ಮಂಗಳೂರು: ನಗರದ ನರ್ಸಿಂಗ್ ಕಾಲೇಜಿನ (Nursing College) ಹಾಸ್ಟೆಲ್ ವಿದ್ಯಾರ್ಥಿಗಳಲ್ಲಿ (Hostel Students) ಏಕಾಏಕಿ ಅನಾರೋಗ್ಯ ಕಾಣಿಸಿಕೊಂಡಿದೆ. ಸುಮಾರು 137 ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಮಂಗಳೂರು ನಗರದ ವಿವಿಧ ಆಸ್ಪತ್ರೆಗೆ (Hospital) ದಾಖಲಿಸಲಾಗಿದೆ. ವಿಷಾಹಾರ ಸೇವನೆಯೇ ವಿದ್ಯಾರ್ಥಿಗಳು ಅಸ್ವಸ್ಥರಾಗಲು ಕಾರಣ ಎಂದು ಅನುಮಾನಿಸಲಾಗಿದೆ. ಮಂಗಳೂರು ಹೊರವಲಯದ ಶಕ್ತಿ ನಗರದಲ್ಲಿರುವ ಹಾಸ್ಟೆಲ್‌ನಲ್ಲಿ ಈ ಘಟನೆ ನಡೆದಿದೆ. ಭಾನುವಾರ ರಾತ್ರಿ ವಿದ್ಯಾರ್ಥಿಗಳು ವಿಷಾಹಾರ ಸೇವನೆ (Food Poisoning) ಮಾಡಿರುವ ಅನುಮಾನಗಳಿದ್ದು, ಬೆಳಗ್ಗೆ ಬಹುತೇಕರಲ್ಲಿ ವಾಂತಿ, ತಲೆ ಸುತ್ತುವಿಕೆ ಕಂಡು ಬಂದಿದೆ. ಕೂಡಲೇ ವಿದ್ಯಾರ್ಥಿಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಮವಾರ ಮಧ್ಯಾಹ್ನದಿಂದ ಮತ್ತೆ ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಕೆಲ ವಿದ್ಯಾರ್ಥಿಗಳಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳು ಕಂಡು ಬಂದ ಹಿನ್ನೆಲೆ ಅವರನ್ನು ತೀವ್ರ ನಿಗಾ ಘಟಕಕ್ಕೆ ಶಿಫ್ಟ್ ಮಾಡಲಾಗಿದೆ.
ಆಸ್ಪತ್ರೆ ಮತ್ತು ಹಾಸ್ಟೆಲ್ಗೆ ಪೊಲೀಸರ ಭೇಟಿ
ಮಂಗಳೂರು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್, ಉಪವಿಭಾಗ ಎಸಿಪಿ ರಾಜೇಂದ್ರ ಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರಿಂದ ಮಾಹಿತಿ ಪಡೆದುಕೊಂಡಿದ್ದಾರೆ. ಪೊಲೀಸರ ಒಂದು ತಂಡ ವಿದ್ಯಾರ್ಥಿಗಳು ವಾಸವಾಗಿದ್ದ ಹಾಸ್ಟೆಲ್ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದೆ.
ಯಾವ ಎಷ್ಟು ಜನ ದಾಖಲು?
ನಗರದ ಎಜೆ ಆಸ್ಪತ್ರೆಯಲ್ಲಿ 52, ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ 42, ಸಿಟಿ ಆಸ್ಪತ್ರೆಯಲ್ಲಿ 8, ಯುನಿಟಿ ಆಸ್ಪತ್ರೆಯಲ್ಲಿ 14 ಮತ್ತು ಮಂಗಳ ಆಸ್ಪತ್ರೆಯಲ್ಲಿ ಮೂವರು ವಿದ್ಯಾರ್ಥಿಗಳು ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಈ ಹಾಸ್ಟೆಲ್ನಲ್ಲಿದ್ದ ಬಹುತೇಕ ವಿದ್ಯಾರ್ಥಿಗಳು ಕೇರಳ ಮೂಲದವರಾಗಿದ್ದಾರೆ.
ಆಸ್ಪತ್ರೆ ಮುಂಭಾಗ ಜನಸ್ತೋಮ
ಇನ್ನು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಸ್ಥಳೀಯವಾಗಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿದ ಪರಿಣಾಮ ಆಸ್ಪತ್ರೆ ಮುಂಭಾಗ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಇತ್ತ ಪೋಷಕರು ಸಹ ಮಕ್ಕಳನ್ನು ಕಾಣಲು ಆಸ್ಪತ್ರೆಯತ್ತ ಆಗಮಿಸುತ್ತಿದ್ದಾರೆ.
ಘಟನೆ ಬಗ್ಗೆ ಎನ್ ಶಶಿಕುಮಾರ್ ಮಾಹಿತಿ
ಹಾಸ್ಟೆಲ್‌ನಲ್ಲಿ ಮುಂಜಾನೆ ಎರಡು ಗಂಟೆಯಿಂದ ವಿದ್ಯಾರ್ಥಿಗಳ ಆರೋಗ್ಯದಲ್ಲಿ ವ್ಯತ್ಯಾಸ ಕಂಡುಬಂದಿದೆ. ಹೀಗಾಗಿ ಇವರು ಕಾಲೇಜುಗಳಿಗೆ ಗೈರು ಹಾಜಾರಾಗಿದ್ದರು. ಫುಡ್ ಪಾಯಿಸನ್ ಆಗಿರುವ ವಿಚಾರ ತಿಳಿದು ಇತರ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಹೆತ್ತವರು ಆತಂಕಗೊಂಡಿದ್ದರು ಎಂದು ಎನ್.ಶಶಿಕುಮಾರ್ ಹೇಳಿದರು.
ಸಿಟಿ ಆಸ್ಪತ್ರೆ ಯ ಮುಂಭಾಗ 400 ಕ್ಕೂ ಅಧಿಕ ವಿದ್ಯಾರ್ಥಿಗಳು ಜಮಾವಣೆಗೊಂಡಿದ್ದರು. ಸದ್ಯ 137 ಮಂದಿ ವಿದ್ಯಾರ್ಥಿನಿಯರನ್ನು ನಗರದ 6 ಖಾಸಗಿ ಆಸ್ಪತ್ರೆ ಗಳಿಗೆ ದಾಖಲುಪಡಿಸಲಾಗಿದೆ. ಬೆಳಗ್ಗೆ ಘಟನೆಯಾದರೂ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿಲ್ಲ. ಆಹಾರ ತಿಂದು ಸ್ವಲ್ಪ ಮಟ್ಟಿನ ಆರೋಗ್ಯ ಸಮಸ್ಯೆಯಾಗಿದೆ. ಬೇರೆ ಯಾವುದೇ ಗಂಭೀರ ಪ್ರಮಾಣದ ಆರೋಗ್ಯ ಏರುಪೇರು ಆಗಿಲ್ಲ ಎಂದು ಶಶಿಕುಮಾರ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Crime News: ಮದುವೆ ಮಾಡುತ್ತಿಲ್ಲ, ಪಿತ್ರಾರ್ಜಿತ ಆಸ್ತಿ ಹಂಚುತ್ತಿಲ್ಲ ಎಂದು ಅಣ್ಣನನ್ನೇ ಕೊಲೆಗೈದಿದ್ದ ತಮ್ಮ ಅರೆಸ್ಟ್!
ವಿಮಾನ ಏರಲು ಬಂದು ಅರೆಸ್ಟ್ ಆದ ಮಹಿಳೆ
ಫೆಬ್ರವರಿ 4ರಂದು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Kempe Gowda International Airport, Bengaluru) ಈ ಘಟನೆ ನಡೆದಿದೆ. ಏರ್ಪೋರ್ಟ್ ಗೆ ಬಂದ ಮಹಿಳೆ ವಿಮಾನ ಹತ್ತಲು ವಿಳಂಬವಾಗುತ್ತಿದೆ ಎಂದು ಭದ್ರತಾ ಸಿಬ್ಬಂದಿಯೊಂದಿಗೆ (Security Staff) ಕಿರಿಕ್ ಮಾಡಿ ಹಲ್ಲೆ ಸಹ ನಡೆಸಿದ್ದಾಳೆ. ನಂತರ ಅಲ್ಲಿದ್ದ ಪ್ರಯಾಣಿಕರಿಗೆ (Passengers) ವಿಮಾನ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾಳೆ. ನಂತರ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ.
ಕೇರಳ ಮೂಲದ ಮಹಿಳೆ ಬೆಂಗಳೂರಿನಿಂದ ಕೋಲ್ಕತ್ತಾಗೆ ತೆರಳಲು ವಿಮಾನ ನಿಲ್ದಾಣದಕ್ಕೆ ಬಂದಿದ್ದಳು. ಕೋಲ್ಕತ್ತಾಗೆ ತೆರಳುವ ನಿಟ್ಟಿನಲ್ಲಿ ಮಹಿಳೆ ಇಂಡಿಗೋ ವಿಮಾನ 6E-445ನಲ್ಲಿ ಟಿಕೆಟ್ ಕಾಯ್ದಿರಿಸಿದ್ದರು. ಅಂತೆಯೇ ಬೋರ್ಡಿಂಗ್ ಗೇಟ್ ನಂಬರ್ 6ರಲ್ಲಿ ಕುಳಿತಿದ್ದಳು.
ಬೋರ್ಡಿಂಗ್ ಗೇಟ್-6ರಲ್ಲಿ ಕುಳಿತಿದ್ದ ಪ್ರಯಾಣಿಕರಿಗೆ ವಿಮಾನದಲ್ಲಿ ಬಾಂಬ್ ಇರಿಸಿ ಸ್ಫೋಟಿಸೋದಾಗಿ ಬೆದರಿಕೆ ಹಾಕಿದ್ದಾಳೆ. ಕೂಡಲೇ ಭದ್ರತಾ ಸಿಬ್ಬಂದಿ ಮಹಿಳೆಯನ್ನು ಪೊಲೀಸರ ವಶಕ್ಕೆ ನೀಡಿದ್ದಾರೆ. ಪೊಲೀಸರು ಮಹಿಳೆಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಮಹಿಳೆಯ ಗುರುತು ಪತ್ತೆಯಾಗಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ