ಮಂಗಳೂರು ಗೋಲಿಬಾರ್​ಗೆ ಬಲಿಯಾದವರ ವಿರುದ್ಧವೇ ಎಫ್​ಐಆರ್; ವಿವಾದಕ್ಕೆ ಕಾರಣವಾಯ್ತು ಪೊಲೀಸರ ನಡೆ

Mangalore Riots: ಪ್ರತಿಭಟನೆ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್​ಐಆರ್ ದಾಖಲಿಸಿರುವ ಪೊಲೀಸರ ನಡೆ ವಿವಾದಕ್ಕೆ ಕಾರಣವಾಗಿದೆ.

ಮಂಗಳೂರಲ್ಲಿ ನಡೆದ ಗೋಲಿಬಾರ್ ದೃಶ್ಯ

ಮಂಗಳೂರಲ್ಲಿ ನಡೆದ ಗೋಲಿಬಾರ್ ದೃಶ್ಯ

  • Share this:
ಮಂಗಳೂರು (ಡಿ. 23): ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆಯುತ್ತಿದ್ದಂತೆ ರಾಜ್ಯದಲ್ಲಿ ಸೆಕ್ಷನ್ 144 ಜಾರಿಗೊಳಿಸಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿದ್ದಂತೆ ಕರ್ಫ್ಯೂ ಜಾರಿ ಮಾಡಲಾಗಿತ್ತು. ಈ ವೇಳೆ ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಇಬ್ಬರು ಬಲಿಯಾಗಿದ್ದರು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಮಂಗಳೂರಿನಲ್ಲಿ ಪೊಲೀಸರ ಗುಂಡೇಟಿಗೆ ಬಲಿಯಾದ ಜಲೀಲ್ ಮತ್ತು ನೌಶಾದ್ ವಿರುದ್ಧವೇ ಎಫ್​ಐಆರ್ ದಾಖಲಿಸುವ ಮೂಲಕ ಪೊಲೀಸರು ವಿವಾದಕ್ಕೆ ಕಾರಣರಾಗಿದ್ದಾರೆ. ಡಿ. 19ರಂದು ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ತಮ್ಮ ಆತ್ಮರಕ್ಷಣೆಗಾಗಿ ಪೊಲೀಸರು ಗುಂಡು ಹಾರಿಸಿದ್ದಾರೆ. ಮಂಗಳೂರಿನ ಪೊಲೀಸ್ ಠಾಣೆಗೆ ಬೆಂಕಿ ಹಚ್ಚಿ, ಪೊಲೀಸರನ್ನು ಕೊಲ್ಲು ಸಂಚು ರೂಪಿಸಿದ್ದ ಗುಂಪಿನ ಮೇಲೆ ಗುಂಡು ಹಾರಿಸಿದಾಗ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಿಸಲಾಗಿದೆ.

ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟವರ ಮನೆಗೆ ಕೇರಳ ಸರ್ಕಾರದ ನಿಯೋಗ ಭೇಟಿ, ತಲಾ 15 ಲಕ್ಷ ಪರಿಹಾರ

ಈ ಘಟನೆಗೆ ಸಂಬಂಧಿಸಿದಂತೆ ಮೃತ ಅಬ್ದುಲ್ ಜಲೀಲ್ ಮತ್ತು ನೌಶಾದ್ ಸೇರಿದಂತೆ 29 ಜನರ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸ್ ಗುಂಡಿನ ದಾಳಿಗೆ ಬಲಿಯಾದ ಜಲೀಲ್​ನನ್ನು 3ನೇ ಆರೋಪಿಯೆಂದು ಹಾಗೂ ನೌಶಾದ್​ನನ್ನು 8ನೇ ಆರೋಪಿಯೆಂದು ನಮೂದಿಸಲಾಗಿದೆ. ಮೃತ ವ್ಯಕ್ತಿಗಳ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು, ಅವರ ಸಾವಿಗೆ ನ್ಯಾಯ ದೊರಕಿಸಬೇಕೆಂಬ ಆಗ್ರಹ ಹೆಚ್ಚಾಗುತ್ತಿರುವ ಬೆನ್ನಲ್ಲೇ ಮೃತರ ವಿರುದ್ಧವೇ ಎಫ್​ಐಆರ್ ದಾಖಲಿಸಿರುವುದು ಇನ್ನಷ್ಟು ಆಕ್ರೋಶಕ್ಕೆ ಕಾರಣವಾಗಿದೆ.

ಮಂಗಳೂರು ಗೋಲಿಬಾರ್​ನಲ್ಲಿ ಮೃತಪಟ್ಟ ಇಬ್ಬರ ಕುಟುಂಬಸ್ಥರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಇಂದು ಮಂಗಳೂರಿಗೆ ಭೇಟಿ ನೀಡಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಎರಡೂ ಕುಟುಂಬಗಳಿಗೆ ತಲಾ 7.5 ಲಕ್ಷ ರೂ. ಚೆಕ್ ವಿತರಿಸಿದ್ದಾರೆ.
Published by:Sushma Chakre
First published: