ಮಂಗಳೂರು (ಫೆ.07) :ಗೋಲಿಬಾರ್ ಪ್ರಕರಣದ ತನಿಖೆ ಚುರುಕು ಪಡೆದಿದೆ. ಪ್ರಕರಣದ ಸಂಬಂಧ ಬರೋಬ್ಬರಿ 201 ಮಂದಿ ಸಾಕ್ಷಿ ನುಡಿದಿದ್ದು, ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ ಬಂದಿದೆ. ಈ ನಡುವೆ ಮುಸ್ಲಿಂ ಸಂಘಟನೆಗಳ ಜಸ್ಟಿಸ್ ಫಾರಂ ಗೋಲಿಬಾರ್ ನಡೆಸಿದ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸಲು ಒತ್ತಾಯಿಸಿದೆ.
ಡಿಸೆಂಬರ್ 19 ರಂದು ನಡೆದ ಮಂಗಳೂರು ಗೋಲಿಬಾರ್ ಪ್ರಕರಣ ತನಿಖೆ ವೇಗ ಪಡೆದಿದೆ. ಮ್ಯಾಜಿಸ್ಟ್ರೇಟ್ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ನೇತೃತ್ವದಲ್ಲಿ ಮ್ಯಾಜಿಸ್ಟ್ರೇಟ್ ತನಿಖೆ ನಡೆಯುತ್ತಿದೆ. ಸಾರ್ವಜನಿಕರಿಂದ ಮಾಹಿತಿ ಸಂಗ್ರಹಿಸಿದ್ದಾರೆ. ಒಟ್ಟು ಎರಡು ಬಾರಿ ಸಾರ್ವಜನಿಕರಿಗೆ ಸಾಕ್ಷ್ಯ ನುಡಿಯಲು ಅವಕಾಶ ನೀಡಿದ್ದು ಗುರುವಾರ 75 ಕ್ಕೂ ಹೆಚ್ಚು ಮಂದಿ ತನಿಖಾಧಿಕಾರಿಗಳ ಮುಂದೆ ಸಾಕ್ಷ್ಯ ನುಡಿದಿದ್ದಾರೆ.
ಫೆಬ್ರವರಿ 13 ರಂದು ಮತ್ತೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರು ಸಾಕ್ಷ್ಯ ಜೊತೆಗೆ ಘಟನೆಯ ವಿಡಿಯೋ ದೃಶ್ಯಾವಳಿಗಳನ್ನು ನೀಡುವಂತೆ ಮ್ಯಾಜಿಸ್ಟ್ರೀಯಲ್ ಜಿ.ಜಗದೀಶ್ ಮನವಿ ಮಾಡಿದ್ದಾರೆ. ಮಂಗಳೂರು ಪೊಲೀಸ್ ಕಮೀಷನರ್ ಡಾ.ಪಿ ಎಸ್ ಹರ್ಷರವರಿಗೂ ನೋಟಿಸ್ ನೀಡಲಾಗಿದ್ದು, ಪೊಲೀಸರ ಬಳಿ ಇರುವ ವಿಡಿಯೋವನ್ನೂ ಫೆಬ್ರವರಿ 13 ರಂದು ಒಪ್ಪಿಸುವಂತೆ ಸೂಚನೆ ನೀಡಲಾಗಿದೆ.
ಇಲ್ಲಿಯವರೆಗೆ ಒಟ್ಟು 30 ಮಂದಿಯನ್ನು ಬಂಧನ ಮಾಡಲಾಗಿದ್ದು, ಜಾಮೀನು ಸಿಗದಂತೆ ಪೊಲೀಸರು ವರ್ತಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿರಾಪರಾಧಿಗಳಿಗೆ ಪ್ರಕರಣ ದಲ್ಲಿ ಶಿಕ್ಷೆಯಾಗುತ್ತಿದ್ದು,ಕೇಸ್ ಮೇಲೆ ಕೇಸ್ ಹಾಕಲಾಗುತ್ತಿದೆ ಎಂದು ದೂರಿದ್ದಾರೆ.
ಈ ಮಧ್ಯೆ ಪ್ರಕರಣ ತನಿಖಾ ಹಂತದಲ್ಲಿರುವಾಗಲೇ ಪೊಲೀಸರ ಮೇಲೆ ಕೊಲೆ ಪ್ರಕರಣ ದಾಖಲಿಸುವಂತೆ ಒತ್ತಾಯ ಕೇಳಿಬಂದಿದೆ. ಡಿಸೆಂಬರ್ 19 ಗೋಲಿಬಾರ್ ಜಸ್ಟಿಸ್ ಫಾರಂ, ಗೋಲಿಬಾರ್ ನಡೆಸಿದ ತಪ್ಪಿತಸ್ಥ ಪೊಲೀಸರ ಮೇಲೆ ಕೊಲೆ ಪ್ರಕರಣ ಮತ್ತು ಲಾಠಿ ಚಾರ್ಜ್ ನಡೆಸಿದ ಪೊಲೀಸರ ಮೇಲೆ ಕೊಲೆ ಯತ್ನ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ.
ಯಡಿಯೂರಪ್ಪ ಅತ್ಯಂತ ದುರ್ಬಲ ಸಿಎಂ - ಕೇಂದ್ರದ ಬಳಿ ಹಣ ಕೇಳುವ ತಾಕತ್ತಿಲ್ಲ ; ಸಿದ್ಧರಾಮಯ್ಯ ಕಿಡಿ
ಇದಲ್ಲದೆ ಗೋಲಿಬಾರ್ ನಲ್ಲಿ ಸಾವಿಗೀಡಾದ ಅಬ್ದುಲ್ ಜಲೀಲ್ ಮತ್ತು ನೌಸೀನ್ ಮೇಲಿನ ಪ್ರಕರಣ ಕೈಬಿಡಬೇಕು, ಜಲೀಲ್ ಮತ್ತು ನೌಸೀಬ್ ಕುಟುಂಬಕ್ಕೆ ತಲಾ 25 ಲಕ್ಷ ಮತ್ತು ಗಂಭೀರ ಗಾಯಗೊಂಡವರಿಗೆ 15 ಲಕ್ಷ ಪರಿಹಾರ ನೀಡಬೇಕೆಂದು ವೇದಿಕೆ ಆಗ್ರಹಿಸಿದೆ. ತನಿಖೆಯ ನೆಪದಲ್ಲಿ ಘಟನಾ ಸ್ಥಳದಲ್ಲಿದ್ದ ಕೇರಳ ನಾಗರಿಕರಿಗೆ ಅನಗತ್ಯ ಕಿರುಕುಳ ನೀಡಲಾಗುತ್ತಿದ್ದು ಪೊಲೀಸರ ತಕ್ಷಣ ಈ ಕ್ರಮವನ್ನು ನಿಲ್ಲಿಸಬೇಕೆಂದು ಗೋಲಿಬಾರ್ ಜಸ್ಟಿಸ್ ಫಾರಂ ಆಗ್ರಹಿಸಿದೆ.
ಒಟ್ಟಿನಲ್ಲಿ ಮಂಗಳೂರನ್ನು ಬೆಚ್ಚಿಬೀಳಿಸಿದ್ದ ಪ್ರಕರಣ ಮ್ಯಾಜಿಸ್ಟ್ರೇಟ್ ತನಿಖೆ ಕೆಲವೇ ದಿನಗಳಲ್ಲಿ ಪೂರ್ಣಗೊಳ್ಳಲಿದೆ. ಪೊಲೀಸರ ಮೇಲೆ ಆರೋಪಗಳು ನಿರಂತರ ವಾಗಿ ಬರುತ್ತಿದ್ದು,ಕಾನೂನು ಹೋರಾಟದಲ್ಲಿ ತಪ್ಪುಒಪ್ಪುಗಳು ನಿರ್ಣಯವಾಗಲಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ