ಲ. ಕಾನೂನು ಮೂಲಕವೇ ನಾವು ಇದಕ್ಕೆ ಉತ್ತರ ನೀಡಲಿದ್ದೇವೆ. ಸರಕಾರ ಮುಸ್ಲಿಮರ ಮೇಲಿನ ದೌರ್ಜನ್ಯ ನಿಲ್ಲಿಸಲು ಮುಂದಾಗಬೇಕು ಎಂದು ಅಶ್ರಫ್ ಒತ್ತಾಯಿಸಿದರು.
ಆರೋಪಿಗಳ ಬಂಧನಕ್ಕೆ 24 ಗಂಟೆಯ ಗಡುವು
ಕಾಟಿಪಳ್ಳ ಜಲೀಲ್ ಹತ್ಯೆ ಪ್ರಕರಣದ ಆರೋಪಿಗಳ ಪತ್ತೆಗೆ ಎಂಟು ಅಧಿಕಾರಿಗಳಿರುವ ತಂಡ ರಚಿಸಲಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಮಂಗಳೂರು ಪೋಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನು ಓದಿ: Suratkal: ಚೂರಿಯಿಂದ ಇರಿದು ವ್ಯಕ್ತಿ ಕೊಲೆ; ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಸೆಕ್ಷನ್ 144
ಹತ್ಯೆ ನಡೆಸಿದ ನೈಜ ಆರೋಪಿಗಳನ್ನು ಬಂಧಿಸಲಾಗುವುದು. ಯಾವುದೇ ಊಹಾಪೋಹಗಳಿಗೆ ಸಾರ್ವಜನಿಕರು ಕಿವಿಕೊಡಬಾರದು. ಹತ್ಯೆಗೆ ಸಂಬಂಧಿಸಿದಂತೆ ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸಲಾಗುವುದು. ಜಲೀಲ್ ಮನೆ ಬಳಿ ಸಾರ್ವಜನಿಕರು ಮೃತದೇಹದ ಬಳಿ ಕೊಂಚ ಹೊತ್ತು ಪ್ರತಿಭಟನೆ ನಡೆಸಿದ್ದಾರೆ. ಆರೋಪಿಗಳನ್ನು 24 ಗಂಟೆಯೊಳಗೆ ಬಂಧಿಸುವ ಗಡುವು ನೀಡಿದ್ದಾರೆ.
ಸಾರ್ವಜನಿಕರ ಮನವೊಲಿಸಿ ಜಲೀಲ್ ಮೃತದೇಹವನ್ನು ದಫನಕ್ಕಾಗಿ ಮಸೀದಿಗೆ ಕಳುಹಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ನಾಲ್ಕು ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೆಕ್ಷನ್ 144 ಜಾರಿಯಲ್ಲಿದೆ. ಪೂರ್ವನಿಯೋಜಿತ ಕಾರ್ಯಕ್ರಮಗಳಿಗೆ ಇದರಿಂದ ವಿನಾಯತಿ ನೀಡಲಾಗಿದೆ. ಎರಡು ದಿನಗಳ ಕಾಲ ಸುರತ್ಕಲ್ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ನಿಷೇಧಿಸಲಾಗಿದೆ ಎಂದು ಶಶಿಕುಮಾರ್ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ