ಮಂಗಳೂರು: ನಗರದ ಸಿಟಿ ನರ್ಸಿಂಗ್ ಕಾಲೇಜಿನ (Nursing College Students) ವಿದ್ಯಾರ್ಥಿನಿಯರ ಫುಡ್ ಪಾಯಿಸನ್ ಪ್ರಕರಣ (Food Poison Case) ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯ ಕಂಡುಬಂದ ಹಿನ್ನೆಲೆಯಲ್ಲಿ ದ.ಕ ಆರೋಗ್ಯ ಇಲಾಖೆ ಕಾಲೇಜು ಆಡಳಿತ ಮಂಡಳಿ ವಿರುದ್ಧ ಎಫ್‌ಐಆರ್ ದಾಖಲಿಸಿದೆ. ಆಸ್ಪತ್ರೆಗೆ ದಾಖಲಾಗಿದ್ದ 137 ಮಂದಿ ವಿದ್ಯಾರ್ಥಿನಿಯರು ಆಸ್ಪತ್ರೆಯಿಂದ (Discharge) ಬಿಡುಗಡೆಯಾಗಿದ್ದು, ಮನೆಯ ಕಡೆಗೆ ಹೆಜ್ಜೆ ಹಾಕಿದ್ದಾರೆ. ಮಂಗಳೂರು ನಗರದ ಸಿಟಿ ನರ್ಸಿಂಗ್ ಕಾಲೇಜು ಹಾಸ್ಟೆಲ್‌ನ 137 ಕ್ಕೂ ಅಧಿಕ ವಿದ್ಯಾರ್ಥಿನಿಯರು ಅಸ್ವಸ್ಥಗೊಂಡ ಘಟನೆಗೆ ಸಂಬಂಧಿಸಿದಂತೆ ಕಾಲೇಜು ಆಡಳಿತ ಮಂಡಳಿಯ ವಿರುದ್ಧ ಕದ್ರಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಗದೀಶ್ ಅವರು ನೀಡಿರುವ ದೂರಿನಂತೆ ಈ ಪ್ರಕರಣ ದಾಖಲು ಮಾಡಲಾಗಿದೆ. ಯಾವುದೋ ಸಂಶಯಾಸ್ಪದ ವಿಷಹಾರಿ ಆಹಾರವನ್ನು ಹಾಸ್ಟೆಲ್ ವಿದ್ಯಾರ್ಥಿನಿಯರಿಗೆ ನೀಡಲಾಗಿದೆ ಮತ್ತು ಆಹಾರ ತಯಾರಿಕೆ ಹಾಗೂ ಪೂರೈಕೆಯಲ್ಲಿ ಶುಚಿತ್ವ ಕಾಪಾಡದೆ ನಿರ್ಲಕ್ಷ್ಯ ವಹಿಸಲಾಗಿದೆ.
ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಕಾಲೇಜು ಆಡಳಿತ ಮಂಡಳಿ
ಆಸ್ವತ್ರೆಗೆ ದಾಖಲಿಸುವ ಸಂದರ್ಭ ಸೂಕ್ತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ವರದಿ ಮಾಡದೇ ಲೋಪ ಎಸಗಲಾಗಿದೆ ಎಂದು ಎಫ್‌ಐಆರ್‌ನಲ್ಲಿ ಉಲ್ಲೇಖಿಸಲಾಗಿದೆ.
ಆಹಾರ ಸುರಕ್ಷಿತಾಧಿಕಾರಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ, ಪ್ರಾಂಶುಪಾಲರು, ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿಗಳು ಜಂಟಿಯಾಗಿ ಹಾಸ್ಟೆಲ್ ನ ಆಹಾರ ತಯಾರಿಕಾ ಕೊಠಡಿಗೆ ಭೇಟಿ ನೀಡಿ ಕೂಲಂಕಷವಾಗಿ ಪರಿಶೀಲನೆ ನಡೆಸಿದೆ.
ಆಹಾರದ ಮಾದರಿ ಸಂಗ್ರಹ
ತಯಾರಿಸಿರುವ ಆಹಾರ ಪದಾರ್ಥಗಳು, ಕುಡಿಯುವ ನೀರು ಫ್ರಿಡ್ಜ್ ನಲ್ಲಿದ್ದ ಮಾಂಸ ಇನ್ನಿತರೆ ಆಹಾರ ವಸ್ತುಗಳನ್ನು ತಂಡ ಸಂಗ್ರಹಿಸಿ ಲ್ಯಾಬ್ಗೆ ಕಳುಹಿಸುವ ವ್ಯವಸ್ಥೆ ಮಾಡಿದೆ. ಅಲ್ಲದೆ ತಕ್ಷಣದಿಂದ ಅಡುಗೆ ಮನೆಯಲ್ಲಿ ಯಾವುದೇ ಆಹಾರ ಪದಾರ್ಥಗಳನ್ನು ತಯಾರಿಸದಂತೆ ನಿರ್ಬಂಧ ವಿಧಿಸಿದೆ.
ಪೋಷಕರ ಆಕ್ರೋಶ
ಅಲ್ಲದೆ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಪೋಷಕರು ಹಾಗೂ ಕಾಲೇಜು ಆಡಳಿತ ಮಂಡಳಿಯ ಸಭೆ ನಡೆದಿದೆ. ಈ ವೇಳೆ ಪೋಷಕರು ಹಾಸ್ಟೆಲ್ ನ ಅವ್ಯವಸ್ಥೆ, ಸರಿಯಾದ ಆಹಾರ ನೀಡದ ಬಗ್ಗೆ ಆಕ್ರೋಶಿತರಾಗಿದ್ದಾರೆ.
ವಿದ್ಯಾರ್ಥಿಗಳಿಗೆ ರಜೆ
ಕೆಲವರು ತಮ್ಮ ಮಕ್ಕಳು ಯಾವ ಆಸ್ಪತ್ರೆಯಲ್ಲಿ ಇದ್ದಾರೆಂದು ಇನ್ನೂ ತಿಳಿದು ಬಂದಿಲ್ಲ ಎಂಬ ಗೊಂದಲದ ಬಗ್ಗೆ ಅಳಲು ತೋಡಿಕೊಂಡಿದ್ದಾರೆ. ಬಳಿಕ ಎಸಿಪಿಯವರ ಸಮಕ್ಷಮದಲ್ಲಿ ಪೋಷಕರಿಗೆ ಸಮಾಧಾನ ತಿಳಿಸಿ ಎಲ್ಲಾ ವಿದ್ಯಾರ್ಥಿಗಳಿಗೆ ರಜೆ ನೀಡಲಾಗಿದೆ.
ಎಲ್ಲರ ಆರೋಗ್ಯ ಸ್ಥಿರ
ಸದ್ಯ ಆಸ್ಪತ್ರೆಗೆ ದಾಖಲಾಗಿದ್ದ 137 ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಎಲ್ಲರನ್ನೂ ಆಸ್ಪತ್ರೆಯಿಂದ ಬಿಡುಗಡೆಗೊಳಿಸಲಾಗಿದೆ. ಮುಂದೆ ಕಾಲೇಜು ಆರಂಭ ಮಾಡುವ ಮುನ್ನ ಪೋಷಕರ ಸಭೆ ನಡೆಸಿ ಎಲ್ಲಾ ಸರಿಯಾದ ಬಳಿಕವೇ ಕಾಲೇಜು, ಹಾಸ್ಟೆಲ್ ಆರಂಭವಾಗಲಿದೆ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.
ಸ್ನೇಹಿತನಿಂದಲೇ ಅತ್ಯಾಚಾರಕ್ಕೆ ಯತ್ನ
ಪಾರ್ಟಿ ಮಾಡುವ ನೆಪದಲ್ಲಿ ಸ್ನೇಹಿತನೇ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನ ನಡೆಸಿರುವ ಘಟನೆ ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಇಬ್ಬರು ಯುವಕರು ಮತ್ತು ಇಬ್ಬರು ಯುವತಿಯರು ಪಾರ್ಟಿ ಮಾಡಲು ಒಂದು ಕಡೆ ಸೇರಿದ್ದರು. ಕಾಶ್ಮೀರ ಮೂಲದ ಓರ್ವ ಯುವತಿ, ಇಬ್ಬರು ಉತ್ತರ ಭಾರತ ಮೂಲದ ಯುವಕರು ಒಂದೇ ವಿಶ್ವವಿದ್ಯಾಲಯದಲ್ಲಿ ಓದಿದ್ದರಿಂದ ಎಲ್ಲರೂ ಪರಿಚಿತರು. ನಾಲ್ವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಆರೋಪಿಗಳನ್ನು ಅದಿತ್ಯ ಮತ್ತು ಅಜಯ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ : Crime news: ಅತ್ಯಾಚಾರಕ್ಕೆ ಯತ್ನಿಸಿದವನ ತುಟಿ ಕಚ್ಚಿ ತುಂಡರಿಸಿದ ಯುವತಿ! ಮಾನಗೇಡಿ ಕೃತ್ಯಕ್ಕೆ ಬಂದವ ಈಗ ಆಸ್ಪತ್ರೆ ಪಾಲು!
ಅದು ಸಲುಗೆ ಮೇಲೆಯೇ ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಕುಡಿದ ನಶೆಯಲ್ಲಿ ಓರ್ವ ಸ್ನೇಹಿತೆ ಮೇಲೆ ಒಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ರೆ, ಮತ್ತೋರ್ವ ಮತ್ತೊಬ್ಬ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಸದ್ಯ ಪೊಲೀಸರು ಇಬ್ಬರು ಯುವಕರನ್ನು ಬಂಧಿಸಿದ್ದು, ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದು, ಯುವತಿಯರ ಹೇಳಿಕೆಯನ್ನು ದಾಖಲಿಸಿಕೊಂಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ